Homeಅಂಕಣಗಳುಮನೆಗೆ ಬೆಂಕಿ ಬಿದ್ದಿದೆ ಸರ್, ಮಲಗಿದ್ದೀರಾ?

ಮನೆಗೆ ಬೆಂಕಿ ಬಿದ್ದಿದೆ ಸರ್, ಮಲಗಿದ್ದೀರಾ?

- Advertisement -
- Advertisement -

ಮೊನ್ನೆ ಹರಿದ್ವಾರದಲ್ಲಿ ಜರುಗಿದ ಸಾಧು ಸಂತರ ಧರ್ಮಸಂಸತ್ತು ದೇಶವಾಸಿ ಮುಸಲ್ಮಾನರನ್ನು ಕೊಂದು ಹಿಂದೂ ರಾಷ್ಟ್ರ ಸ್ಥಾಪಿಸಬೇಕೆಂಬುದಾಗಿ ಕರೆ ನೀಡಿದ್ದು ಮತ್ತು ಮಾಜಿ ಪ್ರಧಾನಿಗೆ ಸಂಸತ್ತಿನಲ್ಲೇ ಗೋಡ್ಸೆಯಂತೆ ಗುಂಡಿಕ್ಕಿ ಕೊಲ್ಲುವ ಮಾತುಗಳು ಅತ್ಯಂತ ಆಘಾತಕಾರಿ ವಿದ್ಯಮಾನ. ನರಮೇಧಕ್ಕೆ ನೀಡಿದ ನೇರ ಆಹ್ವಾನ. ಭವಿಷ್ಯದ ಭಯಾನಕ ಚಿತ್ರ. ವ್ಯಾಧಿ ಉಲ್ಬಣಿಸಿದ ಸಂಕೇತ.

ಸ್ವಚ್ಛಭಾರತದ ಆಂದೋಲನದ ಗೂಢಾರ್ಥ ಅಲ್ಪಸಂಖ್ಯಾತರು- ಆನಂತರ ದಲಿತ, ಆದಿವಾಸಿಗಳನ್ನು ಗುಡಿಸಿ ಹಾಕುವ ಆಂದೋಲನ ಎಂಬ ಗುಮಾನಿ ನೂರಕ್ಕೆ ನೂರು ನಿಜರೂಪ ಧರಿಸತೊಡಗಿದೆ.
ಹಿಂದೂ ರಾಷ್ಟ್ರ ನಿರ್ಮಿಸಲು ಹೋರಾಡಬೇಕು, ಸಾಯಬೇಕು ಅಗತ್ಯ ಬಿದ್ದರೆ ಕೊಲ್ಲಬೇಕು ಎಂಬುದಾಗಿ ನವದೆಹಲಿಯಲ್ಲಿ ನಡೆದ ಹಿಂದೂ ಯುವವಾಹಿನಿಯ ಸಮಾವೇಶ ಪಣ ತೊಟ್ಟಿತು.

ಮುಸಲರ ಹತ್ಯೆಗೆ ಕೇವಲ ಖಡ್ಗವನ್ನು ಬಳಸಿದರೆ ಸಾಲದು. ಅವರ ಬಳಿ ಅತ್ಯಾಧುನಿಕ ಹತಾರುಗಳಿವೆ. ಹೀಗಾಗಿ ತಾಂತ್ರಿಕವಾಗಿ ನಾವು ಮೇಲ್ದರ್ಜೆಗೇರಬೇಕಿದೆ ಎಂದು ಸರಸ್ವತಿಯವರು ಸಾರುವ ವಿಡಿಯೋ ವೈರಲ್ ಆಗಿದೆ. ’ಹೆಚ್ಚು ಹೆಚ್ಚು ಮಕ್ಕಳ ಹುಟ್ಟಿಸಿರಿ, ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಅತ್ಯುತ್ತಮ ಹತಾರುಗಳನ್ನು ಹೊಂದಿಸಿ ಇಟ್ಟುಕೊಳ್ಳಿರಿ’ ಎಂದು ಯತಿ ನರಸಿಂಘಾನಂದ ಸರಸ್ವತಿ ಎಂಬಾತ ಹೇಳುತ್ತಿದ್ದಾನೆ.

