ಉತ್ತರ ಕರ್ನಾಟಕದ ಅನೇಕ ದಲಿತ ಕಾರ್ಮಿಕರನ್ನು ‘ಬಿಟ್ಟಿ ಚಕ್ರಿ’ ಎಂಬ ಜೀತಗಾರಿಕೆಗೆ ತಳ್ಳಲಾಗಿದೆ. ಸ್ಮಶಾನದಲ್ಲಿ ಹೆಣಗಳನ್ನು ಸುಡುವ ಇಂತಹ ಅನೇಕ ಕಾರ್ಮಿಕರು ಯಾವುದೇ ಆದಾಯವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಈ ಅನ್ಯಾಯದ ವಿರುದ್ಧ ತಾವೇ ಸಂಘಟಿತರಾಗಿ ತಮ್ಮ ದನಿ ಎತ್ತಲು ಮುಂದಾಗಿದ್ದಾರೆ.
ವಿಜಯನಗರ ಜಿಲ್ಲೆಯ ಆದಿ ಕರ್ನಾಟಕ (ಪರಿಶಿಷ್ಟ ಜಾತಿ) ಸಮುದಾಯಕ್ಕೆ ಸೇರಿದ ಏಣಗಿ ಸಣ್ಣಹನುಮಂತಪ್ಪ (50) ಅವರು ‘ನ್ಯೂಸ್‌ಕ್ಲಿಕ್’ ಜಾಲತಾಣದೊಂದಿಗೆ ಮಾತನಾಡಿದ್ದು, ತಮ್ಮ ಬದುಕು- ಬವಣೆ ಹಾಗೂ ಸಂಘಟನೆಯ ಕುರಿತು ವಿವರಿಸಿದ್ದಾರೆ.
“ಹಲವು ಶತಮಾನಗಳಿಂದ ಮಸಣ ಕಾರ್ಮಿಕರಾಗಿ ದುಡಿಯುತ್ತಿದ್ದೇವೆ, ಇಷ್ಟು ದಿನ ವೇತನ ಇಲ್ಲದೇ ಕೆಲಸ ಮಾಡಿದ್ದೇವೆ, ಈಗ ಸರಕಾರ ನಮ್ಮ ದುಡಿಮೆಗೆ ತಕ್ಕ ವೇತನ ನೀಡಬೇಕು” ಎಂದು ಆಗ್ರಹಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ದಲಿತ ಕಾರ್ಮಿಕರು ಮಾಡುವ ಕೆಲಸಕ್ಕೆ ಸರ್ಕಾರದಿಂದ ಯಾವುದೇ ಹಣ ಸಂದಾಯವಾಗುತ್ತಿಲ್ಲ. ಯಾರಾದರೂ ಒಬ್ಬ ವ್ಯಕ್ತಿ ಸತ್ತಾಗ ದೇಹವನ್ನು ವಿಲೇವಾರಿ ಮಾಡಲು ಈ ಕಾರ್ಮಿಕರನ್ನು ಕರೆಸಲಾಗುತ್ತದೆ. ಸಾವಿಗೀಡಾದ ವ್ಯಕ್ತಿಯ ಕುಟುಂಬವು ಈ ಕಾರ್ಮಿಕರಿಗೆ ಕೊಡಬೇಕಾದ ಕೂಲಿಯನ್ನು ನಿರ್ಧರಿಸುತ್ತದೆ.
ಈ ಕೆಲಸ ಜಾತಿ ಆಧಾರಿತ, ಪಾರಂಪರಿಕ ದುಡಿಮೆಯಾಗಿ ಬೆಳೆದುಬಿಟ್ಟಿದೆ. ಬೇರೆ ಯಾವುದೇ ಸಮುದಾಯದವರು ಈ ಕೆಲಸ ಮಾಡಲು ಸಿದ್ಧರಿಲ್ಲ. ‘ಬಿಟ್ಟಿ ಚಕ್ರಿ’ ಎಂದು ಕರೆಯಲ್ಪಡುವ ಈ ಪದ್ಧತಿಯು ಉತ್ತರ ಕರ್ನಾಟಕದಲ್ಲಿ ಪ್ರಚಲಿತದಲ್ಲಿದೆ. ಕಾರ್ಮಿಕರನ್ನು ಜೀತಗಾರಿಕೆಗೆ ತಳ್ಳಲಾಗಿದೆ. ಶವಗಳನ್ನು ಹೂಳಲು ಗುಂಡಿ ತಗೆಯುತ್ತಾರೆ. ಆದರೆ ಇವರಿಗೆ ಸಿಗುವ ಕೂಲಿ ಯಾವಾಗಲೂ ಅತ್ಯಲ್ಪ.
