ಬಿಜೆಪಿ ಅಸ್ಸಾಂ ಘಟಕ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ‘ಇಸ್ಲಾಮೋಫೋಬಿಕ್’ ವಿಡಿಯೋ ಒಂದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಪಕ್ಷವು ಮುಸ್ಲಿಮರನ್ನು ನಿಂದಿಸುತ್ತಿದೆ ಮತ್ತು ಕೋಮು ದ್ವೇಷವನ್ನು ಪ್ರಚೋದಿಸುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ.
‘ಬಿಜೆಪಿ ಇಲ್ಲದ ಅಸ್ಸಾಂ’ ಎಂಬ ಶೀರ್ಷಿಕೆಯ ಈ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ವಿಡಿಯೋದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿರುವ ಮುಸ್ಲಿಮರನ್ನು ಸಾರ್ವಜನಿಕ ಸ್ಥಳಗಳು ಮತ್ತು ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಅಕ್ರಮ ವಲಸಿಗರಂತೆ ಚಿತ್ರಿಸಲಾಗಿದೆ. ವಿಡಿಯೋದಲ್ಲಿ ಕಾಂಗ್ರೆಸ್ ನಾಯಕರಾದ ಗೌರವ್ ಗೊಗೊಯ್ ಮತ್ತು ರಾಹುಲ್ ಗಾಂಧಿ ಅವರನ್ನು ತೋರಿಸಿ, ಅವರಿಬ್ಬರು ‘ಪಾಕಿಸ್ತಾನದ ಜೊತೆ ಸಂಪರ್ಕ’ ಹೊಂದಿರುವಂತೆ ಬಿಂಬಿಸಲಾಗಿದೆ.
We can’t let this dream of Paaijaan to be true!! pic.twitter.com/NllcbTFiwV
— BJP Assam Pradesh (@BJP4Assam) September 15, 2025
ರಾಜಕೀಯ ಮುಖಂಡರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋ ಪ್ರಚೋದನಕಾರಿ ಎಂದು ಖಂಡಿಸಿದ್ದಾರೆ. ಇದು ಅಸ್ಸಾಂನಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ.
ಚುನಾವಣಾ ಆಯೋಗ ಈ ವಿಡಿಯೋ ಬಗ್ಗೆ ಗಮನಹರಿಸಬೇಕು ಎಂದು ಅಸ್ಸಾಂ ಕಾಂಗ್ರೆಸ್ ಒತ್ತಾಯಿಸಿದೆ. ಬಿಜೆಪಿ ವಿರುದ್ದ ದೂರು ದಾಖಲಿಸಲು ಯೋಜಿಸುತ್ತಿರುವುದಾಗಿ ತಿಳಿಸಿದೆ.
ಅಸ್ಸಾಂ ಕಾಂಗ್ರೆಸ್ ಮುಖ್ಯಸ್ಥ ಮತ್ತು ಲೋಕಸಭೆಯ ವಿರೋಧ ಪಕ್ಷದ ಉಪನಾಯಕ ಗೌರವ್ ಗೊಗೊಯ್ ಅವರು ವಿಡಿಯೋಗೆ ಖಂಡನೆ ವ್ಯಕ್ತಪಡಿಸಿದ್ದು, “ಇದು ಅಸ್ಸಾಮಿ ಸಮಾಜ ಮತ್ತು ಅದರ ಸಂಪ್ರದಾಯಗಳನ್ನು ತಪ್ಪಾಗಿ ಬಿಂಬಿಸುತ್ತದೆ” ಎಂದು ಹೇಳಿದ್ದಾರೆ.
ಬಿಜೆಪಿ ಐಟಿ ಸೆಲ್ ಸೃಷ್ಟಿಸುವ ಫೋಟೋ, ವಿಡಿಯೋ, ಮಾತು, ಕೃತಿ ಯಾವುದೂ ಕೂಡ ಅಸ್ಸಾಮಿ ಸಮಾಜದ ಮೇಲೆ ಹಾನಿ ಮಾಡುವ ಶಕ್ತಿ ಹೊಂದಿಲ್ಲ” ಎಂದು ಎಕ್ಸ್ ಪೋಸ್ಟ್‌ನಲ್ಲಿ ಗೊಗೊಯ್ ತಿಳಿಸಿದ್ದಾರೆ.
