ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು (KSGEA) ಸರ್ಕಾರದಿಂದ ನೇಮಕಗೊಂಡಿರುವ ಶಿಕ್ಷಕರು ಮತ್ತು ಉಪನ್ಯಾಸಕರ ಬಹುಕಾಲದ ಬೇಡಿಕೆಗಳನ್ನು ಈಡೇರಿಸದಿದ್ದರೇ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದೆ. ಬೇಡಿಕೆ ಈಡೇರಿಕೆಗೆ ಸರ್ಕಾರಕ್ಕೆ 21 ದಿನಗಳ ಗಡುವು ನೀಡಿದೆ.
ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಸಂಘಟನೆಗಳ 5,000 ಪ್ರತಿನಿಧಿಗಳು ಭಾಗವಹಿಸಿದ್ದರು. “ಸಭೆಯಲ್ಲಿ, ಶಿಕ್ಷಕರ ವೇತನ ಪರಿಷ್ಕರಣೆಯ ಬೇಡಿಕೆಯು ಕಳೆದ 20 ವರ್ಷಗಳಿಂದ ಹಾಗೆಯೇ ಉಳಿದೆ. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ತರಗತಿಗಳನ್ನು ಬಹಿಷ್ಕರಿಸಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ” ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದ್ದಾರೆ.
ಇದನ್ನೂ ಓದಿ: ‘ಜೈ ಭೀಮ್’ ಚಿತ್ರದಲ್ಲಿ ಹಿಂದಿ ಮಾತನಾಡುವ ವ್ಯಕ್ತಿಗೆ ಕಪಾಳ ಮೋಕ್ಷ: ಪ್ರಕಾಶ್ ರಾಜ್ ಹೇಳಿದ್ದೇನು?
“ಸರ್ಕಾರಗಳಿಗೆ ಹಲವು ಬಾರಿ ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ ಮತ್ತು ಹಲವಾರು ಸುತ್ತಿನ ಮಾತುಕತೆಗಳನ್ನು ನಡೆಸಲಾಗಿದೆ. ಆದರೆ, ಬೇಡಿಕೆಗಳನ್ನು ಈಡೇರಿಸಲಾಗಿಲ್ಲ. ಆದ್ದರಿಂದ, ತರಗತಿಗಳನ್ನು ಬಹಿಷ್ಕರಿಸಲು ನಿರ್ಧರಿಸಲಾಗಿದೆ” ಎಂದು ಷಡಕ್ಷರಿ ಹೇಳಿದ್ದಾರೆ.
ಈ ಬೇಡಿಕೆಗಳಲ್ಲಿ ಬಡ್ತಿ, ವೇತನ ಪರಿಷ್ಕರಣೆ ಮತ್ತು ವರ್ಗಾವಣೆ ನೀತಿಗಳು ಸೇರಿ 10 ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ.
ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 75,000 ಕ್ಕೂ ಹೆಚ್ಚು ಪದವೀಧರ ಶಿಕ್ಷಕರಿಗೆ ಜೇಷ್ಠತೆಯನ್ನು ಪರಿಗಣಿಸಿ ಬಡ್ತಿ ನೀಡಬೇಕು. 1998-99ರಲ್ಲಿ ನೇಮಕಗೊಂಡ ಸುಮಾರು 4,000 ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೇತನ ಪರಿಷ್ಕರಣೆ ಮಾಡಬೇಕು ಎಂಬ ಪ್ರಮುಖ ಬೇಡಿಕೆ ಸೇರಿದಂತೆ, ಹಲವು ಬೇಡಿಕೆಗಳಿವೆ.
ಇದನ್ನೂ ಓದಿ: ದಿಂಡಗನೂರು: ದೇವಾಲಯ ಪ್ರವೇಶದ ಬಳಿಕ ದಲಿತರಿಗೆ ಅಘೋಷಿತ ಸಾಮಾಜಿಕ ಬಹಿಷ್ಕಾರ


