ಬಿಜೆಪಿ ದೇಶವನ್ನು ಹಾಳು ಮಾಡುತ್ತಿದೆ. ಕೇಂದ್ರದಲ್ಲಿರುವ ಪ್ಯಾಸಿಸ್ಟ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಸೋಮವಾರ ನಡೆದ ಗೃಹಲಕ್ಷ್ಮಿ ಗ್ಯಾರೆಂಟಿ ಯೋಜನೆಗೆ ಚಾಲನೆ ನೀಡುವ ಸಮಾರಂಭದಲ್ಲಿ ಮಾತನಾಡಿದ ಅವರು, ”ಕಾಂಗ್ರೆಸ್ ದೇಶವನ್ನು ಒಗ್ಗೂಡಿಸುತ್ತಿದ್ದರೆ ಬಿಜೆಪಿಯು ಭಾರತವನ್ನು ವಿಭಜಿಸುತ್ತಿದೆ” ಎಂದು ವಾಗ್ದಾಳಿ ನಡೆಸಿದರು.
”ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ. ದೇಶದಲ್ಲಿ ಯಾವ ಸರ್ಕಾರವೂ ಇಂಹತ ಗ್ಯಾರಂಟಿಗಳನ್ನು ಕೊಟ್ಟಿಲ್ಲ. ದೇಶದ ಎಲ್ಲ ಜನರೂ ಇತ್ತ ನೋಡುತ್ತಿದ್ದರೆ, ಎಲ್ಲರಿಗೂ ನಮ್ಮ ರಾಜ್ಯ ಮಾದರಿಯಾಗಿದೆ” ಎಂದು ಹೇಳಿದರು.
”ಇಂತಹ ಕಾರ್ಯಕ್ರಮಗಳನ್ನು ಯಾರೂ ಕೂಡಲಾಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಅವರು, ದೇಶ ದಿವಾಳಿಯಾಗುತ್ತದೆ ಎಂದೆಲ್ಲಾ ಹೇಳುತ್ತಿದ್ದರು, ಈಗ ಇಲ್ಲಿ ನಡೆದಿರುವುದನ್ನು ನೋಡಿದರೆ ಅವರೂ ಹೃದಯ ಪೂರ್ವಕವಾಗಿ ಒಪ್ಪಬೇಕು ಎನಿಸಬಹದು. ಆದರೆ ಅವರು ಹಾಗೆ ಮಾಡುವುದಿಲ್ಲ. ನಾವು ಮಾಡಿದ್ದೇ ಸರಿ ಎಂಬ ಮನೋಭಾವ ಅವರದು. ಬೇರೆಯವರು ಮಾಡಿದ್ದನ್ನು ಒಪ್ಪುವುದಿಲ್ಲ” ಎಂದು ಟೀಕಿಸಿದರು.
”ದೇಶದಲ್ಲಿ ರಸ್ತೆ, ಸರ್ಕಾರಿ ಸಂಸ್ಥೆಗಳು, ವಿಮಾನ ನಿಲ್ದಾಣಗಳನ್ನು ಮಾಡಿದವರು ನಾವು.. ಇವರು ಕೇವಲ ಸುಣ್ಣ ಬಣ್ಣ ಹಚ್ಚಿ ಉದ್ಘಾಟನೆ ಮಾಡುವುದನ್ನಷ್ಟೇ ಮಾಡುತ್ತಾರೆ. ಛತ್ತೀಸಗಡದಲ್ಲಿ ಅವರು ರಿಪೋರ್ಟ್ ಕಾರ್ಡ್ ನೀಡಿದ್ದಾರೆ. ನೆಹರೂ, ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮಾಡಿರುವ ಕಾರ್ಯಗಳ ಪಟ್ಟಿ ನಮ್ಮ ಬಳಿ ಇದೆ. ಅವರು ಕೇವಲ ಮಾತನಾಡುತ್ತಾರೆ, ನಾವು ಸಾಧಿಸಿ ತೋರಿಸುತ್ತೇವೆ’. ಬಿಜೆಪಿಯವರು ಕಾಂಗ್ರೆಸ್‌ಗೆ ಬೈಯುವ ಕೆಲಸವನ್ನು ಮಾತ್ರವೇ ಮಾಡುತ್ತಿದ್ದಾರೆ” ಎಂದು ತಿರುಗೇಟು ನೀಡಿದರು.
ನಾವು ಇಲ್ಲದೇ ಇದ್ದಿದ್ದರೆ ದೇಶ ಒಗ್ಗಟ್ಟಾಗಿ ಇರುತ್ತಿರಲಿಲ್ಲ. ದೇಶಕ್ಕೆ ಹೊಸ ಸಂವಿಧಾನ ನೀಡಿದವರು ಯಾರು? ಸಂವಿಧಾನ ಬಿಟ್ಟರೆ ನಾವು ಸತ್ತ ಹಾಗೆಯೇ.. ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಪರಿಶಿಷ್ಟರ ಬದುಕು ಹಸನಾಗುತ್ತಿದ್ದರೆ ಅದಕ್ಕೆ ಕಾರಣ ಸಂವಿಧಾನ. ಯಾವುದೇ ಕಾರಣಕ್ಕೂ ಅದನ್ನು ಕಳೆದುಕೊಳ್ಳಬಾರದು. ಸಂವಿಧಾನ ಉಳಿಸಿಕೊಳ್ಳದೆ, ಇದರ ಮುಂದಿನ ಪೀಳಿಗೆ ಬಹಳ ಸಂಕಷ್ಟ ಅನುಭವಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ: ರಾಹುಲ್ ಗಾಂಧಿ, ಖರ್ಗೆ ಭಾಗಿ