“ಅಸ್ಸಾಂ ಅನ್ನು ಮಹಾಪುರುಷರಾದ ಶ್ರೀಮಂತ ಶಂಕರದೇವ, ಅಝಾನ್ ಪೀರ್, ಸ್ವರ್ಗದೇವ್ ಸಿಯುಕಾಫ, ಲಚಿತ್ ಬೋರ್ಫುಕನ್ ಮತ್ತು ಭೂಪೇನ್ ಹಝಾರಿಕಾ ಪೋಷಿಸಿದ್ದಾರೆ. ದನ, ಕಲ್ಲಿದ್ದಲು, ವೀಳ್ಯದೆಲೆ ಅಥವಾ ಮಾದಕವಸ್ತುಗಳ ಕಳ್ಳಸಾಗಣೆಗೆ ಸಂಬಂಧಿಸಿದ ಜನರು ಅಸ್ಸಾಮಿಗಳ ಮನಸ್ಸನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಹೆಮ್ಮೆಯ ಮತ್ತು ಶ್ರೇಷ್ಠ ರಾಜ್ಯವಾದ ಅಸ್ಸಾಂ, ತನ್ನ ಜನರು ಹೊಸ ಎತ್ತರವನ್ನು ತಲುಪಲು ಸಹಾಯ ಮಾಡುವ ರಾಜಕಾರಣಿಗಳಿಗೆ ಅರ್ಹವಾಗಿದೆ” ಎಂದು ಗೊಗೊಯ್ ಹೇಳಿದ್ದಾರೆ.
ವಿಡಿಯೋ ವಿರುದ್ದ ಕಾಂಗ್ರೆಸ್ ಪಕ್ಷವು ಗುವಾಹಟಿಯಲ್ಲಿ ಔಪಚಾರಿಕ ಪೊಲೀಸ್ ದೂರು ದಾಖಲಿಸಲಿದೆ ಎಂದು ಗೊಗೊಯ್ ತಿಳಿಸಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ, ಗೊಗೊಯ್ ಅವರು ರಾಜ್ಯದ ಬಗ್ಗೆ ತಮ್ಮ ಪಕ್ಷದ ದೃಷ್ಟಿಕೋನವನ್ನು ವಿವರಿಸಿದ್ದಾರೆ: “ನಾವು ಪೈಲಟ್‌ಗಳು, ಇಂಜಿನಿಯರ್‌ಗಳು, ವೈದ್ಯರು, ಉದ್ಯಮಿಗಳು, ಬ್ಯಾಂಕರ್‌ಗಳು ಮತ್ತು ವ್ಯಾಪಾರ ಮಾಲೀಕರ ಸಮಾಜವನ್ನು ನಿರ್ಮಿಸಬೇಕೆಂದು ಬಯಸುತ್ತೇವೆ. ಕಠಿಣ ಪರಿಶ್ರಮವು ದ್ವೇಷವನ್ನು ಹಿಂದಿಕ್ಕುವ, ಸಭ್ಯತೆಯು ದುರಹಂಕಾರಕ್ಕಿಂತ ಮುಖ್ಯವಾದ, ಪ್ರಜಾಪ್ರಭುತ್ವವು ನಿರಂಕುಶಾಧಿಕಾರವನ್ನು ಹತ್ತಿಕ್ಕುವ ಮತ್ತು ಎಲ್ಲರನ್ನೂ ಗೌರವದಿಂದ ನಡೆಸಿಕೊಳ್ಳುವ ಅಸ್ಸಾಂ ಅನ್ನು ನಾವು ನೋಡಲು ಬಯಸುತ್ತೇವೆ” ಎಂದಿದ್ದಾರೆ.
ಅಸ್ಸಾಂನ ಮತ್ತೊಂದು ಪ್ರಮುಖ ವಿರೋಧ ಪಕ್ಷವಾದ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಕೂಡ ಬಿಜೆಪಿಯ ವಿಡಿಯೋವನ್ನು ಟೀಕಿಸಿದೆ.
“ಈ ಎಐ ವಿಡಿಯೋ ಮೂಲಕ ಅಸ್ಸಾಂ ಬಿಜೆಪಿ ಭಯದ ಭಾವನೆಯನ್ನು ಸೃಷ್ಟಿಸಲು ಬಯಸುತ್ತಿದೆ” ಎಂದು ಎಐಯುಡಿಎಫ್‌ನ ಶಾಸಕ ಮತ್ತು ಪ್ರಧಾನ ಕಾರ್ಯದರ್ಶಿ ಅಮೀನುಲ್ ಇಸ್ಲಾಂ ಹೇಳಿದ್ದಾರೆ.
