ಕೋವಿಡ್ ನಿರ್ಬಂಧಗಳು ತೆರವಾಗುತ್ತಿದ್ದಂತೆ ಬೆಂಗಳೂರಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಮೆಜೆಸ್ಟಿಕ್, ಯಶವಂತಪುರ ರೈಲ್ವೆ ನಿಲ್ಧಾಣಗಳು ಪ್ರಯಾಣಿಕರಿಂದ ತುಂಬಿ ತುಳುಕಾಡುತ್ತಿವೆ. ಹಾಗೆ ಬೆಂಗಳೂರಿನ ಪ್ರವಾಸಿ ತಾಣಗಳಲ್ಲಿ ಕಲರವ ಕೇಳಿ ಬರಲಾರಂಭಿಸಿದ್ದು ನಗರದ ಸುತ್ತಮುತ್ತದ ಸ್ಥಳಗಳಿಗೆ ಜನರು ಭೇಟಿ ನೀಡುತ್ತಿದ್ದಾರೆ. ಮಳೆಯ ತಂಪಾದ ವಾತಾವರಣ ಕೂಡ ಇದಕ್ಕೆ ಸಹಕಾರ ನೀಡಿದ್ದು ಇಂದು ನಗರದ ಅನೇಕ ಕಡೆ ಆರ್ಥಿಕ ಮತ್ತು ಪ್ರವಾಸೋದ್ಯಮದ ಚಟುವಟಿಕೆಗಳು ಚೇತರಿಸಿಕೊಂಡಿರುವುದು ಕಂಡು ಬಂದಿದೆ.
ನಗರದ ಹೊರ ವಲಯದಲ್ಲಿರುವ ಪುರಾತನ ದೊಡ್ಡ ಆಲದ ಮರವನ್ನು ನೋಡಲು ಇಂದು ಪ್ರವಾಸಿಗಳು ಭೇಟಿ ನೀಡಿದ್ದು ಸುತ್ತಲಿನ ವ್ಯಾಪರಸ್ಥರ ಮುಖದಲ್ಲಿ ಒಂದಷ್ಟು ಗೆಲುವಿನ ಕಳೆ ಮೂಡಿದೆ.
ಇದನ್ನೂ ಓದಿ: ಮೈದುಂಬಿ ಹರಿಯುವ ನದಿಗಳು, ಧುಮ್ಮಿಕ್ಕುತ್ತಿರುವ ಜಲಪಾತಗಳ ನಡುವೆ ಬಣಗುಡುತ್ತಿರುವ ಮಲೆನಾಡಿನ ಪ್ರವಾಸಿ ತಾಣಗಳು

ಸರಿ ಸುಮಾರು ಮೂರು ತಿಂಗಳಿನಿಂದ ಬಂದ್ ಆಗಿದ್ದ ದೊಡ್ಡ ಆಲದ ಮರ ಈ ವಾರ ಸಾರ್ವಜನಿಕರ ಪ್ರವೇಶಕ್ಕೆ ತೆರೆದಿದೆ. ತಿಂಗಳುಗಳ ಕಾಲ ಮನೆಯಲ್ಲಿಯೇ ಕುಳಿತಿದ್ದ ಜನರು ಇಂದು ತಮ್ಮ ತಮ್ಮ ವಾಹನ ಮತ್ತು ಆಟೋ ರಿಕ್ಷಾದಲ್ಲಿ ಪುರಾತನ ದೊಡ್ಡ ಆಲದ ಮರಕ್ಕೆ ತೆರಳಿ ಪುಳಕಗೊಂಡರು.
ಬೆಂಗಳೂರಿನಲ್ಲಿ ಅನೇಕರಿಗೆ ದೊಡ್ಡ ಆಲದ ಮರದ ಪರಿಚಯ ಇದೆ. ಇನ್ನು ಕೆಲವರಿಗೆ ನಮ್ಮ ಸುತ್ತಲಿನ ಪ್ರದೇಶದ ಮಾಹಿತಿ ಇಲ್ಲ. ದೊಡ್ಡ ಆಲದ ಮರದ ವಿಶೇಷತೆ ಏನು? ಯಾಕಿದು ಪ್ರವಾಸಿ ತಾಣ ಎಂಬುದು ಹೆಚ್ಚು ಮುನ್ನೆಲೆಗೆ ಬಂದಿಲ್ಲ.
