ಬಿಜೆಪಿ ನಾಯಕರು ಚುನಾವಣಾ ಪ್ರಣಾಳಿಕೆಗಳಲ್ಲಿ, ಪ್ರಚಾರಗಳಲ್ಲಿ ಗೋಹತ್ಯೆ ನಿಷೇಧ ಮಾಡುವುದಾಗಿ ಹೇಳುತ್ತಿರುತ್ತಾರೆ. ಬಿಜೆಪಿ ಕಾರ್ಯಕರ್ತರಂತೂ ಗೋಹತ್ಯೆ ಮಹಾಪಾಪ ಎಂದು ದೇಶಾದ್ಯಂತ ಗೋಮಾಂಸ ನಿಷೇಧಕ್ಕಾಗಿ ಪ್ರಚಾರ ಮಾಡುತ್ತಿದ್ದರೆ, ಅಸ್ಸಾಂನ ಬಿಜೆಪಿ ಅಭ್ಯರ್ಥಿಯೊಬ್ಬು ಗೋಮಾಂಸ ಭಾರತದ ‘ರಾಷ್ಟ್ರೀಯ ಆಹಾರ’ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಅಸ್ಸಾಂನ ಧುಬ್ರಿ ಜಿಲ್ಲೆಯ ಗೌರಿಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಬನೇಂದ್ರ ಕುಮಾರ್ ಮುಷಾರಿ, ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ.
“ಗೋಮಾಂಸವನ್ನು ನಿಷೇಧಿಸಲು ಯಾರಾದರೂ ಹೇಗೆ ಪ್ರಯತ್ನಿಸುತ್ತಾರೆ..? ಇದು ಭಾರತದ ರಾಷ್ಟ್ರೀಯ ಆಹಾರವಾಗಿದೆ” ಎಂದು ಕಳೆದ ವರ್ಷ ಡಿಸೆಂಬರ್ 29 ರಂದು ಬಿಜೆಪಿಗೆ ಸೇರಿದ ಮುಷಾರ ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿಯ ಹೇಳಿಕೆಗೆ ಬಿಜೆಪಿ ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಅವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: ರಾಹುಲ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅಟಾರ್ನಿ ಜನರಲ್ ನಕಾರ
ಗೌರಿಪುರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ನಡೆದ ಈ ಘಟನೆಗೆ ಧುಬ್ರಿ ಜಿಲ್ಲೆಯ ಹಿರಿಯ ಬಿಜೆಪಿ ಕಾರ್ಯಕರ್ತರು ಅಭ್ಯರ್ಥಿ ಮುಷಾರಿ ಅವರ ಹೇಳಿಕೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ ಮತ್ತು ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇತ್ತ ಪುರ್ಬಾಂಚಲ್ ಹಿಂದೂ ಐಕ್ಯ ಮಂಚ್ ಸದಸ್ಯರು ಮಂಗಳವಾರ ಡಿಸ್ಪೂರ್ ಪೊಲೀಸ್ ಠಾಣೆಯಲ್ಲಿ ಬನೇಂದ್ರ ಕುಮಾರ್ ಮುಷಾರಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಚುನಾವಣೆ ನಡೆಯಲಿರುವ ಅಸ್ಸಾಂನಲ್ಲಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಮುಷಾರಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಭಾರತದ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

ಪ್ರಚಾರದ ವೇಳೆ, ಗೋಮಾಂಸವು ಅಂತರರಾಷ್ಟ್ರೀಯ ಖಾದ್ಯವಾಗಿದೆ ಎಂದು ಮುಷಾರಿ ಹೇಳಿದ್ದರು. “ಅಸ್ಸಾಂನ ಗ್ರಾಮೀಣ ಪ್ರದೇಶದ ವಿದ್ಯಾವಂತ ಮುಸ್ಲಿಮರು, ಅಸ್ಸಾಂನಲ್ಲಿ ಅಥವಾ ಭಾರತದಲ್ಲಿ ಎಲ್ಲಿಯೂ ಗೋಮಾಂಸ ಮಾರಾಟವನ್ನು ನಿಷೇಧಿಸಲು ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು” ಎಂದು ಉಲ್ಲೇಖಿಸಿದ್ದರು.
ಬನೇಂದ್ರ ಕುಮಾರ್ ಮುಷಾರಿ ಒಬ್ಬ ಹಿರಿಯ ರಾಜಕಾರಣಿ ಮತ್ತು ಧುಬ್ರಿ ಜಿಲ್ಲೆಯ ಗೌರಿಪುರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ 1996 ರಲ್ಲಿ ಅಸ್ಸಾಂ ವಿಧಾನಸಭೆಗೆ ಮೊದಲು ಆಯ್ಕೆಯಾಗಿದ್ದರು. 2001 ರಲ್ಲಿ ಗೌರಿಪುರದಿಂದ ಮತ್ತೆ ಅಸೋಮ್ ಗಣ ಪರಿಷತ್ (ಎಜಿಪಿ) ಅಭ್ಯರ್ಥಿಯಾಗಿ ಆಯ್ಕೆಯಾದರು. ತರುವಾಯ, ಅವರು ಬೋಡೋ ಪೀಪಲ್ಸ್ ಫ್ರಂಟ್ (ಬಿಪಿಎಫ್) ಗೆ ಸೇರಿ,2011 ರಲ್ಲಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.
ಇದನ್ನೂ ಓದಿ: ಕೇರಳದಲ್ಲಿ ಸಾಕ್ಷರತೆಯಿದೆ, ಜನ ಯೋಚಿಸುತ್ತಾರೆ ಹಾಗಾಗಿ ಪಕ್ಷ ಬೆಳೆದಿಲ್ಲ: ಬಿಜೆಪಿಯ ಏಕೈಕ ಶಾಸಕ


