Homeಮುಖಪುಟಅಭಿವ್ಯಕ್ತಿ ಸ್ವಾತಂತ್ರ್ಯ: ಆತಂಕ ಹುಟ್ಟಿಸುವ ಶರಣಾಗತಿ ಪ್ರವೃತ್ತಿ- ಎ. ನಾರಾಯಣ

ಅಭಿವ್ಯಕ್ತಿ ಸ್ವಾತಂತ್ರ್ಯ: ಆತಂಕ ಹುಟ್ಟಿಸುವ ಶರಣಾಗತಿ ಪ್ರವೃತ್ತಿ- ಎ. ನಾರಾಯಣ

- Advertisement -
- Advertisement -

 

ಎ. ನಾರಾಯಣ

ಕನ್ನಡ ಪತ್ರಿಕೆಯ ಓದುಗರು ಬಹುವಾಗಿ ಮೆಚ್ಚಿಕೊಳ್ಳುತ್ತಿರುವ ಅಂಕಣಕಾರರಲ್ಲಿ ಒಬ್ಬರಾದ ಎ.ನಾರಾಯಣ ಅವರು ಕಾಸರಗೋಡಿನವರು. ಇಂಗ್ಲೆಂಡಿನ ಸಸೆಕ್ಸ್ ವಿವಿಯಲ್ಲಿ ಪಿಎಚ್‍ಡಿ ಮಾಡುವಮುನ್ನ ಡೆಕ್ಕನ್ ಹೆರಾಲ್ಡ್‍ನಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದರು. ಪ್ರಸ್ತುತ ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದಲ್ಲಿ ರಾಜಕೀಯ ತತ್ವಶಾಸ್ತ್ರ ಮತ್ತು ಆಡಳಿತ ವಿಭಾಗದಲ್ಲಿ ಬೋಧಿಸುತ್ತಾರೆ. ಪ್ರಜಾವಾಣಿ ಪತ್ರಿಕೆಯ ಅಂಕಣಕಾರರಾಗಿ ರಾಜಕೀಯ, ಸಾಮಾಜಿಕ ವಿಷಯಗಳ ಕುರಿತಂತೆ ಭಿನ್ನ ರೀತಿಯ ಹರಿತ, ವಸ್ತುನಿಷ್ಠ ವಿಶ್ಲೇಷಣೆಗಳ ಬರಹಗಳನ್ನು ಬರೆಯುತ್ತಿದ್ದಾರೆ.

ಸಮಸ್ಯೆ ಇರುವುದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ ಎನ್ನುವುದರಿಂದ ಮಾತ್ರವಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎಲ್ಲಾ ಕಾಲದಲ್ಲೂ ಎಲ್ಲಾ ಆಳುವ ಸರಕಾರಗಳೂ ಹತ್ತಿಕ್ಕುವ ಕೆಲಸವನ್ನು ಮಾಡುತ್ತಲೇ ಬಂದಿವೆ. ಈಗ ಅದು ಇನ್ನೂ ಹೆಚ್ಚಾಗಿದೆ ಅಥವಾ ತೀರಾ ಹೆಚ್ಚಾಗಿದೆ ಅಂತ ಬೇಕಾದರೆ ಹೇಳಬಹುದು. ನಮ್ಮ ಕಾಲದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎದುರಾಗಿರುವ ಇನ್ನೂ ಮುಖ್ಯವಾದ ಆತಂಕ ಏನು ಎಂದರೆ ಈ ಸಂವಿಧಾನದತ್ತ ಹಕ್ಕನ್ನು ಬಳಸಿಕೊಳ್ಳುವಲ್ಲಿ ಇಡೀ ದೇಶವು ಒಂದು ರೀತಿಯ ಶಸ್ತ್ರಸನ್ಯಾಸವನ್ನು ಘೋಷಿಸಿಕೊಂಡಿದೆ ಎನ್ನುವುದು. ಯಾರ್ಯಾರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂರಕ್ಷಿಸುವಲ್ಲಿ ಮುಂಚೂಣಿಯಲ್ಲಿರಬೇಕಿತ್ತೋ ಅವರೆಲ್ಲರೂ ಸೇರಿ ಅದನ್ನು ಅಧಿಕಾರಸ್ಥರ ಕಾಲಬುಡದಲ್ಲಿ ಒತ್ತೆಯಿಟ್ಟು ಒಂದು ರೀತಿಯ ಬಹುಪರಾಕು ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದಾರೆ.

