ಜರ್ಮನಿಯ ಪುಸ್ತಕ ವ್ಯಾಪಾರ ಮಂಡಳಿಯು ತನ್ನ ಪ್ರತಿಷ್ಠಿತ ಶಾಂತಿ ಬಹುಮಾನವನ್ನು ಭಾರತೀಯ ಅರ್ಥಶಾಸ್ತ್ರಜ್ಞ ಮತ್ತು ತತ್ವಜ್ಞಾನಿ ಅಮರ್ತ್ಯ ಸೇನ್ ಅವರಿಗೆ ನೀಡಿದ್ದಾಗಿ ಬುಧವಾರ ಘೋಷಿಸಿದೆ.
ನೊಬೆಲ್ ಪ್ರಶಸ್ತಿ ವಿಜೇತ ಮತ್ತು 86 ವರ್ಷದ ಹಾರ್ವರ್ಡ್ ಪ್ರಾಧ್ಯಾಪಕ ಅಮರ್ತ್ಯ ಸೇನ್ “ಜಾಗತಿಕ ನ್ಯಾಯದ ದೃಷ್ಟಿಯಿಂದ ದಶಕಗಳ ಕಾಲ ಮಾಡಿದ ಕೆಲಸಕ್ಕಾಗಿ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು” ಎಂದು ಮಂಡಳಿಯು ಹೇಳಿಕೆಯಲ್ಲಿ ತಿಳಿಸಿದೆ.
ಪ್ರಪಂಚದಾದ್ಯಂತದ ಸಾಮಾಜಿಕ ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಅವರ ಕಾರ್ಯವು “ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ” ಎಂದು ಮಂಡಳಿ ಹೇಳಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ಸಾಂಪ್ರದಾಯಿಕವಾಗಿ ಅಕ್ಟೋಬರ್ 18 ರಂದು ಫ್ರಾಂಕ್‌ಫರ್ಟ್ ಪುಸ್ತಕ ಮೇಳದ ಕೊನೆಯಲ್ಲಿ ನಡೆಯುತ್ತದೆ ಮತ್ತು ದೂರದರ್ಶನದಲ್ಲಿ ನೇರ ಪ್ರಸಾರವಾಗುತ್ತದೆ ಎಂದು ತಿಳಿಸಲಾಗಿದೆ.
ಜರ್ಮನ್ ಪುಸ್ತಕ ವ್ಯಾಪಾರದ ಶಾಂತಿ ಪ್ರಶಸ್ತಿಯನ್ನು 1950ರಿಂದ ವಾರ್ಷಿಕವಾಗಿ ನೀಡಲಾಗುತ್ತದೆ. ಇದು 25,000 ಯುರೋಗಳಷ್ಟು (28,000 ಡಾಲರ್) ನಗದು ಬಹುಮಾನವನ್ನು ಒಳಗೊಂಡಿದೆ.
“ಮುಖ್ಯವಾಗಿ ಸಾಹಿತ್ಯ, ವಿಜ್ಞಾನ ಮತ್ತು ಕಲೆ ಕ್ಷೇತ್ರಗಳಲ್ಲಿನ ಅವರ ಚಟುವಟಿಕೆಗಳ ಮೂಲಕ ಶಾಂತಿಯ ಕಲ್ಪನೆಯ ಸಾಕ್ಷಾತ್ಕಾರಕ್ಕೆ ಮಹೋನ್ನತ ಕೊಡುಗೆ ನೀಡಿದ ವ್ಯಕ್ತಿಗಳನ್ನು” ಗೌರವಿಸುವುದು ಇದರ ಉದ್ದೇಶವಾಗಿದೆ.
ಕಳೆದ ವರ್ಷ, ಬ್ರೆಜಿಲ್ ಛಾಯಾಗ್ರಾಹಕ ಸೆಬಾಸ್ಟಿನೊ ಸಾಲ್ಗಾಡೊ ಈ ಬಹುಮಾನವನ್ನು ಪಡೆದಿದ್ದರು.
ಇದನ್ನೂ ಓದಿ: ತಾನೊಂದು ಹೆಣ್ಣಾಗಿದ್ದು ಶಾಪ, ಕಪ್ಪು ಹೆಣ್ಣಾಗಿದ್ದು ಮಹಾಶಾಪ : ಮೇರಿ ಪ್ರಿನ್ಸ್