ಸಾಧು ಧರ್ಮದಾಸ್ ಮಹಾರಾಜ್ ಮಾತುಗಳು ಹೀಗಿವೆ: ’ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಮುಸಲ್ಮಾನರದು ಎಂದು ನಮ್ಮ ಅಂದಿನ ಪ್ರಧಾನಮಂತ್ರಿ (ಮನಮೋಹನ ಸಿಂಗ್) ಹೇಳಿದ್ದು ಕೇಳಿದೆ. ನಾನೊಬ್ಬ ಸಂಸದನಾಗಿದ್ದು ನನ್ನ ಬಳಿ ರಿವಾಲ್ವರ್ ಇದ್ದಿದ್ದರೆ ನಾಥುರಾಮ್ ಗೋಡ್ಸೆಯಾಗಿ ಮನಮೋಹನ್ ಸಿಂಗ್ ಎದೆಗೆ ಆರು ಕಾಡತೂಸುಗಳನ್ನು ಸಿಡಿಸುತ್ತಿದ್ದೆ’. (ಆದರೆ ಮನಮೋಹನ ಸಿಂಗ್ ಇಂತಹ ಹೇಳಿಕೆ ನೀಡಿರುವ ಯಾವುದೇ ದಾಖಲೆಗಳಿಲ್ಲ. 2006ರಲ್ಲಿ ಜರುಗಿದ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಸಭೆಯನ್ನು ಉದ್ದೇಶಿಸಿ ಅವರು ಹೇಳಿದ್ದಿಷ್ಟೇ: ’ಅಭಿವೃದ್ಧಿಯ ಫಲಗಳನ್ನು ನ್ಯಾಯಯುತವಾಗಿ ಹಂಚಿಕೊಳ್ಳುವಂತೆ ಮುಸಲ್ಮಾನರಿಗೆ ಚೈತನ್ಯ ನೀಡುವ ನವೀನ ದಾರಿಗಳನ್ನು ಸರ್ಕಾರ ರೂಪಿಸಬೇಕಿದೆ’ ಎಂದು).

ಛತ್ತೀಸಗಢದಲ್ಲಿ ಜರುಗಿದ ಮತ್ತೊಂದು ಅಧರ್ಮಸಂಸತ್ತಿನ ವೇದಿಕೆಯಲ್ಲಿ ಗಾಂಧೀ ಹಂತಕ ನಾಥೂರಾಮ ಗೋಡ್ಸೆಗೆ ಕೈಯೆತ್ತಿ ಮುಗಿದು, ದೇಶದ ಸತ್ಯನಾಶ ಮಾಡಿದ ಹರಾಮಖೋರ ಎಂದು ಗಾಂಧೀಜಿಯನ್ನು ನಿಂದಿಸಲಾಯಿತು.

ಗಾಂಧೀಜಿಯ ಘೋರನಿಂದನೆ ಮಾಡಿದ ಕುರಿತು ತನಗೆ ಯಾವುದೇ ಪಶ್ಚಾತ್ತಾಪ ಇಲ್ಲವೆಂದು ಕಾಳೀಚರಣ ಮಹಾರಾಜ ಎಂಬ ತಥಾಕಥಿತ ಸಂತ ಸಾರಿದ್ದಾನೆ. ಕಾಂಗ್ರೆಸ್ ಆಡಳಿತವಿರುವ ಛತ್ತೀಸಗಢ ಸರ್ಕಾರ ಮತ್ತು ಶಿವಸೇನೆ-ಕಾಂಗ್ರೆಸ್-ಎನ್.ಸಿ.ಪಿ. ಸಮ್ಮಿಶ್ರ ಆಡಳಿತವಿರುವ ಮಹಾರಾಷ್ಟ್ರ ಸರ್ಕಾರ ಈ ಸಂತನ ವಿರುದ್ಧ ಕಾನೂನು ಕ್ರಮ ಜರುಗಿಸಿವೆ.

