ಮಹಮ್ಮದ್ ರಫಿ, ಮುಖೇಶ್ ಕುಮಾರ್, ಕಿಶೋರ್ ಕುಮಾರ್, ಮಹೇಂದ್ರ ಕಪೂರ್, ಲತಾ ಮಂಗೇಶ್ಕರ್ ಇವೆಲ್ಲ ಕೇವಲ ಹೆಸರುಗಳಷ್ಟೇ ಅಲ್ಲ, ಬದಲಿಗೆ ಭಾರತೀಯ ಸಂಗೀತಾಸಕ್ತರ ಪಾಲಿಗೆ ದಶಕಗಳ ಕಾಲ ಜೀವ ತಣಿಸುವ ನಾಡಿಮಿಡಿತವೇ ಆಗಿಹೋಗಿದ್ದ ಅಚ್ಚರಿಗಳು.
ದೂರದರ್ಶನ ಆಗಿನ್ನು ದೂರದ ಮಾತು ಬಿಡಿ, ಅಂತಹ ಕಾಲದಲ್ಲಿ ರೇಡಿಯೋ ಮೂಲಕ ದೇಶದ ಮೂಲೆಮೂಲೆಗೂ ಸಂಗೀತವನ್ನು ತಲುಪಿಸಿದ, ಹಿಂದಿ-ಉರ್ದು ಭಾಷೆಯ ಪರಿಚಯ ಇಲ್ಲದವರ ಬಾಯಲ್ಲೂ ಅಪರೂಪದ ಚಿತ್ರಗೀತೆಗಳನ್ನು, ಘಜಲ್‌ಗಳನ್ನು ಗುನುಗಿಸಿದ ಕೀರ್ತಿ ಈ ಎಲ್ಲಾ ಸಂಗೀತ ದಿಗ್ಗಜರಿಗೆ ಸಲ್ಲುತ್ತದೆ.
ಅದರಲ್ಲೂ 50ರಿಂದ 70ರ ದಶಕಗಳಲ್ಲಿ, ಭಾರತದಲ್ಲಿ ಮಹಮ್ಮದ್ ರಫಿ ಉಂಟುಮಾಡಿದ್ದ ಮೋಡಿ ಇದೆಯಲ್ಲ ಅದನ್ನು ಪದಗಳಲ್ಲಿ ಹಿಡಿದಿಡುವುದು ಅಷ್ಟು ಸುಲಭದ ಮಾತಲ್ಲ.

ದಿಲ್ ಕೆ ಜಾ ರೋಕೆ ಮೆ, ಯೇ ಮೇರಾ ಪ್ರೇಮ್ ಪತ್ರ ಪದಕಾರ್, ಯೇ ಚಾಂದ್ ಸಾ ರೋಷಾನ್ ಚೆಹೆರಾ, ಬದನ್ ಪೇ ಸಿತಾರೆ ಹೀಗೆ ಒಂದೊಂದೆ ಹಾಡುಗಳ ಮೂಲಕ ಜನರನ್ನು ಮೋಡಿ ಮಾಡಿದ ಮೋಡಿಗಾರ ಎಂದೇ ಮಹಮ್ಮದ್ ರಫಿ ಅವರನ್ನು ಗುರುತಿಸಲಾಗುತ್ತದೆ. ಭಾರತದ ಮಟ್ಟಿಗೆ ಚಲನಚಿತ್ರಗಳಿಗೂ ಘಜಲ್ ಸಾಹಿತ್ಯ ಸಂಗೀತವನ್ನು ಪರಿಚಯಿಸಿ ಅದನ್ನು ಉತ್ತುಂಗಕ್ಕೆ ಕೊಂಡೊಯ್ದ ಅಪರೂಪದ ಕಲಾವಿದ ಮಹಮ್ಮದ್ ರಫಿ.