ಇದನ್ನೂ ಓದಿ: ಮುತ್ತು ಸುತ್ತು; ಸಾವನದುರ್ಗ: ಪ್ರಪಂಚದ ಅತಿದೊಡ್ಡ ಏಕಶಿಲಾ ಬೆಟ್ಟವಿದು, ಶಕ್ತಿಯಿದ್ದಷ್ಟು ಹತ್ತಿ ನೋಡ!
ದೊಡ್ಡ ಆಲದ ಮರ ಅಥವಾ ಬಿಗ್ ಬ್ಯಾನಿಯನ್ ಟ್ರೀ
![]()
ಇದೇನಪ್ಪಾ ಆಲದ ಮರವನ್ನು ಯಾವತ್ತೂ ನೋಡೇ ಇಲ್ವಾ ಅಂತಾ ನೀವು ಯೋಚಿಸಿರುವಿರಿ. ಆದರೆ ಇವತ್ತು ನಾವು ನಿಮಗೆ ಹೊರಟಿರುವ ಆಲದ ಮರ ಅಂತಿಂಥ ಆಲದ ಮರವಲ್ಲ. ಇದು ಸುಮಾರು 95 ಫೀಟ್ ಎತ್ತರ ಹಾಗೂ 400 ವರ್ಷಗಳ ಇತಿಹಾಸವನ್ನು ಹೊಂದಿರುವ ವಿಶೇಷ ಆಲದ ಮರ. ಬೆಂಗಳೂರು ದಕ್ಷಿಣದ ಕೇತೋಹಳ್ಳಿಯಲ್ಲಿರುವ ಈ ಆಲದ ಮರವನ್ನು ದೊಡ್ಡ ಆಲದ ಮರ ಅಥವಾ ಬಿಗ್ ಬ್ಯಾನಿಯನ್ ಟ್ರೀ ಎಂದೂ ಕರೆಯುತ್ತಾರೆ. ಇದು ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿರುವ ಪ್ರವಾಸಿ ಆಕರ್ಷಣೆಯಾಗಿ ಬೆಳೆದಿದ್ದು ರಾಜ್ಯದ ಇಕೋ ಟೂರಿಸಂನ ಒಂದು ಭಾಗವಾಗಿದೆ.
ಇದನ್ನೂ ಓದಿ: ಕರ್ನಾಟಕಕ್ಕೂ ಬಂತು ವಿಸ್ಟಾಡೋಮ್ ರೈಲು: ಮಂಗಳೂರು-ಬೆಂಗಳೂರು ನಡುವೆ ಮೊದಲ ಓಡಾಟ
![]()
ಈ ಆಲದ ಮರವು ಭಾರತದ ಪುರಾತನ ಆಲದ ಮರಗಳಲ್ಲಿ ನಾಲ್ಕನೆಯ ಸ್ಥಾನವನ್ನು ಪಡೆದುಕೊಂಡಿದೆ. ಆಂಧ್ರಪ್ರದೇಶದ ಮೆಹಬೂಬ್ ನಗರ, ಪಶ್ಚಿಮ ಬಂಗಾಳದ ಕೊಲ್ಕತ್ತ ಹಾಗೂ ತಮಿಳುನಾಡಿನ ಚೆನ್ನೈನಲ್ಲ್ಲಿ ಕ್ರಮವಾಗಿ ಮೊದಲ ಮೂರು ದೈತ್ಯ ಆಲದ ಮರಗಳಿವೆ. ಇಲ್ಲಿ ಒಂದು ಪುರಾತನ ಮುನೀಶ್ವರ ದೇವರ ದೇವಾಲಯ ಕೂಡಾ ಇದೆ.
ಇದನ್ನೂ ಓದಿ: ಕೋವಿಡ್ ನಿರ್ಬಂಧ ತೆರವು : ಪ್ರವಾಸಿ ತಾಣಗಳತ್ತ ಜನ-ಹಂಪಿಯಲ್ಲಿ ಜನ ಜಂಗುಳಿ
ಕರ್ನಾಟಕ ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆಯು ಈ ದೊಡ್ಡ ಆಲದ ಮರದ ಸಂರಕ್ಷಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಆಲದ ಮರದ ಸುತ್ತಮುತ್ತಲಿನ ಪ್ರದೇಶಕ್ಕೆ ಕಬ್ಬಿಣದ ಗ್ರಿಲ್ ಹಾಕಲಾಗಿದೆ. ಪ್ರವಾಸೋದ್ಯಮ ಇಲಾಖೆ ದೊಡ್ಡ ಆಲದ ಮರವನ್ನು ಪಾರಂಪರಿಕ ವೃಕ್ಷವೆಂದು ಘೋಷಿಸಿ ತಾಣವನ್ನು ಪ್ರವಾಸಿ ಕೇಂದ್ರವನ್ನಾಗಿ ಮಾಡಿದೆ. ಈ ಮರದ ಸುತ್ತಲೂ ಪ್ರವಾಸಿಗರಿಗೆ ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳನ್ನು ಹಾಕಲಾಗಿದೆ.
