Homeಕರ್ನಾಟಕಗಂಗವ್ವಗೆ ಕರುಣೆಯಿಲ್ಲವೋ? ಸರ್ಕಾರಕ್ಕೆ ಕಣ್ಣಿಲ್ಲವೋ?

ಗಂಗವ್ವಗೆ ಕರುಣೆಯಿಲ್ಲವೋ? ಸರ್ಕಾರಕ್ಕೆ ಕಣ್ಣಿಲ್ಲವೋ?

ಯಡಿಯೂರಪ್ಪನವರು ‘ರಾಜಾಹುಲಿ’ ಎಂದು ಭಟ್ಟಂಗಿ ಮತ್ತು ಪೇಯ್ಡ್ ಮಾಧ್ಯಮಗಳಿಂದ ಕರೆಸಿಕೊಂಡ ಒಂದೇ ವಾರಕ್ಕೆ ದೆಹಲಿ ಹೈಕಮಾಂಡ್ ಮುಂದೆ ಇಲಿಯೂ ಅಲ್ಲ ಎಂಬುದು ಸಾಬೀತಾಯಿತು

- Advertisement -
- Advertisement -

ಈ ವರ್ಷ ಜೂನ್, ಜುಲೈಗಳಲ್ಲಿ ವಾಡಿಕೆಯ ಮಳೆಯಾಗಿರಲಿಲ್ಲ. ಕಳೆದ 19 ವರ್ಷಗಳಲ್ಲಿ 13 ವರ್ಷಗಳ ಕಾಲ ರಾಜ್ಯದ ಅರ್ಧಕ್ಕೂ ಹೆಚ್ಚು ತಾಲೂಕುಗಳು ಬರ ಕಂಡಿದ್ದವು. ಅದೇ ಸರಣಿಯ ಇನ್ನೊಂದು ವರ್ಷ ಎಂದಷ್ಟೇ ಅಂದುಕೊಳ್ಳುವ ಹಾಗಿರಲಿಲ್ಲ. ಬಯಲುಸೀಮೆಯಲ್ಲಿ ಅಡಿಕೆ ತೋಟ ಹೊಂದಿರುವ ಗೆಳೆಯನೊಬ್ಬ ಬೆಂಗಳೂರಿನಿಂದ ಊರಿಗೆ ಹೋಗಿ ಬಂದು ಹೇಳಿದ ಮಾತು ಕೇಳಿ ಬೇಸರವಾಗಿತ್ತು. ‘ಪ್ರತೀ ಸಾರಿ ಊರಿಗೆ ಹೋದಾಗಲೂ ಅಪ್ಪ ಮತ್ತು ಅಣ್ಣನ ನಡುವಿನ ಜಗಳ ಇರುತ್ತಿತ್ತು. ಈ ಸಾರಿ ಇರಲಿಲ್ಲ. ಏಕೆಂದರೆ ಅಣ್ಣ ತೋಟ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಅಪ್ಪ ದೂರುವ ಹಾಗಿರಲಿಲ್ಲ. ಅಡಿಕೆ ತೋಟ ಒಣಗಿಹೋಗಿದೆ’. ಇದು ಅಡಿಕೆಯದೊಂದೇ ಪ್ರಶ್ನೆ ಅಲ್ಲ. ಕಳೆದ ವರ್ಷಗಳಲ್ಲಿ ನಮ್ಮ ಮಳೆಯ ನಾಡಾದ ಪಶ್ಚಿಮಘಟ್ಟದಲ್ಲೂ ಮಳೆ ಕಡಿಮೆಯಾಗಿತ್ತು. ಕೊಡಗಿನಲ್ಲಿ ಮಾತ್ರ ಭೀಕರ ಮಳೆಯಾಗಿ ಸಾವು-ನೋವುಗಳು ಆಗಿದ್ದವು. ಅದರ ಜೊತೆಗೆ ಕೇರಳದಲ್ಲೂ ಭಾರೀ ದುರಂತ ಸಂಭವಿಸಿತ್ತು.

