ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ “ಚಿಲ್ಲಂಜೀವಿ” ಹೇಳಿಕೆಗೆ ಹಿಂದೂ ಧರ್ಮದರ್ಶಿಗಳ ಸಂಯುಕ್ತ ಸಂಸ್ಥೆಯಾದ ಅಖಿಲ ಭಾರತೀಯ ಸಂತ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಖಿಲೇಶ್ ಯಾದವ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ.
ಬುಧವಾರ (ನ.17) ಗಾಜಿಪುರದಲ್ಲಿ ತಮ್ಮ ಮಿತ್ರಪಕ್ಷಗಳೊಂದಿಗೆ ಲಕ್ನೋಗೆ ಜಂಟಿ ರಥಯಾತ್ರೆಯನ್ನು ಪ್ರಾರಂಭಿಸಿದ ಅಖಿಲೇಶ್ ಯಾದವ್, ಬಿಜೆಪಿ ವಿರುದ್ಧ ನಡೆಸಿದ ವಾಗ್ದಾಳಿ ನಡೆಸುವ ವೇಳೆ ಕೇಸರಿ ಧರಿಸಿದ ಸಂತರನ್ನು “ಚಿಲ್ಲಂಜೀವಿ”ಎಂದು ಕರೆದಿದ್ದರು.
ಚಿಲ್ಲಮ್ (Chillum ) ಎಂದರೆ ತಂಬಾಕು ಅಥವಾ ಗಾಂಜಾದಂತಹ ವಸ್ತುಗಳನ್ನು ಧೂಮಪಾನ ಮಾಡಲು ಬಳಸುವ ಒಂದು ಸಣ್ಣ ಪೈಪ್.
ಅಖಿಲ ಭಾರತೀಯ ಸಂತ ಸಮಿತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಜಿತೇಂದ್ರಾನಂದ ಸರಸ್ವತಿ ಮಾತನಾಡಿ, “ಅಖಿಲೇಶ್ ಯಾದವ್ ಅವರ ಈ ಅನಿಯಂತ್ರಿತ ಹೇಳಿಕೆಯಿಂದ ದೇಶಾದ್ಯಂತದ ಎಲ್ಲಾ ಸಂತರು ಒಗ್ಗಟ್ಟಿನ ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಎಲ್ಲಾ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಧರ್ಮ, ಭಗವಂತ ಮತ್ತು ಸಂತರನ್ನು ತಮ್ಮ ಕ್ಷುಲ್ಲಕ ರಾಜಕಾರಣದಲ್ಲಿ ಎಳೆದು ತರಬಾರದು” ಎಂದಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಅಖಿಲೇಶ್ ಯಾದವ್
ಸನಾತನ ಹಿಂದೂಗಳು ಮತ್ತು ಅವರ ಸಂಪ್ರದಾಯಗಳ ಬಗ್ಗೆ ನಿರಂತರವಾಗಿ ಹತೋಟಿಯಿಲ್ಲದ ಹೇಳಿಕೆಗಳನ್ನು ನೀಡುತ್ತಿರುವ ಇಂತಹ ಹುಸಿ ಸಮಾಜವಾದಿಗಳು ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಸಂತ ಸಮಾಜವು ಉತ್ತರ ಪ್ರದೇಶದಲ್ಲಿ ಮನೆ-ಮನೆಗೆ ತೆರಳಿ ಜನಜಾಗೃತಿ ಅಭಿಯಾನವನ್ನು ನಡೆಸಲಿದೆ ಎಂದು ಮಾಹಿತಿ ನೀಡಿದ್ದಾರೆ.
ಅಖಿಲೇಶ್ ಯಾದವ್ ಮತ್ತು ರಾಹುಲ್ ಗಾಂಧಿಯಂತಹ ನಾಯಕರು ಅಲ್ಪಸಂಖ್ಯಾತರ ಓಲೈಕೆಗಾಗಿ ಸನಾತನ ಧರ್ಮದ ವಿರುದ್ಧ ಇಂತಹ ಸಣ್ಣ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಸ್ವಾಮಿ ಜಿತೇಂದ್ರಾನಂದ ಸರಸ್ವತಿ ಆರೋಪಿಸಿದ್ದಾರೆ.
“ಅಖಿಲೇಶ್ ಯಾದವ್ ಮತ್ತು ಅವರ ವಕ್ತಾರರು ಸಂತರನ್ನು ಅವಮಾನಿಸಿದಕ್ಕಾಗಿ ಸಂತರು ಮತ್ತು ಸನಾತನ ಸಮಾಜದವರಲ್ಲಿ ತಕ್ಷಣವೇ ಕ್ಷಮೆಯಾಚಿಸಬೇಕು. ಕ್ಷಮೆ ಯಾಚಿಸದಿದ್ದರೆ ಸಂತ ಸಮಾಜ ದೇಶಾದ್ಯಂತ ಸಕ್ರಿಯವಾಗಿ ಮನೆ ಮನೆಗೆ ತೆರಳಿ ಅವರ ವಿರುದ್ಧ ಸಾರ್ವಜನಿಕ ಬೆಂಬಲಕ್ಕಾಗಿ ಮನವಿ ಮಾಡಲಿದೆ” ಎಂದು ಸ್ವಾಮಿ ಜಿತೇಂದ್ರಾನಂದ ಸರಸ್ವತಿ ಹೇಳಿದ್ದಾರೆ.
सूरज के तेज का रंग है भगवा, सुख-शांति का प्रतीक है भगवा…इस रंग से इतना डर गए?
हिन्दू साधु-संतों के प्रति नफरत फैलाने का काम जोर-शोर से जारी है। pic.twitter.com/Sk76DTx9AK
— Swatantra Dev Singh (@swatantrabjp) November 17, 2021
ಇದನ್ನೂ ಓದಿ: ಪಂಚರಾಜ್ಯ ಚುನಾವಣೆಗೆ ಬಿಜೆಪಿ ಖರ್ಚು ಮಾಡಿದ್ದು ಬರೋಬ್ಬರಿ 252 ಕೋಟಿ ರೂಪಾಯಿ!