![]()
ಈಗ ನೋಡುತ್ತಿರುವ ಆಲದ ಮರವು ಹಲವು ವರ್ಷಗಳ ಹಿಂದೆ ಇನ್ನೂ ದೊಡ್ಡದಾಗಿತ್ತು, ಆದರೆ ಯಾವುದೋ ನೈಸರ್ಗಿಕ ಕಾಯಿಲೆಗೆ ಒಳಗಾಗಿ ನಶಿಸಿತು. ಆದ್ದರಿಂದ ಮರವು ಈಗ ಅನೇಕ ವಿಭಿನ್ನ ಮರಗಳಂತೆ ಕಾಣಿಸುತ್ತದೆ.
ಒಟ್ಟಾರೆಯಾಗಿ ವೀಕೆಂಡ್ ಕರ್ಪ್ಯೂ ತೆರವಾದ ಮೊದಲ ವೀಕೆಂಡ್‌ನಲ್ಲಿ ಭಾನುವಾರ ಸಂಜೆ ಹೊತ್ತಿನಲ್ಲಿ ಹತ್ತಾರು ಪ್ರವಾಸಿಗರು ಪ್ರಶಾಂತವಾಗಿ ಕಾಲಕಳೆದಿದ್ದಾರೆ. ಕಲ್ಲು ಬೆಂಚುಗಳಲ್ಲಿ ಕುಳಿತು ಹರಟೆ ಹೊಡೆಯುತ್ತಾ ಕೋತಿಗಳ ಚೇಷ್ಟೆಯನ್ನು ಎಂಜಾಯ್ ಮಾಡುತ್ತಾ ಕಾಲ ಕಳೆದಿದ್ದಾರೆ.

ಪ್ರವಾಸಿಗರು ನೀಡುವ ಹಣ್ಣು ಹಂಪಲು ತಿಂಡಿಗಳಿಗೆ ಅಭ್ಯಾಸವಾಗಿದ್ದ ಕೋತಿಗಳು ಕಳೆದ 3 ತಿಂಗಳು ಸಾಕಷ್ಟು ಕಷ್ಟಪಟ್ಟವು. ಕೆಲವು ನಗರ ಪ್ರದೇಶಕ್ಕೆ ಹೋದವು. ಒಂದಷ್ಟು ಚಿಕ್ಕ ಕೋತಿಗಳು ಹಸಿವಿನಿಂದ ಮೃತಪಟ್ಟಿವೆ ಎಂದು ಸ್ಥಳೀಯ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.
ಕೊರೊನಾ ಮತ್ತು ಲಾಕ್ ಡೌನ್ ಮನುಷ್ಯ ಪ್ರಾಣಿಗಳ ಬೇಧವಿಲ್ಲದೇ ಎಲ್ಲರನ್ನೂ ಕಂಗೆಡಿಸಿದೆ. 3ನೇ ಅಲೆಯ ಭೀತಿಯ ನಡುವೆ ನಿಟ್ಟುಸಿರಿಗೊಂದಷ್ಟು ಅವಕಾಶ ಸಿಕ್ಕಿದೆ. ಎಚ್ಚರಿಕೆಯ ನಡುವೆ ಅಚ್ಚರಿಯ ಹುಡುಕಾಟಕ್ಕೆ ದೊಡ್ಡ ಆಲದ ಮರ ಒಂದು ಪ್ರಶಸ್ತ ತಾಣ. ವಿಶ್ರಾಂತಿ, ವಿಜ್ಞಾನ ಎರಡನ್ನೂ ಒಟ್ಟಿಗೆ ನೀಡುವ ಬಿಗ್ ಬ್ಯಾನಿಯನ್ ಟ್ರೀ ನಮ್ಮ ಮುಂದಿನ ಪ್ರವಾಸಕ್ಕೆ ಪ್ರಶಸ್ತ ನಿಲ್ಧಾಣ.
-ರಾಜೇಶ್ ಹೆಬ್ಬಾರ್
ಇದನ್ನೂ ಓದಿ: ಕೈ ಬೀಸಿ ಕರೆಯಲಿರುವ ಕೇರಳ…ಪ್ರವಾಸಿ ತಾಣಗಳು ಪುನರಾರಂಭ!