ಈ ವರ್ಷ ಮಳೆಯ ಕೊರತೆಯ ಕಾರಣದಿಂದ ಜೂನ್, ಜುಲೈಗಳಲ್ಲಿ ಬಿತ್ತನೆ/ನಾಟಿಯ ಪ್ರಮಾಣವೂ ಕಡಿಮೆಯಾಗಿತ್ತು. ಜೂನ್‍ನಲ್ಲಿ ವಾಡಿಕೆಗಿಂತ ಮೂರನೇ ಒಂದು ಭಾಗದಷ್ಟು ಮಾತ್ರ ಬಿತ್ತನೆಯಾಗಿದ್ದರೆ, ಜುಲೈ ಹೊತ್ತಿಗೆ ಶೇ.45ರಷ್ಟು ಬಿತ್ತನೆಯಾಗಿತ್ತು. ಬಿತ್ತನೆಯಾಗಿದ್ದರಲ್ಲೂ ಬೆಳೆ ಕೈ ಹತ್ತುವ ನಿರೀಕ್ಷೆಯಿರಲಿಲ್ಲ. ಏಕೆಂದರೆ, ಮಳೆ ಬರುವುದಿಲ್ಲ ಎಂಬುದೇ ಮುನ್ಸೂಚನೆಯಾಗಿತ್ತು. ಆದರೆ, ಮಳೆ ಬಂದೇ ಬಿಟ್ಟಿತು. ಎಲ್ಲವೂ ಕೊಚ್ಚಿ ಹೋಗುವಷ್ಟು. ಎಲ್ಲಾ ಕಡೆಯೂ ಮಳೆ ಹೆಚ್ಚಾಗಿಲ್ಲ. ಆದರೆ, ಮಳೆ ಹೆಚ್ಚಾದ ಕಡೆಯಿಂದ ಹರಿದುಬಂದ ನೀರು ಇನ್ನಷ್ಟು ಕಡೆ ನೆರೆ ತಂದಿತು. ಈ ಲೇಖನ ಬರೆಯುತ್ತಿರುವ ಹೊತ್ತಿಗೆ ಮಳೆ ಇಳಿಯುತ್ತಿದೆ ಎಂಬ ಸೂಚನೆಗಳಿವೆ. ಈಗ ನಷ್ಟದ ಅಂದಾಜು ಮಾಡಿ, ಪರಿಹಾರದ ಕಡೆಗೆ ಸಾಗಬೇಕಾದ ಹೊತ್ತು. ಅಂತಹ ಒಂದು ಅಂದಾಜನ್ನು ಈ ಸಾರಿ ಮಾಡಲು ಶುರು ಮಾಡಿದ್ದೇವೆ. 2009ರಲ್ಲಿ ಆದ ನೆರೆಯ ಪರಿಹಾರದ ಸಮೀಕ್ಷೆಯ ಒಂದು ಸಣ್ಣ ತುಣುಕೂ ಪ್ರಕಟಿಸಲಾಗಿದೆ. ಮುಂದಿನ ವಾರಗಳಲ್ಲಿ ನೇರ ಸಮೀಕ್ಷೆಯ ಜೊತೆಗೆ ಪರಿಹಾರದ ಅಗತ್ಯ, ಜನರ ನಿರೀಕ್ಷೆ ಹಾಗೂ ಸರ್ಕಾರದ ಯೋಜನೆಗಳ ಕುರಿತು ವರದಿಗಳಿರುತ್ತವೆ.

ಆದರೆ, ನಾವು ಇಂತಹ ಪರಿಸ್ಥಿತಿಗೆ ಕಾರಣವಾಗಿರುವ ಅಭಿವೃದ್ಧಿಯ ಮಾದರಿಯನ್ನು ಪುನರ್ ಅವಲೋಕಿಸುವ ಕೆಲಸವನ್ನು ನಮ್ಮ ಸರ್ಕಾರಗಳು ಮಾಡುತ್ತವೆಯೇ ಎಂಬುದು ಅತಿ ನಿರೀಕ್ಷೆಯಾಗಿ ತೋರುತ್ತಿವೆ. ಏಕವ್ಯಕ್ತಿಯ ಸರ್ಕಾರ ಜಾರಿಗೆ ಬಂದು ಇಲ್ಲಿಗೆ 2 ವಾರಗಳಾಗಿವೆ. ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ ಬರ ಇತ್ತು. ಬಜೆಟ್‍ಗೆ ಮತ್ತು ಮೂರು ತಿಂಗಳ ಲೇಖಾನುದಾನಕ್ಕೆ ಸದನದ ಒಪ್ಪಿಗೆಗೆ ಚರ್ಚೆಯೂ ಬೇಡ, ಅನುಮತಿ ಕೊಡಿ ಎಂದು ಕೇಳುವಾಗಲೂ ಯಡಿಯೂರಪ್ಪನವರು ಬರದ ಕಾರಣವನ್ನೇ ಮುಂದಿಟ್ಟರು. ನಂತರ ‘ಪ್ರಕೃತಿ ವಿಕೋಪ ಪರಿಹಾರಕ್ಕೆ ಆದ್ಯತೆ’ ಎಂಬ ಜಾಹೀರಾತನ್ನು ಹೊರಡಿಸಿದರು. ಆ ಜಾಹೀರಾತುಗಳು ಎಲ್ಲೆಡೆ ಅಂಟಿಕೊಳ್ಳುವ ಹೊತ್ತಿಗಾಗಲೇ ಪ್ರವಾಹ ಬಂದಾಗಿತ್ತು. ಪ್ರವಾಹದ ಉಸ್ತುವಾರಿಯನ್ನು ಅಧಿಕೃತವಾಗಿ ಮಾಡುವ ಸಚಿವ ಸಂಪುಟವೂ ಇರಲಿಲ್ಲ. ಸಂಪುಟ ರಚನೆಗೆ ದೆಹಲಿ ನಾಯಕರ ಅಪ್ಪಣೆ ಪಡೆದುಕೊಳ್ಳಲು ಸಮಯ ಕೇಳಿ ಹೋಗಿದ್ದ ಯಡಿಯೂರಪ್ಪನವರು, ಯಾವ ಪರಿಹಾರವೂ ಇಲ್ಲದೇ ವಾಪಸ್ ಬಂದರು.