ಈಗ ನಡೆಯುತ್ತಿರುವ ಮಾಧ್ಯಮ ದಮನ, ತುರ್ತುಪರಿಸ್ಥಿತಿಯ ಕಾಲದಲ್ಲಿ ಏನೇನಾಯಿತೋ ಅದಕ್ಕಿಂತ ಭಿನ್ನವಾಗಿ ಏನೂ ಇಲ್ಲ ಎನ್ನುವ ಅಭಿಪ್ರಾಯವೊಂದಿದೆ. ಅದನ್ನೇ ಇನ್ನೊಂದು ರೀತಿಯಲ್ಲಿ ಹೇಳಬಹುದು: ಮಾಧ್ಯಮಗಳು ತುರ್ತುಪರಿಸ್ಥಿತಿಯ ಕಾಲದಲ್ಲಿ ತಗ್ಗಿಬಗ್ಗಿ ನಡೆದದ್ದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಈಗ ದಾಸ್ಯವನ್ನು ಒಪ್ಪಿಕೊಂಡಿವೆ. ಅಂದಿನ ಮಾಧ್ಯಮ ರಂಗದ ಬಗ್ಗೆ ಹಿರಿಯ ಬಿಜೆಪಿ ನಾಯಕ ಎಲ್.ಕೆ.ಅದ್ವಾಣಿ ಅವರು ಹೇಳಿದ್ದಾರೆ ಎನ್ನಲಾದ ಒಂದು ಮಾತು ಬಹಳ ಚಿರಪರಿಚಿತ. “ಮಾಧ್ಯಮಗಳನ್ನು ಸರಕಾರ ಬಗ್ಗುವಂತೆ ಸೂಚಿಸಿತ್ತು. ಆದರೆ ಮಾಧ್ಯಮಗಳು ಅಕ್ಷರಶಃ ನೆಲಕ್ಕೆ ಒರಗಿ ತೆವಳಿದವು” ಅಂತ. ಈಗ ಅವರ ಮಾತು ಅವರೇ ಕಟ್ಟಿರುವ ಪಕ್ಷ ಅಧಿಕಾರದಲ್ಲಿರುವಾಗ ಇನ್ನೂ ಹೆಚ್ಚು ಅರ್ಥಪೂರ್ಣವಾಗುತ್ತಿದೆ ಎನ್ನುವುದು ಇತಿಹಾಸದ ಒಂದು ಕ್ರೂರ ವ್ಯಂಗ್ಯ.