ಬಾಲಿವುಡ್ ಮತ್ತು ಹಿಂದಿ ಭಾಷಿಕ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಹಿಂದಿ ಭಾಷೆಗೆ ಇರುವಷ್ಟೇ ಪ್ರಾಮುಖ್ಯತೆ ಉರ್ದು ಭಾಷೆಗೂ ಇದೆ. ಮಿರ್ಜಾ ಗಾಲಿಬ್‌ನಂತೆ ಉರ್ದು ಭಾಷೆಯಲ್ಲಿ ಸಾವಿರಾರು ಘಜಲ್‌ಗಳನ್ನು ರಚಿಸಿದ ಅನೇಕರು ಇಂದು ಇತಿಹಾಸದ ಪುಟ ಸೇರಿದ್ದಾರೆ. ಅಂತಹ ಘಜಲ್‌ಗಳನ್ನು ತಮ್ಮ ಅಪರೂಪದ ಕಂಠಸಿರಿಯ ಮೂಲಕ ಮನೆಮನೆಗೂ ತಲುಪಿಸಿದ ಕೀರ್ತಿ ಮಹಮ್ಮದ್ ರಫಿ ಅವರದ್ದು.
50ರಿಂದ 70ರ ದಶಕಗಳ ಕಾಲದಲ್ಲಿ ಹಿಂದಿ ಚಿತ್ರಲೋಕವನ್ನು ಸಂಪೂರ್ಣ ಆವರಿಸಿದ್ದ ರಫಿ ಹಾಡಿಗೆ ಕರ್ನಾಟಕ ಸೇರಿದಂತೆ ದೇಶ-ವಿದೇಶಗಳಲ್ಲೂ ಅಪಾರ ಅಭಿಮಾನಿಗಳಿದ್ದರು. ಅವರು ಕನ್ನಡದಲ್ಲಿ ’ನೀನೆಲ್ಲಿ ನಡೆವೆ ದೂರ’ (ಒಂದೇ ಬಳ್ಳಿಯ ಹೂಗಳು) ಎಂಬ ಹಾಡನ್ನು ಹಾಡಿದ್ದರು ಎಂಬುದು ಕೂಡ ವಿಶೇಷ.
ಒಮ್ಮೆ ಯೋಚಿಸಿ, ರೇಡಿಯೋ ಕಾಲದಲ್ಲಿ, ದೂರದರ್ಶನ ಎಂಬ ಏಕೈಕ ಸರ್ಕಾರಿ ಚಾನೆಲ್ ಅಸ್ತಿತ್ವದಲ್ಲಿದ್ದ ಕಾಲದಲ್ಲಿ ಹಿಂದಿ ಚಿತ್ರಗೀತೆಗಳ ಮೂಲಕ, ಘಜಲ್ ಹಾಡುಗಳ ಮೂಲಕ ನಮ್ಮನ್ನು ರಂಜಿಸಿದ್ದ ಮಹಮ್ಮದ್ ರಫಿ ಹಾಡುಗಳು ಇಂದು ಕನ್ನಡದಲ್ಲೇ, ಕನ್ನಡ ಸೊಗಡಿನ ಸಾಹಿತ್ಯದಲ್ಲೇ ಕೇಳುವಂತಾದರೆ ಹೇಗಿರಬಹುದು! ಇಂತಹ ರೋಮಾಂಚನಕಾರಿ ಸಾಹಸಕ್ಕೆ ಇದೀಗ ಓರ್ವ ಉತ್ಸಾಹಿ ಹಿರಿಜೀವ ಕೈಹಾಕಿದೆ. ಅಷ್ಟೇ ಅಲ್ಲ ತಮ್ಮ ಪ್ರಯತ್ನದಲ್ಲಿ ದೊಡ್ಡ ಯಶಸ್ಸನ್ನೂ ಅವರು ಸಾಧಿಸಿದ್ದಾರೆ. ಅಂತಹ ಅಪರೂಪದ ಕನ್ನಡ ಸಾಹಸಿಯೇ ಗಣೇಶ್ ಪ್ರಸಾದ್!