ಪ್ರವಾಹ ಪರಿಹಾರ ಸೂಚಿಸಬಹುದು ಎಂಬ ನಿರೀಕ್ಷೆ ಹುಟ್ಟಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಗೃಹ ಸಚಿವ ಅಮಿತ್‍ಷಾ ಅವರ ಪ್ರವಾಸದ ನಂತರವೂ ದೊಡ್ಡ ನೆರವಿನ ಘೋಷಣೆ ಹೊರಬಿದ್ದಿಲ್ಲ. ಯಡಿಯೂರಪ್ಪನವರು ಇದ್ದುದರಲ್ಲಿ ಪರವಾಗಿಲ್ಲ (ಅದು ಯಾವ ರೀತಿಯಿಂದಲೂ ನಷ್ಟಕ್ಕೆ ಸರಿ ಹೊಂದುವುದಿಲ್ಲವಾದರೂ) ಎನ್ನಬಹುದಾದ ಪರಿಹಾರವನ್ನು ಘೋಷಿಸಿದ್ದಾರೆ.

ಬರದ ಬವಣೆಯ ಆತಂಕದಲ್ಲಿರುವಾಗ ಮೊದಲು ಬಂದ ಸುದ್ದಿ ಮಹಾರಾಷ್ಟ್ರದಲ್ಲಿ ಆದ ಮಳೆಯ ತೀವ್ರತೆಯದ್ದು. ಅದೇ ಹೊತ್ತಿನಲ್ಲಿ ಕೃಷ್ಣಾ ನದಿಯ ಉಪನದಿಯಾದ ಕೊಯ್ನಾ ನದಿಯ ಬಳಿ ಭೂಕಂಪ ಆದ ಸುದ್ದಿಯೂ ಬಂದಿತು. 1967ರಲ್ಲಿ ಅದೇ ಪ್ರದೇಶದಲ್ಲಿ ಆಗಿದ್ದ ಭೂಕಂಪದಿಂದ ಸುಮಾರು 200 ಜನರು ಸತ್ತಿದ್ದರು. ಈ ಸಾರಿಯ ಭೂಕಂಪ ಆ ಪ್ರಮಾಣದ್ದು ಆಗಿರಲಿಲ್ಲ. ಆದರೆ, ಕನ್ನಡದ ಟಿವಿ ಚಾನೆಲ್‍ಗಳು ಹಬ್ಬ ಮಾಡಿಕೊಂಡವು. ಅಣೆಕಟ್ಟುಗಳು ಒಡೆದು ಹೋಗುವ ಹಾಲಿವುಡ್ ಸಿನೆಮಾಗಳ ತುಣುಕುಗಳನ್ನು ಬೆಸೆದು ‘ಆಗೇ ಹೋಗುತ್ತಾ ಪ್ರಳಯ’ದ ರೀತಿ ಟೈಟಲ್ ಕೊಟ್ಟು ಒಂದು ದಿನದ ಟಿಆರ್‍ಪಿ ದಾಹ ತೀರಿಸಿಕೊಂಡವು. ಮಳೆಯ ಅಂದಾಜು ಹವಾಮಾನ ಇಲಾಖೆಗೇ ಇಲ್ಲದಿದ್ದ ಮೇಲೆ ಟಿವಿ ಚಾನೆಲ್‍ಗಳೇನು ಮಾಡಿಯಾವು?

