ಚಂದನವನದ ರಾಜಕುಮಾರ ಪುನೀತ್ ರಾಜ್‌ಕುಮಾರ್ ಅವರ ಕಣ್ಣುಗಳನ್ನು ನಾಲ್ವರಿಗೆ ಅಳವಡಿಸಲಾಗಿದೆ. ಇದರಿಂದ ನಾಲ್ವರಿಗೆ ದೃಷ್ಟಿ ಬಂದಿದೆ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಭುಜಂಗ ಶೆಟ್ಟಿ ತಿಳಿಸಿದ್ದಾರೆ.
“ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಈ ರೀತಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನಾವು ಶುಕ್ರವಾರ ಅಪ್ಪು ಅವರ ಕಣ್ಣುಗಳನ್ನು ಶಸ್ತ್ರಚಿಕಿತ್ಸೆ ಮಾಡಿ ಸಂಗ್ರಹಿಸಿದೆವು. ನಂತರ, ಶುಕ್ರವಾರ ಮತ್ತು ಶನಿವಾರ ಅವರ ಕಣ್ಣುಗಳನ್ನು ಕಸಿ ಮಾಡುವ ಮೂಲಕ ನಾಲ್ವರಿಗೆ ಅಳವಡಿಸಲಾಯಿತು” ಎಂದು ಡಾ.ಭುಜಂಗ ಶೆಟ್ಟಿ ಹೇಳಿದ್ದಾರೆ.
ಯುವ ವಯಸ್ಸಿನಲ್ಲಿಯೇ ಹಠಾತ್ತನೆ ಸಾವನ್ನಪ್ಪಿದ ಪುನೀತ್ ರಾಜ್‌ಕುಮಾರ್, ತಮ್ಮ ತಂದೆ ಡಾ. ರಾಜ್‌ಕುಮಾರ್ ಮತ್ತು ತಾಯಿ ಪಾರ್ವತಮ್ಮ ಅವರ ಹಾದಿಯಲ್ಲಿಯೇ ತಮ್ಮ ನೇತ್ರಗಳನ್ನು ದಾನ ಮಾಡಿದ್ದಾರೆ. 2006ರಲ್ಲಿ ರಾಜ್‌ಕುಮಾರ್ ನೇತ್ರದಾನ ಮಾಡಿದ್ದರು ಮತ್ತು 2017 ರಲ್ಲಿ ಪಾರ್ವತಮ್ಮ ಅವರೂ ನೇತ್ರದಾನ ಮಾಡಿದ್ದರು.
ಇದನ್ನೂ ಓದಿ: ಅಪ್ಪು ಒಡನಾಟದ ನೆನಪುಗಳನ್ನು ಹಂಚಿಕೊಂಡ ಮಿಲನ ಸಿನಿಮಾ ನಟಿ ಪಾರ್ವತಿ ತಿರುವೊತು
ಎರಡು ಕಣ್ಣಿನಿಂದ ನಾಲ್ವರಿಗೆ ದೃಷ್ಟಿ ನೀಡಿದ್ದು ಹೇಗೆ..?
ಪ್ರತಿ ಕಣ್ಣಿನ ಕಾರ್ನಿಯಾವನ್ನು ಅರ್ಧದಷ್ಟು ಕತ್ತರಿಸಿ, ಮುಂಭಾಗದ ಭಾಗವನ್ನು ಒಬ್ಬ ಫಲಾನುಭವಿಗೆ ಮತ್ತು ಎರಡನೇ ಭಾಗವನ್ನು ಇನ್ನೊಬ್ಬರಿಗೆ ನೀಡಲಾಗಿದೆ. ಸರಿಯಾದ ಫಲಾನುಭವಿಗಳನ್ನು ಹುಡುಕುವುದು ಯಾವಾಗಲೂ ಸವಾಲಾಗಿರುತ್ತದೆ. ಏಕೆಂದರೆ ಅವರು ಆ ಕಣ್ಣುಗಳನ್ನು ಅಥವಾ ಕಣ್ಣಿನ ಭಾಗವನ್ನು ಪಡೆಯಲು ಅರ್ಹರಾಗಿರಬೇಕು. ಆದರೆ ಈ ಬಾರಿ ಎಲ್ಲವೂ ಸಾಧ್ಯವಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
“ಕಣ್ಣುಗಳು ಸುಸ್ಥಿತಿಯಲ್ಲಿದ್ದರೆ ನಾಲ್ಕು ಜನರಿಗೆ ದಾನ ಮಾಡಬಹುದು. ಎಲ್ಲಾ ಫಲಾನುಭವಿಗಳ ಕಣ್ಣುಗಳೂ ಈಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಪುನೀತ್ ಅವರ ಕಣ್ಣಿನ ಬಿಳಿಭಾಗವನ್ನೂ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗಿದೆ. ಅದರಿಂದ ಲಿಂಬಲ್ ಸೆಲ್‌ಗಳನ್ನು ಬೆಳೆಸಿ ಬೇರೆ ರೋಗಿಗಳಿಗೂ ಬಳಸಬಹುದು” ಎಂದು ಡಾ. ಶೆಟ್ಟಿ ವಿವರಿಸಿದ್ದಾರೆ.