ಕವಿ ರಾಗ ಮಾರ್ಗ ಎಂಬ ಸಂಗೀತಾಮೃತ
ಕನ್ನಡದಲ್ಲಿ ಈ ಹೆಸರಿನಲ್ಲಿ ಒಂದು ಯೂಟ್ಯೂಬ್ ಚಾನೆಲ್ (https://www.youtube.com/channel/UCJ9FYIKjFrIJFK96quimBNA) ಕಳೆದ ಒಂದೂವರೆ ವರ್ಷದಿಂದ ಕೆಲಸ ನಿರ್ವಹಿಸುತ್ತಿದೆ. ಅದರ ಸೂತ್ರಧಾರ ಇದೇ ಗಣೇಶ್ ಪ್ರಸಾದ್. ಈ ಯೂಟ್ಯೂಬ್ ಚಾನೆಲ್‌ನಲ್ಲಿ ಅಂತದ್ದೇನು ವಿಶೇಷ? ಎಂಬ ಪ್ರಶ್ನೆಗೆ ಉತ್ತರ ಮಹಮ್ಮದ್ ರಫಿ, ಕಿಶೋರ್ ಕುಮಾರ್ ಅವರ ಪ್ರಖ್ಯಾತ ಹಿಂದಿ ಹಾಡುಗಳು ಇದೀಗ ಅದೇ ಸೊಗಡಿನಲ್ಲಿ ಕನ್ನಡೀಕರಣಗೊಂಡು ಕನ್ನಡ ಸಂಗೀತ ಆಸಕ್ತರನ್ನು ರಂಜಿಸುತ್ತಿದೆ. ಅಲ್ಲದೆ, ಕಳೆದ ಶತಮಾನದ ದಿಗ್ಗಜರ ಸಂಗೀತಾಮೃತವನ್ನು ಇಂದಿನ ನವ ತಲೆಮಾರಿಗೂ ದಾಟಿಸುತ್ತಿದೆ.
ಯಾರೀ ಗಣೇಶ್ ಪ್ರಸಾದ್?
ಮೂಲತಃ ಮೈಸೂರಿನವರಾದ, ಇಂಗ್ಲಿಷ್ ಪ್ರಾಧ್ಯಾಪಕರಾಗಿರುವ ಗಣೇಶ್ ಪ್ರಸಾದ್ ಅವರಿಗೆ ರಫಿ ಹಾಡುಗಳೆಂದರೆ ಎಲ್ಲಿಲ್ಲದ ಪ್ರೀತಿ. ಸಂಗೀತದ ಪರಿಚಯವೂ ಇದ್ದ ಅವರು 80-90ರ ದಶಕದಲ್ಲಿ ಮೈಸೂರಿನಲ್ಲಿ ಪ್ರಖ್ಯಾತವಾಗಿದ್ದ ಮೋಹನ್ ಆರ್ಕೆಸ್ಟ್ರಾದಲ್ಲಿ ಹಾಡುಗಾರರಾಗಿ ಸಾಕಷ್ಟು ಹೆಸರು ಮಾಡಿದ್ದರು.

ಹಿಂದಿ ಭಾಷೆಯಲ್ಲಿ ಅಷ್ಟೇನೂ ಹಿಡಿತವಿಲ್ಲದಿದ್ದರೂ, ಗಣೇಶ್ ಅವರು ರಫಿ ಮೇಲಿನ ಪ್ರೀತಿಯಿಂದಾಗಿ ಕ್ಲಾಸಿಕಲ್ ಸಂಗೀತವನ್ನು ಕಲಿತು ಆರ್ಕೆಸ್ಟ್ರಾಗಳಲ್ಲಿ ಹಾಡಿದ್ದಾರೆ. ಈ ಎಲ್ಲಾ ಹಾಡುಗಳನ್ನು ಕನ್ನಡೀಕರಿಸಬೇಕು, ಈ ಹಾಡುಗಳಿಗೆ ಕನ್ನಡದಲ್ಲಿ ಸಾಹಿತ್ಯ ಬರೆಯಬೇಕು ಎಂಬ ಅವರ ಕನಸಿಗೆ ಆಗಲೇ ರೆಕ್ಕೆಪುಕ್ಕ ಹುಟ್ಟಿತ್ತು. ಆದರೆ, ಅದು ಸಫಲವಾಗಿದ್ದು ಕೊರೊನಾ ಲಾಕ್‌ಡೌನ್ ಕಾಲದಲ್ಲಿ ಎಂಬುದು ವಿಶೇಷ.
