ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ಹರಿಯಾಣದ ಎಲ್ಲೆನಾಬಾದ್ ವಿಧಾನಸಭಾ ಕ್ಷೇತ್ರದ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಐಎನ್‌ಎಲ್‌ಡಿಯ ಅಭಯ್ ಸಿಂಗ್ ಚೌಟಾಲಾ ಉಪಚುನಾವಣೆಯಲ್ಲಿ 6 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಐಎನ್‌ಎಲ್‌ಡಿಯ ಏಕೈಕ ಶಾಸಕ ಮತ್ತು ಜೆಜೆಪಿ ನಾಯಕ ಅಜಯ್ ಚೌಟಾಲಾ ಅವರ ಸಹೋದರರಾಗಿದ್ದ ಅಭಯ್ ಸಿಂಗ್ ಚೌಟಾಲಾ, ಒಕ್ಕೂಟ ಸರ್ಕಾರದ ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ಎಲ್ಲೆನಾಬಾದ್ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಉಪಚುನಾವಣೆ ಘೋಷಣೆಯಾಗಿತ್ತು. ಅ.30 ರಂದು ಮತದಾನ ನಡೆದಿತ್ತು.
ಐಎನ್‌ಎಲ್‌ಡಿ (ಇಂಡಿಯನ್ ನ್ಯಾಷನಲ್ ಲೋಕದಳ) ನಾಯಕ ಅಭಯ್ ಸಿಂಗ್ ಚೌಟಾಲಾ 65,897 ಮತಗಳನ್ನು ಪಡೆದಿದ್ದಾರೆ. ಆಡಳಿತಾರೂಢ ಬಿಜೆಪಿಯ ಗೋವಿಂದ್ ಕಂದಾ 59,189ಮತಗಳನ್ನು ಪಡೆದಿದ್ದಾರೆ. ಅಭಯ್ ಸಿಂಗ್ ಚೌಟಾಲಾ 6,708 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ: ಹರಿಯಾಣ ಉಪಮುಖ್ಯಮಂತ್ರಿಯ ರಾಜೀನಾಮೆ ನನ್ನ ಕಿಸೆಯಲ್ಲಿದೆ: ಜೆಜೆಪಿ ನಾಯಕ ಅಜಯ್ ಚೌಟಾಲ
ಸುದ್ದಿಗಾರರೊಂದಿಗೆ ಮಾತನಾಡಿದ ಅಭಯ್ ಸಿಂಗ್ ಚೌಟಾಲಾ, ’ಮತ ಪಡೆಯಲು ಬಿಜೆಪಿ ಹಣ ಹಂಚಿದ್ದಾರೆ. ಇಲ್ಲದಿದ್ದರೆ 30,000 ಕ್ಕೂ ಹೆಚ್ಚು ಮತಗಳಿಂದ ಗೆಲ್ಲುವ ನಿರೀಕ್ಷೆಯಿತ್ತು’ ಎಂದು ಹೇಳಿದ್ದರು.
“ಮುಖ್ಯಮಂತ್ರಿ ಉಪಚುನಾವಣೆ ಫಲಿತಾಂಶದ ಬಳಿಕ ರಾಜೀನಾಮೆ ನೀಡಬೇಕು. ಕುದುರೆ ವ್ಯಾಪಾರ ಇಲ್ಲದಿದ್ದರೆ ನನ್ನ ಗೆಲುವಿನ ಅಂತರ 30,000 ಮೀರುತ್ತಿತ್ತು. ಮತಕ್ಕಾಗಿ ಕೋಟಿಗಳನ್ನು ಹಣ ಹಂಚಲಾಗಿದೆ ಮತ್ತು ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಲಾಗಿದೆ. ಇದನ್ನು ನಾನು ಕಣ್ಣಾರೆ ಕಂಡಿದ್ದೇನೆ” ಎಂದು ಆರೋಪಿಸಿದ್ದರು.
ಮುಂದುವರಿದು, “ಇದು ನನ್ನ ಗೆಲುವಲ್ಲ. ಇದು ರೈತರ ಗೆಲುವು” ಎಂದು ಹೇಳಿದ್ದಾರೆ.
ಎಲ್ಲೆನಾಬಾದ್‌ನಲ್ಲಿ ಬಿಜೆಪಿ ಗೋವಿಂದ್ ಕಂದಾ ಅವರಿಗೆ ಟಿಕೆಟ್ ನೀಡಿತ್ತು. ಸಿರ್ಸಾದಲ್ಲಿ ಬಿಜೆಪಿ ವಿರುದ್ಧ ಭಾರಿ ಪ್ರತಿಭಟನೆ ವ್ಯಕ್ತವಾಗಿ, ರಸ್ತೆಗಳಲ್ಲಿ ಪ್ರಚಾರಕ್ಕೆ ಹಾಕಿದ್ದ ಬಿಜೆಪಿ ಧ್ವಜಗಳನ್ನು ಕಿತ್ತು ಒಂದೆಡೆ ಹಾಕಿ ಬೆಂಕಿ ಹಚ್ಚಲಾಗಿತ್ತು.
ಬಿಜೆಪಿ ಅಭ್ಯರ್ಥಿ ಗೋವಿಂದ್ ಕಂದಾ ನಾಮಪತ್ರ ಸಲ್ಲಿಕೆಗಾಗಿ ರಸ್ತೆಯುದ್ದಕ್ಕೂ ಹಾಕಲಾಗಿದ್ದ ಬಿಜೆಪಿ ಬಾವುಟಗಳನ್ನು ಕಿತ್ತು, ಒಂದು ಕಡೆ ಗುಡ್ಡೆ ಹಾಕಿದ ಪ್ರತಿಭಟನಾ ನಿರತ ರೈತರು ಆಕ್ರೋಶದಲ್ಲಿ ಬೆಂಕಿ ಹಾಕಿದ್ದರು. ಪೊಲೀಸ್ ರಕ್ಷಣೆಯಲ್ಲಿ ಹೋಗಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದರು.
ಇದನ್ನೂ ಓದಿ: ಹರಿಯಾಣ: ಬಿಜೆಪಿ ಧ್ವಜಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ ರೈತರು


