ಅರುಣಾಚಲ ಪ್ರದೇಶದ ಜಿಲ್ಲಾ ಜೈಲಿನಿಂದ ಏಳು ಮಂದಿ ಕೈದಿಗಳು ಕಾವಲುಗಾರರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಸೋಮವಾರ ಬಹಿರಂಗಪಡಿಸಿದ್ದಾರೆ. ಮೆಣಸಿನಕಾಯಿ, ಉಪ್ಪು ಮತ್ತು ಕರಿಮೆಣಸಿನಕಾಯಿ ಪುಡಿಯನ್ನು ಬಳಸಿ ಹಲ್ಲೆ ನಡೆಸಲಾಗಿದೆ.
ಪಾಸಿಘಾಟ್ ಜಿಲ್ಲಾ ಕೇಂದ್ರದಲ್ಲಿರುವ ಪೂರ್ವ ಸಿಯಾಂಗ್ ಜಿಲ್ಲೆಯ ಜೈಲಿನಲ್ಲಿ ಈ ಘಟನೆ ನಡೆದಿದೆ. ಜೈಲಿನಿಂದ ತಪ್ಪಿಸಿಕೊಂಡ ಕೈದಿಗಳನ್ನು ಬಂಧಿಸಲು ಕೂಂಬಿಂಗ್ ಆಪರೇಷನ್ ಮತ್ತು ತನಿಖೆ ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಭಾನುವಾರ ಸಂಜೆ 6.20 ಕ್ಕೆ ಕೈದಿಗಳನ್ನು ರಾತ್ರಿಯ ಊಟಕ್ಕಾಗಿ ತಮ್ಮ ಸೆಲ್‌ಗಳಿಂದ ಹೊರಗೆ ಬಿಡಲಾಗಿತ್ತು. ಈ ವೇಳೆ ಏಳು ಮಂದಿ ಕೈದಿಗಳು ಇದ್ದಕ್ಕಿದ್ದಂತೆ ಕರ್ತವ್ಯದಲ್ಲಿದ್ದ ಕಾವಲುಗಾರರ ಮೇಲೆ ಕಣ್ಣು, ಮೂಗು ಮತ್ತು ಮುಖದ ಮೇಲೆ ಮೆಣಸಿನಕಾಯಿ, ಮೆಣಸು ಮತ್ತು ಉಪ್ಪನ್ನು ಎರಚಿ ಹಲ್ಲೆ ನಡೆಸಿದ್ದಾರೆ” ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರವೀಂದ್ರ ಸಿಂಗ್ ಯಾದವ್ ಹೇಳಿದ್ದಾರೆ.
ಇದನ್ನೂ ಓದಿ: ಸ್ಟ್ಯಾನ್ ಸ್ವಾಮಿ ಶ್ರದ್ಧಾಂಜಲಿ; ವಿಚಾರಣಾಧೀನ ಕೈದಿಯಾಗಿ ಭಾರತರತ್ನವೊಂದರ ಸಾವು
ಜಿಲ್ಲಾ ಜೈಲಿನಲ್ಲಿ ಒಟ್ಟು 94 ಕೈದಿಗಳಿದ್ದರು. ತಪ್ಪಿಸಿಕೊಂಡ ಏಳು ಮಂದಿಯನ್ನು ಅಭಿಜಿತ್ ಗೊಗೊಯ್, ತಾರೋ ಹಮಾಮ್, ಕಲೋಮ್ ಅಪಾಂಗ್, ತಾಲೂಮ್ ಪನ್ಯಿಂಗ್, ಸುಭಾಷ್ ಮಂಡಲ್, ರಾಜಾ ತಯೆಂಗ್ ಮತ್ತು ದಾನಿ ಗ್ಯಾಮ್ಲಿನ್ ಎಂದು ಗುರುತಿಸಲಾಗಿದೆ.
“ನಾವು ಏಳು ವಿರುದ್ಧ ಬಾಕಿ ಇರುವ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ. ದಾಳಿಯಲ್ಲಿ ಐವರು ಜೈಲು ಕಾವಲುಗಾರರು ಗಾಯಗೊಂಡಿದ್ದಾರೆ. ಜಿಲ್ಲೆಯ ಅರ್ಧಭಾಗವನ್ನು ಪೊಲೀಸರು ಸುತ್ತುವರೆದಿದ್ದಾರೆ. ಕೈದಿಗಳನ್ನು ಬಂಧಿಸಲು ತಂಡ ರಚಿಸಿ, ಕಾರ್ಯಾಚರಣೆ ಪ್ರಾರಂಭಿಸಲಾಗಿದೆ” ರವೀಂದ್ರ ಸಿಂಗ್ ಯಾದವ್ ಹೇಳಿದ್ದಾರೆ.
ಗಾಯಗೊಂಡ ಐವರು ಕಾವಲುಗಾರರನ್ನು ರಾಜೇಶ್ ಲೆಗೊ, ಆರ್.ಕೆ. ಕಂಭಾರಿ, ಒ ತೆಯಿಂಗ್, ತಾಗೊ ತಾತುಂಗ್ ಮತ್ತು ತ್ಯಾಪಿ ತಾಲಿ ಎಂದು ಗುರುತಿಸಲಾಗಿದೆ. ಇದರಲ್ಲಿ ತಲೆಗೆ ಬೀಗದಿಂದ ಏಟು ತಿಂದು ಗಾಯಗೊಂಡಿದ್ದ ರಾಜೇಶ್ ಲೆಗೊ ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಹಿರಿಯ ಕೈದಿಗಳ ಬಿಡುಗಡೆಗಾಗಿ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅರ್ಜಿ


