“ಅರೆಗಣ್ಣ ಬಿಟ್ಟಲ್ಲೇ, ಕಿರುಗಣ್ಣ ಬಿಟ್ಟಲ್ಲೇ, ಬಿಟ್ಟು ನೋಡೇ ಉರಿಗಣ್ಣ… ಬಿಟ್ಟು ನೋಡೇ ಉರಿಗಣ್ಣ ಎಲ್ಲವ್ವಾ…” ಎನ್ನುತ್ತಾ ಚೌಡಿಕೆಯರು ಹಾಡತೊಡಗಿದರು. ಎಲ್ಲವ್ವನ ಹೊತ್ತ ಮಹೇಶ ಹೆಜ್ಜೆ ಮುಂದಿಡದೆ ನಿಂತಲ್ಲೇ ಕುಣಿಯತೊಡಗಿದ.
“ತಾಯಿ ತುಂಬಾ ಟೈಮಾಗಿದೆ. ಮಕ್ಕಳು-ಮರಿ ಹಸಿದಾವೆ. ನಡೆಯವ್ವ ಮುಂದಕ್ಕೆ…” ಅಂತ ಗುಡಿಗೌಡ ಲಕ್ಕಪ್ಪ ಬೇಡಿಕೊಂಡು, ಕಾಲಿಗೆ ನಿಂಬೆ ಹಣ್ಣು ಇಟ್ಟು, ಮೂರು ಸಲ ಈಡುಗಾಯಿ ನಿವಾಳಿಸಿ ಪಟ್ ಅಂತ ಭಾರಿಸಿದರು.
ಈಡುಗಾಯಿ ಛಿದ್ರಛಿದ್ರ ಆದೊಡನೆ ಎಲ್ಲವ್ವ ವಾಲಾಡ್ತಾ ಹೆಜ್ಜೆ ಹಾಕಿದಳು. ಅಸಾದೀರು ಚೌಡಿಕೆ ಪದ ಹಾಡತೊಡಗಿದರು. “ರೂವ್ ರೂವ್ ರೂವ್” ಅಂತ ಅರೆಗಳನ್ನು ವಾದ್ಯದೋರು ಉಜ್ಜತೊಡಗಿದರು. ಎಲ್ಲವ್ವನನ್ನು ಹಿಂಬಾಲಿಸಿ ಕದಿರೆ ನರಸಿಂಹ ದೇವರು ಹೊತ್ತ ಸೀನಣ್ಣ ಹೆಜ್ಜೆಹಾಕತೊಡಗಿದ.
*************
ಊರಿನ ಮಾದಿಗರ ಕೇರಿಯಲ್ಲಿ ಎಲ್ಲವ್ವನ ಹಬ್ಬ ಮಾಡಿ ಸುಮಾರು ಹದಿನೈದು ವರ್ಷಗಳಾಗಿತ್ತು. ಅಂದು ಮಕ್ಕಳಂತಿದ್ದವರು ಇಂದು ಮೀಸೆ ಹೊತ್ತು ಎರಡೆರಡು ಮಕ್ಕಳು ಮಾಡಿಕೊಂಡು ಹೊತ್ತುಹೊತ್ತಿಗೆ ಕುಡಿದುಕೊಂಡು, ಅವರಿವರ ಬಳಿ ಜಗಳ ಆಡ್ಕೊಂಡು ಕಾಲಕಳೆಯುತ್ತಿದ್ದರು. ಹಿಂಗಿರುವಾಗ ಒಂದಿನ ಯಾವುದೋ ಕಾಲದ ಚೀಟಿ ದುಡ್ಡು ದೇವರ ಹೆಸರಲ್ಲಿ ಜಮಾ ಆಗಿ, ಬಡ್ಡಿ ಬೆಳೆದು ದೊಡ್ಡದಾದದ್ದು ತಿಳೀತು. “ದೇವ್ರ ಹೆಸರಲ್ಲಿ ಯಾವುದೋ ಕಾಲದಲ್ಲಿ ಹಾಕಿದ ಚೀಟಿ ದುಡ್ಡಂತೆ. ಗುಡಿಗೌಡ್ರು ಬ್ಯಾಂಕ್‌ನಲ್ಲಿ ಇರಿಸಿದ್ರಂತೆ. ಅದೀಗ ಬಡ್ಡಿ ಬೆಳೆದು ದೊಡ್ಡದಾಗಿದೆಯಂತೆ. ಮನೆಮನೆಗೆಲ್ಲ ಹಂಚಿಬಿಡೋಣ” ಅಂತ ಮಾತು ಬಂದಾಗ ಹಟ್ಟಿ ಹಿರಿಮನುಷ್ಯ ಸಿದ್ದಲಿಂಗಣ್ಣ ಸಿಟ್ಟಾದರು. “ನಿಮಗೆ ದೇವ್ರು ದಿಂಡ್ರು ಅನ್ನೋದು ಇಲ್ವಾ? ಬರೀ ಕುಡ್ದು ತೇಲಾಡೋಕೆ ನೋಡ್ತೀರಾ. ಕಂಡೋರು ಆಡಿಕೊಳ್ಳೋಕು, ನೀವು ಮಾಡೋಕು ಸರಿ ಇದೆ. ಹೆಚ್ಚು ಕಮ್ಮಿ ಹದಿನೈದು ವರ್ಷ ಆಯ್ತು. ಈ ವರ್ಷನಾದ್ರೂ ಈ ದುಡ್ಡಿನಲ್ಲಿ ಜಾತ್ರೆ ಮಾಡೋಣ. ತಲೆಗೊಂದಿಷ್ಟು ಕಾಸ್ ಹಾಕಿದ್ರೆ ಜಾತ್ರೆ ನಡೆಯುತ್ತೆ. ಊರೂರುಗಳಿಗೆ ವಲಸೆ ಹೋಗಿರೊ ಒಕ್ಕಲುಗಳಿಗೆ ತಿಳ್ಸಿ. ಹಬ್ಬ ಮಾಡೇಬಿಡೋಣ” ಅಂದರು. ಆ ಕಾಲದಲ್ಲೇ ಕಾಲೇಜು ಮೆಟ್ಟಿಲೇರಿ ಪಿಯುಸಿವರೆಗೂ ಓದಿದ್ದ ಸಿದ್ದಲಿಂಗಣ್ಣನ ಮಾತನ್ನು ಹಟ್ಟಿ ಹುಡುಗ್ರು ಉಲ್ಲಂಘಿಸೋದು ಅಪರೂಪವಾಗಿತ್ತು. ಅವರ ಮಾತಿಗೆ ಚಿಕ್ಕಲ್ಲಯ್ಯನವರ ಮಗ ರೇಣುಕಪ್ಪ ದನಿಗೂಡಿಸಿದ. “ಅಣ್ಣಯ್ಯ ಹೇಳೋದು ಸರಿ ಐತೆ. ಸರಿಕ್ರು ಏನಂದುಕೊಂಡಾರು? ಎಲ್ಲೆಲ್ಲೋ ಖರ್ಚು ಮಾಡ್ತೀವಂತೆ. ಹಬ್ಬ ಮಾಡೋಣ ಬಿಡಿ” ಎಂದು ಪ್ರೋತ್ಸಾಹಿಸಿದ. ಹಬ್ಬದ ರಾಜಕೀಯಕ್ಕಾಗಿ ಉತ್ಸಾಹದಲ್ಲಿದ್ದ ಯುವಕ ರೇಣುಕಪ್ಪ ಎಲ್ಲರನ್ನೂ ಕರೆದು ಸಭೆ ಸೇರಿಸಿದ. ಜಾತ್ರೆಯೂ ಫಿಕ್ಸ್ ಆಯ್ತು. ಆ ದಿನ ಊರೂರುಗಳಿಂದ ಸಂಬಂಧಿಕರು, ಯಾವುದೋ ಕಾಲದಲ್ಲಿ ವಲಸೆ ಹೋದ ಎಲ್ಲವ್ವನ ಒಕ್ಕಲುಗಳು ಬಂದು ಸೇರಿದವು. ಎಲ್ಲವ್ವನನ್ನು ಕುಣಿಸೋಕೆ ನಿಗದಿಯಾಗಿದ್ದ ಅಸಾದೀರು, ವಾಲಗದೋರು ಬಂದರು.