ಮಹಾರಾಷ್ಟ್ರದಿಂದ ಬಂದ ಕೃಷ್ಣೆ ಮತ್ತು ಅದರ ಇತರ ಉಪನದಿಗಳು ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಪ್ರವಾಹವನ್ನು ಹೊತ್ತು ತಂದವು. ಬೆಳಗಾವಿಯಲ್ಲೂ ಸುರಿದ ಮಳೆ ನಗರವಾಸಿಗಳನ್ನೂ ಕಾಡಿತು. ಅಲ್ಲಿನ ಬಡ ನೇಕಾರರ ಕಾಲೋನಿಗಳಂತೂ ಮುಳುಗಿ ಸ್ಥಳಾಂತರವಾಗಬೇಕಾಯಿತು. ಅಲ್ಲಿಂದ ಪಶ್ಚಿಮ ಘಟ್ಟಗಳುದ್ದಕ್ಕೂ ಮಳೆ ಸುರಿಯಲಾರಂಭಿಸಿತು. ರಸ್ತೆ, ಸೇತುವೆಗಳು ಕುಸಿದು ಹಲವು ಭಾಗಗಳೊಂದಿಗೆ ಸಂಪರ್ಕವೇ ಇಲ್ಲದಂತಾಯಿತು. ಈ ಸಾರಿ ತುಂಬಲಾರವು ಎಂದು ಭಾವಿಸಲಾಗಿದ್ದ ಅಣೆಕಟ್ಟುಗಳೆಲ್ಲಾ ತುಂಬಿ, ಅಲ್ಲಿಂದ ಹೊರಬಿದ್ದ ನೀರಿನಿಂದ ನಂಜನಗೂಡು, ಹಂಪಿಯಂತಹ ಪಟ್ಟಣಗಳೂ ಸೇರಿದಂತೆ ಹಲವು ಹಳ್ಳಿಗಳು ಜಲಾವೃತವಾದವು. ಇತ್ತೀಚೆಗೆ ಉಷ್ಣತೆಯಲ್ಲಿ ಬಳ್ಳಾರಿಗೆ ಸೆಡ್ಡು ಹೊಡೆಯುತ್ತಿದ್ದ ಶಿವಮೊಗ್ಗ ನಗರದಲ್ಲಿ ಮಳೆ ಮತ್ತು ತುಂಗಾನದಿಯ ಪ್ರವಾಹದಿಂದ ಊರಿಗೆಲ್ಲಾ ನೀರು ಹರಡಿತು, ಕೆಲವು ಭಾಗಗಳಲ್ಲಿ ಮನೆಗಳು ಜಲಾವೃತವಾದವು. ಕಳೆದ ವರ್ಷವೂ ವರ್ಷಾಧಾರೆಯಿಂದ ನಲುಗಿದ್ದ ಕೊಡಗು ಈ ಸಾರಿಯೂ ದೊಡ್ಡ ಪೆಟ್ಟು ತಿಂದಿತು.

ಆ ನಂತರದ ಭೀಕರ ಸುದ್ದಿಗಳು ಬರತೊಡಗಿದ್ದು ಕೇರಳದಿಂದ. ಇದುವರೆಗಿನ ಸುದ್ದಿಯ ಪ್ರಕಾರ ಹೆಚ್ಚಿನ ಸಾವುಗಳು ಸಂಭವಿಸಿರುವುದು ಕೇರಳದಲ್ಲೇ. ಕಳೆದ ವರ್ಷದ ಪ್ರವಾಹದ ಸಂದರ್ಭದಲ್ಲಿ ಅದನ್ನು ಸಮರ್ಥವಾಗಿ ನಿಭಾಯಿಸಿದ್ದಕ್ಕೆ ಮೆಚ್ಚುಗೆ ಪಡೆದುಕೊಂಡಿದ್ದ ಅಲ್ಲಿನ ಸರ್ಕಾರದ ಪ್ರಯತ್ನದ ಹೊರತಾಗಿಯೂ ಜನರಿಗಾದ ನಷ್ಟವನ್ನು ಸಂಪೂರ್ಣ ಕಟ್ಟಿಕೊಡಲು ಸಾಧ್ಯವಾಗಿರಲಿಲ್ಲ. ಹಾಗಿರುವಾಗ ಈಗ ಇನ್ನೊಂದು ಹೊಡೆತ.