ಫಲಾನುಭವಿಗಳೆಲ್ಲರೂ ಕರ್ನಾಟಕ ಮೂಲದ ಯುವಕರೇ ಆಗಿದ್ದು,ಕಣ್ಣುಗಳನ್ನು ಯಾರಿಗೆ ನೀಡಲಾಗಿದೆ ಎಂದು ಹೆಚ್ಚು ವಿವರ ಬಹಿರಂಗಪಡಿಸುವುದಿಲ್ಲ. ಒಬ್ಬ ಯುವತಿ ಮತ್ತು ಮೂವರು ಯುವಕರಿಗೆ ಕಣ್ಣು ನೀಡಲಾಗಿದೆ. ಐವರು ವೈದ್ಯರ ತಂಡದಿಂದ ಕಸಿ ಮಾಡಲಾಗಿದೆ ಎಂದು ಡಾ.ರಾಜ್‌ಕುಮಾರ್ ನೇತ್ರ ಬ್ಯಾಂಕ್‌ನ ವೈದ್ಯಕೀಯ ನಿರ್ದೇಶಕ ಡಾ.ಯತೀಶ್ ಶಿವಣ್ಣ ಹೇಳಿದ್ದಾರೆ.
“ಪುನೀತ್ ಅವರ ಬಹುಮುಖ ವ್ಯಕ್ತಿತ್ವವನ್ನು ಗುರುತಿಸಲು ನಾವು ನಿರ್ದಿಷ್ಟವಾಗಿ ಅವರ ಕಣ್ಣುಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಬಯಸಿದ್ದೆವು. ಕಣ್ಣು ಕಸಿ ಕಾರ್ಯವು ಬೆಳಿಗ್ಗೆ 11.30ಕ್ಕೆ ಪ್ರಾರಂಭವಾಗಿ ಸಂಜೆ 5.30ರವರೆಗೆ ನಡೆಯಿತು. ಇದು ಸೂಕ್ಷ್ಮ ಶಸ್ತ್ರಚಿಕಿತ್ಸೆಯಾಗಿದ್ದರೂ, ಇದನ್ನು ಬೇಗನೆ ಮಾಡಲಾಯಿತು. ಆದ್ದರಿಂದ, ಜನರು ಇದರ ಸದುಪಯೋಗ ಪಡೆದುಕೊಳ್ಳಲು ಸಾಧ್ಯವಾಯಿತು” ಎಂದು ಮಾಹಿತಿ ನೀಡಿದ್ದಾರೆ.
ಡಾ.ರೋಹಿತ್ ಶೆಟ್ಟಿ ಅವರ ನೇತೃತ್ವದಲ್ಲಿ ಡಾ.ಯತೀಶ್ ಶಿವಣ್ಣ, ಪ್ರಾರ್ಥನಾ ಭಂಡಾರಿ, ಡಾ.ಶರೋನ್ ಡಿಸೋಜಾ, ಮತ್ತು ಡಾ.ಹರ್ಷ ನಾಗರಾಜ್ ಅವರು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ. ಕಾರ್ನಿಯಾ ತಂಡದ ಡಾ.ಗೈರಿಕ್ ಕುಂದು ಮತ್ತು ವೀರೇಶ್ ನೆರವು ನೀಡಿದ್ದಾರೆ.
ಇದನ್ನೂ ಓದಿ: ಚಿತ್ರರಂಗದ ’ಯುವರತ್ನ’ ಪುನೀತ್ ರಾಜ್‌ಕುಮಾರ್ ಅವರ ಅಪರೂಪದ ಚಿತ್ರಗಳು