ಕೊರೊನಾ ಕಾಲದಲ್ಲಿ ನಡೆದಿತ್ತು ಅದ್ಭುತ
ಮೈಸೂರಿನಲ್ಲಿ ಪ್ರಾಧ್ಯಾಪಕರಾಗಿದ್ದ ಗಣೇಶ್ ಇದೀಗ ದಾವಣಗೆರೆಯ ಸಿದ್ಧಗಂಗಾ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಕೊರೊನಾ ಲಾಕ್‌ಡೌನ್ ಕಾಲದಲ್ಲಿ ಕಾಲೇಜು ಕೆಲಸ ಇಲ್ಲದ ಕಾರಣ ಎಲ್ಲರಂತೆ ಅವರೂ ಮನೆಯಲ್ಲೇ ಕೂರುವಂತಾಗಿತ್ತು. ಈ ಸಂದರ್ಭದಲ್ಲೇ ಅವರ ಹಳೆಯ ಕನಸು ಮತ್ತೆ ರೆಕ್ಕೆ ಬಿಚ್ಚಿಕೊಂಡಿದ್ದು. ಈ ಕನಸಿಗೆ ಕೈಜೋಡಿಸಿದ್ದು ಅವರ ಗೆಳೆಯರಾದ ನಾರಾಯಣ್ ಮತ್ತು ಅವರಲ್ಲೇ ಇಂಗ್ಲಿಷ್ ಕಲಿತಿದ್ದ ವಿದ್ಯಾರ್ಥಿ ಶರತ್ ಆರೋಹಣ. ಈ ತಂಡಕ್ಕೆ ನೆರವಾದವರಲ್ಲಿ ಚೇತನ್ ಸುಬ್ಬಯ್ಯ, ವಾಸುಕಿ ರಾಘವನ್ ಮತ್ತು ಪ್ರದೀಪ್ ವಿ ಕೂಡ ಇದ್ದಾರೆ.
ಮಹಮ್ಮದ್ ರಫಿ ಅವರ ಬಹುತೇಕ ಎಲ್ಲಾ ಹಾಡುಗಳನ್ನೂ ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿ ನಾಸೀರ್ ಎಂಬುವವರು ಈಗಾಗಲೇ ತಮ್ಮದೇ ಹೆಸರಿನ ಬ್ಲಾಗ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಹೀಗಾಗಿ ಇಂಗ್ಲಿಷ್‌ನಲ್ಲಿರುವ ಹಾಡುಗಳ ಸಾಹಿತ್ಯವನ್ನು ಕನ್ನಡಕ್ಕೆ ತರ್ಜುಮೆ ಮಾಡುವುದು ಇಂಗ್ಲಿಷ್ ಪ್ರಾಧ್ಯಾಪಕರಾದ ಗಣೇಶ್ ಅವರಿಗೆ ಅಷ್ಟೇನು ಕಷ್ಟವಾಗಲಿಲ್ಲ. ಇದರ ಜೊತೆಗೆ ಹಿಂದಿಯಲ್ಲಿ ಪರಿಣತಿ ಪಡೆದಿದ್ದ ಅವರ ಗೆಳೆಯರಾದ ನಾರಾಯಣ್ ಸಹ ಈ ವೇಳೆ ಸಹಕಾರ ನೀಡಿದ್ದಾರೆ. ಅಲ್ಲದೆ, ಯೂಟ್ಯೂಬ್‌ಗೆ ’ಕವಿ ರಾಗ ಮಾರ್ಗ’ ಎಂಬ ಹೆಸರನ್ನೂ ಅವರೇ ಸೂಚಿಸಿದ್ದಾರೆ.

ಹೀಗೆ ಲಾಕ್‌ಡೌನ್ ಕಾಲದಲ್ಲಿ ಆರಂಭವಾದ ಹೊಸ ಬಗೆಯ ಕನ್ನಡದ ಸಂಗೀತ ಚಾನೆಲ್ ಒಂದು ಇದೀಗ ರಾಜ್ಯದಲ್ಲಿ ಮೋಡಿ ಮಾಡುತ್ತಿದೆ. 2020 ಅಕ್ಟೋಬರ್ 25ರ ವಿಜಯದಶಮಿಯಂದು ಆರಂಭವಾದ ಈ ಚಾನೆಲ್‌ನಲ್ಲಿ ಮಹಮ್ಮದ್ ರಫಿ ಮತ್ತು ಕಿಶೋರ್ ಕುಮಾರ್ ಅವರ 50ಕ್ಕೂ ಅಧಿಕ ಹಾಡುಗಳನ್ನು ಕನ್ನಡೀಕರಿಸಿ, ಮೂಲ ರಾಗಸಂಯೋಜನೆಯಲ್ಲಿಯೇ ಹಾಡಲಾಗಿದೆ. ಪ್ರತಿ ಶನಿವಾರ ಒಂದು ಪ್ರೀಮಿಯಂ ಹಾಡನ್ನು ಬಿಡುಗಡೆ ಮಾಡುವುದು ಈ ಚಾನೆಲ್‌ನ ವಿಶೇಷ. ಇಷ್ಟು ದಿನ ಮಹಮ್ಮದ್ ರಫಿ ಅವರ ಹಾಡುಗಳನ್ನು ನೀಡುತ್ತಿದ್ದ ಗಣೇಶ್ ಅವರು ಇದೀಗ ಕಿಶೋರ್ ಕುಮಾರ್ ಅವರ ಸರಣಿಯನ್ನು ಆರಂಭಿಸಿದ್ದಾರೆ. ಈವರೆಗೆ 1.5 ಲಕ್ಷ ವೀಕ್ಷಕರು ಈ ಚಾನೆಲ್‌ನ ಹಾಡುಗಳನ್ನು ನೋಡಿ ಆನಂದಿಸಿದ್ದಾರೆ ಎಂಬುದೇ ಹೆಚ್ಚುಗಾರಿಕೆ.
ರಫಿ ಅವರನ್ನು ಕನ್ನಡದಲ್ಲಿ ಪರಿಚಯಿಸಿದ ಕೀರ್ತಿ ನಮಗಿರಲಿ
ಮಹಮ್ಮದ್ ರಫಿ ದೇಶವನ್ನೇ ಬೆರಗುಗೊಳಿಸಿದ ಬಹುದೊಡ್ಡ ಸಂಗೀತ ಗಾರುಡಿಗ. ನಮ್ಮ ತಲೆಮಾರಿನ
ಬಹುದೊಡ್ಡ ಅದ್ಭುತ. ಅವರ ಹಾಡುಗಳಲ್ಲಿನ ಸಾಹಿತ್ಯಕ್ಕೆ ಮಾರುಹೋಗದವರು ಯಾರೂ ಇಲ್ಲ. ಆದರೆ, ಅಂತಹ ಉತ್ಕೃಷ್ಟ ಸಾಹಿತ್ಯವನ್ನು ನಮ್ಮದೇ ಕನ್ನಡ ಭಾಷೆಯಲ್ಲಿ ಸವಿಯುವಂತಾಗಬೇಕು ಎಂಬುದು ನನ್ನ ಬಹುದಿನದ ಕನಸು. ಇದೇ ಕಾರಣಕ್ಕೆ ಈ ಯೂಟ್ಯೂಬ್ ಚಾನೆಲ್ ಆರಂಭಿಸಲಾಗಿದೆ. ಇದರಿಂದ ಹಣ ಗಳಿಸುವುದು ನಮ್ಮ ಉದ್ದೇಶವಲ್ಲ. ಬದಲಿಗೆ ರಫಿ ಅವರನ್ನು ಈ ತಲೆಮಾರಿಗೂ ಪರಿಚಯಿಸಿದ ಮತ್ತು ಅವರ ಹಾಡುಗಳನ್ನು ಕನ್ನಡದಲ್ಲಿ ನೀಡಿದ ಕೀರ್ತಿ ನಮಗಿರಲಿ ಎಂಬುದೇ ನಮ್ಮ ಉದ್ದೇಶ.
ಗಣೇಶ್ ಪ್ರಸಾದ್
ಇದನ್ನೂ ಓದಿ: ‘ಧೀರ ಭಗತ್ ರಾಯ್’ ಮೂಲಕ ಮೀಸಲು ಕ್ಷೇತ್ರದ ರಾಜಕೀಯ ಕಥೆಯನ್ನು ಹೇಳಲು ಹೊರಟಿರುವ ನಿರ್ದೇಶಕ ಕರ್ಣನ್


