Homeಅಂಕಣಗಳುಕೃಷಿ ಕಥನಕೃಷಿ ಕಥನ 1: ಗಣಿಗಾರಿಕೆ ತಂದಿಟ್ಟ ಆಪತ್ತುಗಳ ಚರಿತ್ರೆ

ಕೃಷಿ ಕಥನ 1: ಗಣಿಗಾರಿಕೆ ತಂದಿಟ್ಟ ಆಪತ್ತುಗಳ ಚರಿತ್ರೆ

- Advertisement -
- Advertisement -

ಖನಿಜ ತುಂಬಿಟ್ಟುಕೊಂಡ ಗುಡ್ಡದ ತಪ್ಪಲಿನ ಹಳ್ಳಿಗಳು ತಮಗೆ, ಅನ್ನ ನೀರು ತಮ್ಮ ದನಕರು, ಆಡುಕುರಿಗಳಿಗೆ ಮೇವು, ನೀರು, ಸಕಲ ಸೌಭಾಗ್ಯಗಳನ್ನೂ ಕೊಡುತಿದ್ದ ಗುಡ್ಡಗಳೇ ತಮ್ಮ ಹಿತಶತ್ರುಗಳಾಗಿ ಬದಲಾಗುತ್ತವೆಂಬುದನ್ನು ಗುಡ್ಡದ ತಪ್ಪಲಿನ ಜನ ಊಹಿಸಿರಲಿಲ್ಲ. ಬಳ್ಳಾರಿ, ಚಿತ್ರದುರ್ಗ, ತುಮಕೂರು ಸಾಲು ಜಿಲ್ಲೆಗಳ ಸಾಲು ಗುಡ್ಡದಲ್ಲಿ ಇತ್ತೀಚಿನ ಐದಾರು ವರ್ಷಗಳ ಗರ್ಭಪಾತೀಯ ಗಣಿಗಾರಿಕೆ ಇದನ್ನು ಗೊತ್ತುಮಾಡಿಸಿದೆ. ಮನುಷ್ಯರು ದಮನಕ್ಕೆ ಒಳಗಾದಾಗ ಹೋರಾಡುತ್ತಾರೆ, ಅದು ಸಾಧ್ಯವಾಗದಿದ್ದರೆ ತಬ್ಬಲಿಗಳಂತೆ ಅಳುತ್ತಾರೆ. ಆ ಅಳುವಿನ ಸುತ್ತ ಬೆಂಬಲ, ಬಲ, ಹೋರಾಟಗಳು ರೂಪುಗೊಳ್ಳುತ್ತವೆ. ಆ ಹೋರಾಟಗಳು ಅಳುವ ಜನರನ್ನು ಕನಿಷ್ಠ ಮಟ್ಟದಲ್ಲಾದರೂ ಸಾಂತ್ವನಗೊಳಿಸುತ್ತವೆ. ಅವರ ಯೋಗಕ್ಷೇಮದ ಬಗೆಗೆ ಚಿಂತಿಸುವ ಕೆಲಸವೂ ನಡೆಯಬಹುದು. ಮಾನವ ಹಕ್ಕುಗಳ ಹೋರಾಟ ಮೊದಲ ನೆಲೆ ಒದಗಬೇಕಾದರೆ ಮನುಷ್ಯರೊಂದಿಗೇ ಇನ್ನಿತರ ಜೀವ-ಜಂತುಗಳ “ಅಳು”ವನ್ನೂ ಕೇಳಿಸಿಕೊಂಡು ಪ್ರಕೃತಿ ಹಕ್ಕುಗಳಿಗೂ ಹೋರಾಡುವುದು ಅನಿವಾರ್ಯ. ವಿಚಿತ್ರವೆಂದರೆ ಮಾನವ ಹಕ್ಕುಗಳು-ಪ್ರಕೃತಿ ಹಕ್ಕುಗಳು ಹರಣವಾಗಿತ್ತಿರುವುದು, ಯಕಶ್ಚಿತ್ ಮನುಷ್ಯರಿಂದಲೇ.

ಪ್ರಕೃತಿ, ತನ್ನ ಹಕ್ಕುಗಳಿಂಗಾಗಿ ಅಳಬಲ್ಲದೇ ಹೊರತು ಹೋರಾಡಲಾರದು. ಇದಕ್ಕೆ ಕಾರಣ ಪ್ರಕೃತಿಯ ಅವಿಭಾಜ್ಯ ಅಂಗವಾದ ಮನುಷ್ಯರು ಅದರಿಂದ ಬೇರೆಯಾಗಿ ನಿಂತು ಆರ್ಭಟಿಸುತ್ತಿರುವುದೇ ಆಗಿದೆ.(ಪ್ರಕೃತಿಯೊಂದಿಗೇ ಇರುವ ಗಿಡಮರದಂತಾ ಮನುಷ್ಯರನ್ನು ನಾನಿಲ್ಲಿ ಕಡೆಗಣಿಸುತ್ತಿಲ್ಲ.)

