Homeಕರ್ನಾಟಕಕರ್ನಾಟಕದಲ್ಲಿ ನೆರೆಯಿಂದಾದ ಕೃಷಿ ನಷ್ಟ ಎಷ್ಟು?

ಕರ್ನಾಟಕದಲ್ಲಿ ನೆರೆಯಿಂದಾದ ಕೃಷಿ ನಷ್ಟ ಎಷ್ಟು?

- Advertisement -
- Advertisement -

ಈ ಬಾರಿಯ ಮಳೆ ಮತ್ತು ಪ್ರವಾಹಕ್ಕೆ ರಾಜ್ಯದ 2/3 ಜಿಲ್ಲೆ ಮತ್ತು ತಾಲೂಕುಗಳು ಬಲಿಯಾಗಿವೆ. ನೇರವಾಗಿ ಮಳೆ ಬಿದ್ದು ಅದರಿಂದುಂಟಾದ ಪ್ರವಾಹಕ್ಕೆ ತುತ್ತಾದ ತಾಲೂಕುಗಳು ಒಂದೆಡೆಯಾದರೆ, ಅಂಥಾ ಅನಾಹುತಕಾರಿ ಮಳೆ ಇಲ್ಲದೆಯೂ, ಮಲೆನಾಡು ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ಸುರಿದ ನೀರು ಹರಿಯಬಿಟ್ಟ ಕಾರಣ ಉಂಟಾದ ನೆರೆಗೆ ಬಲಿಯಾದ ತಾಲೂಕುಗಳು ಇನ್ನೊಂದೆಡೆ. ರಸ್ತೆ, ಸೇತುವೆ ಮುಂತಾದವುಗಳು ಕೊಚ್ಚಿಹೋದ ಕಾರಣಕ್ಕುಂಟಾದ ಮೂಲ ಸಂರಚನೆಯ ನಷ್ಟ, ಖಾಸಗಿ ಮನೆ ಮಠ, ಪಂಪ್‍ಸೆಟ್ ಇತ್ಯಾದಿಗಳ ನಷ್ಟ ಸಾವಿರಾರು ಕೋಟಿ ರೂಪಾಯಿಗಳು. ಇದಕ್ಕಿಂತಲೂ ಘೋರವೆಂದರೆ ಲಕ್ಷಾಂತರ ಎಕರೆಗಳಲ್ಲಿ ಸಾಗುವಳಿ ಆದ ಬೆಳೆ ನಾಶ. ಪ್ರವಾಹ ಮತ್ತು ಕುಂಭದ್ರೋಣ ಮಳೆಗೆ ತುತ್ತಾದ ಜಿಲ್ಲೆಗಳ ಸಾಗುವಳಿ ಜಮೀನಿನ ಪ್ರಮಾಣ ನೋಡಿ. ಇದರಲ್ಲಿ ಶೇ. 50-70ರಷ್ಟು ಬೆಳೆ ನಾಶವಾಗುವುದು ಖಂಡಿತ. ಕೃಷಿ ವಿಜ್ಞಾನಿಗಳು ಹೇಳಿದ ಹಾಗೆ ಒಂದು ವಾರ ಬಿಡಿ; ಕೇವಲ ಮೂರು ದಿನ ನೀರು ನಿಂತರೆ ಭತ್ತ ಮತ್ತು ಸ್ವಲ್ಪಮಟ್ಟಿಗೆ ರಾಗಿ ಮಾತ್ರ ತಾಳಿಕೊಳ್ಳಬಲ್ಲುದು. ಉಳಿದ ಬೆಳೆಗಳು ಪೋಷಕಾಂಶ ಹೀರಲಾಗದೇ ನಲುಗುತ್ತವೆ. ಅದೇರೀತಿ ಮೋಡ ಮುಸುಕಿದ ವಾತಾವರಣ ವಾರ ಕಾಲ ಇದ್ದರೆ ದ್ಯುತಿ ಸಂಶ್ಲೇಷಣೆ ಮಾಡಲಾಗದೇ ಗಿಡಗಳು ಸೊರಗುತ್ತವೆ. ಈ ಕಾರಣಕ್ಕೇ ಇಳುವರಿ ಶೇ.50-70ರಷ್ಟು ನಷ್ಟವಾಗುತ್ತದೆ.