ತೀರಾ ಇತ್ತೀಚೆಗಿನ ಉದಾಹರಣೆ ಕಾಶ್ಮೀರದ ವಿಚಾರದಲ್ಲಿ ಭಾರತೀಯ ಮಾಧ್ಯಮಗಳು ಅನುಸರಿಸುತ್ತಿರುವ ನೀತಿ. ಕೇಂದ್ರ ಸರಕಾರ ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ 370ನೆಯ ವಿಧಿಯನ್ನು ಅಸಿಂಧುಗೊಳಿಸಿದ ಬಳಿಕ ಆ ರಾಜ್ಯದ ಜನಜೀವನದ ಮೇಲೆ ಹೇರಿರುವ ಭೀಕರ ನಿರ್ಬಂಧಗಳ ಕುರಿತು ಭಾರತೀಯ ಮಾಧ್ಯಮಗಳು ಸಂಪೂರ್ಣ ಕುರುಡಾಗಿ ವರ್ತಿಸುತ್ತಿವೆ. ಅಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿದೆ ಎಂದೂ, ನಿರ್ಬಂಧಗಳು ಅನಿವಾರ್ಯ ಎಂದೂ ಸರಕಾರ ಹೇಳುತ್ತಿರುವುದನ್ನು ಮುಖ್ಯವಾಹಿನಿ ಮಾಧ್ಯಮಗಳು ಏನೊಂದೂ ಚಿಕಿತ್ಸಕ ದೃಷ್ಟಿಯನ್ನು ಇಟ್ಟುಕೊಳ್ಳದೆ ಗಿಳಿಪಾಠ ಒಪ್ಪಿಸುತ್ತಿವೆ. ಅಂತಾರಾಷ್ಟ್ರೀಯ ಮಾಧ್ಯಮಗಳು ಮಾತ್ರ ಮಾಧ್ಯಮಗಳಿಗೆ ವಿಧಿಸಲಾದ ಎಲ್ಲಾ ನಿರ್ಬಂಧಗಳನ್ನು ಮೀರಿ ಆ ರಾಜ್ಯದಲ್ಲಿ ಆಗುತ್ತಿರುವ ದೈನಂದಿನ ಅನಾಹುತಗಳನ್ನು ಜಗತ್ತಿನ ಮುಂದಿಡುತ್ತಿವೆ. ಭಾರತೀಯ ಮಾಧ್ಯಮಗಳು ಇದನ್ನು ಮಾಡುತ್ತಿಲ್ಲ ಎನ್ನುವುದಕ್ಕಿಂತ ಹೆಚ್ಚಾಗಿ ಈ ವಿಚಾರದಲ್ಲಿ ಅವುಗಳು ಸರ್ಕಾರದ ಮುಖವಾಣಿಗಳಾಗಿ ಹೋಗಿರುವುದು ದುರಂತದ ಸಂಗತಿ. ಆಳುವ ಪಕ್ಷಗಳ ಅಥವಾ ಅಧಿಕಾರಸ್ಥ ರಾಜಕಾರಣಿಗಳ ಸ್ವಂತ ಬಂಡವಾಳದಲ್ಲಿ ನಡೆಯುವ ಅಥವಾ ಅವರನ್ನು ಓಲೈಸಲೆಂದೇ ಹುಟ್ಟಿಕೊಂಡಿರುವ ಮಾಧ್ಯಮಗಳು ಮಾತ್ರವೇ ಹೀಗೆ ನಡೆದುಕೊಳ್ಳುತ್ತವೆ ಎಂದಾಗಿದ್ದರೆ ಅದರಲ್ಲಿ ವಿಶೇಷವೇನಿರಲಿಲ್ಲ. ಆದರೆ ಇಂದು ಈ ಪ್ರವೃತ್ತಿ ಇಂತಹ ಮಾಧ್ಯಮಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದು ಇಡೀ ಮುಖ್ಯವಾಹಿನಿ ಮಾಧ್ಯಮ ರಂಗವನ್ನು ಬಹುತೇಕ ಆವರಿಸಿಬಿಟ್ಟಿದೆ. ಕಾಶ್ಮೀರದ ವಿಚಾರದಲ್ಲೇನೋ ‘ದೇಶಭಕ್ತಿ’ ಮಾಧ್ಯಮಗಳ ಕೈಕಟ್ಟಿಹಾಕಿತು ಎನ್ನೋಣ. ಆದರೆ ಗುಂಪು ಹತ್ಯೆಗಳ ವಿಚಾರದಲ್ಲಿ ಮಾಧ್ಯಮಗಳು ಎತ್ತಬೇಕಾದ ಪ್ರಶ್ನೆಗಳನ್ನು ಎತ್ತದಿರುವುದನ್ನು ಏನೆಂದು ಕರೆಯೋಣ? ಬರಬರುತ್ತಾ ಗುಂಪು ಹತ್ಯೆಗಳ ಕುರಿತಾದ ಸುದ್ದಿಗಳು ಏನೋ ಮಾಮೂಲಿ ಘಟನೆಗಳ ವರದಿ ಎನ್ನುವಂತೆ ಒಳಪುಟಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿವೆ. ಸುಪ್ರೀಂಕೋರ್ಟ್ ಆದೇಶದ ಬಳಿಕವೂ ಸರಕಾರ ಈ ವಿಚಾರದಲ್ಲಿ ತೋರುತ್ತಿರುವ ಉದಾಸೀನ ಪ್ರವೃತ್ತಿಯನ್ನು ದೊಡ್ಡ ಧ್ವನಿಯಲ್ಲಿ ಪ್ರಶ್ನಿಸದೆ ಇರುವ ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರವನ್ನು ಎಷ್ಟರಮಟ್ಟಿಗೆ ಬಳಸಿಕೊಳ್ಳುತ್ತಿವೆ ಎನ್ನುವ ಪ್ರಶ್ನೆ ಮೂಡುವುದಿಲ್ಲವೇ? ಇಂತಹ ಸಾವಿರ ಉದಾಹರಣೆಗಳಿವೆ. “ಇದರಲ್ಲಿ ಹೊಸದೇನಿಲ್ಲ, ಇಂತಹ ಪರಿಸ್ಥಿತಿ ಬಂದಾಗಲೆಲ್ಲಾ ಭಾರತೀಯ ಮಾಧ್ಯಮಗಳು ಹೀಗೆಯೇ ನಡೆದುಕೊಂಡಿರುವುದು – ಮತ್ತೊಂದು ಸಂದಿಗ್ಧತೆ ಎದುರಾಗಿದೆ, ಮಾಧ್ಯಮಗಳು ಮತ್ತದೇ ಪ್ರವೃತ್ತಿಯನ್ನು ತೋರುತ್ತಿವೆ. ಇದು ಒಂಥರಾ ಪಾವಲೋವನ ಪ್ರಯೋಗದ ನಾಯಿಯ ಕತೆ” ಅಂತ ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್ ಇತ್ತೀಚಿಗೆ ಬರೆದರು (ಮನಶಾಸ್ತ್ರದ ವಿದ್ಯಾರ್ಥಿಗಳು ಕಲಿಯುವ ಪಾವಲೋವನ ಪ್ರಯೋಗದಲ್ಲಿ ಒಂದು ನಿರ್ದಿಷ್ಟ ಸಂಜ್ಞೆಗೆ ಒಂದೇ ರೀತಿ ಪ್ರತಿಕ್ರಿಯಿಸುವ ಪ್ರವೃತ್ತಿ ತೋರಿಸುತ್ತದೆ).

