ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಲಕ್ಕವಳಿ ಬಳಿ ನಡೆದ ಅಪಘಾತದಲ್ಲಿ ಆರೋಗ್ಯಾಧಿಕಾರಿಯೊಬ್ಬರು ರಸ್ತೆಯಲ್ಲಿ ಸಾವು-ಬದುಕಿನ ನಡುವೆ ನರಳುತ್ತಿದ್ದರು ಬಿಜೆಪಿ ಶಾಸಕ ಡಿ.ಎಸ್. ಸುರೇಶ್ ಸಹಾಯ ಮಾಡಲು ಕಾರಿನಿಂದ ಕೆಳಗಿಳಿಯದೆ, ದರ್ಪ ತೋರಿದ್ದಾರೆ. ಸಹಾಯ ಮಾಡಿದ್ದರೇ ಕೊರೊನಾ ವಾರಿಯರ್ ಉಳಿಯುತ್ತಿದ್ದರು ಎಂಬ ಆರೋಪವನ್ನು ಸ್ಥಳೀಯರು ಮಾಡಿದ್ದರು.
ತರೀಕೆರೆ ತಾಲೂಕಿನ ಬಿಜೆಪಿ ಶಾಸಕ ಡಿ.ಎಸ್. ಸುರೇಶ್ ಕಾರಿನಿಂದ ಇಳಿದು ಸ್ಪಲ್ಪ ಮಾನವೀಯತೆ ತೋರಿ ಆಸ್ಪತ್ರೆಗೆ ಸಾಗಿಸಿದ್ದರೂ ಆರೋಗ್ಯಾಧಿಕಾರಿಯ ಪ್ರಾಣ ಉಳಿಯುತ್ತಿತ್ತು. ಆದರೆ, ಚಿಕಿತ್ಸೆ ಸಿಗುವುದು ತಡವಾಗಿದ್ದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ಹಿರಿಯ ಆರೋಗ್ಯಾಧಿಕಾರಿ ರಮೇಶ್ ಬೈಕ್ಗೆ ತರೀಕೆರೆಯ ಲಕ್ಕವಳ್ಳಿ ಕ್ರಾಸ್ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಅಪಘಾತವಾಗಿತ್ತು. ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲು ಸ್ಥಳೀಯರು ಆ್ಯಂಬುಲೆನ್ಸ್ಗೆ ಫೋನ್ ಮಾಡಿದ್ದರು. ಅದೇ ದಾರಿಯಲ್ಲಿ ಬಂದ ತರೀಕೆರೆ ಬಿಜೆಪಿ ಶಾಸಕ ಡಿ.ಎಸ್. ಸುರೇಶ್ ಕಾರು ರಸ್ತೆಯಲ್ಲೇ ನಿಲ್ಲಿಸಿದ್ದರು. ಸಹಾಯ ಮಾಡಲು ಕಾರಿನಿಂದ ಕೆಳಿಗೆ ಇಳಿಯಲೇ ಇಲ್ಲ. ಕಾರಿನ ಚಾಲಕ ಮತ್ತು ಗನ್‌ಮ್ಯಾನ್ ಮಾತ್ರ ಹೊರ ಬಂದು ಘಟನೆ ನೋಡಿದ್ದಾರೆ.
ಅಪಘಾತ ನಡೆದು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ರಕ್ತದ ಮಡುವಿನಲ್ಲೇ ಒದ್ದಾಡಿದ ಕೊರೊನಾ ವಾರಿಯರ್ ಆರೋಗ್ಯಾಧಿಕಾರಿ ನೋವಿನಿಂದ ನರಳಾಡುತ್ತಿದ್ದರು. ನಂತರ ಆ್ಯಂಬುಲೆನ್ಸ್ನಲ್ಲಿ ಅವರನ್ನು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುವಾಗ, ತೀವ್ರ ರಕ್ತಸ್ರಾವದಿಂದ ಮಾರ್ಗಮಧ್ಯೆಯೇ ಆರೋಗ್ಯಾಧಿಕಾರಿ ರಮೇಶ್ ಸಾವನ್ನಪ್ಪಿದ್ದಾರೆ. ಮಾನವೀಯತೆ ಮರೆತ ಶಾಸಕರ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ವಿಡಿಯೋದಲ್ಲೂ ನೋಡಬಹುದಾಗಿದೆ.
ಇದನ್ನೂ ಓದಿ: ‘ಏನಪ್ಪ, ದೇವರು ಇದಾನೆ ಅನಿಸುತ್ತಾ, ಇಲ್ಲಾ ಅನಿಸುತ್ತಾ?’ ದೊರೆಸ್ವಾಮಿ ಜೊತೆಗಿನ ನೆನಪು
ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ಸುರೇಶ್, ನನಗೆ ಕಣ್ಣು ಬೇನೆ ಇದ್ದು ಕಾರಿನಲ್ಲಿ ನಿದ್ದೆ ಮಾಡುತ್ತಿದ್ದೆ. ಅಪಘಾತದ ಘಟನೆ ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.
’ಕಣ್ಣು ಬೇನೆ ಇದ್ದ ಕಾರಣ ಮಾತ್ರೆ ನುಂಗಿ, ಕಣ್ಣಿಗೆ ಔಷಧಿ ಹಾಕಿಕೊಂಡು ಕಾರಿನಲ್ಲಿ ನಿದ್ದೆ ಮಾಡುತ್ತಿದೆ. ಅಪಘಾತ ನಡೆದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಆ ರಸ್ತೆಯಲ್ಲಿ ಅಷ್ಟು ಗಲಾಟೆ ಕೂಡ ಇರಲಿಲ್ಲ. ಅಪಘಾತ ನಡೆದಿರುವುದು ಕಂಡು ನನ್ನ ಕಾರು ಚಾಲಕ ಮತ್ತು ಗನ್‌ಮ್ಯಾನ್ ಇಬ್ಬರು ಕಾರು ನಿಲ್ಲಿಸಿ, ಗಾಯಾಳುವಿನ ನೆರವಿಗೆ ಹೋಗಿದ್ದಾರೆ. ನಾನು ನಿದ್ದೆ ಮಾಡುತ್ತಿದ್ದೆ ನನಗೆ ತಿಳಿದಿಲ್ಲ” ಎಂದಿದ್ದಾರೆ.
’ಕರೆ ಮಾಡಿದ ಒಂದೆರಡು ನಿಮಿಷದಲ್ಲೇ ಆಂಬ್ಯುಲೆನ್ಸ್ ಬಂದಿದ್ದರಿಂದ ನನ್ನ ಕಾರನ್ನು ಬಳಸಿಲ್ಲ. ನಂತರ ಆಸ್ಪತ್ರೆಗೆ ಸಾಗಿಸಿದ್ದಾರೆ. ಇಷ್ಟರಲ್ಲಿ ಯಾರೋ ಕಿಡಿಗೇಡಿಗಳು ನನ್ನ ವಿರುದ್ಧ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ’ ಎಂದು ತರೀಕೆರೆ ಶಾಸಕ ಸುರೇಶ್ ಹೇಳಿದ್ದಾರೆ.
ಇದನ್ನೂ ಓದಿ: ಮಾನವೀಯತೆಯ ಸಾಕ್ಷಿಪ್ರಜ್ಞೆಯಾಗಿ ಉಳಿದ ಜಾರ್ಜ್ ಫ್ಲಾಯ್ಡ್ ಹತ್ಯೆಗೆ ಒಂದು ವರ್ಷ