ಬೆಳಿಗ್ಗೆಯೇ ಕಡಬ ಕೆರೆಗೆ ಹೋಗಿ ದೇವ್ರಿಗೆ ಪುಣ್ಯ ಮಾಡಿಸಬೇಕು ಅಂತ ಇದ್ದವರು ಅದು ಇದು ಅಂತ ಪರದಾಡಿ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಹೊಂಟು ನಿಂತರು. ದಾಸೋಹದ ಅನ್ನ ಇನ್ನೂ ಬೇಯಬೇಕಿತ್ತು. ಅದನ್ನು ಉಂಡು ಹೊರೊಡೋ ಪ್ಲಾನ್ ಇತ್ತು. ಆದರೆ ಹೊತ್ತಾದರೆ ಕಷ್ಟವಾಗುತ್ತೆ ಅಂತ ದೇವರನ್ನು ಹೊರಡಿಸಿಯೇಬಿಟ್ಟರು. ಹಸಿದುಕೊಂಡೇ ಸುಮಾರು ಮೂರು ಕಿಲೋಮೀಟರ್ ನಡೆಯಬೇಕಾಯ್ತು.
ಎರಡೂ ದೇವರುಗಳನ್ನು ತಲೆ ಮೇಲೆ ಹೊತ್ತ ಹುಡುಗ್ರು, ಅಲ್ಲಲ್ಲಿ ತಲೆ ಬದಲಿಸುತ್ತಾ, ದೇವರುಗಳನ್ನು ಕುಣಿಸುತ್ತಾ, ಕಡಬದ ಕೆರೆಯ ಕಡೇಕೋಡಿಗೆ ಬಂದರು. ಅಲ್ಲಿದ್ದ ಆಂಜಿನೇಯ ಸ್ವಾಮಿ ದೇವಸ್ಥಾನ ಪಕ್ಕದಲ್ಲಿ ದೇವಿಯನ್ನು ಇಳಿಸಿದರು. ಎಲ್ಲವ್ವ ನಾನ್‌ಮೀಟ್ ದೇವರಾದರೆ, ಕದಿರೆ ನರಸಿಂಹ ಮೀಟ್ ದೇವರು. ಹೀಗಾಗಿ ಪುಣ್ಯ ಆದ್ಮೇಲೆ ಕಡಿಯಲೆಂದು ಒಂದು ಹೋತ ಹಿಡ್ಕೊಂಡು ಬಂದಿದ್ದರು.
“ವೀಳ್ಯದೆಲೆ ಎಲ್ಲೋ ರೇಣುಕಾ? ಪುಣ್ಯ ಮಾಡೋ ಐನೋರು ಇನ್ನೂ ಬಂದಿಲ್ವಲ್ಲೋ” ಅಂತ ಪೂಜಾರಿ ಪುಟ್ಟಯ್ಯ, ಕರಿಯಲ್ಲಯ್ಯ ರಾಗ ಎಳೆಯತೊಡಗಿದರು. “ಬ್ಯಾಲಹಳ್ಳಿ ಮಾದಿಗ್ರು ಜಾತ್ರೆ ಮಾಡಿ ಹದಿನೈದು ವರ್ಷವೇ ಆಯ್ತಲ್ಲ, ಹೇಗೆ ಪೂಜೆ ಮಾಡೋದು ಅಂತಾನೇ ಮರೆತುಬಿಟ್ಟವರೇ” ಎಂದು ದೂರದೂರುಗಳಿಂದ ಬಂದ ಒಕ್ಕಲುಗಳು ಕೊಂಕು ನುಡಿಯತೊಡಗಿದವು. “ಎಲ್ಲ ಸಾಮಾನು ಸರಂಜಾಮ ಅವೆ. ದೇವರು ಹೊರಡಿಸೋ ಅವಸರದಲ್ಲಿ ಗುಡಿಯಲ್ಲೇ ಎಲ್ಲಾ ಬಿಟ್ಟು ಬಂದೌರೇ” ಅಂತ ಮಾತು ಬಂತು. ಕಡೇಕೋಡಿಯ ಆಂಜಿನೇಯ ದೇವಸ್ಥಾನದ ಮುಂದೆ ದೇವರುಗಳನ್ನು ಇಳಿಸಿ, ಪುಣ್ಯ ಮಾಡಲು ಶುರುವಚ್ಚಿಕೊಂಡಾಗ ಒಂದೊಂದೇ ಸಾಮಾನು ಸರಂಜಾಮಗಳು ನೆನಪಾಗತೊಡಗಿದವು. ಬೇವಿನ ಸೊಪ್ಪು, ಮಡಿಲಕ್ಕಿ, ವೀಳ್ಯದೆಲೆ, ಮರಿ ಕಡಿವೋ ಮಚ್ಚು- ಹೀಗೇ ಏನೋನೇ ಬಿಟ್ಟು ಬಂದಿದ್ದು ಪ್ರಸ್ತಾಪವಾಗತೊಡಗಿತು.
