Homeಕರ್ನಾಟಕಹೈಕಮಾಂಡಿಗೇ ಸವಾಲು ಎಸೆದರೇ ಯಡಿಯೂರಪ್ಪ?: ಮತ್ತೊಂದು ದುಸ್ಸಾಹಸದತ್ತ ಹತಾಶ ನಾಯಕ...!

ಹೈಕಮಾಂಡಿಗೇ ಸವಾಲು ಎಸೆದರೇ ಯಡಿಯೂರಪ್ಪ?: ಮತ್ತೊಂದು ದುಸ್ಸಾಹಸದತ್ತ ಹತಾಶ ನಾಯಕ…!

ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಏನು ಸಂಭವಿಸಬಹುದು ಎಂದು ಹೇಳುವುದು ಕಷ್ಟವೇ...

- Advertisement -
- Advertisement -

ದಿಢೀರ್ ಬೆಳವಣಿಗೆ ಅನಿಸುವಂತಹ ಘಟನೆಗಳು ರಾಜ್ಯ ರಾಜಕೀಯದಲ್ಲಿ ಸಂಭವಿಸುತ್ತಿವೆ. ಮೊನ್ನೆ ಸರ್ಕಾರ ಬಿದ್ದಾಗ, ‘ಎಚ್ಚರಿಕೆಯ ಹೆಜ್ಜೆ ಇಡೋಣ’ ಎಂದು ಸಲಹೆ ನೀಡಿ, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ತಡೆ ಹಾಕಿದ್ದ ಬಿಜೆಪಿ ಹೈಕಮಾಂಡ್ ಈಗ 12 ಗಂಟೆ ಸುಮಾರಿಗೆ ‘ಎಚ್ಚರಿಕೆಯ ಹೆಜ್ಜೆ ಇಡಿ, ರಿಸ್ಕ್ ತೆಗೆದುಕೊಳ್ಳುವ ಪೂರ್ತಿ ಜವಾಬ್ದಾರಿ ನಿಮ್ಮದೇ’ ಎನ್ನುವ ಮೂಲಕ ಯಡಿಯೂರಪ್ಪನವರ ಬಂಡಾಯದ ಮುಂದೆ ಮಂಡಿಯೂರಿ ಬಿಟ್ಟಂತಾಗಿದೆ.

ಸದ್ಯದ ರಾಜಕೀಯ ಪರಿಸ್ಥಿತಿ ಅದೆಷ್ಟು ಡೋಲಾಯಮಾನವಾಗಿದೆ ಎಂಬುದು ಸಾಮಾನ್ಯ ಜನರಿಗೂ ಗೊತ್ತು. ಅದಕ್ಕೆ ತಕ್ಕಂತೆ ಬಿಜೆಪಿ ಹೈಕಮಾಂಡ್ ಕೂಡ ಎಚ್ಚರ ವಹಿಸಿ ತಾಳ್ಮೆಯ ನಡೆಯ ಹಾದಿ ಆರಿಸಿಕೊಂಡಿತ್ತು. ಆದರೆ, ಮೊದಲೇ ಹತಾಶಗೊಂಡಿದ್ದ ಯಡಿಯೂರಪ್ಪ ನಿನ್ನೆ ರಾತ್ರಿ ಹೈಕಮಾಂಡಿಗೇ ಸವಾಲು ಎಸೆಯುವ ಮೂಲಕ ಹೈಕಮಾಂಡ್ ಅನ್ನು ತಮ್ಮ ಬೇಡಿಕೆಗೆ ಅಥವಾ ಆಗ್ರಹಕ್ಕೆ ಬಗ್ಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇವತ್ತು ದೆಹಲಿಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ಕುರಿತಂತೆ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ ಅವರು ಪತ್ರಿಕಾಗೋಷ್ಠಿ ನಡೆಸುವುದು ನಿಗದಿಯಾಗಿತ್ತು. ನಿನ್ನೆ ಸ್ಪೀಕರ್ ರಮೇಶಕುಮಾರ್ ಮೂವರು ಶಾಸಕರನ್ನು ಅನರ್ಹಗೊಳಿಸಿದ್ದು ಮತ್ತು ಕೆಲವೇ ದಿನಗಳಲ್ಲಿ ಇನ್ನಷ್ಟು ಶಾಸಕರನ್ನು ಅನರ್ಹತೆಗೊಳಿಸುವ ಸೂಕ್ಷ್ಮ ಸೂಚನೆಯನ್ನು ಕೊಟ್ಟ ಮೇಲೆ ಎಚ್ಚರಗೊಂಡ ಬಿಜೆಪಿ ಹೈಕಮಾಂಡ್ ಸದ್ಯಕ್ಕೆ ದುಡುಕುವುದು ಬೇಡ ಎಂಬ ತೀರ್ಮಾನಕ್ಕೆ ಬಂದು, ಅದನ್ನೇ ಇವತ್ತು ಕಾರ್ಯಾಧ್ಯಕ್ಷ ಛಡ್ಡಾ ಮೂಲಕ ಹೇಳಿಸುವ ಉದ್ದೇಶ ಹೊಂದಿತ್ತು.