ಆದರೆ ಹರಿದ್ವಾರದಲ್ಲಿ ಕೋಮುವಾದಿ ವಿಷಕಾರಿದ ಕಾರ್ಕೋಟಕ ಸಂತರ ಕೂದಲೂ ಕೊಂಕಿಲ್ಲ. ಬಿಜೆಪಿ ಆಡಳಿತವಿರುವ ಉತ್ತರಾಖಂಡ ಸರ್ಕಾರವಾಗಲೀ, ಮೋದಿ ಸರ್ಕಾರವಾಗಲಿ, ಮುಸಲ್ಮಾನರ ನರಮೇಧದ ಕರೆ ಕುರಿತು ತುಟಿ ಬಿಚ್ಚಿಲ್ಲ.

“ಧರ್ಮಗಳು ಬೇರೆಬೇರೆಯಾದರೂ ಎಲ್ಲ ಭಾರತೀಯರದು ಒಂದೇ ರಕ್ತ, ಒಂದೇ ಡಿ.ಎನ್.ಎ. ಹೀಗಾಗಿ ಮುಸಲ್ಮಾನರು ಭಯದ ಆವರ್ತದಲ್ಲಿ ಸಿಕ್ಕಿಹಾಕಿಕೊಳ್ಳಬಾರದು. ಪೂಜೆ ಪ್ರಾರ್ಥನೆಯ ಆಧಾರದ ಮೇಲೆ ಜನರ ನಡುವೆ ಭೇದಭಾವ ಎಣಿಸುವುದು ಸಲ್ಲದು. ಗುಂಪಾಗಿ ಬಡಿದು ಕೊಲ್ಲುವವರು ಹಿಂದುತ್ವದ ವಿರೋಧಿಗಳು. ಹಿಂದು-ಮುಸ್ಲಿಮ್ ಘರ್ಷಣೆಗಳಿಗೆ ಪರಿಹಾರ ಮಾತುಕತೆಯೇ ವಿನಾ ವೈಮನಸ್ಯ ಅಲ್ಲ” ಎಂಬ ಆರೆಸ್ಸೆಸ್ ಮುಖ್ಯಸ್ಥರ ಮಾತುಗಳಿಗೆ ಅರ್ಥವೇನು ಎಂದು ಜಗ್ಗಿಸಿ ಕೇಳಬೇಕಿದೆ.

ಮುಸಲ್ಮಾನರ ಸಂಹಾರಕ್ಕೆ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ನೀಡಿರುವ ಕರೆ ಹಿಂಸಾತ್ಮಕ ಮತ್ತು ಜನಾಂಗೀಯ ಹತ್ಯೆಗೆ ಆಹ್ವಾನ. ಉಳಿದೆಲ್ಲ ಧರ್ಮೀಯರಿಗೆ ಸಮಾನತೆಯನ್ನು ನಿರಾಕರಿಸಿ ಅಡಿಯಾಳುಗಳನ್ನಾಗಿಸುವ ಹಿಂದುರಾಷ್ಟ್ರದ ಪರಿಕಲ್ಪನೆ ಇದು. ನಮ್ಮ ಸಂವಿಧಾನದ ಸಹಬಾಳುವೆಯ ಆಶಯಕ್ಕೆ ಎಸೆದ ನೇರ ಸವಾಲು. ಕೋಮುವಾದಿ ಕಾರ್ಕೋಟಕ ವಿಷವನ್ನು ಕಾರುವ ಈ ಉನ್ಮಾದಕಾರಿ ಕೃತ್ಯಕ್ಕೆ ದೇಶವನ್ನು ಆಳುವವರು ಪ್ರತ್ಯಕ್ಷ ಪರೋಕ್ಷ ಕುಮ್ಮುಕ್ಕು ನೀಡತೊಡಗಿದ್ದಾರೆ. ರಕ್ಷಣೆಯನ್ನೂ ಒದಗಿಸುತ್ತಿದ್ದಾರೆ. ಹೀಗಾಗಿಯೇ ಈ ಶಕ್ತಿಗಳಿಗೆ ಕಾನೂನಿನ ಭಯವಿಲ್ಲ. ಏನು ಮಹಾ ಆದೀತು, ಹೆಚ್ಚೆಂದರೆ ಒಂದು ಎಫ್.ಐ.ಆರ್ ಎಂಬ ಉಡಾಫೆ ಮೂಡಿದೆ.

