Homeಮುಖಪುಟಮಾನವ ಹಕ್ಕುಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಮಾನವ ಹಕ್ಕುಗಳ ಆಯೋಗ: ತೀವ್ರ ಖಂಡನೆ

ಮಾನವ ಹಕ್ಕುಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಮಾನವ ಹಕ್ಕುಗಳ ಆಯೋಗ: ತೀವ್ರ ಖಂಡನೆ

NHRCಯು ಭಯೋತ್ಪಾದನೆ ಮತ್ತು ನಕ್ಸಲಿಸಂನಂತಹ ದುಷ್ಟರ ವಿರುದ್ಧ ಹೋರಾಡಲು ಮಾನವ ಹಕ್ಕುಗಳು ತಡೆಗೋಡೆಯಾಗಿವೆಯೇ? ಎಂಬ ವಿಷಯದ ಕುರಿತು ಚರ್ಚಾಸ್ಪರ್ಧೆ ಹಮ್ಮಿಕೊಂಡಿದೆ.

- Advertisement -
- Advertisement -

ಕಳೆದ ವರ್ಷ ಸಾರ್ವಜನಿಕ ವೇದಿಕೆಯೊಂದರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದ ಅರುಣ್ ಮಿಶ್ರಾರವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಅತಿಯಾಗಿ ಹೊಗಳಿ ತೀವ್ರ ಟೀಕೆಗೆ ಗುರಿಯಾಗಿದ್ದು ನಿಮಗೆಲ್ಲ ನೆನಪಿರಬಹುದು. ಅದೇ ಅರುಣ್ ಮಿಶ್ರಾರವರು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಸ್ಥಾನದಿಂದ ನಿವೃತ್ತರಾದ ಕೂಡಲೇ ಅವರನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನಾಗಿ ಮೋದಿ ಸರ್ಕಾರ ನೇಮಿಸಿತ್ತು. ಅವರೀಗ ಮಾನವ ಹಕ್ಕುಗಳ ವಿರುದ್ಧವಾಗಿರುವ ಕಾರ್ಯಕ್ರಮವೊಂದನ್ನು ಆಯೋಜಿಸಿ ಮತ್ತೆ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಇಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು “ಭಯೋತ್ಪಾದನೆ ಮತ್ತು ನಕ್ಸಲಿಸಂನಂತಹ ದುಷ್ಟರ ವಿರುದ್ಧ ಹೋರಾಡಲು ಮಾನವ ಹಕ್ಕುಗಳು ತಡೆಗೋಡೆಯಾಗಿವೆಯೇ? ಎಂಬ ವಿಷಯದ ಕುರಿತು ಚರ್ಚಾಸ್ಪರ್ಧೆಯನ್ನು ಹಮ್ಮಿಕೊಳ್ಳುವ ಮೂಲಕ ವಿವಾದ ಹುಟ್ಟು ಹಾಕಿದೆ. ಇಂದು ಆಯೋಗದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ಶೀರ್ಷಿಕೆಯನ್ನು ಘೋಷಿಸಿದ ಕೂಡಲೇ ಹಲವಾರು ವಲಯಗಳಿಂದ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.

ಆರ್‌ಟಿಐ ಕಾರ್ಯಕರ್ತರಾಗಿದ್ದು ಇತ್ತೀಚಿಗೆ ಟಿಎಂಸಿ ಸೇರಿರುವ ಸಾಕೇತ್ ಗೋಖಲೆಯವರು “ನಾವು ಎಷ್ಟು ಕೆಳಮಟ್ಟಕ್ಕೆ ಇಳಿದಿದ್ದೇವೆ. ಭಾರತದ ‘ಮಾನವ ಹಕ್ಕುಗಳನ್ನು ರಕ್ಷಿಸುವ ಸ್ವತಂತ್ರ ಸಂಸ್ಥೆ’ ಎಂದು ಹೇಳಲಾಗುವ ಆಯೋಗವು ‘ಚಿತ್ರಹಿಂಸೆ ಮತ್ತು ಹೆಚ್ಚುವರಿ ನ್ಯಾಯಾಂಗ ಹತ್ಯೆಗಳಿಗೆ ಮಾನವ ಹಕ್ಕುಗಳು ತಡೆಗೋಡೆಯಾಗಿದವೆ’ ಎಂದು ಚರ್ಚಿಸುತ್ತಿದೆ. ನಿಮ್ಮ ಬಗ್ಗೆ ನಾಚಿಕೆಯೆನಿಸುತ್ತಿದೆ. NHRC ನೀವು ಏನೇನೂ ಅಲ್ಲ” ಎಂದು ಕಿಡಿಕಾರಿದ್ದಾರೆ.

ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಸಂಸ್ಥೆಯ ಭಾರತದ ಮಾಜಿ ಮುಖ್ಯಸ್ಥರಾಗಿದ್ದ ಆಕಾರ್ ಪಟೇಲ್‌ರವರು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದು, “ಹೌದು ನಾವು ಸಂಪೂರ್ಣವಾಗಿ ಮಾನವ ಹಕ್ಕುಗಳನ್ನು ನಾಶ ಮಾಡಬೇಕು” ಎಂದು ಬರೆದಿದ್ದಾರೆ.