ಮಾದಿಗ ಪೂಜಾರಿಗಳು ಪುಣ್ಯ ಮಾಡಿದರೂ ಕೊನೆಗೆ ಕಡಬದ ವೈಷ್ಣವ ಐನೋರು ಬಂದು ಗಂಟೆ ಅಲ್ಲಾಡಿಸಿದಾಗಲೇ ಪುಣ್ಯಕಾರ್ಯ ಮುಗಿದಂತೆ. ಐನೋರು ಕೂಡ ಬಂದಿಲ್ಲ ಅನ್ನೋವಷ್ಟರಲ್ಲಿ ಅವರೂ ಎಕ್ಸ್‌ಎಲ್ ಸೂಪರ್ ಓಡಿಸಿಕೊಂಡು ಬಂದರು. “ಇನ್ನೂ ದೇವರು ತೊಳೆದಿಲ್ಲವೇ. ಎಲ್ಲ ಆದ್ಮೇಲೆ ಒಂದು ಫೋನ್ ಮಾಡಿದ್ರೆ ಬರ್ತಾ ಇದ್ದೆ. ಸುಮ್ಮನೆ ಅರ್ಜೆಂಟ್ ಮಾಡಿಬಿಟ್ಟಿರಿ. ನಾನು ಊಟ ಮಾಡೋದು ಯಾವಾಗ?” ಅಂತ ಐನೋರು ಗೊಣಗಾಡತೊಡಗಿದರು. “ಐನೋರೇ ಇನ್ನರ್ಧ ಗಂಟೆ ಎಲ್ಲ ಮಾಡ್ತೀವಿ. ಆ ಅರಳಿಮರದ ಕೆಳಗೆ ಕೂತಿರಿ” ಅಂತ ಪೂಜಾರಿಗಳು ದಿಕ್ಕು ತೋರಿಸಿದರು. “ಇವನ್ಯಾವಸೀಮೆ ಐನೋರು ಸ್ವಾಮಿ. ಸ್ವಲ್ಪ ತಾಳ್ಮೇನೇ ಇಲ್ಲ. ದೇವ್ರು ಏನಾದರೂ ಎಡವಟ್ಟು ಮಾಡಿದ್ರೆ ಅದಕ್ಕೆ ಈ ಐನೋರೆ ಕಾರಣ. ದೇವ್ರ ಕೆಲ್ಸಾ ಅಂತ ಬಂದಾಗ ಸ್ವಲ್ಪ ಒಳ್ಳೆ ಮಾತಾಡ್ಬಾರದಾ?” ಎಂಬ ಗೊಣಗಾಟ ಸುರುವಾತು. ಎರಡು ಮೈಲಿ ದೇವರ ಜೊತೆ ನಡೆದು ಬಂದು ಸುಸ್ತಾಗಿ, ಹಸಿದು ಹಣ್ಣಾಗಿದ್ದವರು ಕಡೇಕೋಡಿಯಲ್ಲಿನ ಅಂಗಡಿಗಳ ಬಳಿ ಜಮಾಯಿಸಿ, ಟೀ, ಬಿಸ್ಕತ್ತು, ಬ್ರೆಡ್ಡು ತಿನ್ನತೊಡಗಿದರು. ಬಿಟ್ಟು ಬಂದಿದ್ದ ಒಂದೊಂದೇ ಸಾಮಾನುಗಳನ್ನು ಊರಿನಿಂದ ಬೈಕ್ ಏರಿ ಬಂದ ಹುಡುಗರು ತಂದುಕೊಡತೊಡಗಿದರು.
ವಾದ್ಯದೋರ ಗೋಳಾಟ ಶುರುವಾಯ್ತು. “ಊಟ ಮಾಡಿ ಬಂದಿಲ್ಲ. ಹೆಂಗಪ್ಪ ದೇವ್ರ ಎತ್ತೋದು? ಸಿದ್ದಲಿಂಗಯ್ಯನೋರು ಊರಲ್ಲೇ ಅವ್ರಂತೆ. ಬೇರೆ ಕಾರ್ಯಗಳ ಸಿದ್ಧತೆಯಲ್ಲಿ ಇದ್ದಾರಂತೆ. ರೇಣುಕಪ್ಪ, ನಾವು ಊಟ ಮಾಡದಿದ್ದರೆ ಅರೆ ಬಡೆಯೋಕೆ ಆಗಲ್ಲ ಕಣಪ್ಪ ಅಂದ್ರು. ಹಟ್ಟಿಯ ಇತರ ಹುಡುಗರಿಗೆ ಅದುಇದು ಕೆಲಸ ತೋರಿಸಿದ ರೇಣುಕಪ್ಪ, ವಾದ್ಯದವರಿಗೆ ಊಟ ಮಾಡಿಸಿಕೊಂಡು ಬರಲು ಅಲ್ಲೇ ಇದ್ದ ಆಟೋ ಹತ್ತಿ ಕಡಬ ದಿಕ್ಕಿಗೆ ಹೊಂಟನು. ಇತ್ತ ಕಡೇಕೋಡಿಯ ಕೆಲವು ಹುಡುಗರು ಬ್ಯಾಲಹಳ್ಳಿಯ ಜನರಿಗೆ ಸಹಕರಿಸಿ ದೇವಿ ಪುಣ್ಯಕ್ಕೆ ನೆರವಾದರು. ಮತ್ತೊಂದೆಡೆ ತಡ ಆಯ್ತು ಅಂತ ಐನೋರು ಗೊಣಗಾಡುತ್ತಲೇ ಇದ್ದರು. ದೇವರುಗಳ ಸುತ್ತ ಪಂಚೆ ಸುತ್ತಿದ ಎಲ್ಲವ್ವನ ಪೂಜಾರಿಗಳು ಮೂರ್ತಿಗಳನ್ನು ತೊಳೆಯತೊಡಗಿದರು. ತುಂಬಿದ ಕೆರೆಯ ದಡಕ್ಕೆ ಮಕ್ಕಳು ಮರಿ ಹೋಗದಂತೆ ತಾಯಂದಿರು ಎಚ್ಚರದಿಂದಿದ್ದರು. ಹಸಿದು ಹೈರಾಣಾಗಿದ್ದ ಅಸಾದೀರು ಬೇಸರಗೊಂಡಿದ್ದರೂ ಹಸಿವು ತಡೆದುಕೊಂಡಿದ್ದರು. “ಎಲ್ಲರಂತೆಯೇ ನಾವು ಹಸಿದಿದ್ದೀವಿ. ದೇವರ ಕಾರ್ಯ ಮುಗಿಯಲಿ” ಅನ್ನುವಷ್ಟರಲ್ಲಿ, ವಾದ್ಯದೋರು ಊಟ ಮುಗಿಸಿಕೊಂಡು ಬಂದರು. ಐನೋರು ಎತ್ತಿನ ಗಂಜಲ ಚುಮುಕಿಸಿ ಗಂಟೆ ಅಲ್ಲಾಡಿಸಿದಾಗ ’ದೇವ್ರ ಪುಣ್ಯ ಆಯ್ತು’ ಎಂದು ಜನ ಭಾವಿಸಿದರು. ದೇವರುಗಳನ್ನು ಊರಿಗೆ ಹೊರಡಿಸಿದರು. “ಇಲ್ಲಿ ಮರೀಕಡಿಯುವಂತಿಲ್ಲ. ಪಕ್ಕದಲ್ಲೇ ಆಂಜಿನೇಯನ ಗುಡಿ ಇದೆ. ಅದಕ್ಕೆ ಆಗಲ್ಲ” ಎಂದು ಕಡೇಕೋಡೆಯ ಜನ ಹೇಳಿದಾಗ ಮುಂದೆ ಒಂದಿಷ್ಟು ದೂರ ಸಾಗಿ ಮರಿ ಕಡಿಯೋದು ಅಂತ ನಿರ್ಧಾರವಾಯ್ತು. ಬಂದಿದ್ದ ಇಬ್ಬರು ಅಸಾದಿಯವರು ಚೌಡಿಕೆ ಪದಗಳನ್ನು ಆಡುತ್ತಾ, ದೇವರುಗಳನ್ನು ಮುನ್ನಡೆಸಿದರು. ಚಿಕ್ಕ ಹೆಣ್ಣುಮಗಳೊಬ್ಬಳ ಮೇಲೆ ಕಳಸವನ್ನು ಹೊರಿಸಲಾಗಿತ್ತು. ಆ ರೂವ್ ರೂವ್ ಅರೆಯ ಸದ್ದಿಗೆ ಕಳಸ ಹೊತ್ತ ಬಾಲಕಿ ವಾಲಾಡತೊಡಗಿದಳು. “ಎಲ್ಲವ್ವ ಬಂದೌಳೆ, ಮಗೀನ ಬಿಗಿಯಾಗಿ ಹಿಡಿದುಕೊಳ್ರೋ” ಅಂತ ಪೂಜಾರಿಗಳು ಸೂಚಿಸಿದಾಗ ಕಳಸದ ಅತ್ತಇತ್ತ ಹೆಂಗಸರು ನಿಂತು ದೇವರನ್ನು ಕಂಟ್ರೋಲ್ ಮಾಡುತ್ತಿದ್ದರು.
ಇದನ್ನೂ ಓದಿ: ಹೋರಾಟದ ಬದುಕಿನ ಎರಡು ಆತ್ಮಕಥೆಗಳು ಒಂದು ಆತ್ಮಕಥಾನಕ ಕಾದಂಬರಿ
ಕೆರೆಕೋಡಿಯನ್ನು ದಾಟಿ ಸ್ವಲ್ಪ ದೂರ ಮೆರವಣಿಗೆ ಸಾಗಿತ್ತು. ಕದಿರೆ ನರಸಿಂಹ ಹಾಗೂ ಎಲ್ಲವ್ವ ಥಟ್ ಅಂತ ನಿಂತರು. ಕದಿರೆ ನರಸಿಂಹನನ್ನು ಹೊತ್ತ ಮಹೇಶ ಉಯಿಳಾಡತೊಡಗಿದ. ವಜನ್ನಾದ ದೇವರುಗಳನ್ನು ನಿಯಂತ್ರಿಸಲು ದೇವರು ಹೊತ್ತವರ ಹಿಂದೆ ಮುಂದೆ ಒಂದಿಬ್ಬರು ಇರುತ್ತಿದ್ದರು. ಮಹೇಶ ಸುಸ್ತಾಗಿರುವುದನ್ನು ಕಂಡ ವಿಜಿ ಎಂಬಾತ ದೇವರನ್ನು ಹೊರಲು ತಲೆ ನೀಡಿದ. ಆ ನಂತರವೂ ಕದಿರೆ ನರಸಿಂಹ ಹೆಜ್ಜೆ ಎತ್ತಿಡಲಿಲ್ಲ. “ಯಪ್ಪ ಮುಂದೆ ಹೆಜ್ಜೆ ಇಡಪ್ಪ” ಎಂದರೂ ಕೇಳಲಿಲ್ಲ. ಅಸಾದೀರು ಹಾಡತೊಡಗಿದರು. ಆದರೂ ಜಪ್ಪೆನ್ನಲಿಲ್ಲ. “ಓ ಈಗ ಮರಿ ಹೊಡೆಯೋ ಸಮಯ”. ಹಿಡಿದು ತಂದಿದ್ದ ಆಡನ್ನು ಕದಿರೆ ನರಸಿಂಹನ ಮುಂದೆ ನಿಲ್ಲಿಸಿದರು. ನಾನ್‌ಮೀಟ್ ಎಲ್ಲವ್ವನನ್ನು ಬೆನ್ನುತಿರುಗಿಸಿ ನಿಲ್ಲಿಸಿದರು. ಮಧು ಎಂಬ ಹುಡುಗನ ಕೈಗೆ ಮಚ್ಚು ಸಿಕ್ಕಿತ್ತು. “ಸರಿಯಾಗಿ ಕಡಿತೀಯೋ ಇಲ್ವೋ? ಒಂದೇ ಏಟಿಗೆ ಹೊಡಿಬೇಕು. ತಾಕತ್ ಇಲ್ಲ ಅಂದ್ರೆ ಕೊಡು” ಎಂದು ಸುರೇಶ ಕಿಚಾಯಿಸಿದ. “ಏ ಎಂಥ ಮಾತಾಡ್ತೀಯೋ? ನಾನೇ ಹೊಡಿತೀನಿ ಬಿಡು” ಅಂತ ಮಧು ಹೇಳಿದಾಗ, ಮರಿಯ ಕಾಲುಗಳನ್ನು ಹಿಂದೆ ಒಬ್ಬಾತ ಹಿಡಿದು ನಿಂತಿದ್ದ. ಒಂದೇ ಏಟಿಗೆ ಕಡಿಯಬೇಕು ಎಂಬ ಉತ್ಸಾಹದಲ್ಲಿದ್ದ ಆತ, ಎರಡು ಕಾಲನ್ನು ಅತ್ತ ಇತ್ತ ಹಾಕಿ, ಎರಡು ಕೈಯಲ್ಲಿ ಮಚ್ಚು ಹಿಡಿದು ರಪ್ ಅಂತ ಬಾರಿಸಿದ. ದುರಾದೃಷ್ಟವಶಾತ್ ಒಂದೇ ಏಟಿಗೆ ಆ ಬಲಿಷ್ಟವಾದ ಮರಿಯ ಕತ್ತು ಕತ್ತರಿಸಿಹೋಗಲಿಲ್ಲ. ಮತ್ತೊಂದು ಏಟು ಕೊಟ್ಟು ಬೀಳಿಸಿದ. ಸುರೇಶ ಒಳಗೊಳಗೆ ನಕ್ಕ. “ಲೇ ಇವನ ಕೈಗೆ ಮತ್ತೆ ಮಚ್ಚು ಕೊಡಬೇಡಿ ಕಣ್ರೋ” ಎಂದು ಗುಡಿಗೌಡ ಲಕ್ಕಪ್ಪ ಸೂಚಿಸಿದರು. ಅಂತೂ ದೇವರುಗಳನ್ನು ಹೊರಡಿಸಿ, ಊರು ಸಮೀಪಿಸಿದಾಗ ಕತ್ತಲಾಗಿತ್ತು.
