ಭಯೋತ್ಪಾದನಾ ವಿರೋಧಿ ಕಾನೂನುಗಳ ದುರ್ಬಳಕೆ ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಾಮೂರ್ತಿ ಜಸ್ಟಿಸ್ ಡಿ.ವೈ. ಚಂದ್ರಚೂಡ್ ಅಭಿಪ್ರಾಯ ಪಟ್ಟಿದ್ದಾರೆ. ಜುಲೈ 12ರಂದು ಇಂಡೋ-ಅಮೇರಿಕನ್ ನ್ಯಾಯಾಧೀಶರ ವರ್ಚುವಲ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, UAPA ಸೇರಿದಂತೆ ಭಯೋತ್ಪಾದನಾ ತಡೆ ಕಾನೂನುಗಳನ್ನು ಭಿನ್ನಮತಗಳ ದಮನಕ್ಕೆ ಮತ್ತು ಪ್ರಜೆಗಳ ಮೇಲಿನ ದೌರ್ಜನ್ಯಕ್ಕೆ ಪ್ರಯೋಗಿಸುವ ಟ್ರೆಂಡ್ ಇತ್ತೀಚೆಗೆ ಬೆಳೆಯುತ್ತಿರುವುದರ ಕುರಿತು ವಿಷಾದ ವ್ಯಕ್ತಪಡಿಸಿದರು.
‘ಸವಾಲಿನ ಕಾಲಘಟ್ಟದಲ್ಲಿ ಮೂಲಭೂತ ಹಕ್ಕುಗಳ ರಕ್ಷಣೆಯಲ್ಲಿ ಸುಪ್ರೀಂ ಕೋರ್ಟ್ ಪಾತ್ರ’ ಎಂಬ ವಿಷಯದ ಕುರಿತು ಮಾತನಾಡುತ್ತ ಯುಎಪಿಎ, ಎನ್‌ಎಸ್‌ಎ ಕುರಿತಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಮೆರಿಕನ್ ಬಾರ್ ಅಸೋಸಿಯೇಷನ್ ಮತ್ತು ಇಂಡಿಯನ್ ಲಾ ಫರ್ಮ್ಸ್‌ಗಳು ಜಂಟಿಯಾಗಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.
ಇದನ್ನೂ ಓದಿ: ಕರಾಳ UAPA, NIA ರದ್ದಾಗಬೇಕು: ಫಾದರ್ ಸ್ಟಾನ್ ಸ್ವಾಮಿ ಶ್ರದ್ಧಾಂಜಲಿ ಸಭೆಯಲ್ಲಿ ಒತ್ತಾಯ
ಭಾರತದ ಜೈಲುಗಳಲ್ಲಿ ಖೈದಿಗಳು ಕೋವಿಡ್ ಸಾಂಕ್ರಾಮಿಕಕ್ಕೆ ತುತ್ತಾಗುವ ಸಮಸ್ಯೆ ಉದ್ಭವವಾಗಿತ್ತು. ಅತ್ಯಂತ ಜನ ನಿಬಿಡವಾದ ಜೈಲಿನ ಸೆಲ್‌ಗಳು ವೈರಸ್ ಹಾಟ್‌ಸ್ಫಾಟ್ ಆಗುವ ಸಾಧ್ಯತೆಯಿತ್ತು. ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ ಜೈಲಿನಲ್ಲಿ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಸಿದೆ. ಜೈಲುಗಳ ಜನ ದಟ್ಟಣೆಯನ್ನು ಕಡಿಮೆ ಮಾಡಿ ಕನಿಷ್ಠ ಅಂತರವನ್ನು ಕಾಪಾಡುವಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯದ ಪಾತ್ರ ದೊಡ್ಡದಿದೆ ಎಂದು ಅವರು ಹೇಳಿದ್ದಾರೆ.
ಮಾನವ ಹಕ್ಕುಗಳ ಹೋರಾಟಗಾರ 84 ವರ್ಷ ವಯಸ್ಸಿನ ಫಾದರ್ ಸ್ಟ್ಯಾನ್ ಸ್ವಾಮಿ ನಿಧನದ ನಂತರ ದೇಶದಲ್ಲಿ ಯುಎಪಿಎ ಕಾಯ್ದೆ ಕುರಿತು ತೀವ್ರ ಟೀಕೆಗಳು ಕೇಳಿಬರುತ್ತಿವೆ. ಈ ಸಂದರ್ಭದಲ್ಲಿ ಜಸ್ಟಿಸ್ ಚಂದ್ರಚೂಡ್ ಅವರ ಹೇಳಿಕೆ ಮಹತ್ವದ ಸ್ಥಾನ ಪಡೆದುಕೊಂಡಿದೆ.
2016-2019ರ ಅವಧಿಯಲ್ಲಿ ಸುಮಾರು 5922 ಜನರ ವಿರುದ್ಧ UAPA ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಅವರಲ್ಲಿ 138 ಜನರು ನಿರ್ದೋಶಿಗಳಾಗಿ ಜೈಲಿನಿಂದ ಹೊರ ಬಂದಿದ್ದಾರೆ ಎಂದು PTI ವರದಿ ಮಾಡಿದೆ.
ಇದನ್ನು ಓದಿ: ಪಾದ್ರಿ ಸ್ಟಾನ್ ಸ್ವಾಮಿ ಸಾವು: ಭಾರತದ ಮುಖ್ಯ ನ್ಯಾಯಾಧೀಶರಿಗೊಂದು ಬಹಿರಂಗ ಪತ್ರ
ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಹಕ್ಕನ್ನು ರಕ್ಷಿಸುವ ಮಹತ್ವದ ಹೊಣೆಗಾರಿಕೆ ದೇಶದ ಅತ್ಯುನ್ನತ ನ್ಯಾಯ ವ್ಯವಸ್ಥೆಯ ಮೇಲಿದ್ದು, ವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ಸುಪ್ರೀಂ ಕೋರ್ಟ್ ಯಾವತ್ತೂ ಬದ್ಧವಾಗಿದೆ ಎಂಬುದನ್ನು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಅರ್ನಬ್ ಗೋಸ್ವಾಮಿ vs ಮಹಾರಾಷ್ಟ್ರ ರಾಜ್ಯ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದ ಅವರು ಒಂದೇ ಒಂದು ದಿನದ ಮಟ್ಟಿಗೆ ಪ್ರಜೆಗಳ ವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಉಲ್ಲಂಘನೆಯಾದರೂ ಅದು ದೊಡ್ಡ ಸಂಗತಿ ಆಗಿದೆ ಎಂದು ಅಭಿಪ್ರಾಯಪಟ್ಟರು.
ನ್ಯಾಯಾಧೀಶರು, ತಾವು ನೀಡುವ ತೀರ್ಪುಗಳು ಸಮಾಜದ ಮೇಲೆ ಗಾಢವಾದ ಪರಿಣಾಮಗಳನ್ನು ಬೀರುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಂಗದ ಪ್ರಕ್ರಿಯೆಗಳನ್ನು ನಡೆಸಬೇಕೆಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಸ್ಟಾನ್ ಸ್ವಾಮಿಯವರನ್ನು ಬಂಧಿಸಿದ್ದ UAPA ಕಾಯ್ದೆ ರದ್ದತಿಗೆ ಸಮಾನ ಮನಸ್ಕರ ವೇದಿಕೆ ಆಗ್ರಹ


