Homeಮುಖಪುಟಕಾಡು ಬೆಳೆಸಲು ಜೀವ ಮುಡುಪಿಟ್ಟ ಭಟ್ರಳ್ಳಿ ಗೂಳೆಪ್ಪನವರಿಗೆ ವಾಲ್ಮೀಕಿ ಪ್ರಶಸ್ತಿ

ಕಾಡು ಬೆಳೆಸಲು ಜೀವ ಮುಡುಪಿಟ್ಟ ಭಟ್ರಳ್ಳಿ ಗೂಳೆಪ್ಪನವರಿಗೆ ವಾಲ್ಮೀಕಿ ಪ್ರಶಸ್ತಿ

- Advertisement -
- Advertisement -

ಸಂಶೋಧಕ, ಯುವ ಬರಹಗಾರ ಅರುಣ್ ಜೋಳದಕೂಡ್ಲಿಗಿಯವರು ತಮ್ಮ ಎಲೆ ಮರೆ-7ರ ಅಂಕಣದಲ್ಲಿ ಭಟ್ರಳ್ಳಿ ಗೂಳೆಪ್ಪನವರ ಬಗ್ಗೆ ಬರೆದಿದ್ದರು. ಈಗ ಭಟ್ರಳ್ಳಿ ಗೂಳೆಪ್ಪನವರಿಗೆ ವಾಲ್ಮೀಕಿ ಪ್ರಶಸ್ತಿ ದೊರೆತಿದೆ.

ನಂಜುಂಡಪ್ಪ ಅವರ ವರದಿ ಪ್ರಕಾರ ಅತೀ ಹಿಂದುಳಿದ ತಾಲೂಕುಗಳಲ್ಲಿ ಚಳ್ಳಕೆರೆ ಒಳಗೊಂಡಂತೆ ಮೊಳಕಾಲ್ಮೂರು ತಾಲೂಕು ಸೇರುತ್ತದೆ. ಹಾಗೆ ನೋಡಿದರೆ ಇದು ಕರ್ನಾಟಕದ ನಡುಮಧ್ಯೆ ಬರುವ ಭೂಭಾಗ. ಈ ಬಯಲ ಬಿಸಿಲಿಗೆ ಬಿರುಕುಬಿಟ್ಟ ನೆಲದಂತೆಯೂ, ಬಟ್ಟಂಬಯಲ ಆಲಯದಂತೆಯೂ ಇದೆ. ಹಿರಿಯೂರು ಚಳ್ಳಕೆರೆ ಮಾರ್ಗವಾಗಿ ಬಳ್ಳಾರಿಗೆ ಚಲಿಸುತ್ತಿದ್ದರೆ ಈ ಭಾಗದ ಬಂಡೆಗಳಿಂದ ಸುತ್ತುವರಿದ ಬೆಟ್ಟಗಳು ಎದುರಾಗುತ್ತವೆ. ಬಿತ್ತನೆ ಇಲ್ಲದ ಹೊಲಗಳು ಬಿಸಿಲ ಉಡುಪುತೊಟ್ಟು ದುಃಖಿಸುತ್ತಿರುವಂತೆ ಭಾಸವಾಗುತ್ತದೆ. ಸಂಗಾತಿಯಾಗಿ ಪೌಷ್ಠಿಕಾಂಶದ ಕೊರತೆಯಿಂದ ನರಳುತ್ತಿರುವ ಮಕ್ಕಳಂತಹ ಕುರುಚಲು ಕಾಡು ಅಲ್ಲಲ್ಲಿ ಕುಪ್ಪೆಕುಪ್ಪೆಯಾಗಿ ಕಾಣುತ್ತದೆ. ಈ ಮಧ್ಯೆಯೂ ಜೀವಚೈತನ್ಯದ ಕುರುಹು ಎಂಬಂತೆ ಹಾಡುವ ಹಕ್ಕಿಗಳು ಸುಳಿದಾಡುವ ಜೀವರಾಶಿ. ಉಳಿದಂತೆ ಬಯಲೆಂಬ ಬಯಲ ಜತೆ ಬಿಸಿಲೆಂಬ ಬಿಸಿಲು. ಇಂತಹ ಪರಿಸರದಲ್ಲಿ ಹಸಿರಿನ ಕನಸೊತ್ತು ಕಾಡಿನ ಕಾವಲಿಗೆ ತನ್ನ ಜೀವವನ್ನೆ ತೇದು ಗಂಧದ ವಾಸನೆ ಬೀರಿದಾತ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಭಟ್ರಳ್ಳಿಯ ತಳವಾರ ಗೂಳೆಪ್ಪ.

