ಕಂಪೆನಿಯೊಂದರ ಮೂರು ನಿಮಿಷದ ಝೂಮ್ ಸಭೆಯಲ್ಲಿ ಸುಮಾರು 900 ಉದ್ಯೋಗಿಗಳನ್ನು ಒಂದೇ ಬಾರಿಗೆ ವಜಾ ಗೊಳಿಸಿರುವ ವಿಲಕ್ಷಣ ಘಟನೆ ನಡೆದಿದೆ. ಅಮೆರಿಕ ಮೂಲದ ಸಂಸ್ಥೆಯಾದ Better.com ನ ಸಿಇಒ ವಿಶಾಲ್ ಗಾರ್ಗ್ ಅವರು ಈ ನಿರ್ಧಾರವನ್ನು ಝೂಮ್ ಸಭೆಯಲ್ಲಿ ಪ್ರಕಟಿಸಿದ್ದಾರೆ. ಮುಂಬರುವ ಕ್ರಿಸ್‌ಮಸ್ ಹಬ್ಬದ ಸೀಸನ್‌ಗೆ ಮುಂಚಿತವಾಗಿ ಘಟನೆ ನಡೆದಿದ್ದು ಕಂಪನಿಯ ಸಿಬ್ಬಂದಿಗೆ ತೀವ್ರ ಆಘಾತವನ್ನುಂಟುಮಾಡಿದೆ.
“ನಾನು ಉತ್ತಮ ಸುದ್ದಿಯೊಂದಿಗೆ ನಿಮ್ಮ ಬಳಿಗೆ ಬರುತ್ತೇನೆ. ಮಾರುಕಟ್ಟೆ ಬದಲಾಗಿದೆ ಮತ್ತು ಬದುಕಬೇಕಾದರೆ ನಾವು ಅದರೊಂದಿಗೆ ಚಲಿಸಬೇಕಾಗಿದೆ. ಹೀಗಾದರೆ ಆಶಾದಾಯಕವಾಗಿ, ನಾವು ಅಭಿವೃದ್ಧಿ ಹೊಂದಬಹುದು ಮತ್ತು ನಮ್ಮ ಧ್ಯೇಯವನ್ನು ತಲುಪಿಸಬಹುದು” ಎಂದು ಹೇಳುತ್ತಾ ತಮ್ಮ ಕಠೋರವಾದ ಪ್ರಕಟಣೆಯನ್ನು ಹೇಳಿದ್ದಾರೆ.
ಇದನ್ನೂ ಓದಿ:ಸಹೋದ್ಯೋಗಿಗೆ ಲೈಂಗಿಕ ದೌರ್ಜನ್ಯ: ಯುಪಿ ಸರ್ಕಾರಿ ಉದ್ಯೋಗಿ ಬಂಧನ
“ನೀವು ಈ ಝೂಮ್ ಸಭೆಯಲ್ಲಿದ್ದರೆ, ವಜಾಗೊಳ್ಳುತ್ತಿರುವ ದುರದೃಷ್ಟಕರ ಗುಂಪಿನ ಭಾಗವಾಗಿದ್ದೀರಿ ಎಂದರ್ಥ…ನಿಮ್ಮ ಉದ್ಯೋಗವನ್ನು ತಕ್ಷಣವೇ ಕೊನೆಗೊಳಿಸಲಾಗುತ್ತದೆ” ಎಂದು ಅವರು ಸಭೆಯಲ್ಲಿ ಹೇಳಿದ್ದಾರೆ. ವಜಾಗೊಂಡಿರುವ ಉದ್ಯೋಗಿಗಳು ದಿನಕ್ಕೆ ಎರಡು ಗಂಟೆ ಮಾತ್ರ ಕೆಲಸ ಮಾಡುವುದರಿಂದ ಹೆಚ್ಚು ಕೆಲಸ ಮಾಡುವ ಉದ್ಯೋಗಿಗಳು ಮತ್ತು ಕಂಪನಿಯ ಗ್ರಾಹಕರಿಂದ ಅವರು ‘ಕದಿಯುತ್ತಿದ್ದಾರೆ’ ಎಂದು ವಿಶಾಲ್ ಗಾರ್ಗ್ ಆರೋಪಿಸಿದ್ದಾರೆ.
ರಜಾ ಅವಧಿಗೆ ಮುನ್ನವೇ ನೌಕರರನ್ನು ವಜಾಗೊಳಿಸಿರುವುದು ಬೇಸರ ತಂದಿದೆಯಾದರೂ ಅವರಿಗೆ ಸೂಕ್ತ ಸೌಲಭ್ಯ ಮತ್ತು ಪ್ಯಾಕೇಜ್ ನೀಡಲಾಗುವುದು ಎಂದು ಕಂಪನಿಯ CFO ಕೆವಿನ್ ರಯಾನ್ CNN ಬ್ಯುಸಿನೆಸ್‌ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೆಲಸ ಕಳೆದು ಕೊಂಡಿರುವವರಲ್ಲಿ ಅಮರಿಕಾ ಹಾಗೂ ಭಾರತದ ಉದ್ಯೋಗಿಗಳು ಸೇರಿದ್ದಾರೆ ಎಂದು ವರದಿಗಳು ಹೇಳಿವೆ.
“ಮೋಸ ಹೋದ ಅನುಭವವಾಗುತ್ತಿದೆ” ಎಂದು ಸಭೆಯಲ್ಲಿ ವಜಾಗೊಂಡ ಕಂಪನಿಯ ಮಾಜಿ ಉದ್ಯೋಗಿಯೊಬ್ಬರು ತಿಳಿಸಿದ್ದಾರೆಂದು TNIE ವರದಿ ಮಾಡಿದೆ. “ಆಂತರಿಕವಾಗಿ ತಂಡದ ಒಡನಾಟ ತುಂಬಾ ಚೆನ್ನಾಗಿತ್ತು ಆದರೆ ಆಡಳಿತವು ನಮ್ಮನ್ನು ಕೈಬಿಟ್ಟಿದೆ” ಎಂದು ಹೆಸರು ಹೇಳಲು ಇಚ್ಛಿಸದ ಮಾಜಿ ಉದ್ಯೋಗಿಯೊಬ್ಬರು ಹೇಳಿದ್ದಾರೆ. “ವಿಶಾಲ್ ಗಾರ್ಗ್ ತುಂಬಾ ಕೆಟ್ಟ ಕಾರ್ಯನಿರ್ವಾಹಕನಾಗಿದ್ದು, ಒಮ್ಮೆ ತನ್ನ ಉದ್ಯೋಗಿಗಳನ್ನು ‘ಕಿವುಡ ಡಾಲ್ಫಿನ್‌ಗಳ ಗುಂಪು’ ಎಂದು ಕರೆದಿದ್ದರು” ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ:ಖಾಸಗಿ ಉದ್ಯೋಗಗಳನ್ನಾದರೂ ಸೃಷ್ಟಿಸಬೇಕಲ್ಲವೇ: ಡಿ.ಕೆ.ಶಿವಕುಮಾರ್ ‘ಒಂದು ಪ್ರಶ್ನೆ’