ಭಾರತೀಯ ಮಾಧ್ಯಮಗಳು ಹೀಗೆ ಆಳುವ ಸರಕಾರಗಳ ತಾಳಕ್ಕೆ ಸರಿಯಾಗಿ ಕುಣಿಯುವುದು ಅವುಗಳಿಗೆ ಒಪ್ಪಿಗೆಯಾಗಿ ಅಲ್ಲ, ಅವುಗಳು ಹಾಗೆ ಮಾಡುವುದು ಸರಕಾರ ಅನುಸರಿಸುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ನೀತಿಯ ಪರಿಣಾಮವಾಗಿ ಅಂತ ವಾದಿಸಬಹುದು. ಯಾಕೆಂದರೆ ಭಾರತದ ಮಾಧ್ಯಮ ಒಂದು ಉದ್ಯಮವಾಗಿ ಸದಾ ಸರಕಾರದ ಮರ್ಜಿಯಲ್ಲೇ ಇರಬೇಕಾದ ಅನಿವಾರ್ಯತೆ ಇದೆ. ಸರಕಾರದ ಜತೆ ನಿಷ್ಠುರವಾಗಿ ನಡೆದುಕೊಂಡರೆ ಮಾಧ್ಯಮಗಳನ್ನು ಸರಕಾರ ವಿವಿಧ ರೀತಿಯಲ್ಲಿ ಬಗ್ಗುಬಡಿಯಬಹುದು. ಸರಕಾರೀ ಜಾಹೀರಾತುಗಳನ್ನು ನಿಲ್ಲಿಸಬಹುದು, ಖಾಸಗಿ ಜಾಹೀರಾತುಗಳೂ ಸಿಗದೇ ಹೋಗುವಂತೆ ತಂತ್ರ ಹೂಡಬಹುದು. ಪತ್ರಿಕೆಯ ಮಾಲೀಕರ, ಅದರ ಹಿರಿಯ ಪತ್ರಕರ್ತರ ಮೇಲೆ ತನಿಖಾ ಸಂಸ್ಥೆಗಳನ್ನು ಛೂ ಬಿಡಬಹುದು. ಇದೆಲ್ಲಾ ಈ ದೇಶದಲ್ಲಿ ಹಿಂದೆ ಆಗಿಹೋಗಿದೆ. ಆದುದರಿಂದ ಮಾಧ್ಯಮೋದ್ಯಮ ಆರ್ಥಿಕವಾಗಿ ಅತ್ಯಂತ ಸೊರಗಿಹೋಗಿರುವ ಈ ಕಾಲದಲ್ಲಿ ಯಾರು ತಾನೇ ಸರಕಾರದ ದ್ವೇಷ ಕಟ್ಟಿಕೊಳ್ಳಲು ತಯಾರಿದ್ದಾರೆ? ಸಹಜವಾಗಿಯೇ ಮಾಧ್ಯಮಗಳು ಸರಕಾರವನ್ನು ಪ್ರಶ್ನಿಸುವುದನ್ನು ಬಿಟ್ಟು ಅದರ ಹೊಗಳುಭಟ್ಟರಾಗಿಬಿಟ್ಟಿವೆ. ಅಂದಮೇಲೆ ಅವುಗಳಿಗೇನು ಅಭಿವ್ಯಕ್ತಿ ಸ್ವಾತಂತ್ರ್ಯದ ಹಂಗು ಎನ್ನುವ ವಾದ ಒಪ್ಪತಕ್ಕದ್ದೇ. ಇಲ್ಲೇ ಇರುವುದು ಮಹತ್ವದ ವಿಚಾರ. ಒಂದು ವೇಳೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಬಲವಾಗಿ ಉಳಿಸಿಕೊಳ್ಳಬೇಕು ಎನ್ನುವ ತುಡಿತವೊಂದು ಭಾರತದ ಸಮಾಜದಲ್ಲಿ ಆಳವಾಗಿ ನೆಲೆಸಿದ್ದರೆ ಇಷ್ಟೊತ್ತಿಗೆ ಸರಕಾರೀ ಮತ್ತು ಖಾಸಗೀ ಜಾಹೀರಾತುಗಳ ಹಂಗಿಲ್ಲದೆ ನಡೆಯಬಹುದಾದ ಮಾಧ್ಯಮೋದ್ಯಮದ ಮಾದರಿಯೊಂದು ಈ ದೇಶದಲ್ಲಿ ಸೃಷ್ಟಿಯಾಗುತಿತ್ತು. ಒಂದೋ ಸಹಕಾರೀ ತತ್ವದ ಆಧಾರದ ಮೇಲೆ ಅಥವಾ ದೊಡ್ಡ ಮಟ್ಟದ ದತ್ತಿಯೊಂದನ್ನು ಸ್ಥಾಪಿಸಿ ಅದರಿಂದ ಹುಟ್ಟುವ ಆದಾಯದ ಮೇಲೆ ಅವಲಂಬಿಸಿ ಸ್ವತಂತ್ರವಾಗಿ ನಡೆಯುವ ಮಾಧ್ಯಮ ಸಂಸ್ಥೆಯೊಂದು ಹುಟ್ಟಬಹುದಾಗಿತ್ತು. ಅಂತಹದ್ದೊಂದು ಪ್ರಯೋಗ ಸರಿಯಾಗಿ ಆಗಿಲ್ಲ ಅಥವಾ ಆದರೂ ಬಹುಕಾಲ ಉಳಿಯಲಿಲ್ಲ (ಉದಾಹರಣೆಗೆ ತೆಹೆಲ್ಕಾ) ಎಂಬುದು ಏನನ್ನು ಸೂಚಿಸುತ್ತದೆ? ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ನಾಗರಿಕ ಸಮಾಜ ಯಾಕೆ ಹೋರಾಟ ನಡೆಸುತಿಲ್ಲ. ವಾಸ್ತವದಲ್ಲಿ, ಈಗ್ಗೆ ನಾಲ್ಕು ವರ್ಷಗಳ ಹಿಂದೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರವೃತ್ತಿಯನ್ನು ಖಂಡಿಸಿ ನಡೆದ ‘ಪ್ರಶಸ್ತಿ ವಾಪಸಾತಿ ಚಳವಳಿ’ ಬಹಳ ಅರ್ಥಪೂರ್ಣವಾಗಿತ್ತು. ಆದರೆ ಅದು ಅಷ್ಟೇ ಬೇಗ ನಿಂತುಹೋಯಿತು. ಅದರ ವಿಚಾರದಲ್ಲಿ ಹುಟ್ಟಿಕೊಂಡ ಅಪಪ್ರಚಾರವನ್ನು ಮೆಟ್ಟಿ ನಿಲ್ಲಲು ಅದಕ್ಕೆ ಸಾಧ್ಯವಾಗಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚಿಂತೆ ಮತ್ತು ಅದನ್ನು ಬಳಸಿಕೊಳ್ಳುವ ಧಾವಂತ ಏನಿದ್ದರೂ ಕೆಲವೇ ಕೆಲ ವ್ಯಕ್ತಿಗಳದ್ದು ಮತ್ತು ಕೆಲ ಪರ್ಯಾಯ ಮಾಧ್ಯಮಗಳದ್ದು ಎಂಬಂತ ಸ್ಥಿತಿಯೇ ಎಲ್ಲಾ ಕಾಲದಲ್ಲೂ ಇದ್ದದ್ದು.