ಈ ಕಾರ್ಮಿಕರು ತಮ್ಮ ಕೆಲಸದ ಸಮಯದಲ್ಲಿ ಹಲವಾರು ದೌರ್ಜನ್ಯಗಳಿಗೆ ಒಳಗಾಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ಸ್ಮಶಾನ ಭೂಮಿಯನ್ನು ಕೆಲವರು ಅತ್ರಿಕ್ರಮಣ ಮಾಡುತ್ತಾರೆ. ಹೀಗಾಗಿ ಸಮಾಧಿಗಳಿಗೆ ಸ್ಥಳಾವಕಾಶ ಕಡಿಮೆಯಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಮಸಣ ಕಾರ್ಮಿಕರು ಹಳೆಯ ಸಮಾಧಿಗಳನ್ನು ಅಗೆದು ಕೊಳೆತ ಅಥವಾ ಅರ್ಧ ಕೊಳೆತ ಶವಗಳನ್ನು ಕೈಯಿಂದ ಹೊರಗೆಳೆಯುತ್ತಾರೆ. ಹೊಸ ಶವಕ್ಕೆ ಹಳೆಯ ಸಮಾಧಿಯನ್ನು ಬಳಸುತ್ತಾರೆ. ನಂತರ ಕೊಳೆತ ದೇಹವನ್ನು ಹತ್ತಿರದ ಹೊಲಕ್ಕೆ ಒಯ್ದು ಸುಡಲಾಗುತ್ತದೆ. ಇದಕ್ಕಾಗಿ ಕೈಗವಸು ಅಥವಾ ವಿಶೇಷ ಉಪಕರಣಗಳನ್ನು ಬಳಸುವುದಿಲ್ಲ ಎಂದು ಸಣ್ಣಹನುಮಂತಪ್ಪ ಹೇಳುತ್ತಾರೆ.
ಒಂಟಿಯಾಗಿ ವಾಸಿಸುತ್ತಿದ್ದ ಅನೇಕ ಜನರು ಸಾವನ್ನಪ್ಪಿದ ನಿದರ್ಶನಗಳನ್ನು ಕೋವಿಡ್ ಸಂದರ್ಭದಲ್ಲಿ ಈ ಮಸಣ ಕಾರ್ಮಿಕರು ಎದುರಿಸಿದ್ದಾರೆ. ಯಾವುದೇ ವೇತನವಿಲ್ಲದೆ ಇಂತಹ ಕೊಳೆತ ಶವಗಳನ್ನು ವಿಲೇವಾರಿ ಮಾಡಿದ ಉದಾಹರಣೆಗಳಿವೆ.