ಮಾನವ ಹಕ್ಕುಗಳು ಮತ್ತು ಘನತೆ ಬಹಳ ಪವಿತ್ರವಾದವು. ಆದರೆ ಭಾರತದಲ್ಲಿ ಪೊಲೀಸ್‌ ಠಾಣೆಗಳಲ್ಲೇ ಅತಿ ಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿವೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಎನ್ ವಿ ರಮಣ ಕಳೆದ ಆಗಸ್ಟ್‌ನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ನಕ್ಸಲಿಸಂ, ಭಯೋತ್ಪಾದನೆಯ ಹೆಸರಿನಲ್ಲಿಯೇ ಅತಿ ಹೆಚ್ಚು ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ ಎಂದು ದಾಖಲೆಗಳು ಹೇಳುತ್ತವೆ. ಇಂತಹ ಸಂದರ್ಭದಲ್ಲಿ ಮಾನವ ಹಕ್ಕುಗಳನ್ನು ಕಾಪಾಡಲು ವ್ಯಾಪಕವಾಗಿ ಕೆಲಸ ಮಾಡಲೇಂದು ಇರುವ ಸಂಸ್ಥೆಯೊಂದು ಮಾನವ ಹಕ್ಕುಗಳು ತಡೆಗೋಡೆಯಾಗಿವೆ ಎಂದು ಚರ್ಚಾಸ್ಪರ್ಧೆ ಇಟ್ಟಿರುವುದು ದುರಂತ ಎಂದು ಹಲವರು ಕಿಡಿಕಾರಿದ್ದಾರೆ.


ಇದನ್ನೂ ಓದಿ: ಪೊಲೀಸ್‌ ಠಾಣೆಗಳಲ್ಲೇ ಅತಿ ಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆ: CJI ರಮಣ ಆತಂಕ


ಆಗಸ್ಟ್‌ನಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ದೆಹಲಿಯ ವಿಜ್ಞಾನ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭವೊಂದರಲ್ಲಿ ಮಾತನಾಡಿದ ಸಿಜೆಐ ರಮಣರವರು, “ಕಸ್ಟಡಿ ಚಿತ್ರಹಿಂಸೆ ಮತ್ತು ಇತರ ಪೊಲೀಸ್ ದೌರ್ಜನ್ಯಗಳು ನಮ್ಮ ಸಮಾಜದಲ್ಲಿ ಇನ್ನೂ ಚಾಲ್ತಿಯಲ್ಲಿರುವ ಸಮಸ್ಯೆಗಳು. ಇತ್ತೀಚಿನ ವರದಿಗಳ ಪ್ರಕಾರ, ಸೌಲಭ್ಯವುಳ್ಳ ವರ್ಗ ಸಹ ಪೊಲೀಸರ ಥರ್ಡ್ ಗ್ರೇಡ್ ಚಿಕಿತ್ಸೆಯಿಂದ (ಪೊಲೀಸರಿಂದ ಹಲ್ಲೆ, ಕಿರುಕುಳ) ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದು ಹೇಳಿಕೆ ನೀಡಿ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಗಮನ ಸೆಳೆದಿದ್ದರು. ಆದರೆ ಅದಕ್ಕೆ ವಿರುದ್ಧವಾಗಿ ಪೊಲೀಸ್ ಮತ್ತು ಸೇನೆಗೆ ಹೆಚ್ಚಿನ ಅಧಿಕಾರ ಸಿಗಬೇಕು, ಮಾನವ ಹಕ್ಕುಗಳ ಬಗ್ಗೆ ಗಮನ ಕೊಡಬಾರದು ಎಂದು NHRC ವಾದಿಸುತ್ತಿದೆ.

NHRC ಯ ಅಧ್ಯಕ್ಷರಾಗಿರುವ ಇದೇ ಅರುಣ್ ಮಿಶ್ರಾರವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದಾಗ 2020ರ ಫೆಬ್ರವರಿ 22 ರಂದು ಅಂತಾರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನದ ಉದ್ಘಾಟನಾ ಸಮಾರಂಭದ ವಂದಾನಾರ್ಪಣೆ ಭಾಷಣದಲ್ಲಿ “ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ದೂರದೃಷ್ಟಿಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಉಸ್ತುವಾರಿ ಅಡಿಯಲ್ಲಿ ಭಾರತವು ಅಂತರರಾಷ್ಟ್ರೀಯ ಸಮುದಾಯದ ಜವಾಬ್ದಾರಿಯುತ ಮತ್ತು ಅತ್ಯಂತ ಸ್ನೇಹಪರ ಸದಸ್ಯ ರಾಷ್ಟ್ರವಾಗಿದೆ. ಮೋದಿ ಜಾಗತಿಕವಾಗಿ ಯೋಚಿಸುವ ಮತ್ತು ಸ್ಥಳೀಯವಾಗಿ ಕಾರ್ಯನಿರ್ವಹಿಸುವ ಬಹುಮುಖ ಪ್ರತಿಭೆ” ಎಂದು ಬಣ್ಣಿಸಿದ್ದರು.

ಆಗ ಇಂತಹ ಹೇಳಿಕೆಗಳು ನ್ಯಾಯಾಂಗದ ಸ್ವಾತಂತ್ರ್ಯದ ಬಗ್ಗೆ ತಪ್ಪು ಅಭಿಪ್ರಾಯಗಳು ಮೂಡುವಂತಾಗಲು ಕಾರಣವಾಗುತ್ತವೆ ಎಂದು ಹಲವರು ವಿರೋಧ ವ್ಯಕ್ತಪಡಿಸಿದ್ದರು. ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಈ ಹೇಳಿಕೆಯ ವಿರುದ್ಧ ನಿರ್ಣಯ ಅಂಗೀಕರಿಸಿತ್ತು.


ಇದನ್ನೂ ಓದಿ: ಪ್ರಧಾನಿ ಮೋದಿ ಹೊಗಳಿದ ನ್ಯಾಯಮೂರ್ತಿ ಅರುಣ್ ಮಿಶ್ರಾ ವರ್ತನೆಗೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ​​ಖಂಡನೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...