ಈ ಮಳೆ ಹಾನಿಗೊಳಗಾದ ಭೂಪ್ರದೇಶದಲ್ಲಿ ಮೂರು ವಿಧವಿದೆ.
1. ಮಲೆನಾಡಿನ ವ್ಯಾಪಾರಿ ಬೆಳೆಗಳಾದ ಅಡಿಕೆ, ಕಾಫಿ ಬೆಳೆಯುವ ಪ್ರದೇಶ; ಇಲ್ಲಿ ಕಡುಬೇಸಿಗೆಯಿಂದಲೇ ಕಾಫಿ ಮತ್ತು ಅಡಿಕೆ ನಲುಗಿದ್ದು, ಈಗಿನ ಮಳೆಯಿಂದಾಗಿ ಕೊಳೆರೋಗ ಸಹಿತ ತೀವ್ರ ರೋಗ ಬಾಧೆಗೆ ತುತ್ತಾಗಿ ಬೆಳೆ ನಷ್ಟವಾಗುವ ಸಾಧ್ಯತೆ ದಟ್ಟವಾಗಿದೆ. ಈ ಪ್ರದೇಶದ ಸಾವಿರಾರು ಎಕರೆಗಳಲ್ಲಿ ಬಡ ಸಣ್ಣರೈತರು ಉಣ್ಣುವ ಸಲುವಾಗಿಯೇ ಮಳೆಆಶ್ರಿತ ಭತ್ತ ಬೆಳೆಯುತ್ತಾರೆ. (ಭತ್ತ ಬಿಟ್ಟು ಬೇರೆ ಯಾವ ಧಾನ್ಯವನ್ನೂ ಇವರು ಬೆಳೆಯುವುದಿಲ್ಲ) ಆರಂಭದಲ್ಲಿ ಮಳೆ ಇಲ್ಲದ ಕಾರಣ ಈ ರೈತರ ಭತ್ತದ ನಾಟಿ ಈ ಬಾರಿ ತಡವಾಗಿದೆ. ಈಗ ಭೀಷಣ ಮಳೆಯಿಂದಾಗಿ ಭತ್ತದ ಇಳುವರಿ ಕುಂಠಿತ/ ನಾಶವಾಗಲಿದೆ.

2. ಭೀಕರ ಮಳೆ ಮತ್ತು ಪ್ರವಾಹ ಎರಡಕ್ಕೂ ತುತ್ತಾದ ಪ್ರದೇಶಗಳು: ಬೆಳಗಾವಿ, ಗದಗ, ಭಾಗಶಃ ಶಿವಮೊಗ್ಗ, ಬಾಗಲಕೋಟೆಯಂಥಾ ಪ್ರದೇಶಗಳು ಪ್ರವಾಹ ಮತ್ತು ಹನಿ ಕಡಿಯದ ಮಲೇ ಎರಡರಿಂದಲೂ ಬಾಧೆ ಅನುಭವಿಸಿವೆ. ಇಲ್ಲಿನ ಬೆಳೆಗಳು ನಾನು ಮೇಲೆ ಹೇಳಿದ ಎರಡೂ ಕಾರಣಗಳಿಂದ ನಾಶವಾಗಲಿವೆ.

3. ಮಳೆ ಇಲ್ಲದಿದ್ದರೂ ತುಂಗೆ, ಭೀಮಾ, ಮಲಪ್ರಭ, ಕೃಷ್ಣಾಗಳ ಭರಪೂರ ನೀರಿನ ಪ್ರವಾಹದಿಂದ ನಲುಗಿದ ಜಿಲ್ಲೆಗಳಲ್ಲೂ ಬೆಳೆ ಸಂಪೂರ್ಣ ನಾಶವಾಗುವ ಸಾಧ್ಯತೆ ಇದೆ.

ಸುಮ್ಮನೆ ಲೆಕ್ಕ ಹಾಕಿ, ಈ ಕೃಷಿ ಪ್ರದೇಶ ಕರ್ನಾಟಕದ ಒಟ್ಟಾರೆ ಕೃಷಿ ಪ್ರದೇಶದ ಶೇ..70ರಷ್ಟಿದೆ. ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದ ಹಾಗೆ 40 ಲಕ್ಷ ಹೆಕ್ಟೇರ್ ಜಮೀನು ಬಾಧೆಗೊಳಗಾಗಿದೆ ಎಂದೇ ಇಟ್ಟುಕೊಂಡು; ಹೆಕ್ಟೇರಿಗೆ ಕನಿಷ್ಠ 25 ಸಾವಿರ ನಷ್ಟದಂತೆ ಅಂದಾಜು ಮಾಡಿದರೂ, ಒಟ್ಟಾರೆ ನಷ್ಟ 15 ಸಾವಿರ ಕೋಟಿ ಮೀರಲಿದೆ.