ಈ ಹಿನ್ನೆಲೆಯಲ್ಲಿ ಗರ್ಭಪಾತೀಯ ಗಣಿಗಾರಿಕೆಯ ಪರಿಣಾಮವಾಗಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಲುಗುಡ್ಡಗಳಲ್ಲಿ “ಕೇವಲ ಅಳುವ” ಹೋರಾಡಲರಿಯದ ಪ್ರಕೃತಿಯ ಇತರ ಸದಸ್ಯರ ಸಂಕಟ ಸ್ವಗತವನ್ನು ನಿವೇದಿಸ ಬಯಸುತ್ತೇನೆ.

ಗುಡ್ಡಗಳು : ಜಾಲಗಿರಿ ಹೂವಿನ ಘಮಲಿನಿಂದಲೂ ದೇವದಾರೆ, ಬಂದರೆ, ಮುಂತಾದ ಜೇನು ತುಂಬಿದ ಗುಚ್ಚಿಗಳಿಂದಲೂ ಬಾದೆಹುಲ್ಲು, ಮಾನಿಹುಲ್ಲು, ಶುಂಠಿ ಹುಲ್ಲುಗಳಿಂದ ತುಂಬಿ; ತಮ್ಮ ಕೋಟಿ ಬೇರುಗಳ ಮೂಲಕ ಮಳೆಯ ಹನಿಹನಿಯನ್ನೂ ನೆಲದೊಳಕ್ಕೆ ಹಿಂಗಿಸಿ ಹಳ್ಳಕೊಳ್ಳಗಳ ಕಲರವಕ್ಕೆ ಕಾರಣವಾಗಿದ್ದ ಸಾಲು ಗುಡ್ಡಗಳು ಜೆಲೆಟಿವ್ ಬ್ಲಾಸ್ಟ್‍ಗಳಿಂದ ಮುಖಮೂತಿ, ಕಿವಿ, ಕರುಳು ಕಣ್ಣುಗಳನ್ನು ಕಳೆದುಕೊಡಿವೆ. ಹಾರಾಡಿ ಹರಿದಾಡಿಕೊಂಡಿರಬೇಕಾದ ಪ್ರಾಣಿ ಪಕ್ಷಿಗಳ ಸುಳಿವೂ ಇಲ್ಲಿಲ್ಲ ಬದಲಾಗಿ ಹಿಟಾಚಿ, ಜೆಸಿಬಿ, ಲಾರಿ, ಜೀಪುಗಳು ಭೋರ್ಗರೆಯುತ್ತಿವೆ, ಜೀವ, ಆರೋಗ್ಯ ಯಾವುದೂ ಮುಖ್ಯವಲ್ಲವೆಂದೂ ದುಡ್ಡು ಮಾತ್ರ ಮುಖ್ಯವೆಂದು ನಂಬಿಸಿ ಕರೆತಂದ ಕೂಲಿ ಕಾರ್ಮಿಕರು ಇತ್ತ ಮನುಷ್ಯರಂತೆಯು ಅತ್ತ ಯಂತ್ರಗಳಂತೆಯೂ ಕೊನೆಗೆ ಗಣಿಮಾಲೀಕರ ಕಾಲಾಳು ಗುಲಾಮರಂತೆಯೂ ಪರಿವರ್ತನೆಯಾಗಿ ಹೋಗಿದ್ದಾರೆ. ಮೋಡಗಳೊಂದಿಗೆ ಆಟವಾಡುತ್ತಿದ್ದ ಎತ್ತೆತ್ತರದ ಗುಡ್ಡಗಳೀಗ ಅಡ್ಡಡ್ಡ-ಉದ್ದುದ್ದ ಸೀಳಿಸಿಕೊಂಡು ಅಬ್ಬೇಪಾರಿಯಾಗಿ ಚೆಲ್ಲಾಡುತೊಡಗಿವೆ. ಈ ಗುಡ್ಡಗಳ ಭಿಕಾರಿ ಸ್ಥಿತಿಯನ್ನು ನೋಡಿಕೊಂಡು ಬಂದ ಆ ದಿನದ ರಾತ್ರಿ ಬರೆದ ಹಾಡಿದು

ಎಲ್ಲೋ ಎಲ್ಲೋ ಜಾಲಗಿರಿಯ ಘಮಲು

ಸುತ್ತೆಂಟು ಹಳ್ಳಿಗೆ ಹಬ್ಬಿದೆ ಆ ಹೊನಲು……

ಗುಡ್ಡದ ಗೋಪುರ ಎಲ್ಲಿ ಎಲ್ಲಿ

ಹಾಲು ಕೊಡುವ ಆ ಕಳಸಗಳೆಲ್ಲಿ…………

ಚಿನ್ನದ ಭರ್ಜಿಯ ಹಿಡಿದವರೆ

ಜಲದ ಕಣ್ಣುಗಳ ಕಳೆದವರೆ……………….

