ಎಕ್ಸಿಟ್ ಪೋಲ್‌ಗಳ ಪಾರದರ್ಶಕತೆ ಬಗ್ಗೆ ಪ್ರಶ್ನಿಸಿದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಬಿಜೆಪಿ ಪರ ಕೆಲಸ ಮಾಡುತ್ತಿದ್ದವರನ್ನೇ ಪ್ರಶ್ನೆ ಕೇಳಿ ಸಮೀಕ್ಷೆ ನಡೆಸಲಾಗಿದೆ, ಇದನ್ನು ನಡೆಸುವ ಏಜೆನ್ಸಿಗಳು ಬಿಜೆಪಿ ಪರವಾಗಿ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ ಎಂದು ಹೇಳಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಉತ್ತರಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್, ಇಂಡಿಯಾ ಮೈತ್ರಿಕೂಟದ ಗೆಲುವು ದೇಶ ಮತ್ತು ದೇಶದ ಜನರ ಗೆಲುವು. ನಮ್ಮ ಎಕ್ಸಿಟ್ ಪೋಲ್‌ಗಳು ಉತ್ತರ ಪ್ರದೇಶದಲ್ಲಿ ಇಂಡಿಯಾ ಮೈತ್ರಿಕೂಟವು ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಗೆಲ್ಲುತ್ತಿದೆ ಎಂದು ಹೇಳುತ್ತದೆ. ನಾನು ಆಂತರಿಕ ಸಮೀಕ್ಷೆಯನ್ನು ಮಾಡಿದ್ದೇನೆ ಅದರಲ್ಲಿ ಉತ್ತಮ ಫಲಿತಾಂಶ ಕಂಡು ಬಂದಿದೆ ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವವನ್ನು ಬಲಪಡಿಸಲು ನಾವು ಮತ್ತು ಮಾಧ್ಯಮಗಳು ಜನರ ನಡುವೆ ಇದ್ದೇವೆ. ಬಿಜೆಪಿಯ ರ್ಯಾಲಿಗಳಲ್ಲಿ ಜನರು ಇರಲಿಲ್ಲ, ಅವರ ಡೇರೆಗಳು ಖಾಲಿಯಾಗಿರುವುದನ್ನು ನಾವು ನೋಡಿದ್ದೇವೆ. ಅವರ ಪರವಾಗಿ ಏನೂ ಕಂಡುಬಂದಿಲ್ಲ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಎಕ್ಸಿಟ್ ಪೋಲ್‌ಗಳ ಪಾರದರ್ಶಕತೆಯನ್ನು ಪ್ರಶ್ನಿಸಿದ ಅಖಿಲೇಶ್ ಯಾದವ್, ಎಕ್ಸಿಟ್ ಪೋಲ್‌ಗಳನ್ನು ನಡೆಸಿದ ಹಲವು ಏಜೆನ್ಸಿಗಳು ಬಿಜೆಪಿಯ ಬೂತ್ ನಿರ್ವಹಣೆಯ ಕೆಲಸವನ್ನು ಮಾಡಿದೆ. ಮತಗಟ್ಟೆ ಸಮೀಕ್ಷೆ ವೇಳೆ ಬಿಜೆಪಿ ಪರ ಬೂತ್ ಮಟ್ಟದಲ್ಲಿ ಕೆಲಸ ಮಾಡುತ್ತಿರುವವರ ಬಳಿಯೇ ಪ್ರಶ್ನೆ ಕೇಳಿ, ಉತ್ತರ ಪಡೆದು ವರದಿ ಸಿದ್ಧಪಡಿಸಲಾಗಿದೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಬಿಜೆಪಿ ಪ್ರತಿಪಕ್ಷಗಳಿಗೆ ಬೆದರಿಕೆ ಹಾಕಲು ಬಯಸುತ್ತದೆ. ಇದು ಮೊದಲಿನಿಂದಲೂ ಅವರ ರಾಜಕೀಯವಾಗಿದೆ. ಆದರೆ ಈ ಬಾರಿ ಜನರು ಸಿದ್ಧರಾಗಿದ್ದಾರೆ. ನಮ್ಮ ಯುವಕರು ಮತ್ತು ಸಮಾಜದ ಎಲ್ಲಾ ವರ್ಗದವರು ತಾವು ಚಲಾಯಿಸುವ ಮತಗಳನ್ನು ರಕ್ಷಿಸಲು ಸಿದ್ಧರಾಗಿದ್ದಾರೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಮತದಾನದ ದಿನಗಳ ನಂತರ ಚುನಾವಣಾ ಆಯೋಗವು ಮತದಾನದ ಶೇಕಡಾವಾರುಗಳನ್ನು ಪರಿಷ್ಕರಿಸಿದ ಕುರಿತು ಚುನಾವಣಾ ಆಯೋಗವು ಉತ್ತರಿಸಬೇಕು. ಚುನಾವಣಾ ಆಯೋಗವು ಎಲ್ಲಾ ನಿಯಮಗಳನ್ನು ಅನುಸರಿಸುತ್ತದೆ ಎಂದು ನಾನು ಭಾವಿಸುತ್ತೇನೆ. ವಿರೋಧ ಪಕ್ಷಗಳ ಏಜೆಂಟರಿಗೆ ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಚುನಾವಣಾ ಆಯೋಗ ಮಾಡಬೇಕು. ಬಿಜೆಪಿ ದುರ್ಬಲವಾಗಿ ಕಂಡು ಬಂದಾಗ, ಆಡಳಿತ ಪಕ್ಷವಾಗಿರುವುದರಿಂದ ಏಜೆಂಟ್‌ಗಳಿಗೆ ಬೆದರಿಕೆ ಹಾಕಲು ಪ್ರಯತ್ನಿಸುತ್ತಾರೆ. ಇದು ಮತ ಎಣಿಕೆಯನ್ನು ನಿಧಾನಗೊಳಿಸಬಹುದು ಅಥವಾ ರಾತ್ರಿಯಲ್ಲಿ ವಿದ್ಯುತ್ ಕಡಿತಗೊಳಿಸಬಹುದು. ಚುನಾವಣೆಗಳು ಮುಗಿದಿವೆ, ಎಕ್ಸಿಟ್ ಪೋಲ್‌ಗಳು ಅನೇಕ ವಿಷಯಗಳನ್ನು ತೋರಿಸುತ್ತಿವೆ, ಅನೇಕ ವಿಷಯಗಳಿಗೆ ಬಿಜೆಪಿ ಕಾರಣವಾಗಿದೆ, ಅವರು ಶಾಂತಿ ಮತ್ತು ಸಹೋದರತ್ವವನ್ನು ಕದಡಿದರು, ಅವರು ಮೀಸಲಾತಿಯನ್ನು ಕೊನೆಗೊಳಿಸಲು ಸಂಚು ಮಾಡಿದರು, ಅವರು ಮಹಿಳೆಯರ ವಿರುದ್ಧದ ಅಪರಾಧಗಳನ್ನು ಹೆಚ್ಚಿಸಿದರು, ಅವರು ಹಣದುಬ್ಬರ ಮತ್ತು ನಿರುದ್ಯೋಗವನ್ನು ಪ್ರಚೋದಿಸಿದ್ದಾರೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಇದನ್ನು ಓದಿ: ಇಸ್ರೇಲ್ ಪ್ರಜೆಗಳಿಗೆ ಪ್ರವೇಶ ನಿಷೇಧಿಸಿದ ಮಾಲ್ಡೀವ್ಸ್


