ಕೃಷಿ ಮಸೂದೆಗಳನ್ನು ವಿರೋಧಿಸಿ ಅಕಾಲಿ ದಳ ಈಗಾಗಲೇ ಆಡಳಿತಾರೂಢ ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದಿದೆ. ಈಗ ಮತ್ತೊಂದು ಮೈತ್ರಿ ಪಕ್ಷ ಕೃಷಿ ಕಾನೂನುಗಳನ್ನು ರದ್ದುಗೊಳಿಸದಿದ್ದರೆ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟ (ಎನ್‌ಡಿಎ) ತೊರೆಯುವುದಾಗಿ ಲೋಕತಾಂತ್ರಿಕ್ ಪಕ್ಷ ಬೆದರಿಕೆ ಹಾಕಿದೆ.
ದೆಹಲಿ ಚಲೋಗೆ ಕಾರಣವಾಗಿರುವ ವಿವಾದಿತ ಕೃಷಿ ಮಸೂದೆಗಳ ಕುರಿತು ಗೃಹ ಸಚಿವ ಅಮಿತ್ ಶಾ ಅವರನ್ನು ಉದ್ದೇಶಿಸಿ ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷದ ಮುಖ್ಯಸ್ಥ, ರಾಜಸ್ಥಾನ ಸಂಸದ ಹನುಮಾನ್ ಬೆನಿವಾಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಸರಣಿ ಟ್ವೀಟ್‌ಗಳನ್ನು ಮಾಡಿ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಜೊತೆಗೆ, ಪ್ರತಿಭಟನೆಗಳ ಬಗ್ಗೆ ರೈತರೊಂದಿಗೆ ಡಿಸೆಂಬರ್ 3 (ಗುರುವಾರ) ರಂದು ಮಾತುಕತೆ ನಡೆಸುವ ಬದಲು ತಕ್ಷಣವೇ ಮಾತುಕತೆ ನಡೆಸಿ ಎಂದು ಕೇಂದ್ರ ಸರ್ಕಾರಕ್ಕೆ ಹನುಮಾನ್ ಬೆನಿವಾಲ್ ಆಗ್ರಹಿಸಿದ್ದಾರೆ. ಗುರುವಾರ ಮಂತ್ರಿ ಮಂಡಲದ ಜೊತೆಗೆ ಅಮಿತ್ ಶಾ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ.
ಇದನ್ನೂ ಓದಿ: ದೆಹಲಿ ಬಂದ್ ಮಾಡುವುದಾಗಿ ರೈತರ ಎಚ್ಚರಿಕೆ: ತಡರಾತ್ರಿ BJP ಸಭೆ ನಡೆಸಿದ ಅಮಿತ್ ಶಾ
चूंकि @RLPINDIAorg एनडीए का घटक दल है परन्तु आरएलपी की ताकत किसान व जवान है इसलिए अगर इस मामले में त्वरित कार्यवाही नही की गई तो मुझे किसान हित मे एनडीए का सहयोगी दल बने रहने के विषय पर पुनर्विचार करना पड़ेगा !
— HANUMAN BENIWAL (@hanumanbeniwal) November 30, 2020
“ಅಮಿತ್ ಶಾ ಜೀ, ನಡೆಯುತ್ತಿರುವ ರೈತರ ಆಂದೋಲನಕ್ಕೆ ದೇಶದಾದ್ಯಂತ ವ್ಯಕ್ತವಾಗಿರುವ ಬೆಂಬಲವನ್ನ ಗಮನದಲ್ಲಿಟ್ಟುಕೊಂಡು, ಇತ್ತೀಚೆಗೆ ಕೃಷಿಗೆ ಸಂಬಂಧಿಸಿದ ಮೂರು ಮಸೂದೆಗಳನ್ನು ತಕ್ಷಣವೇ ಹಿಂಪಡೆಯಬೇಕು. ಕೇಂದ್ರವು ಸ್ವಾಮಿನಾಥನ್ ಆಯೋಗದ ಎಲ್ಲಾ ಶಿಫಾರಸುಗಳನ್ನು ಜಾರಿಗೆ ತರಬೇಕು ಮತ್ತು ದೆಹಲಿಯಲ್ಲಿ ರೈತರೊಂದಿಗೆ ತಕ್ಷಣ ಸಂವಾದವನ್ನು ನಡೆಸಬೇಕು” ಎಂದು ಬೆನಿವಾಲ್ ಟ್ವೀಟ್ ಮಾಡಿದ್ದಾರೆ.