ನಿಮಗೆ ತಾಯಿಯರ ಬೆಂಬಲವಿಲ್ಲ

ನಿಮಗೆ ನ್ಯಾಯದ ಬನ್ನೆಲುಬಿಲ್ಲ…………..

ಹಳ್ಳಕೊಳ್ಳಗಳು ಮತ್ತು ಕೆರೆಕಟ್ಟೆಗಳು : ಗುಡ್ಡದ ನೆತ್ತಿಯಿಂದಿಳಿದ ನೀರು, ಸಾವಿರಾರು ಧಾರೆಗಳಾಗಿ ಕೆಳಗಿಳಿಯುತ್ತಿದ್ದವು, ಅವೇ ಹಳ್ಳಕೊಳಗಳಾಗಿ ಹಳಿಯುತ್ತಿದ್ದವು. ಈಗ ಅದಕ್ಕೆ ಇಲ್ಲಿ ಅವಕಾಶವಿಲ್ಲ. ಅಮಾನುಷ, ಅವೈಜ್ಞಾನಕ, ಕಾನೂನು ಬಾಹಿರ ಮೈನಿಂಗ್ ಕಾರಣದಿಂದ ಇಡೀ ಗುಡ್ಡಸಾಲು ದೊಗರು ಗುಂಡಿಗಳಾಗಿ ಮಾರ್ಪಟ್ಟಿವೆ. ಇದರಿಂದ ಅಲ್ಲಿ ಬಿದ್ದ ನೀರು ಕೆಳಗೆ ಹರಿದು ಬರುವುದು ಸಾದ್ಯವೇ ಇಲ್ಲ. ಕಷ್ಟಪಟ್ಟು ಆ ಪಾತಾಳಲೋಕದ ಗುಂಡಿಗಳಿಂದ ತಪ್ಪಿಸಿಕೊಂಡು ನೀರು ಯದ್ವಾತದ್ವ ಹರಿದು ದಿಕ್ಕಾಪಾಲಾಗುತ್ತದೆ. ಕೆರೆ ಕಟ್ಟೆಗಳು ಈ ಹಳ್ಳಗಳ ಹಾದಿ ನೋಡಿ ನೋಡಿ ಸಾಕಾಗಿ ಕಲ್ಲು ಅಣೆಗಳು ಮೈನಿಂಗ್ ಹೂಳು ತುಂಬಿ ಹಲ್ಲು ಕಿಸಿಯುತ್ತಿವೆ. ನೀರಿನ ಜೊತೆಗೆ ಮೈನಿಂಗ್ ಶಿಲ್ಟ್ ತಮ್ಮ ದನಕರುಗಳು ಬಾಯಿಗೆ ಮಣ್ಣು ಬೀಳುತ್ತದೆಯೆಂದು ತಿಳಿದು ಗುಡ್ಡದ ನೀರೂ ಬ್ಯಾಡ ಆ ದರಿದ್ರ ಶಿಲ್ಟೂ ಬ್ಯಾಡ ಎಂದು ಜನ ಊರು ಬಿಡತೊಡಗಿದ್ದಾರೆ.

ಹಳ್ಳದ ಸಾಲಿನಲ್ಲೀಗ ಹೊಂಗೆ ಮರಗಳಿಲ್ಲ. ಬಗನೀ ಮರಗಳು ಮೊದಲೇ ಇಲ್ಲ. ನೀರಿನ ಪೊಟರೆಗಳು ಅದರೊಳಗಿದ್ದ ಮೀನು, ಕಪ್ಪೆ, ಆಮೆಗಳು, ಹಾವುಗಳು ಮಾಯವಾಗಿವೆ.

ದೊಗರುಗಳ ಮೈನಿಂಗ್ ಸ್ಪೋಟದಿಂದ ಆದ ಬಿರುಕಿನ ಮೂಲಕ ನೆಲದೊಳಕ್ಕೆ ಹಿಂಗಿ ಹೋಗುವುದು ಅಂತರ್ಜಲಕ ಮರುಪೂರಣಕ್ಕೆ ಒಳ್ಳೆಯದೇ ಅಲ್ಲವೇ ಎಂದು ದೊಡ್ಡ ಚಿಂತಕರು ಯೋಚಿಸಬಹುದು. ಗುಡ್ಡದ ತಪ್ಪಲಿನ ಇಲ್ಲಿಯ ಜನರಿಗೆ, ಪಶುಪಕ್ಷಿಗಳಿಗೆ ದಕ್ಕಬೇಕಾದ ಅಲ್ಪ ಸ್ವಲ್ಪ ನೀರೂ ನೆಲದೊಳಗೆ ಹಿಂಗಿ ಹೋಗುವುದು ಒಳ್ಳೆಯದೇ, ಇಲ್ಲಿ ಜನ ಜಾನುವಾರು ಬಾಯಾರಿ ಸಾಯುವುದು ಅದಕ್ಕಿಂತ ಒಳ್ಳೆಯದೇ ಎಂಬ ಚಿಂತನಾಲಹರಿ ಕ್ರೂರ ಮತ್ತು ಅಸಮರ್ಥನೀಯ