ಆದರೆ, ನಿನ್ನೆ ಸ್ಪೀಕರ್ ನಡೆ ನೋಡಿದ ಯಡಿಯೂರಪ್ಪ ತಮ್ಮ ಬೆಂಬಗಲಿಗರೊಂದಿಗೆ ಸಭೆ ನಡೆಸಿ, ‘ಇನ್ನು ಸುಮ್ಮನಿರಲಾಗಲ್ಲ, ಬಹುಮತ ಸಾಬೀತು ಮಾಡುವುದೇನೂ ದೊಡ್ಡ ಕೆಲಸವಲ್ಲ… ಹೀಗೇ ಬಿಟ್ಟರೆ ಈ ಹೈಕಮಾಂಡ್ ಇಲ್ಲಿ ರಾಷ್ಟ್ರಪತಿ ಆಡಳಿತವನ್ನೂ ಹೇರಬಹುದು. ಹಾಗಾಗಿ ಪ್ರಮಾಣವಚನ ತೆಗೆದುಕೊಳ್ಳುವುದೇ ಸೈ’ ಎಂಬ ಅಂತಿಮ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ. ಅದರ ಪರಿಣಾಮವಾಗಿಯೇ ಅವರು ಸೀದಾ ಅಮಿತ್ ಶಾಗೆ ಫೋನ್ ಮಾಡಿ, ನಾಳೆ ಯಾವುದೇ ಪರಿಸ್ಥಿತಿಯಲ್ಲೂ ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಪಕ್ಕಾ. ನೀವು ಒಪ್ಪದಿದ್ದರೆ ನಾನು ಬಿಜೆಪಿಗೇ ರಾಜೀನಾಮೆ ಕೊಡುತ್ತೇನೆ ಎಂದು ಬೆದರಿಸಿದ್ದಾರೆ ಎಂಬ ಮಾಹಿತಿಯಿದೆ. ಇದನ್ನು ಕೇಳಿ ಬೆಚ್ಚಿಬಿದ್ದ ಅಮಿತ್ ಶಾ ಅನಿವಾರ್ಯವಾಗಿ ಯಡಿಯೂರಪ್ಪರ ನಿಲುವಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಆದರೆ, 221 ಸದಸ್ಯರ ಸದನದಲ್ಲಿ 111 ಸದಸ್ಯರ ಬೆಂಬಲ ಇರಬೇಕು. ಆದರೆ 105 ಸದಸ್ಯರ ಬಲ ಹೊಂದಿರುವ ಯಡಿಯೂರಪ್ಪ ಅವರಿಗೆ ರಾಜ್ಯಪಾಲರು ಪ್ರಮಾಣವಚನ ಸ್ವೀಕರಿಸಲು ಅನುಮತಿ ನೀಡಿದ್ದು ಆಶ್ಚರ್ಯದ ವಿಷಯವೇನೂ ಅಲ್ಲ. ಅವರು ಈ ಹಿಂದೆಯೂ ಬಿಜೆಪಿಗೆ ಬಹುಮತ ಇಲ್ಲದಾಗ್ಯೂ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಜಂಟಿಯಾಗಿ ಪತ್ರ ನೀಡಿದ್ದಾಗ್ಯೂ, ಯಡಿಯೂರಪ್ಪನವರನ್ನೇ ಸರ್ಕಾರ ರಚಿಸಲು ಆಹ್ವಾನಿಸಿದ್ದರು. ಆದರೆ, ಈಗಿನ ಪರಿಸ್ಥಿತಿ ಬೇರೆ. ಈಗ ಸ್ಪೀಕರ್ ಮೂವರನ್ನು ಅನರ್ಹಗೊಳಿಸಿದ್ದಾರೆ, ಉಳಿದವರ ರಾಜೀನಾಮೆ ಅಂಗೀಕರಿಸಿಲ್ಲ. ಹೀಗಾಗಿ ಬಿಜೆಪಿ ಪಕ್ಷಕ್ಕೆ ಒಬ್ಬ ಪಕ್ಷೇತರ, ಒಬ್ಬ ಬಿಎಸ್ಪಿ ಸದಸ್ಯರು ಬೆಂಬಲ ನೀಡಿದರೂ, 111 ಆಗಲ್ಲ.