“ಬಿಜೆಪಿ ಅಧಿಕಾರದಲ್ಲಿ ಇಲ್ಲದಿದ್ದರೆ ಅಸ್ಸಾಂ ಸಂಪೂರ್ಣ ಮುಸ್ಲಿಂ ಸ್ವಾಧೀನವಾಗುತ್ತದೆ ಎಂಬ ಭಾವನೆಯನ್ನು ಬಹುಸಂಖ್ಯಾತ ಸಮುದಾಯದಲ್ಲಿ ಬಿತ್ತಲು ಅವರು ಬಯಸುತ್ತಿದ್ದಾರೆ. ಅವರು ಈ ಹಿಂದೆಯೂ ಇಂತಹ ನಿರೂಪಣೆಗಳನ್ನು ಮಂಡಿಸಿದ್ದಾರೆ. ಕೆಲವೊಮ್ಮೆ ‘ಲವ್ ಜಿಹಾದ್’ ಎಂದು ಕರೆಯಲ್ಪಡುವ ಮೂಲಕ, ಕೆಲವೊಮ್ಮೆ ‘ಬೌದ್ಧಿಕ ಜಿಹಾದ್’ ಮೂಲಕ ಮುಸ್ಲಿಮರನ್ನು ರಾಕ್ಷಸೀಕರಿಸಲು ಪ್ರಯತ್ನಿಸಿದ್ದಾರೆ. ಈ ವಿಡಿಯೋ ದ್ವೇಷ ಭಾಷಣದ ಒಂದು ರೂಪವಾಗಿದೆ. ಇದರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಬೇಕು ಮತ್ತು ನಾವು ಚುನಾವಣಾ ಆಯೋಗವನ್ನು ಸಂಪರ್ಕಿಸಲು ಯೋಜಿಸಿದ್ದೇವೆ” ಎಂದು ಅಮೀನುಲ್ ಇಸ್ಲಾಂ ತಿಳಿಸಿದ್ದಾರೆ.
ವಿಡಿಯೋಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, “ಬಿಜೆಪಿ ಮುಸ್ಲಿಂ ಮುಕ್ತ ಭಾರತ’ದ ಗುರಿ ಹೊಂದಿದೆ ಎಂದಿದ್ದಾರೆ.
“ಬಿಜೆಪಿ ಇಲ್ಲದಿದ್ದರೆ ಮುಸ್ಲಿಂ ಬಹುಸಂಖ್ಯಾತ ಅಸ್ಸಾಂ ಇರುತ್ತಿತ್ತು ಎಂದು ತೋರಿಸುವ ಅಸಹ್ಯಕರ ಕೃತಕ ಬುದ್ಧಿಮತ್ತೆಯ ವಿಡಿಯೋವನ್ನು ಬಿಜೆಪಿ ಅಸ್ಸಾಂ ಪೋಸ್ಟ್ ಮಾಡಿದೆ. ಅವರು ಕೇವಲ ಓಟಿಗಾಗಿ ಈ ಭಯ ಹುಟ್ಟಿಸುತ್ತಿಲ್ಲ, ಇದು ನಿಜ ರೂಪದಲ್ಲಿ ಅಸಹ್ಯಕರ ಹಿಂದುತ್ವ ಸಿದ್ಧಾಂತವಾಗಿದೆ”ಎಂದು ಓವೈಸಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಾಯಿಯ ಕುರಿತ ಎಐ ವಿಡಿಯೋ ತೆಗೆದು ಹಾಕಲು ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದ್ದನ್ನು ನೆನಪಿಸಿದ ಓವೈಸಿ, “ಪ್ರತಿಯೊಬ್ಬರಿಗೂ ಅವರ ತಾಯಿ ಮೇಲೆ ದೊಡ್ಡ ಗೌರವವಿದೆ. ಅಸ್ಸಾಂ ಬಿಜೆಪಿಯ ಅಸಹ್ಯಕರ ವಿಡಿಯೋಗೂ ಅದೇ ತತ್ವವನ್ನು ಅನುಸರಿಸಬೇಕು. ಮುಸ್ಲಿಂ ನಾಗರಿಕರನ್ನು ಅಪಾಯಕಾರಿ ಎಂದು, ನಿರಂತರವಾಗಿ ದಮನಿಸಬೇಕಾದ ಗುಂಪು ಎಂದು ಚಿತ್ರಿಸುವುದು ಅವಹೇಳನಕಾರಿ ಮಾತ್ರವಲ್ಲ, ನರಮೇಧವೂ ಆಗಿದೆ” ಎಂದು ಓವೈಸಿ ಕಿಡಿಕಾರಿದ್ದಾರೆ.