ಕುರಿಗಳು ಆಡುಗಳು : ಗುಡ್ಡಗಳಿಗೂ ಕುರಿಗಳಿಗೂ ಅವಿನಾಭಾವ ಸಂಬಂಧ. ಗುಡ್ಡಗಳ ಪರಮಾಪ್ತ ಸಂಗಾತಿಗಳು. ಈಕುರಿಗಳು ಮನುಷ್ಯರಂತೆ ಗುಡ್ಡದ ಸಂಪತ್ತನ್ನು ಹೊರಗೆ ಒಯ್ಯುವುದಿಲ್ಲ. ಉಂಡಹುಲ್ಲನ್ನು ಸಾಧ್ಯವಾದಷ್ಟು ಇಲ್ಲಿಯೇ ಪಿಸಿಗೆಯ ರೂಪದಲ್ಲಿ ಉದುರಿಸಿ ಹೋಗುತ್ತವೆ. ಮನುಷ್ಯರ ಜೊತೆಗಿದ್ದು ಮನುಷ್ಯರ ಬುದ್ದಿ ಕಲಿತಿಲ್ಲ ಇಂಥ ಕುರಿಗಳು ಮೈನ್ಸ್ ದಾಳಿಗೆ ತೀವ್ರವಾಗಿ ತುತ್ತಾಗಿವೆ.

ಚಿ.ನಾ.ಹಳ್ಳಿ ಸುತ್ತಿನ ಈ ಬಿಳಿ ಕುರಿಗಳು ಕೆಂಪಾಗಿ ಹೋಗಿವೆ. ಹುಲ್ಲಿಗೆ ಬದಲು ಹುಲ್ಲಿಗಂಟಿದ ಮಣ್ಣುತಿಂದು ಬಡವಾಗಿವೆ. ರೋಗದ ಗೂಡಾಗಿವೆ. ಇವುಗಳ ಹಿಂದೆ ಓಡಾಡುವ ಮನುಷ್ಯರ ಕತೆ ಹೇಳತೀರದಾಗಿದೆ.

ಗುಡ್ಡಗಳೀಗ ಆಡು ಕುರಿಗಳ ಪಾಲಿನ ಪಾಪಕೂಪಗಳಾಗಿವೆ. ಕುರಿಗಳು ಮತ್ತು ಆಡುಗಳು ಧೂಳು ಸೊಪ್ಪು ಮೇದು, ಧೂಳು ಹುಲ್ಲುತಿಂದು ಎದೆಹುಣ್ಣಿಗೆ ಬಲಿಯಾಗುತ್ತಿವೆ, ಉಸಿರಾಡಲು ಆಗದೆ, ಗೊಣ್ಣೆ ಸುರಿಸಿ ಮೂಗು ರಕ್ತಮಯವಾಗಿ ಕೊನೆಗೆ ಸಾಯುತ್ತಿವೆ. ಕೆಮ್ಮು, ಮೂಗುಣ್ಣೆ, ಗೆರಸಲು, ರಕ್ತವಾಂತಿ ಕರ್ರಗೆ ಉಚ್ಚಿಕೊಳ್ಳುವುದೇ ಮುಂತಾದ ರೋಗಗಳಿಗೆ ತುತ್ತಾಗಿವೆ.

ಆಡು ಕುರಿಗಳು ನೀರಿನ ಕೊರತೆಯಿಂದ ಬಳಲಿವೆ. ಕರೆಂಟ್ ಇದ್ದರೆ ನೀರು, ಇಲ್ಲದಿದ್ದರೆ ಇಲ್ಲ, ಗರ್ಭಧರಿಸುವ ಪ್ರಮಾಣವೂ ಕಡಿಮೆ ಆಗಿದ, ಆದರೂ ಕಂದು (ಅರೆ ಬೆಳೆದ ಭ್ರೂಣಗಳ ಪ್ರಸವ) ಹಾಕುವ ಕುರಿ ಆಡುಗಳ, ಸಂಖ್ಯೆ ಹೆಚ್ಚುತ್ತಿದೆ ವರ್ಷಕ್ಕೆ ಎರಡು ಸೂಲು ಮರಿ ಹಾಕುತ್ತಿದ್ದ ಆಡುಗಳು, ತಾವು ಬದುಕಿದರೆ ಸಾಕು ಎನ್ನುವ ಸ್ಥಿತಿ ತಲುಪಿವೆ. ಹಾಕಿದ ಒಂದು ಗಳಿಗೆ ತಕ್ಕಷ್ಟು ಹಾಲನ್ನು ಕೊಡದೆ ಹೀನಾಯ ಹಂತ ಮುಟ್ಟಿವೆ. ದಿನಕ್ಕೆ ಹುಲ್ಲು ಸೊಪ್ಪಿನ ಜೊತೆ ಕೇಜಿಗಟ್ಟಲೆ. ಧೂಳು ಉಂಡರೆ ಯಾವಾದರೂ ಜೀವಗಳು ಉಲಿಯುವುದುಂಟೆ.