ಇಂತಹ ಸಂದರ್ಭದಲ್ಲಿ ಇದನ್ನೊಂದು ರಾಷ್ಟ್ರೀಯ ಸಮಸ್ಯೆ ಎಂದು ಪರಿಗಣಿಸಿ ಕಾರ್ಯಾಚರಣೆಗಿಳಿಯಬೇಕಿದ್ದ ಕೇಂದ್ರ ಸರ್ಕಾರವು ಕಾಶ್ಮೀರದಲ್ಲಿ ಮುಳುಗಿದೆ. 1947ರಿಂದಲೂ ರಾಷ್ಟ್ರೀಯ ಸಮಸ್ಯೆಯಾಗಿರುವ ಕಾಶ್ಮೀರದ ವಿವಾದವನ್ನು ಬಗೆಹರಿಸುವುದಕ್ಕಿಂತ ಕಗ್ಗಂಟಾಗಿಸುವ ಸಾಧ್ಯತೆಯಿರುವ ಕ್ರಮಕ್ಕೆ ಕೈಹಾಕಿರುವ ಅವರು ಅಲ್ಲಿನ ಯುದ್ಧದಲ್ಲಿ ಗೆಲ್ಲುವ ಉಮೇದಿನಲ್ಲಿದ್ದಾರೆ. ಇಲ್ಲಿ ಪ್ರಕೃತಿಯ ಜೊತೆಗಿನ ಯುದ್ಧದಲ್ಲಿ ಜನರು ಸೆಣಸುತ್ತಿದ್ದಾರೆ. ಆದರೆ, ತಳಮಟ್ಟದಲ್ಲಿ ಅಧಿಕಾರಿಗಳು, ಸರ್ಕಾರೀ ಸಿಬ್ಬಂದಿ, ಎನ್‍ಡಿಆರ್‍ಎಫ್ ಪಡೆ, ಅರೆಸೈನ್ಯ, ಸೈನ್ಯದ ಯೋಧರು ಉತ್ತಮ ಕಾರ್ಯನಿರ್ವಹಿಸುತ್ತಿರುವ ವರ್ತಮಾನಗಳಿವೆ. ಅಲ್ಲಲ್ಲಿ ದೂರುಗಳೂ ಇವೆ. ದೂರದ ಪ್ರದೇಶಗಳಿಗೆ ತಲುಪಿಲ್ಲ, ಬಡವರು-ಶ್ರೀಮಂತರು, ಜಾತಿ-ಧರ್ಮಗಳ ತಾರತಮ್ಯಗಳಿವೆ ಎಂಬುದರ ಕುರಿತು ನಿರ್ದಿಷ್ಟವಾದ ಪ್ರಕರಣಗಳನ್ನು ಉಲ್ಲೇಖಿಸಿ ದೂರುಗಳು ‘ನ್ಯಾಯಪಥ’ ಪತ್ರಿಕಾ ತಂಡಕ್ಕೂ ಬಂದಿವೆ. ಈ ಹೊತ್ತಿನಲ್ಲಿ ಸಾಧ್ಯವಿದ್ದೆಡೆ ಸರ್ಕಾರೀ ಯಂತ್ರಾಂಗಕ್ಕೂ – ಸಂತ್ರಸ್ತರಿಗೂ ಸಂಬಂಧ ಕಲ್ಪಿಸುವುದೇ ಆದ್ಯತೆಯಾಗಬೇಕು ಎಂಬ ಕಾರಣಕ್ಕೆ ಅವನ್ನು ಇಲ್ಲಿ ವಿಸ್ತಾರಗೊಳಿಸುತ್ತಿಲ್ಲ.

ಇದರಾಚೆಗೆ ಜಾತಿ, ಮತಧರ್ಮಗಳನ್ನು ಮೀರಿ ಸಾಮಾನ್ಯ ಜನರು ಎಲ್ಲೆಡೆ ಸ್ಪಂದಿಸಿದ್ದಾರೆ. ತಾವೇ ಸ್ವಯಂಪ್ರೇರಿತರಾಗಿ ಹಣ, ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಸರ್ಕಾರದ ಮೂಲಕ ಅಥವಾ ನೇರವಾಗಿ ಹೋಗಿ ತಲುಪಿಸುವ ಕೆಲಸವನ್ನು ಸಂಘಸಂಸ್ಥೆಗಳು ಮಾಡುತ್ತಲಿವೆ. ಧಾರ್ಮಿಕ ಧ್ರುವೀಕರಣ ಇರುವ ಜಿಲ್ಲೆಗಳಲ್ಲೂ ಮಸೀದಿ-ಮಂದಿರಗಳು ಎಲ್ಲರಿಗೂ ಆಶ್ರಯವನ್ನು ನೀಡಿವೆ, ಅನ್ನ ನೀಡಿವೆ. ಉಳ್ಳವರಿಗಾಗೇ ಹೋಂಸ್ಟೇಗಳನ್ನು ತೆರೆದಿರುವ ಕೆಲವರು ತಮ್ಮಲ್ಲಿ ಬಂದು ಇರಬಹುದು ಎಂದು ಬಡವರಿಗೂ ಬಾಗಿಲು ತೆರೆದಿದ್ದಾರೆ. ಆದರೆ, ಟಿವಿ ಚಾನೆಲ್‍ಗಳಿಗೆ ಜನರ ಬವಣೆಗಿಂತ ಮುಳುಗಿದ ದೇವಸ್ಥಾನ, ಮಸೀದಿ, ಚರ್ಚ್‍ಗಳು ಹೆಚ್ಚಿನ ಆದ್ಯತೆಗಳಾಗಿದ್ದವು.

ಯಡಿಯೂರಪ್ಪನವರು ‘ರಾಜಾಹುಲಿ’ ಎಂದು ಭಟ್ಟಂಗಿ ಮತ್ತು ಪೇಯ್ಡ್ ಮಾಧ್ಯಮಗಳಿಂದ ಕರೆಸಿಕೊಂಡ ಒಂದೇ ವಾರಕ್ಕೆ ದೆಹಲಿ ಹೈಕಮಾಂಡ್ ಮುಂದೆ ಇಲಿಯೂ ಅಲ್ಲ ಎಂಬುದು ಸಾಬೀತಾಯಿತು. ಮಂತ್ರಿಗಳನ್ನು ಕಳಿಸಿ ಉಸ್ತುವಾರಿ ಮಾಡಿಸುವ ಸಾಧ್ಯತೆಯೂ ಇಲ್ಲ. ಸಚಿವಸಂಪುಟ ರಚನೆಯಾಗಿದ್ದರೆ, ಬಹುಶಃ ಮಂತ್ರಿಯಾಗಿರುತ್ತಿದ್ದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಗೇಣುದ್ದ ನೀರಿದ್ದ ಜಾಗದಲ್ಲಿ ತೆಪ್ಪಕ್ಕೆ ಹುಟ್ಟು ಹಾಕಿ ಜೋಕರ್ ಆದರು. ವಾಸ್ತವದಲ್ಲಿ ಊರೂರು ಸುತ್ತಿ ಜನರಿಗೆ ಸಾಂತ್ವನ ಹೇಳಿಬಂದಿದ್ದ ಅವರು ಪತ್ರಕರ್ತರೊಬ್ಬರ ಚಿತಾವಣೆ ಮೇರೆಗೆ ಇದನ್ನು ಮಾಡಿ ಹಾಸ್ಯಾಸ್ಪದರಾದರು ಎಂಬ ಸುದ್ದಿಯೂ ಇದೆ. ಅದೇನೇ ಇದ್ದರೂ ಬಿಜೆಪಿ ಶಾಸಕರು ವಿಶೇಷ ಉಮೇದಿನಲ್ಲಿ ಕಾರ್ಯಪ್ರವೃತ್ತರಾದ ವರ್ತಮಾನಗಳೇನೂ ಕೇಳಿಬಂದಿಲ್ಲ. ಸಚಿವ ಸಂಪುಟದ ಕೊರತೆ ಬಿಜೆಪಿಯ ನಾಯಕರಿಗೆ ಮುಖ್ಯವೆನಿಸಿದೆಯೋ ಇಲ್ಲವೋ ಗೊತ್ತಿಲ್ಲ. ಸಚಿವರಾಗುವುದೇ ಆದ್ಯತೆ ಎಂದು ಭಾವಿಸಿರಬಹುದಾದ ಶಾಸಕರು ಆ ಕಡೆಗೆ ಗಮನ ಕೊಟ್ಟಿರುವ ಸಾಧ್ಯತೆಗಳೂ ಇರುತ್ತವೆ.

ಒಂದು ವಿಕೋಪ ಸಂಭವಿಸಿದಾಗಲೂ ಸರಿಯಾಗಿ ನಿಭಾಯಿಸಲಾಗದ ಸರ್ಕಾರಗಳು (ಈ ವಿಚಾರದಲ್ಲಿ ಕೇರಳದ ಸಿಪಿಎಂ, ಒರಿಸ್ಸಾದ ಬಿಜೆಡಿಗಳು ಇತ್ತೀಚಿನ ಅಪವಾದಗಳು) ಪಕ್ಷಾತೀತವಾಗಿ ಇರುವ ಹೊತ್ತಿನಲ್ಲಿ ಇನ್ನೂ ದೊಡ್ಡ ಪ್ರಶ್ನೆಗಳನ್ನು ಕೇಳುವುದು ಅಸಂಗತ ಎಂದು ಸುಮ್ಮನಿರಲಾಗದು. ವಾತಾವರಣದಲ್ಲಿ ಏರುಪೇರು ಎಂದಿನಿಂದಲೂ ಇದ್ದೇ ಇದೆ. ಆದರೆ, ದೀರ್ಘ ಬರ ಮತ್ತು ಆಗಿಂದಾಗ್ಗೆ ಬರುತ್ತಲೇ ಇರುವ ಪ್ರವಾಹಗಳು ಪ್ರಕೃತಿ ಸಹಜವಷ್ಟೇ ಅಲ್ಲ. ಇದು ಮಾನವ ನಿರ್ಮಿತವಾದದ್ದು ಎಂದು ತಜ್ಞರು ಎಚ್ಚರಿಸುತ್ತಲೇ ಇದ್ದಾರೆ.
ಇದು ಭಾರತದ ಸಮಸ್ಯೆ ಮಾತ್ರವಲ್ಲ. ಜಗತ್ತಿನೆಲ್ಲೆಡೆ ಕಾರ್ಪೊರೇಟ್ ಜಗತ್ತಿನ ಮಿತಿಮೀರಿದ ಲಾಭದಾಸೆ ಮತ್ತು ಅದು ಬೆಳೆಸುತ್ತಿರುವ ಉಪಭೋಗಿ ಸಂಸ್ಕೃತಿ ತರುತ್ತಿರುವ ಅಪಾಯವಾಗಿದೆ. ಈಗಿನಿಂದ ಆರಂಭಿಸಿದರೂ ಅದನ್ನು ಸರಿಪಡಿಸಲು ಹಲವು ದಶಕಗಳೇ ಬೇಕು; ಕೆಲವು ಸಮಸ್ಯೆಗಳನ್ನು ಸರಿಪಡಿಸಲು ಶತಮಾನಗಳೇ ಬೇಕು. ಹಾಗಿದ್ದರೂ ಇನ್ನಷ್ಟು ಹಾಳುಗೆಡಹುವ ನೀತಿಗಳೇ ನಾಗಾಲೋಟದಲ್ಲಿ ಸಾಗುತ್ತಿವೆ.

ತನ್ನ ಸಿದ್ಧಾಂತದಲ್ಲಿ ನ್ಯೂಟ್ರಲ್ ಆಗಿರದ, ಆದರೆ ಪರಿಸರವೇ ತನ್ನ ಪ್ರಧಾನ ಕಾಳಜಿ ಮಾಡಿಕೊಂಡು ಕೆಲಸ ಮಾಡುತ್ತಿರುವ ಹಿರಿಯರೊಬ್ಬರು ಒಂದು ಮಾತನ್ನು ಹೇಳಿದ್ದರು. ಅದು ಬಹುಶಃ ಎಲ್ಲರನ್ನೂ ಎಚ್ಚರಿಸಬೇಕಿದೆ. ‘ನಾನು ಎಲ್ಲರಲ್ಲೂ ಕೇಳಬಯಸುತ್ತೇನೆ. ನೀವು ಹಿಂದೂ ರಾಷ್ಟ್ರ ಕಟ್ಟಬೇಕೆಂದಿದ್ದೀರಲ್ಲವೇ? ಇನ್ನು ನೀವು, ಇನ್ನಷ್ಟು ಮಾನವೀಯವಾದ, ಎಲ್ಲರಿಗೂ ಸಮಾನತೆ ಖಾತರಿಯಿರುವ ಸಮಾಜ ಕಟ್ಟಬೇಕೆಂದಿದ್ದೀರಲ್ಲವೇ? ನೀವು ಅದನ್ನು ಕಟ್ಟಿ ನಿಲ್ಲಿಸುವ ಹೊತ್ತಿಗೆ ಈ ಭೂಮಿ ಉಳಿದಿರಬೇಕೋ ಬೇಡವೋ? ಅದಕ್ಕಾಗಿ ಮೊದಲು ಭೂಮಿ ಉಳಿಸಲು ಪಣ ತೊಡಿ. ಇಲ್ಲವಾದರೆ ಅಂತಹ ರಾಷ್ಟ್ರ, ಸಮಾಜದ ನಿರ್ಮಾಣವಾಗುವ ಹೊತ್ತಿಗೆ ಅವ್ಯಾವುದಕ್ಕೂ ಅರ್ಥವಿಲ್ಲದ ರೀತಿಯಲ್ಲಿ ನಾವು ಹುಳುಗಳಾಗಿರುತ್ತೇವೆ’

ಕೋಲಾರ-ಚಿಕ್ಕಬಳ್ಳಾಪುರಗಳ ದುರ್ಗತಿ

ರಾಜ್ಯದ ಹಲವೆಡೆ ವಿಪರೀತ ಮಳೆ ಅಥವಾ ನದಿ ಪ್ರವಾಹದಿಂದ ಜನರು ಕಂಗೆಟ್ಟಿದ್ದರೆ ಕೋಲಾರ ಚಿಕ್ಕಬಳ್ಳಾಪುರದ ಸ್ಥಿತಿ ಮಾತ್ರ ಭಿನ್ನ. ಅಲ್ಲಿ ಈ ವರ್ಷವೂ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಎತ್ತಿನಹೊಳೆಯಿಂದ ನೀರು ಬರುತ್ತದೆ ಎಂದು ರಾಜಕಾರಣಿಗಳು ಕೊಟ್ಟ ಭರವಸೆಯೂ ಇಂಗಿ ಹೋಗಿದೆ. ಬೆಂಗಳೂರಿನ ಕೊಳಚೆ ನೀರನ್ನು ಕೊಟ್ಟಿದ್ದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವವರು ಕೆರೆಗೆ ಬಿಡಲು ಯೋಗ್ಯವೆನಿಸುವಷ್ಟೂ ಶುದ್ಧೀಕರಣ ಮಾಡುತ್ತಿಲ್ಲ ಎಂಬುದಕ್ಕೆ ಮಾತ್ರ ಗಮನ ಕೊಡುತ್ತಿಲ್ಲ. ಬೆಂಗಳೂರು ಕಟ್ಟಲು ಮರಳು ಕೊಟ್ಟು ನದಿ, ಹಳ್ಳಗಳನ್ನು ಒಣಗಿಸಿಕೊಂಡರು; ಹೂವು, ಹಣ್ಣು, ತರಕಾರಿ ಬೆಳೆದುಕೊಡಲು ಅಂತರ್ಜಲ ಬರಿದಾಗಿಸಿಕೊಂಡರು. ಈಗ ಕುಡಿಯುವ ನೀರಿಗೂ ತತ್ವಾರ. ಚಿಕ್ಕಬಳ್ಳಾಪುರ ಜಿಲ್ಲೆಯ 355 ಹಳ್ಳಿಗಳಿಗೆ ಪ್ರತಿದಿನ ಟ್ಯಾಂಕರ್ ಮತ್ತು ಖಾಸಗಿ ಕೊಳವೆಬಾವಿಗಳಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ. 1603 ಕೆರೆಗಳ ಪೈಕಿ 1541 ಕೆರೆಗಳು ಸಂಪೂರ್ಣ ಖಾಲಿಯಿವೆ. ಉಳಿದ 62ರಲ್ಲೂ ಶೇ.25ರಷ್ಟು ನೀರಿದೆಯಷ್ಟೇ.
ಅದೇನು ನಷ್ಟವಾಗುತ್ತೋ ಆಗಲಿ, ನಮಗೂ ಒಮ್ಮೆ ಪ್ರವಾಹ ಬರಲಿ ಎಂಬುದು ಈ ಜಿಲ್ಲೆಗಳ ಜನರ ಬಾಯಲ್ಲಿ ಬರುತ್ತಿರುವ ಮಾತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬಹುತೇಕ ವಾರ್ತಾ ಮಾಧ್ಯಮಗಳು ಹಣ ಪಡೆದೆ ಸುದ್ದಿಗಳನ್ನು ಕೃತಕವಾಗಿ ಸೃಜಿಸಿ ಪ್ರಸಾರ ಮಾಡುತ್ತೀವೆ, ಸರ್ಕಾರಿ ಸಾಮ್ಯದ ಮಾದ್ಯಮಗಳನ್ನು ಹೂರತುಪಡಿಸಿ ಮತ್ಯಾರೂ ನಮ್ಮ ಕಾರ್ಯಕ್ರಮಗಳು ಸಾಚವೆಂದು ಭೀಗುವಂತಿಲ್ಲಾ.

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...