’ದೇಶ್ ಕೇ ಗದ್ದಾರೋಂ ಕೋ ಗೋಲಿ ಮಾರೋ ಸಾಲೋಂಕೋ’ ಎಂಬುದಾಗಿ ದೆಹಲಿಯ ಬಹಿರಂಗಸಭೆಯಲ್ಲಿ ಘೋಷಣೆ ಕೂಗಿಸಿದ ಕೇಂದ್ರ ರಾಜ್ಯ ಸಚಿವ ಅನುರಾಗ್ ಠಾಕೂರ್ ಎಂಬ ಕಿರಿಯ ಮಂತ್ರಿಯ ಮೇಲೆ ಕ್ರಮ ಜರುಗಲಿಲ್ಲ. ಬದಲಿಗೆ ಮೋದಿಯವರ ಮಂತ್ರಿಮಂಡಲದಲ್ಲಿ ಕ್ಯಾಬಿನೆಟ್ ದರ್ಜೆಗೆ ಬಡ್ತಿ ನೀಡಿ ಸಮ್ಮಾನಿಸಲಾಯಿತು.

ನೆರೆಹೊರೆಯ ಉತ್ತರಪ್ರದೇಶ, ಹಿಮಾಚಲಪ್ರದೇಶ ಹಾಗೂ ಪಂಜಾಬಿನ ಜೊತೆಗೆ ಉತ್ತರಾಖಂಡವೂ ಸದ್ಯದಲ್ಲೇ ವಿಧಾನಸಭಾ ಚುನಾವಣೆಗಳನ್ನು ಎದುರಿಸಿದೆ. ಮೂರೂ ರಾಜ್ಯಗಳಲ್ಲಿ ಕೋಮುವಾದಿ ಧ್ರುವೀಕರಣ ರಾಜಕಾರಣದ ವಿಷಸರ್ಪ ಭುಸುಗುಟ್ಟಿ ಫೂತ್ಕರಿಸಿದೆ. ಮುಸಲ್ಮಾನರ ನರಮೇಧಕ್ಕೆ ನೀಡಿದ ಕರೆಯು ಮುಸಲ್ಮಾನರಿಂದಲೂ ಇಂತಹುದೇ ವಿಪರೀತ ಪ್ರತಿಕ್ರಿಯೆಯನ್ನು ಪ್ರಜ್ಞಾಪೂರ್ವಕವಾಗಿ ಬಯಸಿದೆ.

2013ರಲ್ಲಿ ಯುಪಿ ಬಿಹಾರದ ಉದ್ದಗಲಕ್ಕೆ ಬೀಸಿದ ಕೋಮುವಾದಿ ವಿಷಗಾಳಿ 2014ರ ಚುನಾವಣೆಗಳನ್ನು ಭರ್ಜರಿಯಾಗಿ ಬಿಜೆಪಿಗೆ ಗೆಲ್ಲಿಸಿಕೊಟ್ಟಿತ್ತಲ್ಲ. ಈ ಭೂಕಂಪನದ ಕಂಪನಕೇಂದ್ರ ಪಶ್ಚಿಮೀ ಉತ್ತರಪ್ರದೇಶವೇ ಆಗಿತ್ತು. ಈ ಸೀಮೆಯ ರೈತಶಕ್ತಿ ಇದೀಗ ಆಳುವವರ ಮಗ್ಗುಲ ಮುಳ್ಳಾಗಿ ಅವರ ಚಿಂತೆಗೆ ಕಾರಣವಾಗಿದೆ. ಹರಿದ್ವಾರ ಉತ್ತರಾಖಂಡದ ಭೂಭಾಗವೆನ್ನುವುದು ಹೌದು. ಆದರೆ ಪಶ್ಚಿಮೀ ಉತ್ತರಪ್ರದೇಶವೇ ಅದರ ನೆರೆಹೊರೆ. ಹೀಗಾಗಿ ಮುಸ್ಲಿಮ್ ನರಮೇಧದ ಕರೆ ಪಶ್ಚಿಮೀ ಉತ್ತರಪ್ರದೇಶದಲ್ಲಿ ಧ್ರುವೀಕರಣ ಬಿತ್ತುವ ನಿಚ್ಚಳ ಪ್ರಯತ್ನ.