ಈ ಮೊದಲು ತುಪ್ಪಟ ಕತ್ತರಿಸಿಕೊಂಡು ಹೋಗುವವರು ದುಡ್ಡು ಕೊಟ್ಟು ಹೋಗುತ್ತಿದ್ದರು. ಕುರಿ ತುಪ್ಪಟ ಕತ್ತರಿಸಲೂ ಈಗ ಹಣ ತೆರಬೇಕಾಗಿದೆ. ತುಪ್ಪಟವು ಕೆಂಪು ಧೂಳಿನಿಂದಾವೃತಗೊಂಡು ಗಂಟುಗಂಟಾಗಿ ಕೆಲಸಕ್ಕೆ ಬಾರದಂತಾಗಿ ಹೊಗುತ್ತಿರುವುದು ಇದಕ್ಕೆ ಕಾರಣ.

ಹಂದಿಗಳ ಪಾಡು : ವಿಶಾಲವಾದ ಗುಡ್ಡಸಾಲಿನ ಗುಹೆ, ಗಹ್ವರಗಳಲ್ಲಿ ಅಡಗಿಕೊಂಡು ನೆಮ್ಮದಿಯಾಗಿದ್ದ ಹಂದಿಗಳು, ಮೈನಿಂಗ್ ಸದ್ದಿಗೆ ಅದುರಿ ಅಳ್ಳಾಡಿ ನೆಲೆಗಳನ್ನೆ ತೊರೆದು ದಿಕ್ಕಾಪಾಲಾಗುತ್ತಿವೆ. ಸಾವಿರ ಸಾವಿರ ಸಂಖ್ಯೆಯ ಹಂದಿ ಸಂಸಾರಗಳು ತೋಟದ ಸಾಲಿನ ಬೇಲಿ ಬಂಕಗಳಲ್ಲಿ ಅವಿತುಕೊಂಡು ಮನುಷ್ಯ ಭಯದ ನೆರಳಲ್ಲಿ ಬದುಕು ಸಾಗಿಸುತ್ತಿವೆ. ಆಹಾರವಿಲ್ಲದೆ ನೆಲ ಅಗೆಯುತ್ತಾ, ಶುಂಠಿಗೆಡ್ಡೆಯ ಬದಲಿಗೆ ಮಣ್ಣು ತಿನ್ನಬೇಕಾದ ದೈನೇಸಿ ಸ್ಥಿತಿ ತಲುಪಿವೆ. ತಿಪ್ಪೆಯೊಳಗಿನ ಗುಣ್ಣೆ ಹುಳಕ್ಕಾಗಿ ರಾತ್ರಿಯೆಲ್ಲಾ ಹುಡುಕಾಡಿ ಹಸಿವಿನ ವಿರುದ್ದ ಹೋರಾಟ ನಡೆಸುತ್ತಿವೆ. ಹೊಟ್ಟೆ ದೊಡ್ಡದು ಹಸಿವೂ ದೊಡ್ಡದೇ. ಆದರೆ ಸಿಗುವ ಆಹಾರ ಅತಿ ಚಿಕ್ಕದು. ತೆಂಗಿನ ಕಾಯಿ ಸುಲಿಯಲು ಅವು ಪಡುವ ಪಾಡು ಕನಿಕರ ಹುಟ್ಟಿಸುತ್ತದೆ. ರಾತ್ರಿಯೆಲ್ಲಾ ಒಂದು ಕಾಯಿ ಸುಲಿಯಲು ಯತ್ನಿಸಿ ಕೊನೆಗೂ ಸಿಪ್ಪೆ ಸುಲಿದು ಕಾಯಿ ಒಡೆಯಲಾರದೆ ಹೋಗುವ ಸಂದರ್ಭಗಳು ಬೇಕಾದಷ್ಟಿವೆ. ಎಲ್ಲೋ ಕೆಲವು ಬುದ್ದಿವಂತ ಹಂದಿಗಳು ಮಾತ್ರ ಸಿಪ್ಪೆ ಸುಲಿದ ಕಾಯಿ ಹೊಡೆದು ತಿನ್ನುವ ತಂತ್ರ ಕಲಿತಿವೆ. ರಾತ್ರಿ ಮಾತ್ರ ಆಹಾರ ಹುಡುಕುವ ಹಂದಿಗಳೀಗ ಹಗಲಲ್ಲೂ ಓಡಾಟ ಆರಂಭಿಸಿವೆ. ಅನಿವಾರ್ಯವಾದರೆ ಮನುಷ್ಯರನ್ನು ಬೇಟೆಯಾಡಿ ತಿನ್ನುವುದನ್ನೂ ಕಲಿತರೂ ಆಶ್ಚರ್ಯಪಡಬೇಕಾಗಿಲ್ಲ. ಹಳ್ಳಗಳಲ್ಲಿ ಕೆರೆ ಕಟ್ಟೆಗಳಲ್ಲಿ ನೀರಿಲ್ಲ, ಹೀಗಿರುವಾಗ ಗುಡ್ಡವಾಸಿ ಮತ್ತಿತರ ಪ್ರಾಣಿ ಪಕ್ಷಿಗಳು ಎಲ್ಲಿ ನೀರು ಕುಡಿಯುತ್ತವೆ ಎಂಬುದು ಈಗ ಯಾರಿಗೆ ಬೇಕಾಗಿದೆ.

