ಮುಂಬೈ: ಇಲ್ಲಿನ ಸಕಿನಾಕಾದಲ್ಲಿ ಅತ್ಯಾಚಾರಕ್ಕೊಳಕ್ಕಾಗಿ ಭೀಕರವಾಗಿ ಗಾಯಗೊಂಡಿದ್ದ ಮಹಿಳೆ ಸಾವನ್ನಪ್ಪಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಮೋಹನ್ ಚೌಹಾಣ್ (45) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಲಾಗಿದೆ. ಈತನ ಮೇಲೆ ಈ ಹಿಂದೆಯೇ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಅತ್ಯಾಚಾರ ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಮುಂಬೈನ ಉಪನಗರ ಸಕಿನಾಕಾದಲ್ಲಿ ನಿಂತ ಟೆಂಪೋದೊಳಗೆ 32 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕ್ರೂರವಾಗಿ ಹಲ್ಲೆ ಮಾಡುವುದು ಮಾತ್ರವಲ್ಲದೇ ಆಕೆಯ ಖಾಸಗೀ ಭಾಗಗಳಿಗೆ ಕಬ್ಬಿಣದ ರಾಡ್ಗಳನ್ನು ಸೇರಿಸಲಾಗಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಪೊಲೀಸರು ರಾಜವಾಡಿ ಆಸ್ಪತ್ರೆಗೆ ದಾಖಲಿಸಿದ್ದರು.
ಶುಕ್ರವಾರ ಮುಂಜಾನೆ 3.30ರ ಸಮಯದಲ್ಲಿ ವಾಚ್ ಮ್ಯಾನ್ ಒಬ್ಬರು ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ, ಶಕಿನಾಕಾದಲ್ಲಿ ಟೆಂಪೋ ಒಂದರಲ್ಲಿ ಮಹಿಳೆ ಅಪ್ರಜ್ಞಾ ಸ್ಥಿತಿಯಲ್ಲಿರುವ ಕುರಿತು ತಿಳಿಸಿದ್ದರು. ಸ್ಥಳಕ್ಕೆ ಬಂದ ಪೊಲೀಸರು ರಕ್ತದ ಮಡು ನೋಡಿ ಗಾಬರಿಯಾದರು. ತಕ್ಷಣ ರಾಜವಾಡಿ ಆಸ್ಪತ್ರೆಗೆ ಮಹಿಳೆಯರನ್ನು ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಿದಾಗ, ಆರೋಪಿಯು ಶಕಿನಾಕಾದ ಫುಟ್ ಪಾತ್ ನಲ್ಲಿ ಭೀಕರವಾಗಿ ಹಲ್ಲೆ ಮಾಡುತ್ತಿರುವುದು ತಿಳಿದುಬಂದಿದೆ. ಈ ಘಟನೆ ರಾತ್ರಿ 2.55ರ ಸಮಯದಲ್ಲಿ ನಡೆದಿದ್ದು, ಮಹಿಳೆಯು ಪ್ರಜ್ಞೆ ತಪ್ಪಿದ ಬಳಿಕ ಆರೋಪಿಯು ಆಕೆಯನ್ನು ಟೆಂಪೋದೊಳಗೆ ಎಳೆದೊಯ್ದು ಭೀಕರವಾಗಿ ಕೃತ್ಯ ಎಸಗಿದ್ದಾನೆ.
ಇದನ್ನೂ ಓದಿ: ಅತ್ಯಾಚಾರ ಯತ್ನ, ಹಲ್ಲೆ ಪ್ರಕರಣ: ಸುಳ್ಯ ಬಿಜೆಪಿ ಅಧ್ಯಕ್ಷ ಸೇರಿ 15 ಮಂದಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್
ಆರೋಪಿಯನ್ನು ಪತ್ತೆ ಹಚ್ಚಿ ತನಿಖೆಗೊಳಪಡಿಸಿದಾಗ ತನ್ನ ಹೆಸರು ಸುನಿಲ್ ಎಂದು ಸುಳ್ಳು ಹೇಳಿಕೊಂಡಿದ್ದಾನೆ. ಆದರೆ ಪೊಲೀಸರು ಬಾಯಿಬಿಡಿಸಿದ್ದು, ತನ್ನ ನಿಜವಾದ ಹೆಸರು ಮೋಹನ್ ಚೌಹಾಣ್ ಎಂದು ಒಪ್ಪಿಕೊಂಡಿದ್ದಾನೆ.
“ಆರೋಪಿಯು ಮೂಲತಃ ಉತ್ತರ ಪ್ರದೇಶದ ಜಾನ್ಫುರದವನಾಗಿದ್ದು, ಕುಡಿತ ಮತ್ತು ಮಾದಕ ವಸ್ತುಗಳ ವ್ಯಸನಿಯಾಗಿದ್ದಾನೆ. 25 ವರ್ಷಗಳ ಹಿಂದೆ ಈತನ ಕುಟುಂಬ ಮುಂಬೈಗೆ ವಲಸೆ ಬಂದಿತ್ತು. ಈತನ ದುಷ್ಚಟಗಳಿಂದ ಬೇಸತ್ತು ಕುಟುಂಬ ಸದಸ್ಯರು, ಹೆಂಡತಿ ಮಕ್ಕಳು ದೂರವಾಗಿದ್ದಾರೆ. ಆರೋಪಿಯು ವಾಹನಗಳಿಂದ ಬ್ಯಾಟರಿ ಮತ್ತು ಪೆಟ್ರೋಲ್ ಕದಿಯುತ್ತಿದ್ದ” ಎಂಬುದಾಗಿಯೂ ಪೊಲೀಸರು ತಿಳಿಸಿದ್ದಾರೆ.


