ಮಧ್ಯಪ್ರದೇಶದ ಭೂಪಾಲ್‌ನ ಕಮಲಾ ನೆಹರು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿರುವ ಅಗ್ನಿ ಅವಘಡದಲ್ಲಿ ನಾಲ್ಕು ನವಜಾತ ಶಿಶುಗಳು ಸಾವನ್ನಪ್ಪಿವೆ.
ಕಮಲಾ ನೆಹರು ಮಕ್ಕಳ ಆಸ್ಪತ್ರೆಯ ವಿಶೇಷ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿಶೇಷ ನವಜಾತ ಶಿಶು ನಿಗಾ ಘಟಕ (SNCU) ವಾರ್ಡ್‌ನಲ್ಲಿ ಸಂಭವಿಸಿದ ಬೆಂಕಿಯಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಬಹುಶಃ ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿದೆ. ಘಟನೆಯ ಬಗ್ಗೆ ಮಾಹಿತಿ ದೊರೆತ ಕೂಡಲೇ ನಾವು ಸ್ಥಳಕ್ಕೆ ಭೇಟಿ ಣಿಡಿದ್ದೇವೆ. ಉಳಿದ ಮಕ್ಕಳನ್ನು ಪಕ್ಕದ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಹೇಳಿದ್ದಾರೆ.
ಕಮಲಾ ನೆಹರು ಆಸ್ಪತ್ರೆಯ ಮೂರನೇ ಮಹಡಿಯಲ್ಲಿರುವ ಮಕ್ಕಳ ವಾರ್ಡ್‌ನಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, 8 ರಿಂದ 10 ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ ಎಂದು ಫತೇಘರ್ ಅಗ್ನಿಶಾಮಕ ಠಾಣೆಯ ಉಸ್ತುವಾರಿ ಜುಬರ್ ಖಾನ್ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ 33 ಲಕ್ಷ ಮಕ್ಕಳಲ್ಲಿ ಅಪೌಷ್ಟಿಕತೆ: ಆರ್‌ಟಿಐ ಅಡಿ ಮಾಹಿತಿ ಬಹಿರಂಗ
ಇನ್ನು ಘಟನೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಮಕ್ಕಳನ್ನು ಉಳಿಸುವ ಬದಲು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಕೋಪಗೊಂಡಿರುವ ಮಕ್ಕಳ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಕೆಲವು ಪೋಷಕರು ತಮ್ಮ ಮಗುವನ್ನು ಇನ್ನು ಪತ್ತೆ ಮಾಡಿಲ್ಲ ಎಂದಿದ್ದಾರೆ.
ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಘಟನೆ ತುಂಬಾ ದುಃಖಕರ ಎಂದಿದ್ದಾರೆ. ಮೃತರ ಕುಟುಂಬಕ್ಕೆ 4 ಲಕ್ಷ ಪರಿಹಾರ ಘೋಷಿಸಿದ್ದಾರೆ.
भोपाल के कमला नेहरू अस्पताल के चाइल्ड वार्ड में आग की घटना दुखद है। बचाव कार्य तेजी से हुआ। घटना की उच्चस्तरीय जांच के निर्देश दिए हैं। जांच एसीएस लोक स्वास्थ्य एवं चिकित्सा शिक्षा मोहम्मद सुलेमान करेंगे।
— Shivraj Singh Chouhan (@ChouhanShivraj) November 8, 2021
“ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್) ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ, ಮೊಹಮ್ಮದ್ ಸುಲೇಮಾನ್ ಅವರು ತನಿಖೆ ನಡೆಸುತ್ತಾರೆ” ಎಂದು ಮುಖ್ಯಮಂತ್ರಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ರಾಜ್ಯದ ಅತಿದೊಡ್ಡ ಸರ್ಕಾರಿ ವೈದ್ಯಕೀಯ ಸೌಲಭ್ಯಗಳಲ್ಲಿ ಒಂದಾಗಿರುವ ಹಮೀಡಿಯಾ (Hamidia) ಆಸ್ಪತ್ರೆಯ ಭಾಗವಾಗಿದೆ ಕಮಲಾ ನೆಹರು ಮಕ್ಕಳ ಆಸ್ಪತ್ರೆ.
ಘಟನೆಯು “ತುಂಬಾ ನೋವಿನಿಂದ ಕೂಡಿದೆ” ಎಂದು ತಿಳಿಸಿರುವ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಕಮಲ್ ನಾಥ್, ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ಮತ್ತು ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ದಿಂಡಗನೂರು: ದೇವಾಲಯ ಪ್ರವೇಶದ ಬಳಿಕ ದಲಿತರಿಗೆ ಅಘೋಷಿತ ಸಾಮಾಜಿಕ ಬಹಿಷ್ಕಾರ