ನರಿಗಳು, ಕರಡಿಗಳು : ನರಿಗಳು, ಕರಡಿಗಳು ಅತ್ಯಂತ ನಾಚಿಕೆಯ ಸ್ವಭಾವದ ಪ್ರಾಣಿಗಳು ಆದರೀಗ ಇವು ನಾಚಿಕೆ ಬಿಟ್ಟು ಊರೊಳಗೆ ಬಂದು ಎಂಜಲು ಮುಸುರೆ ಬಾನಿಗೆ ಬಾಯಿ ಹಾಕುತ್ತಿವೆ, ನಿಶಾಚರ ಕರಡಿಗಳು ಹಗಲು ಹೊತ್ತಲ್ಲೂ ಹೊರಗೆ ಬಂದು ಅಮಾಯಕ ಜನರ ಮೇಲೆ ಎರಗುತ್ತಿವೆ, ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆಯಾಗುತ್ತಿದೆ.

ಒಟ್ಟಾರೆ ಗುಡ್ಡದ ಸಾಲಿನ ಆರೋಗ್ಯ ಹದಗೆಟ್ಟಿದೆ. ಪ್ರಾಣಿಲೋಕದ ಪಾಡು ಹೇಳತೀರದಾಗಿದೆ. ಹಾಗೆಯೇ ಗಣಿಕಾರ್ಮಿಕರು, ಡ್ರೈವರ್‌ಗಳು ಕ್ಲೀನರ್‌ಗಳು ಶ್ವಾಸಕೋಶದಲ್ಲಿ ಆಗುತ್ತಿರುವ ಅನಾಹುತಗಳನ್ನು ಪರೀಕ್ಷೆಗೊಡ್ಡಿ ತಿಳಿಸುವವರು ಇಲ್ಲಾವಾಗಿದೆ, ಸಿಗರೇಟ್, ಗುಟ್ಕಾ, ವಿಸ್ಕಿಗಳ ಅಮಲಿನ ಪಾರುಪತ್ಯದಲ್ಲಿ ಇವೆಲ್ಲಾ ಲೆಕ್ಕಕ್ಕಿಲ್ಲದಂತಾಗಿದೆ.

ಹೈನು ರಾಸುಗಳು : ಮೈನಿಂಗ್ ನಡೆಸುತ್ತಿರುವ ಗುಡ್ಡಸಾಲಿನ ಅಕ್ಕಪಕ್ಕದ ಮೂರು ಕಿ.ಮೀ. ವ್ಯಾಪ್ತಿಯಲ್ಲೀಗ ದನಕರುಗಳ ನೋಡಲೂ ಸಾಧ್ಯವಿಲ್ಲ ಎಂಬಂತಾಗಿದೆ. ಕುರಿ ಆಡುಗಳ ಸ್ಥಿತಿಗಿಂತ ಇವುಗಳ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಕುರಿ ಆಡುಗಳಿಗಿಂತ ಹೆಚ್ಚುತಾಳಿಕೆ ಶಕ್ತಿ ಹೊಂದಿರುವ ದನಕರುಗಳು ಇನ್ನೂ ಹೋರಾಟ ನಡೆಸುತ್ತಾ ಸಾಯದೇ ಬದುಕಿವೆ. ರೈತರು ಹಾಲಿನ ಇಳುವರಿ ಕಡಿಮೆ ಆಗಿದೆ ಎನ್ನುತ್ತಾರೆ. ಕಬ್ಬಿಣದ ಧೂಳಿನ ಹುಲ್ಲು ಅವುಗಳ ಹೊಟ್ಟೆಯೊಳಗೆ ಅದೇನೇನು ಅಲ್ಲೋಲಕಲ್ಲೋಲ ಉಂಟು ಮಾಡುದೆಯೋ ಹೇಳುವವರಾರು?

