ಭಾರತದಲ್ಲಿ ಓಮಿಕ್ರಾನ್ ರೂಪಾಂತರದ ಎರಡು ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ಈ ಎರಡೂ ಪ್ರಕರಣಗಳು ಕರ್ನಾಟಕದಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ಜಾಗತಿಕವಾಗಿ ಓಮಿಕ್ರಾನ್ ರೂಪಾಂತರ ವೈರಸ್ ಪತ್ತೆಯಾದ 30 ನೇ ದೇಶವಾಗಿದೆ ಭಾರತ.
“ಎರಡೂ ಪ್ರಕರಣಗಳು ಕರ್ನಾಟಕದಲ್ಲಿ ವರದಿಯಾಗಿದ್ದು. 66 ಮತ್ತು 46 ವರ್ಷ ವಯಸ್ಸಿನ ಇಬ್ಬರು ರೋಗಿಗಳಲ್ಲಿ ಇದು ಕಂಡು ಬಂದಿದೆ” ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ರೋಗಿಗಳ ಗೌಪ್ಯತೆಯನ್ನು ರಕ್ಷಿಸಲು ಅವರ ಗುರುತನ್ನು ಸದ್ಯಕ್ಕೆ ಬಹಿರಂಗಪಡಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಮಕ್ಕಳಿಗೆ ಮೊಟ್ಟೆ ಬೇಡ ಎನ್ನುವವರಿಗೆ ತಜ್ಞ ವೈದ್ಯರು ಹೇಳುವುದೇನು?
ಮೂಲಗಳ ಪ್ರಕಾರ, ವಿದೇಶಿಯಾಗಿರುವ 66 ವರ್ಷ ವಯಸ್ಸಿನ ರೋಗಿಯು ದಕ್ಷಿಣ ಆಫ್ರಿಕಾದಿಂದ ಇತ್ತೀಚೆಗೆ ಬಂದಿದ್ದರು. 46 ವರ್ಷದ ಮತ್ತೊಬ್ಬ ರೋಗಿ ಭಾರತದವರೇ ಆಗಿದ್ದು, ಬೆಂಗಳೂರಿನಲ್ಲಿ ಆರೋಗ್ಯ ಕಾರ್ಯಕರ್ತರಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಇಬ್ಬರು ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದ ಎಲ್ಲಾ ಜನರನ್ನು ಪತ್ತೆಹಚ್ಚಲಾಗಿದೆ ಮತ್ತು ಪರೀಕ್ಷಿಸಲಾಗುತ್ತಿದೆ. ಎರಡೂ ಪ್ರಕರಣಗಳಲ್ಲಿ ರೋಗಿಗಳು ಸೌಮ್ಯವಾಗಿದ್ದು, ಇದುವರೆಗೆ ಯಾವುದೇ ತೀವ್ರವಾದ ರೋಗಲಕ್ಷಣಗಳಿಲ್ಲ ಎಂದು ಹೇಳಲಾಗಿದೆ.
“ಓಮಿಕ್ರಾನ್ ಪತ್ತೆಯಾಗಿರುವುದರಿಂದ ನಾವು ಭಯಪಡಬೇಕಾಗಿಲ್ಲ. ಆದರೆ ಅದರ ಬಗ್ಗೆ ಅರಿವು ಇರಬೇಕಾಗಿದೆ. ಕೊರೊನಾದ ಸೂಕ್ತ ನಡವಳಿಕೆಯನ್ನು ಅನುಸರಿಸಿ ಮತ್ತು ಸಭೆಗಳನ್ನು ಸೇರಬೇಡಿ” ಎಂದು ಅಗರ್ವಾಲ್ ಹೇಳಿದರು.