ಗ್ರಾಮೀಣ ಪ್ರದೇಶಗಳಲ್ಲಿ ಬರ ಮತ್ತು ಮಳೆಗೆ ಸಂಬಂಧಿಸಿದಂತೆ ಹಲವಾರು ಮೂಢನಂಬಿಕೆಗಳಿವೆ. ಬರಗಾಲದ ಸಂದರ್ಭದಲ್ಲಿ ಸ್ಥಳೀಯರು ಮಳೆಗಾಗಿ ಪ್ರಾರ್ಥಿಸಿ ಕೆಲವು ಆಚರಣೆಗಳನ್ನು ಹಮ್ಮಿಕೊಳ್ಳುತ್ತಾರೆ. ಕಪ್ಪೆ ಮೆರವಣಿಗೆ, ಕತ್ತೆ ಮೆರವಣಿಗೆ, ಭಜನೆ ಓದುವುದು, ಪುರಾಣ ಓದುವುದು ಇತ್ಯಾದಿ ಮಾಡುತ್ತಾರೆ. ಬರ ನೀಗುವುದೆಂದು ಇವುಗಳನ್ನು ಹಮ್ಮಿಕೊಳ್ಳುತ್ತಾರೆ. ಅದೇ ರೀತಿ ಮೃತ ದೇಹವು ಸಂಪೂರ್ಣವಾಗಿ ಕೊಳೆಯದಿದ್ದಾಗ ಬರಗಾಲ ಉಂಟಾಗುತ್ತದೆ ಎಂಬ ಮೂಢನಂಬಿಕೆಯೂ ಇದೆ. ಆದ್ದರಿಂದ ಎಲ್ಲಾ ಸಮಾಧಿಗಳನ್ನು ಮತ್ತೆ ಅಗೆದು, ದೇಹಗಳನ್ನು ಪರೀಕ್ಷಿಸುವಂತೆ ಈ ಕಾರ್ಮಿಕರ ಮೇಲೆ ಒತ್ತಡ ಹೇರಿದ ನಿದರ್ಶನಗಳಿವೆ. ಯಾವುದಾದರೂ ಶವ ಸಾಕಷ್ಟು ಕೊಳೆಯದಿದ್ದರೆ, ಅಂತಹ ದೇಹವನ್ನು ಹೊರಗೆಳೆದು ಬಿಟ್ಟಿಯಾಗಿ ಸುಡಬೇಕಾಗುತ್ತದೆ.
ಸಣ್ಣಹನುಮಂತಪ್ಪ ಮಾತು ಮುಂದುವರಿಸುತ್ತಾ, “ನನ್ನ ಅಪ್ಪ, ತಾತ ಈ ಕೆಲಸ ಮಾಡ್ತಾ ಇದ್ದರು. ಈಗ ನಾನೂ ಮಾಡ್ತಾ ಇದ್ದೀನಿ. ಆದ್ರೆ ಮಗ ಈ ಕೆಲಸ ಮಾಡೋದು ಬೇಡ” ಎನ್ನುತ್ತಾರೆ.
ಮಂಗಳವಾರ ಬೆಂಗಳೂರಿನ ಇಎಂಎಸ್ ಭವನದಲ್ಲಿ ಸ್ಮಶಾನದ ಕಾರ್ಮಿಕರು ತಮ್ಮ ಸಮಸ್ಯೆಗಳ ಕುರಿತು ಚರ್ಚಿಸಿದರು. ತಮ್ಮನ್ನು ಸಫಾಯಿ ಕರ್ಮಚಾರಿಗಳೆಂದು ಗುರುತಿಸಬೇಕು, ಮೃತ ದೇಹಗಳನ್ನು ಹೂಳಲು ಮತ್ತು ವಿಲೇವಾರಿ ಮಾಡಲು ಯೋಗ್ಯವಾದ ವೇತನವನ್ನು ನಿಗದಿಪಡಿಸಬೇಕು ಎಂದು ಆಶಿಸಿದರು. ‘ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘಟನೆ’ ಎಂಬ ಬ್ಯಾನರ್ ಅಡಿಯಲ್ಲಿ ಈ ಕಾರ್ಯಕರ್ತರನ್ನು ಸಂಘಟಿಸುತ್ತಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಈ ಸಭೆಯನ್ನು ಹಮ್ಮಿಕೊಂಡಿತ್ತು.
ದೇವದಾಸಿಯರೊಂದಿಗೆ ಕೆಲಸ ಮಾಡುತ್ತಿರುವ ಸಿಪಿಐ(ಎಂ) ಸಂಘಟಕಿ ಬಿ.ಮಾಳಮ್ಮ ಅವರೊಂದಿಗೆ ಸಂವಾದ ನಡೆಸಿದ ನಂತರ ಮಸಣ ಕಾರ್ಮಿಕರು ಒಗ್ಗೂಡಲು ನಿರ್ಧರಿಸಿದ್ದಾರೆ. ಒಗ್ಗೂಡಿ ಸಂಘ ರಚಿಸುವ ಆಲೋಚನೆ ಬಂದಿದೆ ಎಂದು ಸಣ್ಣಹನುಮಂತಪ್ಪ ವಿವರಿಸಿದ್ದಾರೆ.
