ಕಳೆದ 19 ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಇಂದು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆಗೆ ಸಾಥ್ ನೀಡುವುದಾಗಿ ಹೇಳಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಕೇಜ್ರಿವಾಲ್ ನೇತೃತ್ವದಲ್ಲಿ ರೈತರಿಗೆ ಬೆಂಬಲವಾಗಿ ಆಮ್ ಆದ್ಮಿ ಪಕ್ಷದ (ಎಎಪಿ) ಸಚಿವರು ಮತ್ತು ಶಾಸಕರು ಉಪವಾಸ ನಡೆಸಿದ್ದಾರೆ. ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಸಚಿವರಾದ ಸತ್ಯೇಂದರ್ ಜೈನ್, ಗೋಪಾಲ್ ರೈ ಮತ್ತು ಶಾಸಕಿ ಅತಿಶಿ ಮರ್ಲೆನಾ ಉಪಸ್ಥಿತರಿದ್ದಾರೆ.
ಕೇಂದ್ರ ಸರ್ಕಾರದ ಅಡಿಯಲ್ಲಿರುವ ದೆಹಲಿ ಪೊಲೀಸರು ದೆಹಲಿ ಚಲೋ ನಡೆಸಲು ಬಂದಿದ್ದ ರೈತರನ್ನು ದೆಹಲಿ ಗಡಿಗಳಲ್ಲಿಯೇ ತಡೆದಿತ್ತು. ಹೋರಾಟನಿರತ ರೈತರ ಮೇಲೆ ಲಾಠೀ ಚಾರ್ಜ್ ಮಾಡಿ, ಜಲಫಿರಂಗಿ ಮತ್ತು ಅಶ್ರುವಾಯು ಸಿಡಿಸಿತ್ತು. ಇದರಿಂದ ಕ್ರೋಧಗೊಂಡ ರೈತ ಸಂಘಟನೆಗಳು ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿವೆ. ರಸ್ತೆ ತಡೆ, ಭಾರತ್ ಬಂದ್ ನಡೆಸಿರುವ ರೈತರು ಹೋರಾಟ ತೀವ್ರಗೊಳಿಸಲು ಇಂದು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಇದನ್ನೂ ಓದಿ: ರೈತರನ್ನು ಬೆಂಬಲಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ, ನೀವು ಉಪವಾಸ ಕೈಗೊಳ್ಳಿ: ಅರವಿಂದ್ ಕೇಜ್ರಿವಾಲ್ ಕರೆ
Delhi: Aam Aadmi Party (AAP) Ministers and MLAs hold 'hunger strike' in support of farmers who are protesting against Centre's #FarmLaws.
Delhi Deputy CM Manish Sisodia, ministers Satyendar Jain, Gopal Rai and party leader Aatishi Marlena are present. pic.twitter.com/oEBoEof0MI
— ANI (@ANI) December 14, 2020
ದೆಹಲಿಯಲ್ಲಿ ಹೋರಾಟ ಆರಂಭವಾದಾಗಿನಿಂದ ಇದುವರೆಗೆ ರೈತ ಮುಖಂಡರು ಮತ್ತು ಕೇಂದ್ರ ಸಚಿವರೊಂದಿಗೆ 5 ಸುತ್ತಿನ ಮಾತುಕತೆ ನಡೆದಿದೆ. ಆದರೆ ಅವೆಲ್ಲವೂ ವಿಫಲವಾಗಿವೆ. ಡಿಸೆಂಬರ್ 9 ರಂದು 6ನೇ ಸುತ್ತಿನ ಮಾತುಕತೆ ನಡೆಯಬೇಕಿತ್ತು. ಆದರೆ ರೈತ ಮುಖಂಡರು ಅದನ್ನು ನಿರಾಕರಿಸಿದ್ದಾರೆ.
ಬೆಂಗಳೂರಿನಲ್ಲಿಯೂ ಆಪ್ ಮುಖಂಡರು, ಕಾರ್ಯಕರ್ತರು ನಗರದ ಮೌರ್ಯ ಸರ್ಕಲ್ ಬಳಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

“ರೈತರ ಬದುಕನ್ನು ನಾಶ ಮಾಡುವ ಮೂರು ಮಸೂದೆಗಳನ್ನು ತಿದ್ದುಪಡಿ ಮಾಡಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ದೇಶದ ಬಹು ಜನರನ್ನು ಬೀದಿಗೆ ತಳ್ಳಲು ಯೋಜನೆ ರೂಪಿಸಿದೆ ಇದನ್ನು ಆಮ್ ಆದ್ಮಿ ಪಕ್ಷ ಸಹಿಸುವುದಿಲ್ಲ” ಎಂದು ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.
ಆಪ್ ಪಕ್ಷದ ರಾಷ್ಟ್ರೀಯ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಕರೆಯ ಮೇರೆಗೆ ಇಡೀ ದೇಶದ ಹಾಗೂ ನಮ್ಮ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಮ್ ಆದ್ಮಿ ಪಕ್ಷದಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರ ತಿದ್ದುಪಡಿಗಳನ್ನು ಹಿಂಪಡೆಯದೇ ಹೋದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.


