ಉತ್ತರ ಪ್ರದೇಶ ರಾಜ್ಯದಲ್ಲಿ ಮಹಿಳೆಯರ ವಿರುದ್ಧ ಅಪರಾಧಗಳು ಹೆಚ್ಚುತ್ತಿವೆ ಎಂಬ ಬಗ್ಗೆ ಧ್ವನಿ ಎತ್ತಿರುವ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯ ಬೇಟಿ ಬಚಾವೋ ಮಿಷನ್ ಬಗ್ಗೆ ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ಮಹಿಳೆಯರನ್ನು ರಕ್ಷಿಸುವ ಬದಲು, ಉತ್ತರ ಪ್ರದೇಶ ಬಿಜೆಪಿ ನೇತೃತ್ವದ ಸರ್ಕಾರವು “ಅಪರಾಧಿಗಳನ್ನು ಉಳಿಸಲು” ಪ್ರಯತ್ನಿಸುತ್ತಿದೆ ಎಂದು ಮಾಧ್ಯಮದ ವರದಿಯನ್ನು ಟ್ಯಾಗ್ ಮಾಡಿ ಸರ್ಕಾರದ ಬೇಟಿ ಬಚಾವೋ ಮಿಷನ್ ಅನ್ನು ಅಪರಾಧಿ ಬಚಾವೋಗೆ ಹೋಲಿಸಿದ್ದಾರೆ. ವರದಿಯಲ್ಲಿ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ನಡೆಸಿದ ಆರೋಪಿಯನ್ನು ಬಿಜೆಪಿ ಶಾಸಕ, ಅವರ ಪುತ್ರ ಮತ್ತು ಬೆಂಬಲಿಗರು ಪೊಲೀಸ್ ವಶದಿಂದ ಬಲವಂತವಾಗಿ ಬಿಡಿಸಿದ ಪ್ರಕರಣದ ಉಲ್ಲೇಖವಿದೆ.
ಘಟನೆ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಬೇಟಿ ಬಚಾವೋ (ಹೆಣ್ಣುಮಕ್ಕಳನ್ನು ಉಳಿಸಿ) ಎಂದು ಆರಂಭವಾದ ಅಭಿಯಾನ ಈಗ ಅದು ಅಪರಾಧಿ ಬಚಾವೋ (ಅಪರಾಧಿಗಳನ್ನು ಉಳಿಸಿ) ಎಂಬ ರೀತಿಯಲ್ಲಿ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಕುರಿತು ಪ್ರಧಾನಿ ಒಂದೂ ಮಾತಾಡಲಿಲ್ಲ ಏಕೆ? : ರಾಹುಲ್ ಗಾಂಧಿ ಪ್ರಶ್ನೆ
How it started: बेटी बचाओ
How it’s going: अपराधी बचाओ pic.twitter.com/N7IsfU7As5
— Rahul Gandhi (@RahulGandhi) October 18, 2020
ಮಾಧ್ಯಮ ವರದಿಯ ಪ್ರಕಾರ, ಬಿಜೆಪಿ ಶಾಸಕರು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಬಲವಂತವಾಗಿ ಪೊಲೀಸ್ ಠಾಣೆಗೆ ಪ್ರವೇಶಿಸಿ, ಮಹಿಳೆಗೆ ಮೇಲೆ ದೌರ್ಜನ್ಯ ನಡೆಸಿದ ಆರೋಪಿಯನ್ನು ಪೊಲೀಸ್ ವಶದಿಂದ ಬಲವಂತವಾಗಿ ಬಿಡಿಸಿ ಕರೆದೊಯ್ದಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಈ ಕುರಿತು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
क्या यूपी के सीएम बताएंगे कि यह किस ‘मिशन’ के तहत हो रहा है? बेटी बचाओ या अपराधी बचाओ? https://t.co/fpMMiE2MSd
— Priyanka Gandhi Vadra (@priyankagandhi) October 18, 2020
“ಇದು ಯಾವ ಮಿಷನ್” ಅಡಿಯಲ್ಲಿ ನಡೆಯುತ್ತಿದೆ ಎಂದು ಹೇಳುತ್ತೀರಾ ಯುಪಿ ಸಿಎಂ?” ಬೇಟಿ ಬಚಾವೊ (ಹೆಣ್ಣುಮಕ್ಕಳನ್ನು ಉಳಿಸಿ)” ಅಥವಾ “ಅಪರಾಧಿ ಬಚಾವೊ(ಅಪರಾಧಿಗಳನ್ನು ಉಳಿಸಿ)?” ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದಾರೆ.
ಹತ್ರಾಸ್ ಜಿಲ್ಲೆಯ 19 ವರ್ಷದ ದಲಿತ ಯುವತಿ ಮೇಲೆ ಮೇಲ್ಜಾತಿಯ ನಾಲ್ವರು ಪುರುಷರು ಅತ್ಯಾಚಾರ ಎಸಗಿ ಹಲ್ಲೆ ಮಾಡಿದ್ದರು. ತೀವ್ರವಾದ ಚಿತ್ರಹಿಂಸೆ, ಹಲ್ಲೆಯಿಂದಾಗಿ ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟ ಬಳಿಕ, ಕಾಂಗ್ರೆಸ್ ಉತ್ತರ ಪ್ರದೇಶ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಹತ್ರಾಸ್ ಘಟನೆ ಬಳಿಕ ಉತ್ತರ ಪ್ರದೇಶ ಸರ್ಕಾರ ದೇಶದಾದ್ಯಂತ ಹಲವು ಪ್ರತಿಭಟನೆಗಳು, ಪ್ರತಿರೋಧಗಳನ್ನು ಎದುರಿಸಬೇಕಾಯಿತು. ಆದರೂ ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳು, ಮಹಿಳಾ ದೌರ್ಜನ್ಯ, ದಲಿತರ ಮೇಲಿನ ಹಲ್ಲೆಗಳು ನಿರಂತರವಾಗಿ ವರದಿಯಾಗುತ್ತಲೇ ಇವೆ. ಆದಿತ್ಯನಾಥ್ ಸರ್ಕಾರ ಇವುಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವ ಕುರಿತು ಆದೇಶಗಳನ್ನು ಮಾತ್ರ ನೀಡುತ್ತಿದೆ. ಆದರೆ ಅದರಿಂದ ಯಾವುದೇ ಪರಿಣಾಮ ಉಂಟಾಗಿಲ್ಲ. ಹಾಗಾಗಿ ಸರ್ಕಾರ ಇಂತಹ ಘಟನೆಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.