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಾಲಸಾಗರ ವ್ಯಾಪ್ತಿಯ ರಕ್ಷಿತ ಅರಣ್ಯವನ್ನು ಪ್ರವೇಶಿಸುತ್ತಿದ್ದಂತೆ ಭಟ್ರಳ್ಳಿ ಗೂಳೆಪ್ಪ ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದ ಹಚ್ಚಹಸಿರಿನ ಕಾಡು ಸಿಗುತ್ತದೆ. ನಾನೊಮ್ಮೆ ಗೂಳೆಪ್ಪನನ್ನು ಭೇಟಿ ಮಾಡಲೆಂದು ಹೋದಾಗ ಗೂಳೆಪ್ಪ ಮಾತನಾಡುತ್ತಾ ಕಾಡಿನೊಳಗೆ ಕರೆದುಕೊಂಡು ಹೋಗತೊಡಗಿದರು. ತಾನು ಅಲ್ಲಲ್ಲಿ ತೋಡಿದ ನೀರುಗುಂಡಿಗಳನ್ನು ತೋರಿಸುತ್ತಾ ನೀರು ನಿಲ್ಲಿಸುವ ಸಾಹಸದ ಕಥೆಗಳನ್ನು ಹೇಳತೊಡಗಿದರು. ನಡಿಗೆಯ ಆರಂಭದಲ್ಲಿ ಬಿಡಿಬಿಡಿಯಾಗಿದ್ದ ಗಿಡಮರಗಳು ನಿಧಾನಕ್ಕೆ ಹೆಚ್ಚಾಗತೊಡಗಿದವು. ಮುಂದೆ ಸ್ವಲ್ಪ ದೂರದಲ್ಲಿ ಸಾಲುಸಾಲು ಆಸಿನ (ಆರಿಗಿಡ) ಮರಗಳು ಕಾಣತೊಡಗಿದವು. 50 ಹೆಕ್ಟೇರ್ ಪ್ರದೇಶದ ಈ ಕಾಡನ್ನು ಗೂಳೆಪ್ಪ ಕಣ್ಣಲ್ಲಿ ಕಣ್ಣಿಟ್ಟು ಕಾಪಿಟ್ಟಿದ್ದಾನೆ.
ಗೂಳೆಪ್ಪ ಈ ಮರಗಳನ್ನು ಯಾವಾಗ ನೆಟ್ಟವು ಎಂದು ಲೆಕ್ಕ ಇಟ್ಟು ಹೇಳುತ್ತಾರೆ. ಕೆಲವು 1995 ರಲ್ಲಿ ನೆಟ್ಟವಾಗಿದ್ದರೆ ಮತ್ತೆ ಕೆಲವು 1997 ರಲ್ಲಿ ನೆಟ್ಟವುಗಳು. ಅವೆಲ್ಲಾ ಈಗ ಎತ್ತರಕ್ಕೆ ಬೆಳೆದು ಗೂಳೆಪ್ಪನ ಹೆಸರೇಳುತ್ತಿವೆ. ಇಡೀ ಕಾಡಿನ ಜೀವನಾಡಿಯನ್ನು ಕೇಳಿಸಿಕೊಳ್ಳುವಷ್ಟು ಈ ಕಾಡಿನ ಜತೆ ಈತ ಬೆಸೆದುಕೊಂಡಿದ್ದಾನೆ. ಈ ಕಾಡನ್ನು ಸುತ್ತಿದ್ದರೆ ಕಡಿದು ಮೊಟಕಾದ ಒಂದೇ ಒಂದು ಬೊಡ್ಡೆಯೂ ಕಾಣಲು ಸಿಗುವುದಿಲ್ಲ. ಅಷ್ಟರಮಟ್ಟಿಗೆ ಗೂಳೆಪ್ಪನ ಕಾವಲು ಕಾಡನ್ನು ಸಂರಕ್ಷಿಸಿದೆ. ಆಲ, ಬೇವು, ಅರಳಿ, ನೇರಲ, ಬಿಕ್ಕೆ, ಕಮರ, ತಪ್ಸೆ, ದೊಂಡು ಜಾಲಿ, ಉಲಿಪೆ, ಸಪಳೆ, ಆಸು ಹೀಗೆ ಹತ್ತಾರು ಜಾತಿಯ ಮರಗಿಡಗಳು ನಿರಾತಂಕವಾಗಿ ಬೆಳೆಯುತ್ತಿವೆ. ಕವಳೆ, ಸೀತಾಫಲ, ಬಿಕ್ಕೆ, ಕಾರೆ, ಬರಗಿ, ಬೆಳವಿ, ಹುಣಸೆ, ಹತ್ತಿ ಮುಂತಾದ ಹಣ್ಣಿನ ಮರಗಿಡಗಳು ಕಾಲಾನುಸಾರ ಹಣ್ಣು ಕೊಡುತ್ತಿವೆ. ಕರಡಿ, ಕಾಡುಹಂದಿ, ಚಿರತೆ, ನರಿ, ಮೊಲ, ತೋಳ ಮೊದಲಾದ ಪ್ರಾಣಿಗಳು, ನವಿಲು, ಬೆಳವ, ಕೋಗಿಲೆ, ಕೌಜುಗ, ಗಿಡುಗ, ಕಾಜಾಣ, ಚಿವುಟ ಗುಬ್ಬಿ ಮೊದಲಾದ ಪಕ್ಷಿಗಳು ಒಳಗೊಂಡಂತೆ ಒಂದು ಕುಟುಂಬದ ಸದಸ್ಯರಂತೆ ನಲಿದಾಡಿಕೊಂಡಿವೆ.