ಆಕಾಶತೊರೆದ ಹಕ್ಕಿಪಕ್ಷಿಗಳು : ಈ ಕೆಂಪು ಭೂಮಿಯ ಮೇಲಿನ ಆಕಾಶವೂ ಕೆಂಪಾಗಿ ಹೋಗಿರುವುದರಿಂದ ಹಕ್ಕಿಪಕ್ಷಿಗಳು ಹಾರಾಡುವುದನ್ನು ಬಿಟ್ಟು ತಲೆತಪ್ಪಿಸಿಕೊಂಡು ನಡೆದಾಡುತ್ತಿರಬಹುದು, ಜೆಲೆಟಿನ್ ಬಾಂಬಿನ ಸದ್ದಿಗೆ ಹಕ್ಕಿಗಳು ತತ್ತರಿಸಿ ಜಾಗ ಬಿಟ್ಟಿರಬಹುದು, ಗೂಡು ಕಟ್ಟಲು ತಾವಿಲ್ಲದೆ, ಆಹಾರ ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿರಲೂಬಹುದು.

ಸಾಂಬಾರುಗಾಗೆ, ಗಿಳಿ, ಹೀರೇಹಕ್ಕಿ, ಉಣ್ಣೆಗೊರವ ‘ಗೀಜಗ’ ಹದ್ದು, ಸಿಂಪಿಗನಹಕ್ಕಿ, ಬೆಳವ, ಪಾರಿವಾಳ, ನವಿಲು ಮುಂತಾದ ಯಾವೊಂದು ಹಕ್ಕಿಯೂ ಈ ಮೈನಿಂಗ್ ರಕ್ತದ ದಾರಿಯಲ್ಲಿ ನನಗೆ ಗೋಚರಿಸಲಿಲ್ಲ. ಓತಿಕ್ಯಾತ, ಹಾವುರಾಣಿಗಳಾದರೂ ಅಡ್ಡಾಗಲಿಲ್ಲ. ಲಂಕೇಶರ ಹಾಡು ನೆನಪಾಗಿ ಆ ಬಿಸಿಲಲ್ಲಿ ತೇಲಿತು.

                        ಕೆಂಪಾದವೋ ಎಲ್ಲಾ ಕೆಂಪಾದವೋ

                        ಹಸುರಿದ್ದ ಗಿಡಮರ ಬೆಳ್‍ಗಿದ್ದ ಹೂವೆಲ್ಲ

                        ನೆತ್ತರ ಕುಡಿದಾಂಗೆ ಕೆಂಪಾದವೋ

                        ಊರು ಕಂದಮ್ಮಗಳು ಕೆಂಪಾದವೋ…

ಮೊಲಗಳು ಹಂದಿಗಳು : ಹಸಿರು ಚಿಗುರು ತಿಂದೇ ಬದುಕುವ ಮೊಲಗಳಿಗೆ ಗುಡ್ಡಗಳು ಹಸಿರು ಚಿಗುರು ನೀಡಲು ನಿರಾಕರಿಸುತ್ತಿವೆ. ಹೀಗೆ ದಿಕ್ಕಾಪಾಲು ದಿವಾಳಿಯಾಗಿ ತೋಟದ ಸಾಲಿಗೆ ಬಿದ್ದ ಮೊಲಗಳಿಗೆ ಉಳಿಗಾಲವೇ ಇರುವಂತಿಲ್ಲ. ಬೆದರಿ ಬೆದರಿ ಓಡುತ್ತಿವೆ, ಮೇಯುವುದು ಮರೆತ ಕಾರಣ ಸಣಕಲಾಗಿ ಸಾಯುವಂತಾಗಿವೆ. ಈ ಮದ್ಯೆ ಬೇಟೆಗಾರರು ಒಡ್ಡುವ ಬಲೆಗಳು ಎಲ್ಲೆಲ್ಲೂ ಬಾಹಿ ಆತು ನಿಂತಿವೆ. ಉಡ, ಹಾವು, ಚಿಪ್ಪಂದಿಗಳೇ ಮುಂತಾದವುಗಳ ವಂಶ ನಿರ್ವಂಶವಾದಂತಿದೆ.

ಏನಾಯಿತೊ ಸ್ವಾಮಿ ಏನಾಯಿತೋ…….

  1. ಗುಡ್ಡಗಳು, ಗುಡ್ಡದ ಸಾಲಿನ ಆಶ್ರಿತ ಜೀವಗಳು ನಾಶವಾದರೇನು ನೀರಕೊಂದರೇನು? ಊರ ಕೊಂದರೇನು, ಗುಡ್ಡಕ್ಕೆ ಕನ್ನ ಹಾಕಿದವರು ಆಳುವ ವರ್ಗವಾಗಿ ಬಡ್ತಿ ಪಡೆದಿದ್ದಾರೆ.