ಇಡೀ ಭಾರತೀಯ ಸಮಾಜಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿ ಅಧಿಕಾರಸ್ಥರನ್ನು ಹದ್ದುಬಸ್ತಿನಲ್ಲಿಡಬೇಕು ಎನ್ನುವುದರ ಬಗ್ಗೆ ವಿಶೇಷವಾದ ಕಾಳಜಿ ಇನ್ನೂ ಮೂಡಿಲ್ಲ ಅನ್ನಿಸುತ್ತದೆ. ಅರ್ಥಾತ್ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರದಲ್ಲಿ ಇರುವ ಉದಾಸೀನ ಎರಡೂ ಕೂಡಾ ಭಾರತದ ಪ್ರಜಾತಂತ್ರದ ಇನ್ನೊಂದು ದೊಡ್ಡ ಸವಾಲಿನ ಭಾಗಗಳು. ಆ ಸವಾಲು ಏನು ಅಂತ ಅಂದರೆ ಭಾರತೀಯ ಮನಸ್ಸುಗಳು ಪ್ರಜಾತಂತ್ರದ ಸಂಸ್ಕೃತಿಗೆ ತಯಾರಾಗುವ ಮುನ್ನವೇ ಈ ದೇಶಕ್ಕೆ ಪ್ರಜಾತಂತ್ರ ಬಂದದ್ದು. ಇದನ್ನೇ ಅಲ್ಲವೇ ಬಿ.ಆರ್.ಅಂಬೇಡ್ಕರ್ ಅಂದೇ ಎಚ್ಚರಿಸಿದ್ದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಪ್ರಜಾಪ್ರಭುತ್ವ ಜಗತ್ತಿನ ನಾಯಕರು, ಸಾರ್ವಭೌಮ ರಾಷ್ಟ್ರದ ನಾಯಕನನ್ನು ಹತ್ಯೆ ಮಾಡಿದ್ದು ಹೇಯ ಕೃತ್ಯ’: ಖಮೇನಿ ಹತ್ಯೆಗೆ ಪ್ರಿಯಾಂಕ ಗಾಂಧಿ ಖಂಡನೆ