ಮನೆಗಳನ್ನು ಮನಸುಗಳನ್ನು ಒಡೆಯುವ ಇಂತಹ ಅಪಾಯಕಾರಿ ಧ್ರುವೀಕರಣದ ರಾಜಕಾರಣದಿಂದ ಕೊಂಚ ಕಾಲ ಬಿಜೆಪಿ ಬಲಗೊಳ್ಳಬಹುದು. ಆದರೆ ದೇಶ ದುರ್ಬಲವಾಗುತ್ತದೆ. ಸಾಮರಸ್ಯದ ಸಾಮಾಜಿಕ ಹಂದರ ಚಿಂದಿಯಾಗುತ್ತದೆ. ದೇಶ ಮೊದಲು ಎಂದು ಸಾರುವವರು ಆಡಿದ ಮಾತನ್ನು ನಡೆಸಿಕೊಡಬೇಕು.

ರಾಜಕಾರಣದ ಹಿಂದೂಕರಣ ಮತ್ತು ಹಿಂದೂಕರಣದ ಸೈನ್ಯೀಕರಣ ಎಂಬುದೇ ಅತ್ಯುತ್ತಮ ಮತ್ತು ದೂರದರ್ಶಿತ್ವದ ಹಿಂದೂ ರಾಷ್ಟ್ರರಾಜಕಾರಣ ಎಂಬುದು ಸಾವರ್ಕರ್ ಪ್ರಣೀತ ಸಿದ್ಧಾಂತ. ದೇಶದಲ್ಲಿಂದು ಇದೇ ಸಿದ್ಧಾಂತವನ್ನು ಜಾರಿಗೆ ತರಲಾಗುತ್ತಿದೆ.

ಧರ್ಮದ ಹೆಸರಿನ ಧರ್ಮಾಂಧತೆ ಪ್ರತ್ಯೇಕವಾದಕ್ಕೆ ದಾರಿ ಮಾಡುತ್ತದೆ. ಪ್ರತ್ಯೇಕವಾದವು ಭಯೋತ್ಪಾದನೆಯನ್ನು ಹುಟ್ಟಿಹಾಕೀತು. ತಾಲೀಬಾನಿ, ಲಷ್ಕರ್ ಎ ತೊಯ್ಬಾ, ಐ.ಎಸ್.ಐ.ಎಸ್ ಮುಂತಾದ ಮತಾಂಧ ಮುಸ್ಲಿಮ್ ಸಂಘಟನೆಗಳೇ ಈ ಮಾತಿಗೆ ಉದಾಹರಣೆ.

ಅನುರಾಗ್ ಠಾಕೂರ್

ಕಡು ದ್ವೇಷವನ್ನು ಬಿತ್ತಿ ಕೋಮುಗಲಭೆಗಳಿಗೆ ಕಿಡಿ ಹೊತ್ತಿಸಿ ಚುನಾವಣೆ ಬೇಳೆ ಬೇಯಿಸಿಕೊಳ್ಳುವುದು ನಿಜ ಅರ್ಥದಲ್ಲಿ ದೇಶದ್ರೋಹದ ಕೃತ್ಯ. ಇದರ ವಿರುದ್ಧ ಗಣ್ಯ ವ್ಯಕ್ತಿಗಳು- ಪೌರಸಮಾಜ ಗಟ್ಟಿ ದನಿಯೆತ್ತಬೇಕಿದೆ.