ಒಕ್ಕೂಟ ಸರ್ಕಾರದ ಕೊರೊನಾ ಕಾರ್ಯಪಡೆಯ ಮುಖ್ಯಸ್ಥ ಡಾ. ವಿ.ಕೆ. ಪಾಲ್, “ತಕ್ಷಣಕ್ಕೆ ಯಾವುದೇ ರೀತಿಯ ತೀವ್ರ ನಿರ್ಬಂಧಗಳನ್ನು ಕೈಗೊಂಡಿಲ್ಲ. ಪರಿಸ್ಥಿತಿಯು ನಿಯಂತ್ರಣದಲ್ಲಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ರೈತರಿಗೆ ಸಾಲ ನೀಡಲು SBI ಜೊತೆ ಕೈಜೋಡಿಸಿದ ಅದಾನಿ ಕ್ಯಾಪಿಟಲ್
ಈ ಬಗ್ಗೆ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಗೌರವ್ ಗುಪ್ತಾ ಅವರು ಕೂಡಾ ಸ್ಪಷ್ಟ ಪಡಿಸಿದ್ದಾರೆ. “ಬಿಬಿಎಂಪಿ ವ್ಯಾಪ್ತಿಯಲ್ಲಿ ಇಬ್ಬರು ಕೋವಿಡ್ ಪಾಸಿಟಿವ್ ವ್ಯಕ್ತಿಗಳಲ್ಲಿ ಓಮೈಕ್ರಾನ್ ವೈರಾಣು ಪತ್ತೆಯಾಗಿದ್ದು, ಪಾಲಿಕೆ ವತಿಯಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾರೊಬ್ಬರೂ ಭಯಪಡುವ ಅಗತ್ಯವಿಲ್ಲ. ಎಲ್ಲರೂ ಕೋವಿಡ್ ನಿಯಮಗಳನ್ನು(CAB) ಅನ್ನು ಪಾಲಿಸಲು ಕೋರುತ್ತೇನೆ” ಎಂದು ತಿಳಿಸಿದ್ದಾರೆ.
ಓಮಿಕ್ರಾನ್ ವೇಗವಾಗಿ ಹರಡುತ್ತದೆ ಎಂಬುವುದನ್ನು ತಜ್ಞರು ಸ್ಪಷ್ಟಪಡಿಸಿದ್ದರಾದರೂ, ಅದರಿಂದಾಗಿ ತೀವ್ರ ಆರೋಗ್ಯದ ಸಮಸ್ಯೆ ಆಗುತ್ತದೆ ಎಂಬ ಬಗ್ಗೆ ಯಾವುದೆ ಪುರಾವೆ ಇಲ್ಲ ಎಂದು ಹೇಳಿದ್ದಾರೆ.
ಓಮಿಕ್ರಾನ್ ರೂಪಾಂತರ ವೈರಸ್ ಅನ್ನು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಹಚ್ಚಲಾಯಿತು. ಇದು ಪತ್ತೆಯಾಗುತ್ತಿದ್ದಂತೆ ಹಲವಾರು ರಾಷ್ಟ್ರಗಳು ನಿರ್ಬಂಧಗಳನ್ನು ಪುನಃ ಹೇರುತ್ತಿವೆ. 2020 ರ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಮೊದಲು ಕಂಡುಹಿಡಿಯಲಾದ ಡೆಲ್ಟಾ ರೂಪಾಂತರ ವೈರಸ್ ನಂತರ ಈ ವೈರಸ್ ಹೊಸತಾಗಿ ಪತ್ತೆಯಾಗಿದೆ.
ಭಾರತವು ಡಿಸೆಂಬರ್ 15 ರಂದು ನಿಗದಿತ ವಾಣಿಜ್ಯ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಮರುಪ್ರಾರಂಭಿಸಲು ಸಿದ್ಧವಾಗಿತ್ತು. ಆದರೆ ಬುಧವಾರ ಆ ಯೋಜನೆಯನ್ನು ರದ್ದುಗೊಳಿಸಿ, ಮರುಪ್ರಾರಂಭದ ದಿನಾಂಕವನ್ನು ಸರಿಯಾದ ಸಮಯದಲ್ಲಿ ಘೋಷಿಸಲಾಗುವುದು ಎಂದು ಹೇಳಿದೆ.
ಇದನ್ನೂ ಓದಿ:ವಿಶ್ವದೆಲ್ಲೆಡೆ ಕೊರೊನಾ ಹೊಸ ರೂಪಾಂತರ ‘ಓಮಿಕ್ರಾನ್’ ಆತಂಕ: ತಜ್ಞರು ಹೇಳುವುದೇನು?