ಹೀಗೆ ಗೂಳೆಪ್ಪ ಕಾಡಿಗೆ ಅಂಟಿಕೊಂಡ ಕಥೆಯೂ ಕುತೂಹಲಕಾರಿಯಾಗಿದೆ. ಸರಿಸುಮಾರು 30 ವರ್ಷದ ಹಿಂದೆ ಅರಣ್ಯ ಇಲಾಖೆಯು ಕಾಡಿನಲ್ಲಿ ಸಸಿ ನೆಡುವ ಕೆಲಸಕ್ಕೆ ದಿನಗೂಲಿ ಲೆಕ್ಕದಲ್ಲಿ ಗೂಳೆಪ್ಪನನ್ನು ಒಳಗೊಂಡಂತೆ ಅನೇಕರನ್ನು ಕೆಲಸಕ್ಕೆ ಹಚ್ಚಿತು. ಹೀಗೆ ಎಲ್ಲರಂತೆ ಗೂಳೆಪ್ಪನೂ ಸಸಿ ನೆಡುತ್ತಾ ಕಾಡಿನ ನಂಟಿಗೆ ಬಿದ್ದ. ಕೆಲಸ ಕಡಿಮೆಯಾದಂತೆ ಇಲಾಖೆ ಕೆಲಸಗಾರರ ಸಂಖ್ಯೆಯನ್ನು ಕಡಿತಗೊಳಿಸುತ್ತಾ ಬಂತು. ನಂತರ ಮಳೆಗಾಲದ ಆರಂಭಕ್ಕಷ್ಟೇ ಒಂದೆರಡು ತಿಂಗಳುಗಳಿಗೆ ಈ ಕೆಲಸ ಸೀಮಿತವಾಯಿತು. ಬರುಬರುತ್ತಾ ನಿಂತೇ ಹೋಯಿತು. ಹೀಗಿರುವಾಗ ಗೂಳೆಪ್ಪನಿಗೆ ಕಾಡಿನ ನಂಟು ಅಷ್ಟೊತ್ತಿಗೆ ಗಟ್ಟಿಯಾಗಿತ್ತು. ಇಲಾಖೆಯವರು ಕೂಲಿ ಕೊಟ್ರೆಷ್ಟು ಬಿಟ್ರೆಷ್ಟು ಸಸಿ ನೆಡುತ್ತಾ ಕಾಡನ್ನ ಕಾಯ್ತೀನಿ ಎಂಬ ನಿರ್ಧಾರಕ್ಕೆ ಬಂದರು. ಈ ಮಧ್ಯೆ ಅರಣ್ಯ ಇಲಾಖೆಯು ನೇಮಿಸಿದ ಕಾಡಿನ ವಾಚರುಗಳು ತಮ್ಮ ಎಂದಿನ ಸಂಬಳಕ್ಕಾಗಿ ಡ್ಯೂಟಿ ಮಾಡುತ್ತಿದ್ದರೆ, ಗೂಳೆಪ್ಪ ಕೂಲಿಯೂ ಇಲ್ಲದೆ ಕಾಡು ಕಾಯುವುದನ್ನು ತನ್ನ ನಿತ್ಯದ ಕರ್ಮವನ್ನಾಗಿಸಿಕೊಂಡ.

