ಕಳೆದ ತಿಂಗಳು ಭಿಲ್ವಾರಾ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಬಾಲಕಿಯ ಮೇಲೆ ಗುಂಪೊಂದು ಸಾಮೂಹಿಕವಾಗಿ ಅತ್ಯಾಚಾರ ಮಾಡಿದ ನಂತರ ಆಕೆಗೆ ಬೆಂಕಿ ಹಚ್ಚಿದ್ದಾರೆ. ಶವ ಆಗಸ್ಟ್ 2 ರಂದು ಕುಲುಮೆಯ ಬಳಿ ಪತ್ತೆಯಾಗಿತ್ತು.
ಕೊಟಾರಿ ಉಪ ಪೊಲೀಸ್ ವರಿಷ್ಠಾಧಿಕಾರಿ ಶ್ಯಾಮ್ ಸುಂದರ್ ಬಿಷ್ಣೋಯ್ ಅವರು ಶಹಪುರ ಜಿಲ್ಲೆಯ ವಿಶೇಷ ನ್ಯಾಯಾಲಯದ ಮುಂದೆ 400 ಪುಟಗಳ ಚಾರ್ಜ್‌ಶೀಟ್ ಅನ್ನು ಸಲ್ಲಿಸಿದ್ದಾರೆ. ಆರೋಪಪಟ್ಟಿಯಲ್ಲಿ ಒಂಬತ್ತು ಜನರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಇಬ್ಬರು ಅಪ್ರಾಪ್ತ ಆರೋಪಿಗಳ ವಿರುದ್ಧ ಪ್ರತ್ಯೇಕ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
”ಆರೋಪಿಗಳು ಕುಲುಮೆಗೆ ಹಾಕಿದಾಗ ಬಾಲಕಿ ಇನ್ನೂ ಜೀವಂತವಾಗಿದ್ದಳು ಎಂದು ಫೋರೆನ್ಸಿಕ್ ಪರೀಕ್ಷೆಯು ಸೂಚಿಸಿದೆ. ಅವಳು ಪ್ರಜ್ಞಾಹೀನಳಾಗಿರಬಹುದು ಆದರೆ ಅವಳು ಜೀವಂತವಾಗಿದ್ದಳು. ಆದ್ದರಿಂದ, ಐಪಿಸಿ ಸೆಕ್ಷನ್ 326 [ಸ್ವಯಂಪ್ರೇರಿತವಾಗಿ ಘೋರವಾದ ಗಾಯವನ್ನು ಉಂಟುಮಾಡುತ್ತದೆ] ಅಡಿಯಲ್ಲಿ ಈ ಪ್ರಕರಣವನ್ನು ಸೇರಿಸಲಾಗಿದೆ” ಎಂದು ಬಿಷ್ಣೋಯ್ ಹೇಳಿದ್ದಾರೆ.
”ಆಕೆಯ ದೇಹವನ್ನು ಸುಟ್ಟು ಹಾಕುವ ಮುನ್ನ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಬೆಂಕಿ ಹಚ್ಚುವ ಮೊದಲು ಆಕೆಯ ದೇಹದ ಮೇಲೆ ಪೆಟ್ರೋಲಿಯಂ ಆಧಾರಿತ ರಾಸಾಯನಿಕವನ್ನು ಸುರಿಯಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯಾಯಾಲಯದ ಮುಂದೆ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 8 ರಂದು ನಿಗದಿಪಡಿಸಲಾಗಿದೆ.
ಪೊಲೀಸರ ಕರ್ತವ್ಯಲೋಪ: ಕುಟುಂಬಸ್ಥರ ಆರೋಪ
ಕಳೆದ ತಿಂಗಳು ಬಾಲಕಿಯು ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ ನಂತರವೂ ಪೊಲೀಸರು ಸಕಾಲಿಕ ಕ್ರಮ ಕೈಗೊಂಡಿಲ್ಲ ಎಂದು ಆಕೆಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದರೆ, ಬಾಲಕಿ ಈಗ ಬದುಕಿದ್ದಿರಬಹುದು, ಇಲ್ಲವೇ ಅಂತಿಮ ಸಂಸ್ಕಾರಕ್ಕಾಗಿ ಆಕೆಯ ದೇಹವನ್ನು ಪಡೆಯುತ್ತಿದ್ದೆವು ಎಂದು ಆಕೆಯ ಚಿಕ್ಕಪ್ಪ ಹೇಳಿಕೊಂಡಿದ್ದಾರೆ.
”ಪೊಲೀಸರಿಗೆ ದೂರು ನೀಡಲು ಹೋದಾಗ, ಅಧಿಕಾರಿಗಳು ಆರಂಭದಲ್ಲಿ ದೂರನ್ನು ದಾಖಲಿಸಲಿಲ್ಲ, ಆದರೆ ಹುಡುಗಿಯ ವಯಸ್ಸಿನ ಪುರಾವೆಗಳು, ಅಂಕಪಟ್ಟಿ ಮತ್ತು ಇತರ ದಾಖಲೆಗಳನ್ನು ತೆಗೆದುಕೊಂಡುಬರುವಂತೆ ನಮ್ಮನ್ನು ಕಳುಹಿಸಿದರು” ಎಂದು ಬಾಲಕಿಯ ಕುಟುಂಬದವರು ಹೇಳಿದ್ದಾರೆ.
ಆನಂತರ ಮನೆಯವರೇ ಬಾಲಕಿಗಾಗಿ ಹುಡುಕಾಟ ನಡೆಸಿದ್ದಾರೆ. ಆಗ ಕೊಟಾರಿ ಪ್ರದೇಶದಲ್ಲಿ ಕಲ್ಲಿದ್ದಲು ಕುಲುಮೆಯಲ್ಲಿ ಕೆಲವು ಮೂಳೆಗಳು ಮತ್ತು ಆಭರಣಗಳು ಪತ್ತೆಯಾಗಿವೆ.
ಈ ಘಟನೆಯು ರಾಜಕೀಯ ಆಕ್ರೋಶಕ್ಕೆ ಕಾರಣವಾಗಿತ್ತು, ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳಾ ಭದ್ರತೆಯ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು.
ಇದನ್ನೂ ಓದಿ: ಅಪ್ರಾಪ್ತ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣ: ಪೊಲೀಸರ ಕರ್ತವ್ಯಲೋಪವೆಂದು ಕುಟುಂಬಸ್ಥರ ಆರೋಪ


