ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿಗೊಳಿಸಿ ಹಾಗೂ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿ ಬೀದರ್‌ನ ಔರಾದ್ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ.
ಕರ್ನಾಟಕ ಆದಿ ಜಾಂಬವ ಸಂಘಟನೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, “ಸದಾಶಿವ ಆಯೋಗ ವರದಿ ಜಾರಿಗೆ ಅಡ್ಡಿಪಡಿಸುತ್ತಿರುವ ಸಚಿವ ಚವ್ಹಾಣ್ ಆಯೋಗದ ಕುರಿತು ಜನರಿಗೆ ತಪ್ಪು ಮಾಹಿತಿ ರವಾನಿಸುತ್ತಿದ್ದಾರೆ. ಸದಾಶಿವ ಆಯೋಗ ವರದಿಯ ಮೂಲ ಉದ್ದೇಶಗಳೇ ಗೊತ್ತಿಲ್ಲದ ಸಚಿವರಿಗೆ ತಮ್ಮ ರಾಜಕೀಯ ದುರುದ್ದೇಶದಿಂದ ಜನತೆಗೆ ಆಯೋಗದ ಕುರಿತು ಗೊಂದಲ ಸೃಷ್ಟಿಸುತ್ತಿದ್ದಾರೆ” ಎಂದು ಆರೋಪಿಸಲಾಗಿದೆ.
ಸರ್ಕಾರದ ಒಬ್ಬ ಜವಾಬ್ದಾರಿ ಸಚಿವರಾದ ಅವರು ವರದಿ ಜಾರಿಗೆ ಅಡ್ಡಿಪಡಿಸುತ್ತಿರುವುದು ಖಂಡನೀಯವಾಗಿದೆ. ಕೂಡಲೇ ಸರ್ಕಾರ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಸಂಘಟಕರು ಆಗ್ರಹಿಸಿದರು.
ಇದನ್ನೂ ಓದಿ: ಕನ್ನಡದ ಮೊದಲ ಲೆಸ್ಬಿಯನ್ ಚಿತ್ರ ’ನಾನು ಲೇಡಿಸ್’ ತಸ್ವೀರ್ ದಕ್ಷಿಣ ಏಷ್ಯಾ ಚಿತ್ರೋತ್ಸವಕ್ಕೆ ಆಯ್ಕೆ
ಔರಾದ್‌ನ ಬಸ್ ನಿಲ್ದಾಣದಿಂದ ತಹಶೀಲ್ದಾರ್ ಕಚೇರಿವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳ ನೂರಾರು ಜನರು ಪಾಲ್ಗೊಂಡಿದ್ದರು. ಪ್ರತಿಭಟನೆಯಲ್ಲಿ ರಾಯಚೂರಿನ ಅಂಬಣ್ಣ ಅರೋಲಿಕರ್ ಅವರ ಹಾಡುಗಳನ್ನು ಹಾಡುತ್ತಾ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಪ್ರತಿಭಟನೆಯಲ್ಲಿ ಮಾದಿಗ ದಂಡೋರ ಸಮಿತಿಯ ರಾಜ್ಯ ಪದಾಧಿಕಾರಿ ಬಿ. ನರಸಪ್ಪಾ, ಮಾದಿಗ ದಂಡೋರ ಸಮಿತಿಯ ರಾಜ್ಯಾಧ್ಯಕ್ಷ ಎಂ. ದೇವರಾಜ, ಪ್ರಧಾನ ಕಾರ್ಯದರ್ಶಿ ಅಂಬಣ್ಣ ಅರೋಲಿಕರ (ಗದ್ದಾರ) ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಇದನ್ನೂ ಓದಿ: ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ಸರ್ಕಾರಕ್ಕೆ ಸಿದ್ದರಾಮಯ್ಯ ತರಾಟೆ