ದಿನವೂ ಗೂಳೆಪ್ಪನ ದಿನಚರಿ ಶುರುವಾಗುವುದು ಬೆಳಗ್ಗೆ 5 ಗಂಟೆಗೆ. ಅಷ್ಟೊತ್ತಿಗೆ ಊಟ ಮಾಡಿ, ಬುತ್ತಿ ನೀರು ತಗೊಂದು ಕೈಲೊಂದು ಮಚ್ಚು ಕೋಲಿಡಿದು ಕಾಡಿಗೆ ಹೊರಟರೆ ಮತ್ತೆ ಬರುವುದು ಸಂಜೆ ಏಳರ ಹೊತ್ತಿಗೆ. ಇಂತಹ ದಿನಚರಿಯನ್ನು ಈಗ್ಗೆ 30 ವರ್ಷಗಳಿಂದ ಮಾಡುತ್ತಾ ಬಂದಿರುವುದೇ ಒಂದು ಅಪರೂಪದ ಸಂಗತಿಯಾಗಿದೆ. ಗೂಳೆಪ್ಪ ಕಾಡಿಗೆ ಹೋಗುವುದನ್ನು ನೋಡಿದರೆ ಸಾಕು ಯಾರೂ ಆ ಕಡೆ ಸುಳಿಯುವುದಿಲ್ಲ. ಮರ ಕಡಿಯುವುದಿರಲಿ ಆಡು ಕುರಿ ದನಕರು ಮೇಯಿಸುವುದೂ ಇಲ್ಲಿ ನಿಷಿದ್ಧ. ಕೆಲವೊಮ್ಮೆ ಈತನ ಕಣ್ತಪ್ಪಿಸಿ ಮರ ಕಡಿವ ಕೆಲವರನ್ನು ರೇಂಜರರಿಗೆ ಹಿಡಿದುಕೊಟ್ಟದ್ದಕ್ಕೆ ಗೂಳೆಪ್ಪ ಊರವರ ವಿರೋಧವನ್ನೂ ಎದುರಿಸಬೇಕಾಯಿತು. ಇದರಿಂದಾಗಿ ಸುತ್ತಮುತ್ತಣ ಊರವರ ಜತೆ ಸಣ್ಣಪುಟ್ಟ ಜಗಳಗಳೂ ಮನಸ್ತಾಪಗಳೂ ನಡೆದವು. ಇದೀಗ ಇಂತಹ ಯಾವ ಸಂಘರ್ಷಗಳೂ ನಡೆಯುವಂತಿಲ್ಲ. ಸುತ್ತಮುತ್ತಣ ಊರವರಿಗೆ ಗೂಳೆಪ್ಪನ ಬಗ್ಗೆ ಎಂಥದೋ ಪ್ರೀತಿಸ್ನೇಹದ ಬೆಸುಗೆ ಸಾಧ್ಯವಾಗಿದೆ.