2. ಗಣಿ ದಂಧೆಯ ಚೋರರು ಧರ್ಮದರ್ಶಿಗಳು, ಮಠಾಧಿಪತಿಗಳು, ಶಾಸಕರು, ಮಂತ್ರಿಗಳು ಗಣಿ ಧಣಿಗಳೆಂಬ ಹೆಸರಿನಲ್ಲಿ ದೇವಾಲಯ, ಗಣೇಶ ಕನ್ನಡ ರಾಜ್ಯೋತ್ಸವ ಮತ್ತಿತರ ಉತ್ಸವಗಳಿಗೆ ಉದಾರದಾನ ನೀಡುತ್ತಾ ದಾನಶೂರರೆನಿಸುತ್ತಾ ಎಲ್ಲೆಲ್ಲೂ ಕಟೌಟುಗಳಲಿ ಪ್ಲೆಕ್ಸುಗಳಲ್ಲಿ ಮಿಂಚುತ್ತಿದ್ದಾರೆ.

3. ರಾಜ್ಯ, ಜಿಲ್ಲೆ , ತಾಲ್ಲೂಕು ಮತ್ತು ಹಳ್ಳಿಗಳ ರಾಜಕಾರಣವೆಲ್ಲಾ ಗಣಿ ಮಾಲೀಕರು ತುಂಡು ಗುತ್ತಿಗೆಯ ಗುಡ್ಡದ ಮಿಂಡರ ಪಾಲಾಗಿ ಹೋಗಿದೆ.

4. ಹೊಸ ಕಂಪನಿಯ ಹೊಸ ಕಾರುಗಳು ಬೆಂಗಳೂರು ಮುಂಬಯಿಗಳಲ್ಲಿ ಬಿಡುಗಡೆಗೊಂಡ ಮಾರನೇ ದಿನವೇ ಗುಡ್ಡದ ಸಾಲಿನ ನಗರ ಪಟ್ಟಣಗಳಲ್ಲಿ ಓಡಾಟ ನಡೆಸುತ್ತಿವೆ.

5. ವೈನ್ ಸ್ಟೋರ್‌ಗಳಲ್ಲಿನ ಎಣ್ಣೆ ಮಾರಾಟ ನೂರುಪಟ್ಟು ಹೆಚ್ಚಿನ ಹೆಂಡದ ನದಿ ಹರಿಯುತ್ತಿದೆ.

6. ರೈತರ ತೋಟಗಳು, ಹೊಲಗಳು, ಧೂಳು ತುಂಬಿ ಫಸಲು ಎಕ್ಕುಟ್ಟಿ ಹೋದರೇನಂತೆ ಧಣಿ ದಂಧೆಯ ಮಹಾತ್ಮರು ಮನೆಯ ಮೇಲೆ ಮನೆ ಕಟ್ಟಿಸಿ ಅದರ ತುದಿಯಲ್ಲಿ ನಿಂತು ಕೇಕೆ ಹಾಕುತ್ತಾರೆ.

7. ಸರ್ಕಾರ ಅದರಲ್ಲೂ ಅರಣ್ಯ, ಕಂದಾಯ, ಪೋಲಿಸ್ ಇಲಾಖೆಗಳು ಹುಸಿ ಕೂಗು ಕೂಗುತ್ತಲೇ ಇರುತ್ತವೆ. ಲೋಕಾಯುಕ್ತವು ದಾಳಿಯ ಮೇಲೆ ದಾಳಿ ಮಾಡುತ್ತದೆ. ಮಾರನೇ ದಿನದಿಂದ ಮತ್ತದೇ ಹಾಡು ಜೆಲೆಟಿನ್ ಬಾಂಬಿನಿಂದ ಗುಡ್ಡಗಳನ್ನು ಹಕ್ಕಿಗೂಡುಗಳ ಸಮೇತ ಸ್ಫೋಟಿಸುವ ಸುಲಿಗೆ ಹಾಡು.. ಚಳವಳಿಗಳು, ಹೋರಾಟಗಳು, ಧರಣಿ ಸತ್ಯಾಗ್ರಹಗಳು ಆಗಾಗ್ಗೆ ಬಂದು ಹೋಗುತ್ತವೆ ಎಂಬಲ್ಲಿಗೆ ಈ ಕಥನ ಮುಗಿತ್ತೇನೆ.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-4: ಸಹಜ ಕೃಷಿ ಅಲ್ಲ, ಉಳುಮೆ ಇಲ್ಲದ ತೋಟ ನಮ್ಮದು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ರದ್ದುಪಡಿಸಿದ್ದೇವೆ ಎಂಬ...

0
"ಕಾಂಗ್ರೆಸ್ ಸಂವಿಧಾನವನ್ನು ಗೌರವಿಸಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಮೂಲಕ ನಮಗೆ ಅವಕಾಶ ಸಿಕ್ಕಾಗ ನಾವು ಮಾಡಿದ ಮೊದಲ ಕೆಲಸವೆಂದರೆ, ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ನೀಡಿದ್ದ ಮುಸ್ಲಿಂ...