ಇನ್ನೊಂದು ಟ್ವೀಟ್‌ನಲ್ಲಿ, “ರಾಷ್ಟ್ರೀಯ ಲೋಕತಾಂತ್ರಿಕ್ ಪಾರ್ಟಿ (ಆರ್‌ಎಲ್‌ಪಿ)ಯು ಎನ್ಡಿಎಯ ಘಟಕವಿರಬಹುದು. ಆದರೆ ಇದಕ್ಕೆ ಶಕ್ತಿ ಬಂದಿರುವುದು ರೈತರು ಮತ್ತು ಸೈನಿಕರಿಂದ. ಈ ವಿಚಾರದಲ್ಲಿ ತ್ವರಿತ ಕ್ರಮ ಕೈಗೊಳ್ಳದಿದ್ದರೆ ಇದ್ದಲ್ಲಿ, ನಾವು ರೈತರ ಹಿತದೃಷ್ಟಿಯಿಂದಾಗಿ ಎನ್ಡಿಯ ಜೊತೆಗಿನ ಸಹಭಾಗಿತ್ವದ ಕುರಿತು ಮರುಚಿಂತನೆ ಮಾಡಬೇಕಾಗುತ್ತದೆ” ಎಂದು ಗುಡುಗಿದ್ದಾರೆ.
ಇದನ್ನೂ ಓದಿ: ಪ.ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಗೆ ಬೆಂಬಲ: ಗೂರ್ಖಾ ಜನಮುಕ್ತಿ ಮೋರ್ಚಾ
ಸೆಪ್ಟೆಂಬರ್‌ನಲ್ಲಿ ಕೃಷಿ ಮಸೂದೆಗಳನ್ನು ಅಂಗೀಕರಿಸಿದ ಕಾರಣ ಬಿಜೆಪಿ ತನ್ನ ಹಳೆಯ ಮಿತ್ರ ಪಕ್ಷಗಳಲ್ಲಿ ಒಂದಾದ ಶಿರೋಮಣಿ ಅಕಾಲಿ ದಳವನ್ನು ಕಳೆದುಕೊಂಡಿದೆ. ಇದರ ಬೆನ್ನಲ್ಲೇ ಈಗ ರಾಷ್ಟ್ರೀಯ ಲೋಕತಾಂತ್ರಿಕ್ ಪಾರ್ಟಿಯ ಹನುಮಾನ್ ಬೆನಿವಾಲ್ ಎನ್‌ಡಿಎ ತೊರೆಯುವ ಬೆದರಿಕೆ ಹಾಕಿದ್ದಾರೆ.
ರಾಜಸ್ಥಾನದ 10-15 ಲೋಕಸಭಾ ಸ್ಥಾನಗಳಲ್ಲಿ ಪ್ರಭಾವ ಹೊಂದಿರುವ, ರಾಜಕೀಯವಾಗಿ ಪ್ರಬಲವಾಗಿರುವ ಜಾಟ್ ಸಮುದಾಯದಿಂದ ಆರ್‌ಎಲ್‌ಪಿಗೆ ಭಾರಿ ಬೆಂಬಲವಿದೆ. ಕಳೆದ ರಾಜಸ್ಥಾನ ಚುನಾವಣೆಯಲ್ಲಿ ಪಕ್ಷವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿತ್ತು.
ಬಿಜೆಪಿ ಆಡಳಿತದ ಹರಿಯಾಣ ಸೇರಿದಂತೆ ನೆರೆಯ ರಾಜ್ಯ ಸರ್ಕಾರಗಳು ರೈತರ ವಿರುದ್ಧ ಯಾವುದೇ ದಬ್ಬಾಳಿಕೆಯ ನೀತಿಯನ್ನು ಅಳವಡಿಸಿಕೊಳ್ಳಬಾರದು ಎಂದು ಬೆನಿವಾಲ್ ಹೇಳಿದ್ದರು. ಈ ಹಿಂದೆ, ರಾಜಸ್ಥಾನದ ಲಕ್ಷಾಂತರ ರೈತರೊಂದಿಗೆ ದೆಹಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ಅವರು ಸುಳಿವು ನೀಡಿದ್ದರು.
’ಪೊಲೀಸರು ಮತ್ತು ಸರ್ಕಾರಗಳು ರೈತರ ವಿರುದ್ಧ ದಬ್ಬಾಳಿಕೆಯ ನೀತಿಯನ್ನು ಅಳವಡಿಸಿಕೊಂಡರೆ, ಆರ್‌ಎಲ್‌ಪಿ ರಾಜಸ್ಥಾನ ಸೇರಿದಂತೆ ದೇಶಾದ್ಯಂತ ರೈತರ ಪರವಾಗಿ ರ್‍ಯಾಲಿಗಳನ್ನು ನಡೆಸಲಿದೆ” ಎಂದು ಗುರುವಾರ ಹೇಳಿದ್ದರು.