ಊರು ಸಮೀಪಿಸುವ ಸ್ವಲ್ಪ ದೂರದಲ್ಲಿ ಚಪ್ಪರ ಹಾಕಲಾಗಿತ್ತು. ಅಲ್ಲಿ ದೇವರುಗಳನ್ನು ಇಳಿಸಿ, ಹಟ್ಟಿಯಿಂದ ಆರತಿಗಳನ್ನು ಹೊರಡಿಸಿ ತಂದು, ಚಪ್ಪರದಿಂದ ಹಿಡಿದು ಮಾದಿಗರ ಕೇರಿಯಲ್ಲಿನ ಎಲ್ಲವ್ವನ ಗುಡಿಯವರೆಗೆ ಮೆರವಣಿಗೆ ಹೋಗುವುದು ಸಂಪ್ರದಾಯವಾಗಿತ್ತು. ಅಂತೆಯೇ ಆ ಗೌಗತ್ತಲ ಪ್ರದೇಶದಲ್ಲಿ ಗ್ಯಾಸ್‌ಲೈಟ್ ಹಚ್ಚಿ, ದೇವಿಯನ್ನು ಕೂರಿಸಲಾಗಿತ್ತು. ಪೂರ್ವ ನಿರ್ಧಾರದಂತೆ ಹಟ್ಟಿಯ ಪ್ರತಿ ಮನೆಗೆ ತೆರಳಿ ವಾದ್ಯದೋರು ಆರತಿ ಹೊರಡಿಸಿಕೊಂಡು ಬಂದು ಚಪ್ಪರದ ಬಳಿ ತಲುಪಿದರು.
ಬ್ಯಾಲಹಳ್ಳಿ ಹಾಗೂ ಕಡಬಕ್ಕೆ ಸಂಪರ್ಕ ಕಲ್ಪಿಸುವ ಈ ಟಾರು ರಸ್ತೆಯ ಒಂದು ಪಕ್ಕದಲ್ಲಿ ಮಾದಿಗರ ಕೇರಿ ಇದ್ದರೆ, ಊರಿನ ಸವರ್ಣೀಯ ಜಾತಿಗಳ ಮನೆಗಳು ಮಾದಿಗರ ಕೇರಿಯಾಚೆಯ ಇಕ್ಕೆಲಗಳಲ್ಲಿ ಇವೆ. ಕಡಬ ದಾರಿಯಲ್ಲಿ ಊರಿಗೆ ಸ್ವಲ್ಪ ದೂರದಲ್ಲಿ ದೇವರುಗಳನ್ನು ಕೂರಿಸಲಾಗಿತ್ತು. ಸವರ್ಣೀಯ ಮನೆಗಳು ರಸ್ತೆಯ ಅಕ್ಕಪಕ್ಕ ಇದ್ದು, ಆ ದಾರಿಯನ್ನು ದಾಟಿಯೇ ಕೇರಿ ಮುಟ್ಟಬೇಕಿತ್ತು. ಹೀಗಾಗಿ ದೇವರುಗಳು ಇದೇ ದಾರಿಯಲ್ಲಿ ಕ್ರಮಿಸುವುದರಿಂದ ಸವರ್ಣೀಯರು ಕೂಡ ಟಾರು ರಸ್ತೆಯನ್ನು ಗುಡಿಸಿ, ರಂಗೋಲಿ ಬಿಡಿಸಿ ದೇವಿಯ ವೈಭವವನ್ನು ಕಣ್ತುಂಬಿಕೊಳ್ಳಲು ನೆರೆದಿದ್ದರು. ಅಂತೂ ಆರತಿಗಳು ಊರಾಚೆ ತಲುಪಿ ದೇವರುಗಳನ್ನು ಹೊರಡಿಸಿದವು. ಬಾಲಕಿಯೊಬ್ಬಳ ಮೇಲೆ ಕಳಸ ಹೊರಿಸಲಾಯಿತು. “ಅರೆಗಣ್ಣ ಬಿಟ್ಟಲ್ಲೇ, ಕಿರುಗಣ್ಣ ಬಿಟ್ಟಲ್ಲೇ, ಬಿಟ್ಟು ನೋಡೇ ಉರಿಗಣ್ಣ… ಬಿಟ್ಟು ನೋಡೇ ಉರಿಗಣ್ಣ ಎಲ್ಲವ್ವಾ…” ಎಂದು ಅಸಾದಿಯರು ದನಿ ಏರಿಸಿದರು. ’ರೂವ್ ರೂವ್ ರೂವ್’ ಸದ್ದು ಮೊಳಗಿತು. ಮತ್ತೊಂದು ಮರಿ ಸಿದ್ಧವಾಗಿತ್ತು. ಕಡಬ ಕೆರೆಯ ಬಳಿ ದೇವರ ಹೊತ್ತು ಮೆರೆದಿದ್ದ ಮಹೇಶ ಈಗ ಮರಿ ಕಡಿಯುವ ಉತ್ಸಾಹದಲ್ಲಿದ್ದ. ಆರತಿಗಳು ಬಂದು ಸೇರಿದವು. ಕದಿರೆ ನರಸಿಂಹನ ಮುಂದೆ ಮತ್ತೊಂದು ಮರಿ ಬಿತ್ತು. “ಶಹಬ್ಬಾಷ್ ಮಹೇಶ, ಎಲ್ಲವ್ವನನ್ನು ಕಂಟ್ರೋಲ್ ಮಾಡೋದಷ್ಟೇ ಅಲ್ಲ, ಮರಿಯನ್ನೂ ಚೆನ್ನಾಗಿ ಹೊಡಿತೀಯ” ಎಂದು ಲಕ್ಕಣ್ಣ ಹೊಗಳತೊಡಗಿದರು. ದೇವಿಯನ್ನು ನೋಡಲು ಬಂದಿದ್ದ ಸವರ್ಣೀಯರು ಕೂಡ ಇದನ್ನು ಕಣ್ತುಂಬಿಕೊಂಡರು. ಮೆರವಣಿಗೆ ಹೊರಟಿತು.