ಗೂಳೆಪ್ಪನ ಮನದಲ್ಲಿ ಅವಿತು ಕುಳಿತು ಬಿಕ್ಕಳಿಸುವ ದುಃಖದ ಕಡಲೊಂದಿದೆ. ಅದು ಗೂಳೆಪ್ಪನನ್ನು ಇನ್ನಷ್ಟು ಗಟ್ಟಿಗೊಳಿಸಿದಂತಿದೆ. ಆರು ಜನ ಮಕ್ಕಳು ಚಿಕ್ಕವರಿರುವಾಗಲೆ ಮಡದಿ ಅಕಾಲಿಕ ಮರಣವನ್ನಪ್ಪುತ್ತಾಳೆ. ಮಡದಿಯ ಸಾವು ಗೂಳೆಪ್ಪನನ್ನು ಇನ್ನಿಲ್ಲದ ಕಷ್ಟಕ್ಕೆ ಸಿಲುಕಿಸುತ್ತದೆ. ಇಂತಹ ಕಡುಕಷ್ಟದಲ್ಲಿ ಗೂಳೆಪ್ಪ ಮಕ್ಕಳಿಗೆ ಅಡುಗೆ ಮಾಡಿಟ್ಟು, ಅವರನ್ನೆಲ್ಲಾ ಶಾಲೆಗೆ ಕಳಿಸಿ ಮತ್ತೆ ತನ್ನ ಕಾಡುಕಾಯುವ ಕಾಯಕಕ್ಕೆ ಹೋಗುತ್ತಿದ್ದರು. ಈ ಮಧ್ಯೆ ಮರುಮದುವೆಗೆ ಸಲಹೆಗಳು ಬಂದರೂ ಗೂಳೆಪ್ಪ ಅತ್ತ ಕಡೆ ಗಮನ ಹರಿಸಲಿಲ್ಲ. ಬಹುಶಃ ಕಾಡಿನ ಗಿಡ ಮರ ಬಳ್ಳಿಗಳ ಜತೆಗಿನ ಒಡನಾಟವೇ ಅವರ ಒಂಟಿತನವನ್ನು ನೀಗಿ ಜೀವನೋತ್ಸಾಹವನ್ನು ತುಂಬಿದಂತಿದೆ.

ಗೂಳೆಪ್ಪನ ಈತನಕದ ಅನುಭವದಲ್ಲಿ ಹತ್ತು ಜನ ರೇಂಜರುಗಳು ಬಂದುಹೋಗಿದ್ದಾರೆ. ಇದರಲ್ಲಿ ದಿದಿಗಿ ಸಾಹೇಬರು ಎನ್ನುವ ರೇಂಜರನ್ನು ಗೂಳೆಪ್ಪ ಪ್ರೀತಿಯಿಂದ ನೆನೆಯುತ್ತಾರೆ. ಅವರು ತುಂಬಾ ಸ್ಟ್ರಿಕ್ಟ್ ಆಫೀಸರ್ ಆಗಿದ್ದರು ಯಾವ ಪಿಳ್ಳೆ ನರಿಯೂ ಕಾಡನ್ನು ಪ್ರವೇಶ ಮಾಡುವಂತಿರಲಿಲ್ಲ ಎನ್ನುವುದು ಆತನ ಅಭಿಪ್ರಾಯ. ಹಾಗಾಗಿ ಇವರಿದ್ದಾಗ ಗೂಳೆಪ್ಪನಿಗೆ ಆನೆಯ ಬಲ ಬಂದಂತಾಗಿತ್ತು. ಈ ಸಂದರ್ಭದಲ್ಲಿಯೇ ಗೂಳೆಪ್ಪನ ದಿನಗೂಲಿಯು ಸಂಬಳವಾಗಿ ಪರಿವರ್ತನೆ ಹೊಂದಿತು. ಇದರಿಂದಾಗಿ ಇದೀಗ ಗೂಳೆಪ್ಪ ನಿಯಮಿತವಾಗಿ ಒಂದಷ್ಟು ಸಂಬಳವನ್ನು ಪಡೆಯುವಂತಾಗಿದೆ. ಗೂಳೆಪ್ಪ ಕಾಯುವ ಕಾಡು ಗುಡೆಕೋಟೆ ಕರಡಿಧಾಮದ ವ್ಯಾಪ್ತಿಗೆ ಬಂದಿದೆ. ಎಂದಿನಂತೆ ಕಾಡಿನ ಮರ ಗಿಡ ಬಳ್ಳಿ ಹಕ್ಕಿ ಕ್ರಿಮಿಕೀಟ ಪ್ರಾಣಿಗಳ ಜತೆ ಪಿಸುಮಾತನ್ನಾಡುತ್ತಾ ಗೂಳೆಪ್ಪ ಕಾಡು ಕಾಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

  • ಅರುಣ್ ಜೋಳದ ಕೂಡ್ಲಿಗಿ

ಇದನ್ನೂ ಓದಿ: ಲೈಂಗಿಕ ವೃತ್ತಿಯಿಂದ ಲೇಖಕಿಯಾಗಿ ಬದಲಾದ ನಳಿನಿ ಜಮೀಲಾಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...