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾನುವಾರ ತೀವ್ರವಾಗಿ ಖಂಡಿಸಿದ್ದಾರೆ. "ಪ್ರಜಾಪ್ರಭುತ್ವ ಜಗತ್ತಿನ ನಾಯಕರು ಎಂದು ಕರೆಯಲ್ಪಡುವವರು" ಸಾರ್ವಭೌಮ ರಾಷ್ಟ್ರದ ನಾಯಕತ್ವವನ್ನು ಗುರಿಯಾಗಿಸಿಕೊಂಡು...

ದುಬೈ-ಅಬುಧಾಬಿ ಮೇಲೆ ದಾಳಿ; ಇರಾನ್‌ಗೆ ಯುಎಇ ಎಚ್ಚರಿಕೆ

ಇರಾನ್ ತನ್ನ ನೆರೆಹೊರೆಯವರನ್ನು ಗುರಿಯಾಗಿಸಿಕೊಳ್ಳಬಾರದು ಎಂದು ಯುಎಇ ಅಧ್ಯಕ್ಷರ ರಾಜತಾಂತ್ರಿಕ ಸಲಹೆಗಾರ ಅನ್ವರ್ ಗರ್ಗಶ್ ಎಚ್ಚರಿಕೆ ನೀಡಿದ್ದಾರೆ. "ಗಲ್ಫ್ ರಾಷ್ಟ್ರಗಳ ವಿರುದ್ಧ ಇರಾನ್ ಆಕ್ರಮಣವು ತಪ್ಪು ಲೆಕ್ಕಾಚಾರವಾಗಿದೆ. ಇದೇ ಬೆಳವಣಿಗೆ ನಿರ್ಣಾಯಕ ಹಂತದಲ್ಲಿ ಇರಾನ್...

ಇರಾನ್‌ ಹಂಗಾಮಿ ಸರ್ವೋಚ್ಚ ನಾಯಕರಾಗಿ ಅಯಾತೊಲ್ಲ ಅಲಿರೆಝಾ ಅರಾಫಿ ನೇಮಕ

ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ಹಿನ್ನೆಲೆ, ಹಿರಿಯ ಧರ್ಮಗುರು ಅಯತೊಲ್ಲಾ ಅಲಿರೆಝಾ ಅರಾಫಿ ಅವರು ಇರಾನ್‌ನ ಹಂಗಾಮಿ ಸರ್ವೋಚ್ಚ ನಾಯಕರಾಗಿ ಆಯ್ಕೆ ಮಾಡಲಾಗಿದೆ ಎಂದು ಸರ್ಕಾರಿ-ಸಂಯೋಜಿತ...

ಖಮೇನಿ ಹತ್ಯೆ ವಿರೋಧಿಸಿ ಬೃಹತ್ ಪ್ರತಿಭಟನೆ; ಶ್ರೀನಗರದಲ್ಲಿ ಇಂಟರ್‌ನೆಟ್ ಸ್ತಬ್ಧ

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯನ್ನು ವಿರೋಧಿಸಿ ಕಾಶ್ಮೀರದಾದ್ಯಂತ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿವೆ. ಶ್ರೀನಗರದಲ್ಲಿರುವ ವಿಶ್ವಸಂಸ್ಥೆಯ ಮಿಲಿಟರಿ ವೀಕ್ಷಕರ ಗುಂಪು (UNMOGIP) ಪ್ರಧಾನ ಕಚೇರಿಯ ಮುಂದೆ ದೊಡ್ಡ ಜನಸಮೂಹ ಜಮಾಯಿಸಿತ್ತು....

ಅಮೆರಿಕಾ-ಇಸ್ರೇಲ್ ‘ಪುಂಡ ರಾಷ್ಟ್ರಗಳು’; ಇರಾನ್ ಮೇಲಿನ ದಾಳಿ ಖಂಡಿಸಿದ ಕೇರಳ ಸಿಎಂ; ಅನಿವಾಸಿ ಭಾರತೀಯರ ಆತಂಕ ಪರಿಹರಿಸಲು ಕೇಂದ್ರಕ್ಕೆ ಮನವಿ

ತಿರುವನಂತಪುರಂ: ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ನಡೆಸುತ್ತಿರುವ ದಾಳಿಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರವಾಗಿ ಖಂಡಿಸಿದ್ದಾರೆ ಮತ್ತು ಗಲ್ಫ್ ರಾಷ್ಟ್ರಗಳಲ್ಲಿರುವ ಹಲವಾರು ಅನಿವಾಸಿ ಭಾರತೀಯರ ಆತಂಕವನ್ನು ಪರಿಹರಿಸಲು ಕೇಂದ್ರವು ತಕ್ಷಣ...