ಹಿಂದಿಯ ಬಹುಮುಖ್ಯ ಕವಿಗಳಲ್ಲಿ ಒಬ್ಬರಾಗಿದ್ದ ಸರ್ವೇಶ್ವರ ದಯಾಳ ಸಕ್ಸೇನಾ ಅವರ ಈ ಕವಿತೆ ದಶಕಗಳ ಹಿಂದೆ ಬರೆದದ್ದು. ನನ್ನ ಅನುವಾದ ತೆಳುವೆನಿಸಿದರೆ ಕ್ಷಮಿಸಿ.

ದೇಶವೆಂಬುದು ಕಾಗದದ ಮೇಲೆ ಬಿಡಿಸಿದ ನಕ್ಷೆಯಲ್ಲ
ನಿಮ್ಮ ಮನೆಯ
ಒಂದು ಕೋಣೆಗೆ ಬೆಂಕಿ ಬಿದ್ದಿದೆಯಾದರೆ
ಮತ್ತೊಂದು ಕೋಣೆಯಲಿ
ಮಲಗಿ ನಿದ್ರಿಸಬಲ್ಲಿರಾ ನೀವು?

ನಿಮ್ಮ ಮನೆಯ ಒಂದು ಕೋಣೆಯಲಿ
ಹೆಣ ಬಿದ್ದು ಕೊಳೆಯುತ್ತಿದ್ದರೆ
ಇನ್ನೊಂದು ಕೋಣೆಯಲಿ ಪ್ರಾರ್ಥಿಸಬಲ್ಲಿರಾ
ನೀವು?

ಹೌದು ಎಂಬುದೇ ನಿಮ್ಮ ಉತ್ತರವಾಗಿದ್ದರೆ
ನಿಮ್ಮೊಡನೆ ಮಾತಾಡುವುದು
ಏನೂ ಉಳಿದಿಲ್ಲ ನನಗೆ.

ದೇಶವೆಂಬುದು ಬರಿದೇ ಕಾಗದದ ಮೇಲೆ
ಬರೆದ ನಕ್ಷೆಯಲ್ಲ
ಒಂದು ಹಿಸ್ಸೆ ಹರಿದುಹೋದರೆ
ಬಾಕಿ ಹಿಸ್ಸೆಯು ಬಾಧಿತವಾಗದೆ ಉಳಿದು
ಹೋಗುವುದಿಲ್ಲ ಮತ್ತು
ನದಿಗಳು ಪರ್ವತ ಶಹರು ಹಳ್ಳಿ
ತಮ್ಮ ತಮ್ಮ ಜಾಗೆಗಳಲ್ಲಿ ಹಾಗೇ
ಇಡಿಯಾಗಿ ಕಂಡು ಉದಾಸೀನ
ಉಳಿಯುವುದಿಲ್ಲ.

ಮಾನವ ಜೀವಕಿಂತ ಮಿಗಿಲೆನಿಸಿದ್ದು
ಇನ್ನೇನೂ ಇಲ್ಲ ಈ ಇಳೆಯೊಳಗೆ
ಈಶ್ವರ
ಜ್ಞಾನ
ಚುನಾವಣೆ
ಯಾವುದೂ ಅಲ್ಲ

ಕಾಗದದ ಮೇಲೆ ಗೀಚಿದ ಯಾವುದೇ ಅನುಲೇಖವ
ಹರಿದು ಒಗೆಯಲುಬಹುದು
ಮತ್ತು ನೆಲದಾಳದ ಏಳು ಪದರಗಳಡಿಯಲಿ
ಹುಗಿಯಲೂಬಹುದು ಅದನು.