ಇದನ್ನೂ ಓದಿರಿ: ಬೆಂಗಳೂರು: ದೇವಾಲಯಗಳಲ್ಲಿ ಚಪ್ಪಲಿ ಕಾಯುವ ಕೆಲಸ ಪರಿಶಿಷ್ಟರಿಗೆ ಮೀಸಲು; ವಿರೋಧದ ಬಳಿಕ ಟೆಂಡರ್ ರದ್ದು
“ಮಾಳಮ್ಮ ಅಕ್ಕ ನಮ್ಮ ಹಳ್ಳಿಗಳಿಗೆ ಬಂದು ಮಸಣ ಕಾರ್ಮಿಕರ ಸಮೀಕ್ಷೆ ಮಾಡಿಸಿದರು. ಒಗ್ಗೂಡಿ ಸಂಘ ಕಟ್ಟಿದರೆ ಸರಕಾರದ ಮುಂದೆ ನಿಮ್ಮ ಬೇಡಿಕೆಗಳನ್ನು ಇಡಬಹುದು ಎಂದು ಹೇಳಿದ್ದರು. ಮಾಳಮ್ಮ ಅಕ್ಕನಿಗಿಂತ ಮುಂಚೆ ಯಾರೂ ನಮ್ಮ ಬಗ್ಗೆ ವಿಚಾರಿಸಿದವರಿಲ್ಲ” ಎಂದಿದ್ದಾರೆ.
ಅಂತಹ ದುರ್ಬಲ ಕಾರ್ಮಿಕರಿಗೆ ಸಹಾಯ ಮಾಡುವ ಜವಾಬ್ದಾರಿಯನ್ನು ಮಾಳಮ್ಮ ಅವರು 2014ರಲ್ಲಿ ವಹಿಸಿಕೊಂಡರು. ಅವರು ಅನುಭವಿ ಸಂಘಟಕಿ ಹಾಗೂ ಕರ್ನಾಟಕ ರಾಜ್ಯ ದೇವದಾಸಿ ವಿಮೋಚನಾ ಸಂಘದ ಪ್ರಧಾನ ಕಾರ್ಯದರ್ಶಿಯೂ ಹೌದು.
‘ನ್ಯೂಸ್‌ಕ್ಲಿಕ್’ನೊಂದಿಗೆ ಮಾತನಾಡಿರುವಅವರು, “ಸಮಾಧಿಯನ್ನು ತೋಡುವುದನ್ನು ಹೊರತುಪಡಿಸಿ ಅನೇಕ ಕೆಲಸಗಳನ್ನು ಈ ಕಾರ್ಮಿಕರು ಮಾಡುತ್ತಾರೆ. ಶವಕ್ಕೆ ಸಂಬಂಧಿಸಿದ ಕೊಳಕಾದ ವಸ್ತುಗಳನ್ನೂ ವಿಲೇವಾರಿ ಮಾಡಬೇಕಾಗಿರುತ್ತದೆ. ಶವದೊಂದಿಗೆ ವಿಧಿ ವಿಧಾನಗಳಲ್ಲಿ ಬಳಸುವ ಹಣ್ಣು-ಹಂಪಲುಗಳನ್ನು ವಿಲೇವಾರಿ ಮಾಡಬೇಕಿರುತ್ತದೆ. ಶವ ಸಂಸ್ಕಾರಕ್ಕೆ ಬೇಕಾದ ಸೌದೆಯನ್ನು ಕಾಡಿಗೆ ಹೋಗಿ ಕಡಿದು ತರಬೇಕಿರುತ್ತದೆ. ಇವರಿಗೆ ಯಾವುದೇ ವಾಹನ ಸೌಲಭ್ಯವೂ ಇಲ್ಲದೆ ತಲೆಯ ಮೇಲೆ ಕಟ್ಟಿಗೆಗಳನ್ನು ಹೊತ್ತು ಸಾಗಿಸಬೇಕಾಗುತ್ತದೆ” ಎಂದಿದ್ದಾರೆ.
ವರದಿ ಕೃಪೆ: ನ್ಯೂಸ್‌ಕ್ಲಿಕ್


