ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯಲ್ಲಿ ಮಂಗಳವಾರ 22 ವರ್ಷದ ಯುವಕ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ನಂತರ ಠಾಣೆಯ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಯುವಕ ಅಲ್ತಾಫ್‌ನ ವಿರುದ್ಧ ಯುವತಿಯನ್ನು ಅಪಹರಿಸಿ ಬಲವಂತದ ಮದುವೆಗೆ ಸಂಬಂಧಿಸಿದಂತೆ ಕಳೆದ ವಾರ ಪ್ರಕರಣದ ದಾಖಲಾಗಿತ್ತು. ಮಂಗಳವಾರ ಬೆಳಗ್ಗೆ ಅಲ್ತಾಫ್‌ರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಅವರು ಠಾಣೆಯಲ್ಲೇ ಮೃತಪಟ್ಟಿದ್ದಾರೆ.
“ಅಪ್ತಾಫ್ ಪೊಲೀಸ್ ಠಾಣೆಯಲ್ಲಿ ಶೌಚಾಲಯಕ್ಕೆ ಹೋಗಬೇಕು ಎಂದು ಕೇಳಿದ್ದರು. ಕೆಲವು ನಿಮಿಷಗಳಾದರೂ ಅವರು ಶೌಚಾಲಯದಿಂದ ಹಿಂತಿರುಗದಿದ್ದಾಗ, ಪೊಲೀಸರು ಒಳಗೆ ಹೋಗಿ ನೋಡಿದ್ದಾರೆ. ಅಲ್ಲಿ ಅವರು ಶವವಾಗಿ ಪತ್ತೆಯಾಗಿದ್ದಾರೆ” ಎಂದು ಇಟಾಹ್‌ನ ಪೊಲೀಸ್ ಮುಖ್ಯಸ್ಥ ರೋಹನ್ ಪ್ರಮೋದ್ ಬೋತ್ರೆ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ದಲಿತ ಮಹಿಳೆಯ ಲಾಕಪ್ ಡೆತ್: ಮೂವರು ಪೊಲೀಸರು ಸೇವೆಯಿಂದ ವಜಾ
ಆದರೆ, ಮೃತ ಅಲ್ತಾಫ್ ಅವರ ತಂದೆ ಚಾಂದ್ ಮಿಯಾನ್, “ನಾನು ನನ್ನ ಮಗನನ್ನು ಪೊಲೀಸರಿಗೆ ಒಪ್ಪಿಸಿದ್ದೇನೆ. ಆತನ ಸಾವಿನಲ್ಲಿ ಪೊಲೀಸರ ಕೈವಾಡವಿದೆ ಎಂಬ ಸಂಶಯವಿದೆ” ಎಂದು ಆರೋಪಿಸಿದ್ದಾರೆ. ಪ್ರಕರಣದಲ್ಲಿ ನಿರ್ಲಕ್ಷ್ಯದ ಆರೋಪದಲ್ಲಿ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಸಿಬಿಐ, ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯ ಸೇರಿದಂತೆ ದೇಶದ ಎಲ್ಲಾ ಪೊಲೀಸ್ ಠಾಣೆಗಳು ಮತ್ತು ತನಿಖಾ ಸಂಸ್ಥೆಗಳಲ್ಲಿ night vision ಮತ್ತು ಆಡಿಯೋ ರೆಕಾರ್ಡಿಂಗ್ ಹೊಂದಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಕಳೆದ ವರ್ಷ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಆದರೆ, ಉತ್ತರ ಪ್ರದೇಶದ ಎಷ್ಟು ಪೊಲೀಸ್ ಠಾಣೆಗಳಲ್ಲಿ ಇದುವರೆಗೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.
ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ – 104
ಇದನ್ನೂ ಓದಿ: ದಲಿತ ಯುವಕನ ಲಾಕಪ್ ಡೆತ್: ಐವರು ಪೊಲೀಸರ ಅಮಾನತು, ಅಪರಿಚಿತರ ವಿರುದ್ಧ ಕೊಲೆ ಪ್ರಕರಣ