ಇಲ್ಲಿ ಯಡಿಯೂರಪ್ಪ ಮತ್ತು ರಾಜ್ಯಪಾಲರು ಮತ್ತೊಂದು ದುಸ್ಸಾಹಸಕ್ಕೆ ಕೈ ಹಾಕಿದ್ದಾರಾ? ಅಥವಾ ಯಡಿಯೂರಪ್ಪ ವಿಶ್ವಾಸಮತದಲ್ಲಿ ಫೇಲಾದ ನಂತರ ಬಿಜೆಪಿಗೆ ಅನುಕಂಪದ ಅಲೆ ದೊರೆಯಬಹುದು, ರಾಷ್ಟ್ರಪತಿ ಆಡಳಿತ ಘೋಷಿಸಿ ಆಮೇಲೆ ಚುನಾವಣೆ ಎದುರಿಸುವ ಯೋಜನೆಯನ್ನು ಹೈಕಮಾಡ್ ಮಾಡಿಕೊಂಡಿದೆಯಾ?

ಇವರ ಈ ಎಲ್ಲ ಆಟಗಳು ಸುಲಭವಾಗಿ ನಡೆಯುತ್ತವಾ? ಬರಲಿರುವ ಸ್ಪೀಕರ್ ತೀರ್ಮಾನಗಳು ಮತ್ತು ಸುಪ್ರಿಂಕೋರ್ಟಿನ ಆದೇಶಗಳನ್ನೂ ನಾವು ಗಮನದಲ್ಲಿಟ್ಟು ನೋಡಿದಾಗ, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಏನು ಸಂಭವಿಸಬಹುದು ಎಂದು ಹೇಳುವುದು ಕಷ್ಟವೇ…

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕ್ರಿಕೆಟ್ ತಂಡದಲ್ಲಿ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡುತ್ತದೆ: ಮತ್ತೆ ದ್ವೇಷ ಬಿತ್ತಿದ...

0
ಧರ್ಮದ ಆಧಾರದ ಮೇಲೆ ಕ್ರೀಡೆಗಳಲ್ಲಿ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಲು ಕಾಂಗ್ರೆಸ್ ಪಕ್ಷ ಬಯಸಿದೆ, ಕ್ರಿಕೆಟ್ ತಂಡದಲ್ಲಿ ಯಾರು ಉಳಿಯುತ್ತಾರೆ ಮತ್ತು ಯಾರು ಉಳಿಯುವುದಿಲ್ಲ ಎಂಬುದನ್ನು ಕಾಂಗ್ರೆಸ್‌ ಧರ್ಮದ ಆಧಾರದಲ್ಲಿ ನಿರ್ಧರಿಸುತ್ತದೆ ಎಂದು ಪ್ರಧಾನಿ...