ಊರು ಪ್ರವೇಶ ಮಾಡುವ ಮುನ್ನ ಅಂದರೆ ಸವರ್ಣೀಯ ಕೇರಿಯನ್ನು ದಾಟಿ ಹೋಗುವ ಮುನ್ನ ದೇವರುಗಳು ವಿಪರೀತ ಕುಣಿಯತೊಡಗಿದವು, ಯರ್ರಾಬಿರ್ರಿ ವಾಲಾಡತೊಡಗಿದವು. ಹೆಜ್ಜೆ ಮುಂದೆ ಹಾಕಲು ಹಿಂದೇಟು ಹಾಕಿದವು. ಊರೂರುಗಳಿಂದ ಬಂದಿದ್ದ ಒಕ್ಕಲುಗಳು, ಸವರ್ಣೀಯರು ಯಥೇಚ್ಛವಾಗಿ ಜಮಾಯಿಸಿದರು. ಜೊತೆಗೆ ಈಗ ದಾರಿಯುದ್ದಕ್ಕೂ ವಿದ್ಯುತ್ ದೀಪಗಳ ಬೆಳಕು ರಾರಾಜಿಸುತ್ತಿತ್ತು. ಅಸಾದಿಯರು ಎಷ್ಟೇ ಹಾಡಿದರೂ ದೇವರನ್ನು ಹೊತ್ತಿದ್ದ ಸುರೇಶ್ ಮತ್ತು ತಮ್ಮಯ್ಯ ಮುಂದೆ ಹೆಜ್ಜೆ ಇಡಲೇ ಇಲ್ಲ. “ಅಸಾದೀರು ಬಹಳ ಅರ್ಜೆಂಟ್ ಮಾಡ್ತಾ ಇದ್ದಾರೆ. ಐದ್ ಸಾವಿರ ಕೊಟ್ಟಿದ್ದೇವೆ. ದೇವರು ಕುಣಿಯೋಕೆ ಬಿಡ್ತಾನೆ ಇಲ್ಲ ಎಂದು ಗುಡಿಗೌಡ ಲಕ್ಕಯ್ಯನವರ ಮನೆಯ ಹುಡುಗ ವಿಜಿ ಗೊಣಗಿದ. ಅಸಾದೀರು, “ಇದಕ್ಕಿಂತ ಇನ್ನೂ ಹೆಂಗೆ ಚೆನ್ನಾಗಿ ಆಡಿಸ್ತಾರಪ್ಪ, ಬಂದು ನೀನೇ ಆಡ್ಸು. ಹೊತ್ತಾಗ್ತಾ ಇದೆ” ಎಂದು ಬೇಜಾರಾದರು. “ಅಸಾದೀರೇ ಈ ಹುಡುಗರ ಮಾತು ನಡೆಯಲ್ಲ. ಏನೋ ಬಹಳ ಖುಷಿಯಲ್ಲಿದ್ದಾರೆ. ತಲೆಹರಟೆ ಮಾಡ್ತಾರೆ” ಎಂದು ಗುಡಿಗೌಡ ಲಕ್ಕಪ್ಪ ಹೇಳಿದಾಗ ಅಸಾದೀರು ತಣ್ಣಗಾಗಿ, ಚೌಡಿಕೆ ಪದಗಳನ್ನು ಹಾಡತೊಡಗಿದರು.
ಊರಿನ ಸವರ್ಣೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾಗ ಮಾದಿಗರ ಹಟ್ಟಿಯ ಹುಡುಗರು, “ನಾವು ದೇವ್ರ ಮುಂದೆ ಕುಣೀಬೇಕು. ನಮಗೂ ಅವಕಾಶ ಕೊಡಿ. ಸುಮ್ನೆ ಮೆರವಣಿಗೆ ಮಾಡ್ಕೊಂಡು ಹೋಗೋದಲ್ಲ. ನಾವ್ ಕುಣಿಬೇಕು” ಎಂದು ಬೇಡಿಕೆ ಇಟ್ಟರು. ಆಯ್ತು, ದೇವರಿಂದ ಸ್ವಲ್ಪ ದೂರ ನಿಂತು ಕುಣಿಯಿರಿ ಎಂಬ ಸೂಚನೆ ಬಂತು. ಕುಣಿತ ಜೋರಾಗತೊಡಗಿತು. ಸವರ್ಣೀಯರ ಮನೆಗಳಿರುವ ದಾರಿಯನ್ನು ಒಂದು ಫರ್ಲಾಂಗು ದಾಟಿದರೆ ಮಾದಿಗರ ಕೇರಿಗೆ ದಾರಿ. ಆದರೆ ಇಷ್ಟು ದೂರ ಕ್ರಮಿಸುವುದೇ ಒಂದೂವರೆ ತಾಸು ಆಯಿತು. ವಾದ್ಯದವರು ಬೇಸರ ಮಾಡಿಕೊಳ್ಳದೆ ಹುಡುಗರ ಕುಣಿತಕ್ಕೆ ಪ್ರೋತ್ಸಾಹಿಸಿದರು. ಮಹೇಶ, ಮಧು, ಸೀನ, ತಮ್ಮಯ್ಯ ಹೀಗೆ ಒಬ್ಬೊಬ್ಬರಾಗಿ ದೇವರುಗಳನ್ನು ಹೊತ್ತ ಹುಡುಗರು ಭಾರೀ ಗದ್ದಲ ಮಾಡುತ್ತಿದ್ದರು. ಊರಿನ ಜನರೆಲ್ಲ ಕೈ ಮುಗಿದರು, ಸವರ್ಣೀಯ ಜನರು ಊದುಗಡ್ಡಿ ಹಚ್ಚಿ, ಈಡುಗಾಯಿ ಹೊಡೆದು ಅಡ್ಡಬಿದ್ದರು. “ದೇವರು ಸ್ವಲ್ಪ ತಾಳ್ಮೆಯಿಂದ ಇರಬೇಕು” ಎಂದು ಜಾತ್ರೆಯ ಉಸ್ತುವಾರಿಯಲ್ಲಿ ಮುಂದಿದ್ದ ರೇಣುಕಪ್ಪ ಸೂಚನೆ ಕೊಟ್ಟ. “ಅಣ್ಣ, ತಾಯಿ ಖುಷಿಯಾಗೌಳೆ. ಹೆಜ್ಜೆ ಮುಂದಿಡಲೂ ಸತಾಯಿಸುತ್ತಾ ಇದ್ದಾಳೆ. ಕುಣಿಯಲಿ ಬಿಡೋ. ಇನ್ನು ಎಷ್ಟು ವರ್ಷಕ್ಕೆ ಹಬ್ಬ ಮಾಡ್ತೀವೋ” ಎಂದು ಮತ್ತೊಬ್ಬ ಹುಡುಗ ಹೇಳಿದನು.