ಅಮೆರಿಕ-ಇಸ್ರೇಲಿ ಮಿಲಿಟರಿ ದಾಳಿಯಲ್ಲಿ ‘ಇರಾನ್‌ ಸಶಸ್ತ್ರ ಪಡೆಗಳ ಮುಖ್ಯಸ್ಥ ಅಬ್ದುಲ್ರಹೀಮ್ ಮೌಸಾವಿ ಹತ್ಯೆ; ಇರಾನ್ ಮಾಧ್ಯಮಗಳ ವರದಿ 

ಟೆಹ್ರಾನ್: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ ಸಶಸ್ತ್ರ ಪಡೆಗಳ ಮುಖ್ಯಸ್ಥ ಅಬ್ದುಲ್ರಹೀಮ್ ಮೌಸಾವಿ ಸಾವನ್ನಪ್ಪಿದ್ದಾರೆ ಎಂದು ದೇಶದ ಸರ್ಕಾರಿ ಸ್ವಾಮ್ಯದ ಐಆರ್‌ಐಬಿ ಟಿವಿ ಭಾನುವಾರ ವರದಿ ಮಾಡಿದೆ. ಟೆಹ್ರಾನ್ ಮೇಲಿನ ದಾಳಿಯಲ್ಲಿ...

ಕರಾಚಿ| ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆ ವೇಳೆ ಘರ್ಷಣೆ : ಕನಿಷ್ಠ 9 ಸಾವು

ಪಾಕಿಸ್ತಾನದ ಕರಾಚಿಯಲ್ಲಿರುವ ಅಮೆರಿಕ ದೂತಾವಾಸದ ಬಳಿ ಭಾನುವಾರ (ಮಾ.1) ಇರಾನ್ ಪರ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿಯ ನಡುವೆ ಘರ್ಷಣೆ ಉಂಟಾಗಿ ಕನಿಷ್ಠ ಒಂಭತ್ತು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. "ನಾವು ಕನಿಷ್ಠ ಎಂಟು...

ಇರಾನ್-ಇಸ್ರೇಲ್ ಯುದ್ಧ: ಭಾರತ ತಕ್ಷಣದ ಆರ್ಥಿಕ ಸವಾಲುಗಳನ್ನು ಎದುರಿಸುವ ಸಾಧ್ಯತೆಯಿದೆ; ವರದಿ

ಫೆಬ್ರವರಿ 28, 2026 ರಂದು ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಮುಷ್ಕರದ ನಂತರ ಇರಾನ್-ಇಸ್ರೇಲ್ ಸಂಘರ್ಷದಲ್ಲಿ ತೀವ್ರ ಏರಿಕೆಯು ಪಶ್ಚಿಮ ಏಷ್ಯಾದಲ್ಲಿ ಭೌಗೋಳಿಕ ರಾಜಕೀಯ ಅಪಾಯಗಳನ್ನು ತೀವ್ರಗೊಳಿಸಿದೆ ಮತ್ತು ಜಾಗತಿಕ ಇಂಧನ ಮಾರುಕಟ್ಟೆಗಳಿಗೆ ತಕ್ಷಣದ...

ಮಹಾರಾಷ್ಟ್ರ: ನಾಗ್ಪುರದ ಸ್ಫೋಟಕ ಕಾರ್ಖಾನೆಯಲ್ಲಿ ಸ್ಫೋಟ, 17ಸಾವು, 18 ಜನರಿಗೆ ಗಂಭೀರ ಗಾಯ

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಸ್ಫೋಟಕ ತಯಾರಿಕಾ ಕಾರ್ಖಾನೆಯಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದು, 18 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ (ನಾಗ್ಪುರ...

ಮಧ್ಯಪ್ರಾಚ್ಯ ಉದ್ವಿಗ್ನತೆ: ಯುದ್ಧ ಪೀಡಿತ ಸ್ಥಳಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸ್ಥಳಾಂತರಿಸಲು ತುರ್ತು ಕ್ರಮಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಹೆಚ್ಚುತ್ತಿರುವ ಮಧ್ಯೆ, ಇಸ್ರೇಲ್, ಯುಎಇ, ಇರಾನ್ ಮತ್ತು ಕತಾರ್ ಸೇರಿದಂತೆ ಪೀಡಿತ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ವಾಸಿಸುವ ಕನ್ನಡಿಗರ ಸುರಕ್ಷತೆ ಮತ್ತು ಸ್ಥಳಾಂತರಿಸುವಿಕೆಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ...