Homeಅಂಕಣಗಳು‘ಭಾರತ’ವು ಕಾಶ್ಮೀರವನ್ನು ಗೆದ್ದುಕೊಂಡು, ಕಾಶ್ಮೀರಿಗಳನ್ನು ಕಳೆದುಕೊಂಡಿತೇ?

‘ಭಾರತ’ವು ಕಾಶ್ಮೀರವನ್ನು ಗೆದ್ದುಕೊಂಡು, ಕಾಶ್ಮೀರಿಗಳನ್ನು ಕಳೆದುಕೊಂಡಿತೇ?

ಚಿಟಿಕೆ ಹೊಡೆಯುವುದರೊಳಗೆ ರಾಜ್ಯ ಸರ್ಕಾರಗಳನ್ನು ಕೇಂದ್ರಾಡಳಿತ ಪ್ರದೇಶ ಮಾಡಬಲ್ಲೆವು ಎಂಬ ಧಮಕಿಯ ರವಾನೆಯಿದು. ಇಂದು ಕಾಶ್ಮೀರಕ್ಕೆ ಒದಗಿದ ಗತಿ ನಾಳೆ ದ್ರಾವಿಡ ರಾಜಕಾರಣದ ಭದ್ರಕೋಟೆಯಾಗಿರುವ ತಮಿಳುನಾಡಿಗೆ ಇಲ್ಲವೇ ಎಡಪಂಥೀಯ ರಾಜಕಾರಣದ ಕೇರಳಕ್ಕೆ ಒದಗುವುದಿಲ್ಲ ಎಂಬ ಖಾತ್ರಿಯನ್ನು ಯಾರು ಕೊಡಬಲ್ಲರು?

- Advertisement -
- Advertisement -

ಕೇಂದ್ರ ಸರ್ಕಾರದ ಈ ಹಠಾತ್ ನಡೆಯ ಹಿಂದೆ ಸಂಘಪರಿವಾರದ ಹಳೆಯ ಕಾರ್ಯಸೂಚಿಯನ್ನು ಈಡೇರಿಸುವ ಉದ್ದೇಶದ ಜೊತೆಜೊತೆಗೆ ಪಾಕಿಸ್ತಾನ-ಭಾರತ-ಆಫ್ಘಾನಿಸ್ತಾನ ಭೂಪ್ರದೇಶದ ರಾಜಕಾರಣವೂ ತಳುಕು ಹಾಕಿಕೊಂಡಿದೆ. ಕಾಶ್ಮೀರದ ಈ ಬೆಳವಣಿಗೆ ಆ ಸೀಮೆಗಷ್ಟೇ ಸೀಮಿತವಲ್ಲ ಎಂಬುದನ್ನು ದೇಶದ ಉದ್ದಗಲಕ್ಕೆ ಪ್ರಕಟವಾಗಿರುವ ಸಂಭ್ರಮಗಳು ಮತ್ತು ಖಂಡನೆಗಳು ತೋರಿಸಿಕೊಟ್ಟಿವೆ. ಮೋದಿ-ಶಾ ಜೋಡಿ ಕಾಶ್ಮೀರವನ್ನು ಗೆದ್ದುಕೊಂಡಿದೆ. ಕಾಶ್ಮೀರಿಗಳನ್ನು ಕಳೆದುಕೊಂಡಿದೆ. ಕಾಶ್ಮೀರಕ್ಕೆ ಒದಗಿರುವ ದುರ್ಗತಿ ಇತರೆ ರಾಜ್ಯಗಳ ಕದ ಬಡಿಯದಿರಲಿ.

ಕಾಶ್ಮೀರ ಕಣಿವೆಯನ್ನು ಕದಗಳ ಹಿಂದೆ ಕೂಡಿ ಹಾಕಿ ಬೀಗ ಜಡಿದು, ಕಣ್ಣು ಕಟ್ಟಿ, ಕಿವಿ- ಬಾಯಿಗಳಿಗೆ ಬಿರಟೆ ಬಡಿದು ಅದರ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರವು ‘ಕಾಯಿದೆ ಬದ್ಧವಾಗಿ’ ಅಪಹರಿಸಿದೆ. ಮುಸ್ಲಿಂ ಬಹುಸಂಖ್ಯಾತ ರಾಜ್ಯವನ್ನು ಪಳಗಿಸಿ ಮೂಗುದಾರ ತೊಡಿಸಿ ಹಿಂದು-ಹಿಂದಿ-ಹಿಂದುಸ್ತಾನದ ನೊಗಕ್ಕೆ ಬಿಗಿಯುವ ಸಂಘಪರಿವಾರದ ಏಳು ದಶಕಗಳ ಯೋಜನೆಯನ್ನು ಮೋದಿ-ಶಾ ಜೋಡಿ ಈಡೇರಿಸಿಕೊಟ್ಟಿದೆ.

ಸೋತು ಸುಣ್ಣವಾಗಿ ದಿಕ್ಕೆಟ್ಟು ಹಾಸಿಗೆ ಹಿಡಿದು ನೈತಿಕವಾಗಿ ದಿವಾಳಿಯೆದ್ದು ಹೋಗಿರುವ ವಿರೋಧ ಪಕ್ಷಗಳು ಮೋದಿ-ಶಾ ಜೋಡಿಯ ಹಿಂದುತ್ವದ ಬಹುಸಂಖ್ಯಾತ ರಾಷ್ಟ್ರವಾದದ ತೋಳ್ಬಲದ ಮುಂದೆ ರಣಹೇಡಿಗಳಂತೆ ನಡೆದುಕೊಂಡಿವೆ. ಬೆನ್ನುಮೂಳೆಯನ್ನು ಬಿಜೆಪಿಗೆ ಮಾರಿಕೊಂಡಿವೆ.

ಬಿಜೆಪಿ ನೇತೃತ್ವದ ಎನ್.ಡಿ.ಎ.ಗೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲ. ಬರಬೇಕಿದ್ದರೆ ಇನ್ನೂ ಒಂದು ವರ್ಷ ಕಾಯಬೇಕು. ಆದರೂ ಬೆದರಿಕೆ, ಆಮಿಷದ ಅಡ್ಡದಾರಿ ಹಿಡಿದು ಪ್ರತಿಪಕ್ಷಗಳನ್ನು ಪಳಗಿಸಿ ವಿವಾದಿತ ಮಸೂದೆಗಳನ್ನು ಮೋದಿ ಸರ್ಕಾರವು ಪಾಸು ಮಾಡಿಸಿಕೊಂಡಿದೆ.

ಮಾಹಿತಿ ಹಕ್ಕು ಆಯೋಗಗಳ ಹಲ್ಲು ಉಗುರುಗಳನ್ನು ಕಿತ್ತು, ಯಾವುದೇ ವ್ಯಕ್ತಿಯನ್ನು ಭಯೋತ್ಪಾದಕನೆಂದು ಬಂಧಿಸುವ ತಿದ್ದುಪಡಿಗಳು ಮತ್ತು ತ್ರಿವಳಿ ತಲಾಖ್ ಶಿಕ್ಷಾರ್ಹ ಅಪರಾಧವೆಂಬ ಮಸೂದೆಯ ನಂತರ ಇದೀಗ ಜಮ್ಮು-ಕಾಶ್ಮೀರವನ್ನು ಹರಿದು ಹಾಕಿದ ಕ್ರಮಕ್ಕೆ ಸದನದ ಒಪ್ಪಿಗೆ ಪಡೆದ ವೈಖರಿ ಸಂಸದೀಯ ಜನತಂತ್ರದ ಇತಿಹಾಸದ ಕರಾಳ ಅಧ್ಯಾಯಗಳ ಸಾಲಿಗೆ ಸೇರಲಿದೆ. ಮುಂಬರುವ ದಿನಗಳಲ್ಲಿ ಕಾನೂನು ಮತ್ತು ರಾಜಕೀಯ ಸಾಧಕಬಾಧಕಗಳನ್ನೂ ಎದುರಿಸಲಿದೆ.

ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ನಡೆಗಿಂತ, ಅದನ್ನು ಆಗುಮಾಡಿದ ವಿಧಾನ ಬಲು ಅಪಾಯಕಾರಿ. ಭವಿಷ್ಯದ ದಿನಗಳ ಆಗುಹೋಗುಗಳ ಕುರಿತು ಭೀತಿಯನ್ನು ಬಿತ್ತುವ ಕೃತ್ಯ. ಚರ್ಚೆ-ಸಮಾಲೋಚನೆ-ಒಮ್ಮತಕ್ಕೆ ಪ್ರಯತ್ನಿಸಿ ತೆಗೆದುಕೊಳ್ಳಬೇಕಿದ್ದ ಮಹತ್ವದ ನಿರ್ಧಾರವಿದು. ಸಂಬಂಧಪಟ್ಟ ಜನಸಮುದಾಯಗಳನ್ನು ಕೂಡಿಹಾಕಿ, ಆ ಸಮುದಾಯಗಳ ಮುಖ್ಯಧಾರೆಯ ರಾಜಕಾರಣಿಗಳನ್ನು ಬಂಧನದಲ್ಲಿರಿಸಿ, ಅತ್ಯಂತ ಗೋಪ್ಯವಾಗಿಟ್ಟು, ಮುಚ್ಚುಮರೆ ಮಾಡಿ, ಸದ್ದಿಲ್ಲದೆ ಹೊಂಚುಹಾಕಿ, ಎರಗಿ ಮಿಕವನ್ನು ಉರುಳಿಸುವ ಬೇಟೆ ಆಗಬಾರದಿತ್ತು.

ಸ್ವಾತಂತ್ರ್ಯ ಬಂದ ಹೊತ್ತಿನಲ್ಲಿ ಮುಸ್ಲಿಂ ಪಾಕಿಸ್ತಾನವನ್ನು ತಿರಸ್ಕರಿಸಿ, ಹಿಂದೂ ಭಾರತವನ್ನು ಒಪ್ಪಿಕೊಂಡವರನ್ನು, ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದು ಅಂಗೀಕರಿಸಿದವರನ್ನು ಇನ್ನಷ್ಟು ಘನತೆಯಿಂದ ನಡೆಸಿಕೊಳ್ಳುವ ಅಗತ್ಯವಿತ್ತು. ಕಾಶ್ಮೀರಿ ಬ್ರಾಹ್ಮಣರನ್ನು ತಮ್ಮ ನೆಲದಲ್ಲೇ ತಬ್ಬಲಿಗಳನ್ನಾಗಿಸಿದ ಪಾಕ್ ಪ್ರಚೋದಿತ ತೀವ್ರವಾದವನ್ನು ಮಟ್ಟ ಹಾಕಬೇಕೆಂಬ ಕುರಿತು ಎರಡು ಮಾತಿಲ್ಲ. ಆದರೆ ವಿಶೇಷ ಸ್ಥಾನಮಾನ ರದ್ದು ಮಾಡಿ, ರಾಜ್ಯದ ಸ್ಥಾನಮಾನವನ್ನೂ ಕಿತ್ತುಕೊಂಡು, ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿದ್ದು ಗಾಯದ ಮೇಲೆ ಎಳೆದ ಬರೆ. ಜಮ್ಮು ಕಾಶ್ಮೀರದ ಮತ್ತು ದೇಶದ ಭದ್ರತೆಗೆ ಈ ಕ್ರಮಗಳು ಅತ್ಯಗತ್ಯ ಎಂದೆನಿಸಿದ್ದಲ್ಲಿ ಅವುಗಳನ್ನು ಕಾರ್ಯರೂಪಕ್ಕೆ ಇಳಿಸುವ ವಿಧಾನ ಬೇರೆಯೇ ಇರಬೇಕಿತ್ತು.

ತಮ್ಮ ಅಸ್ಮಿತೆ ಮತ್ತು ಸಂಸ್ಕೃತಿಯ ಮೇಲೆ ಹೊರಗಿನವರ ದಾಳಿ ನಡೆದೀತೆಂಬ ಆತಂಕ ಕಾಶ್ಮೀರಿಗಳಿಗೆ ಎದುರಾಗಿದೆ. ಜನಸಂಖ್ಯಾ ಸ್ವರೂಪವೂ ಬದಲಾಗಿ ತಮ್ಮ ಬಹುಸಂಖ್ಯೆಯೂ ಕರಗೀತೆಂಬ ಅಭದ್ರತೆ ಕಾಡಿದೆ. ಸದ್ಯದಲ್ಲಿಯೇ ನಡೆಯುವ ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರ ಮರುವಿಂಗಡಣೆ ಕಾರ್ಯದಲ್ಲಿ ಹಿಂದೂಬಾಹುಳ್ಯದ ಜಮ್ಮು ಮತ್ತು ಮುಸ್ಲಿಂ ಬಾಹುಳ್ಯದ ಕಾಶ್ಮೀರದ ಜನಪ್ರತಿನಿಧಿಗಳ ಸಂಖ್ಯೆಯೂ ಏರುಪೇರಾಗಲಿದೆ. ಈಗಾಗಲೆ ಹಿಂದುಸ್ತಾನದ ಶಂಕೆ, ಸಂದೇಹಗಳಿಗೆ ಸಿಕ್ಕಿ ದೂರವಾಗಿದ್ದ ಕಾಶ್ಮೀರಿಗಳನ್ನು ಕೇಂದ್ರದ ಇತ್ತೀಚಿನ ನಡೆಯು ಮತ್ತಷ್ಟು ದೂರ ತಳ್ಳಲಿದೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಂತಹ ಆತಂಕಗಳನ್ನು ಮುಂದಾಗಿಯೇ ನಿವಾರಿಸಬಹುದಾಗಿದ್ದ ಅವಕಾಶವನ್ನು ಮೋದಿ ಸರ್ಕಾರ ಪ್ರಜ್ಞಾಪೂರ್ವಕವಾಗಿಯೇ ನಿರಾಕರಿಸುವುದು ನಿಚ್ಚಳ.

ಕಾಶ್ಮೀರವನ್ನು ಹಿಂದುಸ್ತಾನದ ಮುಖ್ಯಧಾರೆಗೆ ಬೆಸೆದು, ಅಲ್ಲಿನ ಜನರ ಆಶೋತ್ತರಗಳಿಗೆ ಸ್ಪಂದಿಸಿ, ಅಭಿವೃದ್ಧಿಯ ಅವಕಾಶಗಳನ್ನು ತೆರೆಯುವುದೇ ಸರ್ಕಾರದ ನಿಜ ಇರಾದೆ ಎಂದು ಗೃಹಮಂತ್ರಿ ಅಮಿತ್ ಶಾ ಹೇಳಿದ್ದಾರೆ. ಅವರು ನುಡಿದಂತೆ ನಡೆಯಬೇಕು. ಇಲ್ಲಿಗೇ ಕಾಶ್ಮೀರದಿಂದ ಕೈತೊಳೆದುಕೊಂಡು ಕತ್ತಲಲ್ಲಿ ಕೈಬಿಡುವುದು ಕ್ರೌರ್ಯವಾದೀತು. ಅಪಾಯಕ್ಕೆ ಅಶಾಂತಿಗೆ ಆಹ್ವಾನವೂ ಆದೀತು.

ಕಾಶ್ಮೀರದ ಈ ಬೆಳವಣಿಗೆ ಆ ಸೀಮೆಗಷ್ಟೇ ಸೀಮಿತವಲ್ಲ ಎಂಬುದನ್ನು ದೇಶದ ಉದ್ದಗಲಕ್ಕೆ ಪ್ರಕಟವಾಗಿರುವ ಸಂಭ್ರಮಗಳು ಮತ್ತು ಖಂಡನೆಗಳು ತೋರಿಸಿಕೊಟ್ಟಿವೆ. ಈಗಾಗಲೇ ಧ್ರುವೀಕರಣಗೊಂಡಿರುವ ಜನಜೀವನ ಪ್ರಪಾತದತ್ತ ಇನ್ನಷ್ಟು ದೂರ ಪಯಣಿಸಲಿದೆ. ಸವೆದು ತೂತು ಬಿದ್ದಿರುವ ಸಾಮಾಜಿಕ ಹಂದರವನ್ನು ಇನ್ನಷ್ಟು ಹರಿದುಹಾಕಲಿದೆ. ಸಂವಿಧಾನಾತ್ಮಕ ಗಣರಾಜ್ಯವು ಬಹಸಂಖ್ಯಾತವಾದದ ಹಿಂದೂ ರಾಷ್ಟ್ರದತ್ತ ಧಾವಿಸಿದೆ. ದೇಶಭಕ್ತಿ, ದೇಶದ್ರೋಹ, ರಾಷ್ಟ್ರಧ್ವಜ ಮುಂತಾದ ಪ್ರತೀಕಗಳನ್ನು ಅಪಹರಿಸಲಾಗಿದೆ. ಅವುಗಳ ನಿಜ ಅರ್ಥಗಳನ್ನು ಬುಡಮೇಲು ಮಾಡಲಾಗಿದೆ. ಅವುಗಳ ಹೊದಿಕೆಯನ್ನು ಹಾಗೆಯೇ ಉಳಿಸಿ ತಿರುಳನ್ನು ತಿರುಚಲಾಗಿದೆ, ಕಮ್ಯುನಿಸಂ ವ್ಯವಸ್ಥೆಯಿಂದ ಸರಿದು ಬಂಡವಾಳವಾದವನ್ನು ಅಪ್ಪಿದ ಚೀನಾ ಕಮ್ಯೂನಿಸ್ಟ್ ಪ್ರತೀಕಗಳನ್ನು ಉಳಿಸಿಕೊಂಡಂತೆ.

ಚಿಟಿಕೆ ಹೊಡೆಯುವುದರೊಳಗೆ ರಾಜ್ಯ ಸರ್ಕಾರಗಳನ್ನು ಕೇಂದ್ರಾಡಳಿತ ಪ್ರದೇಶ ಮಾಡಬಲ್ಲೆವು ಎಂಬ ಧಮಕಿಯ ರವಾನೆಯಿದು. ಇಂದು ಕಾಶ್ಮೀರಕ್ಕೆ ಒದಗಿದ ಗತಿ ನಾಳೆ ದ್ರಾವಿಡ ರಾಜಕಾರಣದ ಭದ್ರಕೋಟೆಯಾಗಿರುವ ತಮಿಳುನಾಡಿಗೆ ಇಲ್ಲವೇ ಎಡಪಂಥೀಯ ರಾಜಕಾರಣದ ಕೇರಳಕ್ಕೆ ಒದಗುವುದಿಲ್ಲ ಎಂಬ ಖಾತ್ರಿಯನ್ನು ಯಾರು ಕೊಡಬಲ್ಲರು?

ತ್ರಿವಳಿ ತಲಾಖ್, ಆರ್.ಟಿ.ಐ., ಭಯೋತ್ಪಾದನೆ ವಿರೋಧಿ ಕಾಯಿದೆಯ ನಂತರ ಇದೀಗ ಅನುಚ್ಚೇದ 370. ರಕ್ತದ ರುಚಿ ಸಿಕ್ಕಿದೆ. ಇದು ಇಲ್ಲಿಗೇ ಇಂಗುವ ದಾಹವಲ್ಲ. ಬಾಬರಿ ಮಸೀದಿ ನಿಂತಿದ್ದ ಜಾಗದಲ್ಲಿ ರಾಮಮಂದಿರ ನಿರ್ಮಾಣ, ಏಕರೂಪ ನಾಗರಿಕ ಸಂಹಿತೆ, ಸಂವಿಧಾನ ಬದಲಾವಣೆಯ ದಿನಗಳು ದೂರವಿಲ್ಲ. ಮೀಸಲಾತಿ ದೇಶಹಿತಕ್ಕೆ ಮಾರಕ ಎಂಬ ವಾದಕ್ಕೆ ನೀರು ಗೊಬ್ಬರ ಎರೆಯಲಾಗುತ್ತಿದೆ. ಅದನ್ನೂ ಬಲಿತೆಗೆದುಕೊಂಡರೆ ಈಗಾಗಲೆ ತಬ್ಬಲಿಗಳಾಗಿರುವ ದಲಿತ-ಆದಿವಾಸಿ ಜನಸಮುದಾಯಗಳ ಗೋಣುಗಳನ್ನು ಮತ್ತೊಮ್ಮೆ ಪ್ರಾಚೀನ ವರ್ಣವ್ಯವಸ್ಥೆಯ ದಾಸ್ಯದ ನೊಗಕ್ಕೆ ಬಿಗಿಯುವುದನ್ನು ಯಾರು ತಪ್ಪಿಸಬಲ್ಲರು?

ಕಫ್ರ್ಯೂ ನಿರ್ಬಂಧಗಳನ್ನು ತೆಗೆದು, ದೂರಸಂಪರ್ಕ ವ್ಯವಸ್ಥೆಯನ್ನು ಪುನಃ ಜೋಡಿಸಿದ ನಂತರ ಕಣಿವೆಯ ಚೌಕಗಳು, ಮೈದಾನಗಳು, ಹಾದಿಬೀದಿಗಳು ಹಿಂಸೆ ಅರಾಜಕತೆಯಿಂದ ಕಿಕ್ಕಿರಿದರೆ, ಭಾರತ ವಿರೋಧಿ ಭಾವನೆ ಶಿಖರ ಮುಟ್ಟಿದರೆ ಮುಂದಾಗಿಯೇ ನಿಯುಕ್ತಿಗೊಳಿಸಿರುವ ಸೇನಾಪಡೆಗಳ ಪಹರೆಯು ಅದನ್ನು ಉಕ್ಕಿನ ಹಸ್ತಗಳಿಂದ ಹತ್ತಿಕ್ಕಿ ರಕ್ತಪಾತವಾದರೆ ಅಚ್ಚರಿಪಡಬೇಕಿಲ್ಲ. ಇನ್ನು ಪಾಕಿಸ್ತಾನದ ಸೇನೆ ಮತ್ತು ಐ.ಎಸ್.ಐ. ಕಾಶ್ಮೀರ ಕಣಿವೆಯ ಕದಡಿದ ನೀರಿನಲ್ಲಿ ಮೀನು ಹಿಡಿಯುವ ಹಳೆಯ ಚಾಳಿಯನ್ನು ನಿಲ್ಲಿಸೀತೇ? ಮತ್ತಷ್ಟು ಹಠದಿಂದ, ಹೆಚ್ಚಿನ ದುಷ್ಟತನದಿಂದ ಭಯೋತ್ಪಾದಕರನ್ನು ಕಣಿವೆಗೆ ನುಗ್ಗಿಸಲಿದೆ.

ಕೇಂದ್ರ ಸರ್ಕಾರದ ಈ ಹಠಾತ್ ನಡೆಯ ಹಿಂದೆ ಸಂಘಪರಿವಾರದ ಹಳೆಯ ಕಾರ್ಯಸೂಚಿಯನ್ನು ಈಡೇರಿಸುವ ಉದ್ದೇಶದ ಜೊತೆಜೊತೆಗೆ ಪಾಕಿಸ್ತಾನ-ಭಾರತ-ಆಫ್ಘಾನಿಸ್ತಾನ ಭೂಪ್ರದೇಶದ ರಾಜಕಾರಣವೂ ತಳುಕು ಹಾಕಿಕೊಂಡಿದೆ. ಆಪ್ಘಾನಿಸ್ತಾನದಿಂದ ತನ್ನ ಸೇನಾಪಡೆಗಳನ್ನು ಆದಷ್ಟು ಶೀಘ್ರವಾಗಿ ಹಿಂದಕ್ಕೆ ಪಡೆಯುವ ತರಾತುರಿಯಲ್ಲಿದೆ ಅಮೆರಿಕಾ. ಟ್ರಂಪ್ ಅವರು ಮುಂದಿನ ವರ್ಷ ಚುನಾವಣೆಗಳನ್ನು ಎದುರಿಸಬೇಕಿದೆ. ಸೇನಾಪಡೆಗಳನ್ನು ಹಿಂತೆಗೆದುಕೊಂಡು ತಮ್ಮ ಮತದಾರರ ಮುಂದೆ ಎದೆ ಸೆಟೆಸಿ ಬೆನ್ನು ತಟ್ಟಿಕೊಳ್ಳಬೇಕಾದ ತುರ್ತು ಅವರಿಗಿದೆ. ಈ ತಿಂಗಳ ಒಳಗಾಗಿ ಈ ಕೆಲಸ ಮುಗಿದುಹೋಗಬೇಕಿದೆ. ಈ ಕಾರ್ಯದಲ್ಲಿ ಆಫ್ಘಾನಿಸ್ತಾನದ ತಾಲಿಬಾನಿಗಳನ್ನು ಮಾತುಕತೆಯ ಮೇಜಿಗೆ ಕರೆತರುವ ಗುರುತರ ನೆರವನ್ನು ಪಾಕಿಸ್ತಾನ ಅವರಿಗೆ ಒದಗಿಸಿದೆ. ಉಪಕಾರಕ್ಕೆ ಪ್ರತ್ಯುಪಕಾರ ಮಾಡಲೇಬೇಕಲ್ಲ.

ಆರ್ಥಿಕವಾಗಿ ತೀರಾ ಕುಸಿದುಹೋಗಿರುವ ಪಾಕಿಸ್ತಾನಕ್ಕೆ ಧಾರಾಳ ಹಣಕಾಸು ಮತ್ತು ಮಿಲಿಟರಿ ನೆರವನ್ನು ಟ್ರಂಪ್ ನೀಡಲಿದ್ದಾರೆ. ಹೀಗೆ ಚಿಗಿತುಕೊಳ್ಳುವ ಪಾಕಿಸ್ತಾನ ಕಾಶ್ಮೀರದಲ್ಲಿ ಕೈಯಾಡಿಸದೆ ಬಿಡುವುದಿಲ್ಲ. ಜೊತೆಗೆ ಅಮೆರಿಕೆಯ ಸೇನೆ ಕಾಲು ಕಿತ್ತನಂತರ ಆಪ್ಘಾನಿಸ್ತಾನದ ತಾಲಿಬಾನಿಗಳು ಪಾಕಿಸ್ತಾನದ ಪರವಾಗಿ ಕಾಶ್ಮೀರಕ್ಕೆ ನುಗ್ಗಿ ರಕ್ತಪಾತ ಉಂಟುಮಾಡುವುದಿಲ್ಲ ಎಂಬ ಖಾತರಿಯಿಲ್ಲ.. ಟ್ರಂಪ್ ಮಾತ್ರವಲ್ಲದೆ ಲಡಾಖ್‍ನಲ್ಲಿ ತನ್ನ ಹಿತಾಸಕ್ತಿ ಸಾಧಿಸಿಕೊಳ್ಳುವ ಹುನ್ನಾರ ಹೊಂದಿದ ಚೀನಾ ಕೂಡ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸುವ ಆಹ್ವಾನವನ್ನು ಭಾರತಕ್ಕೆ ನೀಡಿ ಆಗಿತ್ತು. ಟ್ರಂಪ್ ಮತ್ತು ಇಮ್ರಾನ್‍ಖಾನ್ ಭೇಟಿಯ ನಂತರ ಭಾರತದ ಆತಂಕಕ್ಕೆ ಮತ್ತಷ್ಟು ಪುಷ್ಟಿ ದೊರೆತಿತ್ತು. ಈ ಅವಗಢಗಳನ್ನು ಮುಂದಾಗಿಯೇ ತಪ್ಪಿಸಬೇಕಿದ್ದರೆ ಭಾರತ ಸರ್ಕಾರ ಕಾಶ್ಮೀರ ಕಣಿವೆಯ ಮೇಲೆ ತನ್ನ ಹಿಡಿತವನ್ನು ಬಿಗಿ ಮಾಡಲೇಬೇಕಿತ್ತು. ಆದರೆ ಇದೇ ನೆಪದಲ್ಲಿ ಕಾಶ್ಮೀರಿಗಳ ಮೇಲೆ ಉಕ್ಕಿನ ಹಸ್ತದ ಪ್ರಹಾರ ಮಾಡಬೇಕಾದ ಅಗತ್ಯ ಇರಲಿಲ್ಲ.
ಪಾಕ್ ಜೊತೆಗಿನ ಮಾತುಕತೆ- ಚರ್ಚೆ- ವಿಷಯಗಳ ಭಾರತದ ಪಟ್ಟಿಯಲ್ಲಿ ಇನ್ನು ಕಾಶ್ಮೀರ ಎಂಬ ಪದ ಇರಲಾರದು. ಕಣಿವೆಯಲ್ಲಿ ಶಾಂತಿ ನೆಲೆಸಿದ ನಂತರ ಕಾಶ್ಮೀರಿಗಳು ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸಿಕೊಳ್ಳುವ ಜನಮತಗಣನೆಯನ್ನು ನಡೆಸಬೇಕೆಂಬುದಾಗಿ ನೆಹರೂ ಸಲ್ಲಿಸಿದ್ದ ಅರ್ಜಿಯನ್ನು ಭಾರತ ಸರ್ಕಾರ ಸದ್ಯದಲ್ಲೇ ವಾಪಸು ಪಡೆಯಬಹುದು.

ಅಮೆರಿಕ, ಬ್ರಿಟನ್, ಐರೋಪ್ಯ ಒಕ್ಕೂಟ ಮುಂತಾದ ಅಂತಾರಾಷ್ಟ್ರೀಯ ಸಮುದಾಯ ಮೂಗು ತೂರಿಸುವ ಸಾಧ್ಯತೆ ವಿರಳ. ಈ ಬೆಳವಣಿಗೆಯನ್ನು ಭಾರತದ ಆಂತರಿಕ ವಿದ್ಯಮಾನವೆಂದು ಭಾವಿಸಿ ದೂರ ಉಳಿದು ಗಮನಿಸಲಿವೆ. ಮೋದಿ-ಶಾ ಜೋಡಿ ಕಾಶ್ಮೀರವನ್ನು ಗೆದ್ದುಕೊಂಡಿದೆ. ಕಾಶ್ಮೀರಿಗಳನ್ನು ಕಳೆದುಕೊಂಡಿದೆ. ಕಾಶ್ಮೀರಕ್ಕೆ ಒದಗಿರುವ ದುರ್ಗತಿ ಇತರೆ ರಾಜ್ಯಗಳ ಕದ ಬಡಿಯದಿರಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...