ನೆನಪಿಡಿ. ಇದು ಈ ಮುಂಗಾರು ಬೆಳೆಯ ನಷ್ಟ. ನೆನಪಿಡಬೇಕಾದ್ದು ಈ ಬಾರಿ ಮುಂಗಾರು ಕೈಕೊಟ್ಟ ಕಾರಣ ರೈತರು ಎರಡೆರಡು ಬಾರಿ ಬಿತ್ತನೆ ಮಾಡಿದ್ದಿದೆ. ಮಳೆಯಿಲ್ಲದೇ ಆದ ನಷ್ಟ ಮತ್ತು ಅತಿವೃಷ್ಟಿಯಿಂದಾದ ನಷ್ಟ ಲೆಕ್ಕ ಹಾಕಿದರೆ ತಲೆ ತಿರುಗುತ್ತದೆ.

ಈ ಮಳೆ ಈಗ ಒಮ್ಮೆ ಕಮ್ಮಿ ಆಗಿ ಮತ್ತೆ ಶುರು ಹಚ್ಚಿಕೊಂಡು, ನಾಡಿದ್ದು ಹಿಂಗಾರಿನಲ್ಲಿ ಒಂದೆರಡು ಅಧಿಕ ಮಳೆ ಬಂದರೂ ಹಿಂಗಾರು ಬೆಳೆಯೂ ಕೈಗೆ ದಕ್ಕುವುದು ಕಷ್ಟ. ತೀವ್ರ ನೀರು ನಿಂತಾಗ ಮಣ್ಣಿನ ಜೈವಿಕ ಚಟುವಟಿಕೆ ಬಂದ್ ಆಗಿ ಮಣ್ಣಿನ ಸ್ವರೂಪವೇ ಬದಲಾಗುತ್ತದೆ. ಇದು ಮೊದಲಿನ ಮಟ್ಟಕ್ಕೆ ಬರಲು ಎರಡು ವರ್ಷ ಬೇಕು.

ಮೂರು R – Relief, Rehabilitation and Reconstruction ಎಂಬ ಸೂತ್ರ ಇದೆ. ನಮ್ಮ ಸರ್ಕಾರ ಮೊದಲನೆಯದ್ದನ್ನು ನಿಭಾಯಿಸೀತು. ಎರಡನೆಯದಕ್ಕೆ ಗಮನಾರ್ಹ ಹಣ ಬೇಕು. ಮತ್ತು ಇದನ್ನು ಕಾಲಮಿತಿಯಲ್ಲಿ ಮಾಡಬೇಕು.

ಮೂರನೆಯ- ಪುನರ್ರಚನೆ ಎಂಬುದು ಒಟ್ಟಾರೆ ಕೃಷಿಯನ್ನು ಸುಸ್ಥಿರಗೊಳಿಸಲು ಬೇಕಾದ ದೀರ್ಘಕಾಲೀನ ಮಾರ್ಗೋಪಾಯಗಳ ಬಗ್ಗೆ. ಈ ಕುರಿತಂತೆ ಸರ್ಕಾರದ ಮಿದುಳು ಸಂಪೂರ್ಣ ಖಾಲಿಯಾಗಿರುವುದು ಈಗಾಗಲೇ ಬಂದಿರುವ ನೀತಿ ಪತ್ರಗಳಲ್ಲಿ ಗೋಚರಿಸುವ ಕಾರಣ ಆ ಬಗ್ಗೆ ಹೆಚ್ಚೇನು ನಿರೀಕ್ಷಿಸುವಂತಿಲ್ಲ. ಆದರೆ ಹವಾಮಾನ ಬದಲಾವಣೆ ಈಗ ಮನೆ ಬಾಗಿಲು ತಟ್ಟುತ್ತಿರುವ ಮಾರಿ ಎಂಬುದು ಸರ್ಕಾರಕ್ಕೆ ಗೊತ್ತಾದರೆ ಆಮೂಲಾಗ್ರವಾಗಿ ಹೊಸ ಕಾರ್ಯಸೂಚಿಗೆ ಅದು ತಯಾರಾಗಬೇಕು. ಹವಾಮಾನ ಬದಲಾವಣೆ ಎಂದರೆ ವಯಸ್ಸಾದಂತೆ ಚಳಿಯಾಗುವ ಸಂಗತಿ ಎಂದು ಭಾವಿಸುವ ಪ್ರಧಾನಿ ಇರುವಾಗ ನಮ್ಮ ನಾಯಕರು ಇನ್ನೇನು ಯೋಚಿಸಿಯಾರು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...