ಕಣ್ಣಿಲ್ಲದ ಕಪೋತವದು
ಕಳೇಬರಗಳ ಮೇಲೆ ಕಾಲೂರಿ
ನಿಂತ ವಿವೇಕ
ಕೊಲೆಗಡುಕರ ದಂಧೆಯದು

ನೆನಪಿನಲಿಡಯ್ಯಾ
ಒಂದು ಕಂದನ ಹತ್ಯೆ
ಒಬ್ಬ ಮಹಿಳೆಯ ಮರಣ
ಕಾಡತೂಸುಗಳು ಚಿಂದಿಹೊಡೆದ
ಮನುಷ್ಯನೊಬ್ಬನ ಮೃತದೇಹ
ಸಂಪೂರ್ಣ ರಾಷ್ಟ್ರದ ಪತನವೇ
ವಿನಾ ಕೇವಲ
ಯಾವುದೊಂದು ಆಡಳಿತ ಮಾತ್ರದ್ದಲ್ಲ

ಇಂತಹ ನೆತ್ತರು ಹರಿದು
ಇಳೆಗಿಳಿದು ತೋಯಿಸಿ ಹಿಂಗುವುದಿಲ್ಲ
ಬದಲಿಗೆ

ಆಗಸದಲಿ ಪಟಪಟಿಸುವ ಪತಾಕೆಗಳ

ಮೆತ್ತಲಿದೆ ಕಪ್ಪಾಗಿ
ಫೌಜು ಬೂಟುಗಳ ನಿಶಾನೆ ಬಿದ್ದ ನೆಲ

ಮತ್ತು ಅದರ ಮೇಲೆ ಹೆಣಗಳು ಉರುಳುತಿರುವ
ಆ ಅದೇ ನೆಲ
ಬೆಂಕಿಯಾಗಿ ನಿಮ್ಮ ನೆತ್ತರ ಸೇರಿ ಬೆರೆತು ಓಡದಿದ್ದರೆ
ಇಕೋ ತಿಳಿದುಕೊಳ್ಳಿರಿ
ನೀವು ಬಂಜರು ಬಿದ್ದಿರುವಿರಿ
ಉಸಿರಾಡುವ ಅಧಿಕಾರವೂ ಇಲ್ಲ ನಿಮಗೆ ಇಲ್ಲಿ
ಸತ್ತೇ ಹೋಗಿದೆ ನಿಮ್ಮ ಪಾಲಿನ ಇಹದ ವ್ಯಾಪಾರ

ಕಟ್ಟಕಡೇ ಮಾತು
ಅಗದೀ ನೇರ ನಿಚ್ಚಳ
ಎಂದೆಂದಿಗೂ ಕ್ಷಮಿಸಿದಿರಿ
ಯಾವನೇ ಹಂತಕನನ್ನು
ಆಗಿರವಲ್ಲನ್ಯಾಕೆ ಅವನು
ನಿಮ್ಮ ಜಿಗರೀ ದೋಸ್ತ
ದುರಂಧರ ಧರ್ಮದ ಗುತ್ತಿಗೆದಾರ,
ಲೋಕತಂತ್ರದ
ಸ್ವನಾಮಧನ್ಯ ಪಹರೆದಾರ


ಇದನ್ನೂ ಓದಿ: ಕೋಮುವಾದಿ ಕೊಪ್ಪರಿಗೆಗೆ ರಿಝ್ವಿ ಮತಾಂತರದ ಬೆಂಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Dr. ಆನಂದ್ ರಂಗನಾಥನ್ ಎಂಬ ಲೇಖಕ, ವಿಜ್ಞಾನಿ ಈ ಕಾಲಿಚರಣ್ ಎಂಬಾತನ ಹೇಳಿಕೆಯನ್ನು ಸಮರ್ಥಿಸುತ್ತಾ Dr. B R ಅಂಬೇಡ್ಕರ್ ಅವರು ಮರಾಠಿ ಪತ್ರಿಕೆಯೊಂದರ ದೀಪಾವಳಿ ವಿಶೇಷಾಂಕಕ್ಕೆ ಬರೆದ ಲೇಖನವನ್ನು ಉಲ್ಲೇಖಸಿ, ಅಂಬೇಡ್ಕರ್ ರವರು ಗಾಂಧೀಜಿಯವರನ್ನು ಅವಹೇಳನಕಾರಿ ಆಗಿ ಟೀಕಿಸಿರುವ ಸಾಲುಗಳನ್ನು tag ಮಾಡಿ “ಗಾಂಧಿ ಭಕ್ತರಿಗೆ ” ಸವಾಲೆಸಿದಿರುತ್ತಾರೆ.

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...