ಹೀಗಿರುವಾಗ ಮೆರವಣಿಗೆ ಮಾದಿಗರ ಕೇರಿಯ ದಾರಿಗೆ ಬಂತು. ಆದರೆ ಕೇರಿ ಒಳಕ್ಕೆ ಹೋಗಲು ದೇವರುಗಳು ಒಪ್ಪಲಿಲ್ಲ. ಈ ಕುರಿತು ರೇಣುಕಪ್ಪ ಹಾಗೂ ಸಿದ್ದಲಿಂಗಣ್ಣ ಮಾತನಾಡಿಕೊಂಡರು. “ಅಣ್ಣಯ್ಯ, ದೇವ್ರುಗಳು ಒಳಕ್ಕೆ ಹೋಗುತ್ತಿಲ್ಲ. ಬಹುಶಃ ತುಳಿಸಮ್ಮನ ಗುಡಿತಕ್ಕೆ ಹೋಗಬೇಕೆಂದು ಬಯಸುತ್ತಾ ಇವೆ” ಎಂದು ರೇಣುಕಪ್ಪ ಹೇಳಿದ. “ನನಗೂ ಹಾಗೆ ಅನಿಸ್ತಾ ಇದೆ ರೇಣುಕಾ. ಆದರೆ ಹೋಗೋದೋ ಬೇಡವೋ ಎಂದು ಯೋಚಿಸುತ್ತಿರುವೆ” ಅಂದ್ರು ಸಿದ್ದಲಿಂಗಯ್ಯ. “ದೇವ್ರ ಇಚ್ಛೆಯನ್ನು ಧಿಕ್ಕರಿಸುವುದು ಸರಿಯೇ?” ಎಂದು ರೇಣುಕಪ್ಪ ಮರು ಉತ್ತರ ನೀಡಿದ.
ಇದನ್ನೂ ಓದಿ: ಅನುಪಮಾ ಪ್ರಸಾದ್ ಅವರ ಕಥೆ; ಮುಖವಿಲ್ಲದವರು
ಊರಲ್ಲಿ ಸವರ್ಣೀಯರು ಹಾಗೂ ಮಾದಿಗರ ನಡುವೆ ದೇವರ ವಿಚಾರದಲ್ಲಿ ಆಗಾಗ್ಗೆ ವಿವಾದ ಉಂಟಾದ ಇತಿಹಾಸವಿತ್ತು. ಸುಮಾರು ಹದಿನೈದು ವರ್ಷಗಳ ಹಿಂದೆ ಜಾತಿ ಕಲಹ ಏರ್ಪಟ್ಟಿತ್ತು. ಎರಡು ಸಮುದಾಯಗಳು ಒಟ್ಟಿಗೆ ಸೇರಿ ಹಬ್ಬ ಮಾಡುತ್ತಿದ್ದಾಗ, ಆರತಿ ಹೊತ್ತ ಮಾದಿಗರು ಸವರ್ಣೀಯರ ಜೊತೆಯಾಗಿ ಬೆರೆತರು ಎಂಬುದು ಗಲಾಟೆಗೆ ಕಾರಣವಾಗಿತ್ತು. ಸವರ್ಣೀಯರ ದೇವರು ತುಳಿಸಮ್ಮನಾಗಿದ್ದರೆ, ಮಾದಿಗರ ದೇವರು ಎಲ್ಲವ್ವ ಹಾಗೂ ಕದಿರೆ ನರಸಿಂಹರಾಗಿದ್ದರು. ಇದಾದ ಮೇಲೆ ಒಟ್ಟಿಗೆ ಸೇರಿ ಹಬ್ಬ ಮಾಡುವ ಪರಂಪರೆ ನಿಂತುಹೋಯಿತು. ಈ ಬೆಳವಣಿಗೆಗಳ ನಡುವೆ ಎರಡು ವರ್ಷಗಳ ಹಿಂದೆ ತುಳಿಸಮ್ಮನ ದೇವಸ್ಥಾನವನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಸೇರಿಸಲಾಯಿತು. ಒಳ್ಳೆಯ ಅನುದಾನವೂ ಸಿಕ್ಕಿ ದೇವಾಲಯಕ್ಕೆ ಹೊಸದಾದ ಗೋಪುರ ಕಟ್ಟಲಾಯಿತು. ಎಲ್ಲವ್ವನ ಗುಡಿ ಸೊರಗುತ್ತಿದ್ದರೆ, ತುಳಸಮ್ಮನ ದೇವಾಲಯ ವರ್ಣರಂಜಿತವಾಗಿ ಬೆಳೆಯುತ್ತಿತ್ತು. ತುಳಸಮ್ಮನ ದೇವಾಲಯ ಮುಜರಾಯಿಗೆ ಸೇರಿದ ಮೇಲೆ ಸರ್ಕಾರದವರು ದೇವಸ್ಥಾನದ ಹೊರಗೆ ಬೋರ್ಡ್ ಹಾಕಿದರು. “ಯಾವುದೇ ಲಿಂಗ, ಜಾತಿ ತಾರಮತ್ಯ ಮಾಡುವಂತಿಲ್ಲ. ಎಲ್ಲರಿಗೂ ಮುಕ್ತ ಪ್ರವೇಶವಿರುತ್ತದೆ” ಎಂದು ದೇವಾಲಯದ ಗೋಡೆಗೆ ಅಂಟಿಸಿದ ಕಲ್ಲಿನ ಫಲಕದಲ್ಲಿ ಬರೆಯಲಾಗಿತ್ತು. ಆದರೆ ಅದನ್ನು ಯಾರೋ ಕಿಡಿಗೇಡಿಗಳು ಗೀಚಿ, ‘ಜಾತಿ’ ಎಂಬ ಪದವನ್ನು ಅಳಿಸಿಹಾಕಿದ್ದರು. ಇದನ್ನು ಗಮನಿಸಿದ್ದ ರೇಣುಕಪ್ಪ ಒಮ್ಮೆ ಪ್ರಶ್ನೆ ಮಾಡಿದ್ದ. ಈ ವಿಚಾರ ಪತ್ರಿಕೆಗಳಲ್ಲಿಯೂ ಸುದ್ದಿಯಾಯಿತು. ತಹಸೀಲ್ದಾರ್ ಆದಿಯಾಗಿ ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಊರಿಗೆ ಬಂದು, “ಎಲ್ಲ ಜಾತಿಯವರು ದೇವಾಲಯಕ್ಕೆ ಹೋಗಬಹುದು, ಅದನ್ನು ಯಾರೂ ತಡೆಯುವಂತಿಲ್ಲ ಎಂದು ಸವರ್ಣೀಯರಿಗೆ ಕಾನೂನು, ಸಂವಿಧಾನದ ಆಶಯಗಳನ್ನು ತಿಳಿಸಿದರು. ಮಾದಿಗರಲ್ಲಿ ಭಯ ಉಂಟಾಗಿತ್ತು. ಆದರೆ ರೇಣುಕಪ್ಪ ಒಬ್ಬ ಮಾತ್ರ ದೇವಾಲಯದ ಒಳಗೆ ಹೋಗುವ ಧೈರ್ಯ ಮಾಡಿದ. ಇದನ್ನು ಸಹಿಸದ ಸವರ್ಣೀಯ ಜಾತಿಯ ರಮೇಶ, “ನಿನಗೆ ದೇವರು ಒಳ್ಳೇದು ಮಾಡಲ್ಲ. ಹೋಗೋ, ಎಲ್ಲ ಆ ತಾಯಿ ತುಳಿಸಮ್ಮನೇ ನೋಡಿಕೊಳ್ಳುತ್ತಾಳೆ” ಎಂದು ಶಪಿಸಿದ್ದನು. ಈ ಎಲ್ಲ ಬೆಳವಣಿಗೆಗಳ ನಡುವೆ ಎಲ್ಲವ್ವನ ಜಾತ್ರೆಯನ್ನು ಮಾದಿಗರು ನಡೆಸುತ್ತಿದ್ದರು. ರೇಣುಕಪ್ಪ ಮತ್ತು ಸಿದ್ದಲಿಂಗಯ್ಯನವರ ಮಾತುಕತೆಯ ಹಿಂದಿದ್ದ ಈ ಸೂಕ್ಷ್ಮತೆ ನೆರೆದಿದ್ದ ಕೆಲವರಿಗಾದರೂ ಅರ್ಥವಾಗಿತ್ತು.
“ದೇವ್ರುಗಳು ಆ ತುಳಿಸಮ್ಮನ ಬಳಿ ಹೋಗಿಬರಲು ಬಯಸುತ್ತಿವೆ. ಅಲ್ಲಿಗೆ ಹೋಗಿ ಒಂದು ಈಡುಗಾಯಿ ಹಾಕಿದರೆ, ಎಲ್ಲ ಸರಿಯಾಗುತ್ತದೆ” ಎಂದು ಸಿದ್ದಲಿಂಗಣ್ಣ ಸೂಚಿಸಿದರು. ದೇವರು ಹೊತ್ತ ಮಧು, ವಾದ್ಯದ ಸದ್ದಿಗೆ ವಿಪರೀತ ವಾಲಾಡುತ್ತಾ, ತುಳಿಸಮ್ಮನ ಗುಡಿಯ ದಿಕ್ಕಿಗೆ ನೋಡುತ್ತಿದ್ದ. “ಮಧು, ಎಲ್ಲವ್ವನನ್ನು ಕಂಟ್ರೋಲ್ ಮಾಡಲು ಆಗದಿದ್ದರೆ, ಇನ್ನೊಬ್ಬರಿಗೆ ಕೊಡು” ಎಂದು ಸಿದ್ದಲಿಂಗಣ್ಣ ಹೇಳಿದರು. “ಇಲ್ಲ ಅಣ್ಣಯ್ಯ, ನಾನೇ ಹೊರುತ್ತೇನೆ” ಎಂದು ಧೈರ್ಯವನ್ನು ಪ್ರದರ್ಶಿಸಿದನು. ದಲಿತ ಕೇರಿಯಿಂದ ಸ್ವಲ್ಪ ದೂರದಲ್ಲೇ ಮುಜರಾಯಿ ಇಲಾಖೆಗೆ ಸೇರಿದ ತುಳಿಸಮ್ಮನ ದೇವಾಲಯವಿತ್ತು. ಮೆರವಣಿಗೆ ಆ ದಿಕ್ಕಿನಲ್ಲಿ ಸಾಗುತ್ತಿತ್ತು. ವಾದ್ಯದ ಸದ್ದು, ಕಳಸ ಹೊತ್ತ ಬಾಲಕಿಯ ವಾಲಾಟ ಒಂದು ಕಡೆಯಾದರೆ ಆರತಿ ಹೊತ್ತ ಕೆಲವು ಹೆಂಗಸರ ಮೇಲೂ ದೇವಿ ಬಂದು ಕುಣಿಯತೊಡಗಿದಳು. ಮಾದಿಗರ ದೇವರುಗಳು ಇಲ್ಲಿಗೆ ಬರುತ್ತವೆ ಎಂಬುದನ್ನು ಅರಿತಿದ್ದ ತುಳಿಸಮ್ಮನ ಪೂಜಾರಿ ಅಷ್ಟರಲ್ಲಾಗಲೇ ದೇವಾಲಯದಲ್ಲಿ ಹಾಜರಿದ್ದನು. ತುಳಿಸಮ್ಮನ ಗುಡಿಯನ್ನು ತಲುಪುವುದೇ ತಡ, ಹಿಂದೆ ಮುಂದೆ ನೋಡದೆ ಎಲ್ಲವ್ವ, ಕದಿರೆ ನರಸಿಂಹ ಸ್ವಾಮಿ ಹೊತ್ತ ಮಧು ಮತ್ತು ಮಹೇಶ ದೇವಾಲಯದ ಒಳಗೆ ನುಗ್ಗಿಯೇಬಿಟ್ಟರು. ಸವರ್ಣೀಯರು ಮಿಕಮಿಕ ನೋಡುತ್ತಾ ನಿಂತರು; ಯಾವುದೇ ಚಕಾರ ತೆಗೆಯಲಿಲ್ಲ. ಅನೇಕ ಮಾದಿಗರು ತುಳಿಸಮ್ಮನ ದೇವಾಲಯದೊಳಗೆ ನುಗ್ಗಿ ಪೂಜಾರಿಯಿಂದ ತೀರ್ಥ ಸ್ವೀಕರಿಸಿದರು. ಹೊರಗೆ ಬಂದ ಎಲ್ಲವ್ವ ಹಾಗೂ ಕದಿರೆ ನರಸಿಂಹನಿಗೆ ತುಳಿಸಮ್ಮನ ದೇವಾಲಯದ ಎದುರು ನಾಲ್ಕು ಈಡುಗಾಯಿ ಹಾಕಲಾಯಿತು. ಅಲ್ಲಿ ನಿಂತದ್ದ ಹೈಕಳು, ಛಿದ್ರವಾಗಿ ಬಿದ್ದ ಕಾಯಿಯನ್ನು ಹಾಯ್ದುಕೊಂಡು ಕಮರತೊಡಗಿದವು. ಮತ್ತೆ ಮಾದಿಗ ಯುವಕರ ಕುಣಿತ ಅಬ್ಬರಿಸಿತು. ಆ ನಂತರ ಮಾದಿಗರ ಕೇರಿಯೊಳಗೆ ಮೆರವಣಿಗೆ ಕಾಲಿಟ್ಟಿತು.


