ರೋಗಿಯೊಬ್ಬರು ವೈದ್ಯರ ಯಡವಟ್ಟಿನಿಂದ ಮೃತಪಟ್ಟಿರುವ ಆರೋಪ ಪಾಟ್ನಾದ ಜಮುಯಿ ಸದರ್ ಆಸ್ಪತ್ರೆಯಲ್ಲಿ ಕೇಳಿ ಬಂದಿದೆ.ಯುರೋ ಬ್ಯಾಗ್( ಮೂತ್ರ ಚೀಲ)ದ ಬದಲು ವೈದ್ಯರು ಕೋಲ್ಡ್ ಡ್ರಿಂಕ್ಸ್ ಬಾಟಲಿಯನ್ನು ರೋಗಿಗೆ ಅಳವಡಿಸಿರುವ ಆರೋಪ ಕೇಳಿ ಬಂದಿದೆ.ಇದಕ್ಕೆ ಪುಷ್ಠಿ ನೀಡುವ ಪೋಟೊ ಕೂಡ ವೈರಲ್ ಆಗಿದೆ.
ರೋಗಿಯನ್ನು ಆಸ್ಪತ್ರೆಗೆ ಕರೆತಂದಾಗ ಸ್ಥಿತಿ ತುಂಬಾ ಗಂಭೀರವಾಗಿತ್ತು ಮತ್ತು ಅವರು ಇಂದು ನಿಧನರಾದರು. ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಮುಯಿ ಸಿವಿಲ್ ಸರ್ಜನ್ ಡಾ.ಕೆ.ಎಂ.ಪ್ರತಾಪ್ ಮಾದ್ಯಮಗಳಿಗೆ ತಿಳಿಸಿದ್ದಾರೆ.
ಆಸ್ಪತ್ರೆಯ ನಿರ್ಲಕ್ಷ್ಯದಿಂದ ರೋಗಿಯು ಸಾವನ್ನಪ್ಪಿದ್ದಾನೆ ಎಂಬ ಆರೋಪವನ್ನು ನಿರಾಕರಿಸಿದ ಡಾ.ಪ್ರತಾಪ್, ಯುರೋ ಬ್ಯಾಗ್‌ನ ಬದಲಿಗೆ ಖಾಲಿ ತಂಪು ಪಾನೀಯ ಬಾಟಲಿಯನ್ನು ಜೋಡಿಸಿದ್ದಕ್ಕಾಗಿ ಸಂಬಂಧಪಟ್ಟ ಆರೋಗ್ಯ ಅಧಿಕಾರಿಗೆ ಶೋಕಾಸ್ ನೋಟಿಸ್ ನೀಡಿದ್ದೇನೆ ಎಂದು ಹೇಳಿದ್ದಾರೆ.
ರೋಗಿಯನ್ನು ರೈಲ್ವೇ ಪೊಲೀಸರು ಚಿಕಿತ್ಸೆಗಾಗಿ ದಾಖಲಿಸಿದಾಗ ಸದರ್ ಆಸ್ಪತ್ರೆಯಲ್ಲಿ ಯುರೋ ಬ್ಯಾಗ್ ಲಭ್ಯವಿರಲಿಲ್ಲ ಎಂದು ಸರ್ಜನ್ ಅವರು ಹೇಳಿದ್ದಾರೆ.
ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ 15-20 ನಿಮಿಷಗಳಲ್ಲಿ ಯುರೋ ಬ್ಯಾಗ್ ವ್ಯವಸ್ಥೆ ಮಾಡಲಾಗಿದೆ.ಆದರೆ ಯಾರೋ ಒಬ್ಬರು ಖಾಲಿ ತಂಪು ಪಾನೀಯ ಬಾಟಲಿಯೊಂದಿಗೆ ಅವರ ಛಾಯಾಚಿತ್ರವನ್ನು ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾರೆ ಎಂದು ಸಿವಿಲ್ ಸರ್ಜನ್ ಹೇಳಿದ್ದಾರೆ.
ಸೋಮವಾರ ಸಂಜೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರೋಗಿಯನ್ನು ಝಾಝಾ ರೈಲ್ವೆ ಪೊಲೀಸರು ಕರೆತಂದಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಪರೀಕ್ಷೆಯ ನಂತರ, ವೈದ್ಯರು ಯುರೋ ಬ್ಯಾಗ್ ವ್ಯವಸ್ಥೆ ಮಾಡಲು ಮತ್ತು ಇನ್ಸುಲಿನ್ ಚುಚ್ಚುಮದ್ದಿನ ಜೊತೆಗೆ ಗ್ಯಾಸ್ ಪೈಪ್ ನ್ನು ಸಿದ್ದಪಡಿಸಲು ಆಸ್ಪತ್ರೆಯ ಸಿಬ್ಬಂದಿಗೆ ಸೂಚಿಸಿದ್ದಾರೆ. ತಕ್ಷಣಕ್ಕೆ ಯುರೋ ಬ್ಯಾಗ್ ಲಭ್ಯವಿಲ್ಲದ ಕಾರಣ, ರೋಗಿಗೆ ಖಾಲಿ ಸ್ಪ್ರೈಟ್ ಬಾಟಲಿಯನ್ನು ಅಳವಡಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಆದರೆ ಆಸ್ಪತ್ರೆಯು ಸ್ಪ್ರೈಟ್ ಬಾಟಲಿಯನ್ನು ಅಳವಡಿಸಿರುವುದು ರೋಗಿಯ ಸಾವಿಗೆ ಕಾರಣ ಎಂದು ಮಾಧ್ಯಮ ವರದಿಗಳು ಆರೋಪಿಸಿವೆ.
ಇದನ್ನು ಓದಿ: ಮಣಿಪುರ ವಿಚಾರದಲ್ಲಿ ರಾಹುಲ್ ಹೃದಯದಿಂದ ಮಾತನಾಡಿದರೆ, ಶಾ ರಾಜಕೀಯವಾಗಿ ಮಾತನಾಡಿದ್ದಾರೆ: ಟಿಎಂಸಿ ಸಂಸದ