“ಬಿಜೆಪಿ ಉದ್ದೇಶಪೂರ್ಕವಾಗಿ ಇದನ್ನು ಮಾಡುತ್ತಿದೆ. ಅಸ್ಸಾಂ ಬಿಜೆಪಿ ವಿಡಿಯೋ ಪೋಸ್ಟ್ ಮಾಡಿರುವುದು ಹೊಸ ವಿಷಯವೇನಲ್ಲ. ಎಲ್ಲೆಲ್ಲಿ ಚುನಾವಣೆಗಳು ಇರುತ್ತವೋ ಅಂತಹ ರಾಜ್ಯಗಳಲ್ಲಿ ಬಿಜೆಪಿ ಇದನ್ನು ಮಾಡುತ್ತವೆ. ನಿಮಗೆ ನೆನಪಿದ್ದರೆ, ಕರ್ನಾಟಕದಲ್ಲೂ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ಇದೇ ರೀತಿ ಮಾಡಿತ್ತು. ಮುಂದೆ ಅಸ್ಸಾಂನಲ್ಲಿ ಚುನಾವಣೆ ಇದೆ. ಬಿಜೆಪಿಯ ಇಂತಹ ನಡೆಗಳು ಮುಸ್ಲಿಮರ ವಿರುದ್ದ ಹಿಂಸಾಚಾರವನ್ನು ಪ್ರಚೋದಿಸುತ್ತದೆ” ಎಂದಿದ್ದಾರೆ.
“ಕೋಮು ದ್ವೇಷವನ್ನು ಹುಟ್ಟುಹಾಕಲು ‘ಮುಸ್ಲಿಂ ಬಹುಸಂಖ್ಯಾತ ಅಸ್ಸಾಂ’ ಎಂಬ ಎಐ ವಿಡಿಯೋ ಹಂಚಿಕೊಳ್ಳುವ ಮೂಲಕ ಅಸ್ಸಾಂ ಬಿಜೆಪಿ ಅತ್ಯಂತ ಕೀಳುಮಟ್ಟದ ರಾಜಕೀಯಕ್ಕೆ ಇಳಿದಿದೆ. ಇದು ಸಾಮಾಜಿಕ ಸಾಮರಸ್ಯದ ಮೇಲಿನ ಉದ್ದೇಶಪೂರ್ವಕ ದಾಳಿಯಾಗಿದೆ. ನಮ್ಮ ಹಂಚಿಕೆಯ ಮೌಲ್ಯಗಳಿಗೆ ಮಾಡಿದ ಅವಮಾನವಾಗಿದೆ. ನಿಮ್ಮ ವಿಷಕಾರಿ ಅಭಿಯಾನಕ್ಕೆ ಅಸ್ಸಾಂನ ಜನರು ಸರಿಯಾದ ಉತ್ತರವನ್ನು ನೀಡುತ್ತಾರೆ” ಎಂದು ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಖಾನ್ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ವಿಡಿಯೋಗೆ ವಿರೋಧ ವ್ಯಕ್ತವಾದ ಬಗ್ಗೆ ಪ್ರತಿಕ್ರಿಯಿಸಿರುವ ಅಸ್ಸಾಂ ಬಿಜೆಪಿ ವಕ್ತಾರ ರೂಪಮ್ ಗೋಸ್ವಾಮಿ, ವಿಡಿಯೋವನ್ನು ಸಮರ್ಥಿಸಿಕೊಂಡಿದ್ದಾರೆ. ಎನ್‌ಡಿಟಿವಿ ಜೊತೆ ಮಾತನಾಡಿರುವ ಅವರು, “ಸ್ಥಳೀಯ ಸಮುದಾಯಗಳ ಜೀವನ, ಜೀವನೋಪಾಯ, ಭೂಮಿ ಮತ್ತು ಸಂಸ್ಕೃತಿಗೆ ಬೆದರಿಕೆಯೊಡ್ಡಿರುವ ಜನಸಂಖ್ಯಾ ಬದಲಾವಣೆಯನ್ನು ರಾಜ್ಯವು ಹೇಗೆ ಅನುಭವಿಸಿದೆ ಎಂಬುದರ ಕುರಿತು ಸತ್ಯವನ್ನು ಈ ವಿಡಿಯೋ ಪ್ರತಿಬಿಂಬಿಸುತ್ತದೆ ಎಂದು ಅಸ್ಸಾಂ ಬಿಜೆಪಿ ನಂಬುತ್ತದೆ” ಎಂದಿದ್ದಾರೆ.
ಅದಾನಿ ಕುರಿತ ಪೋಸ್ಟ್ ತೆಗೆದು ಹಾಕಲು ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಆದೇಶ; ವರದಿ


