ಲಖಿಂಪುರ್ ಖೇರಿ ಹತ್ಯಾಕಾಂಡವನ್ನು ವಿರೋಧಿಸಿ ಬಹಿರಂಗವಾಗಿಯೇ ರೈತರನ್ನು ಬೆಂಬಲಿಸಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ವಿಡಿಯೊವನ್ನು ಶೇರ್ ಮಾಡುವ ಮೂಲಕ ಮತ್ತೊಮ್ಮೆ ರೈತರನ್ನು ಬೆಂಬಲಿಸಿದ್ದಾರೆ.
1980ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ರೈತರ ಹೋರಾಟವನ್ನು ಬೆಂಬಲಿಸಿ ಮಾಡಿದ್ದ ಭಾಷಣದ ಚಿಕ್ಕ ತುಣುಕನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಗುರುವಾರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ವಿಶಾಲ ಹೃದಯದ ಬುದ್ಧಿವಂತ ನಾಯಕನ ಮಾತುಗಳು …” ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ. 42 ಸೆಕೆಂಡ್‌ಗಳ ವಿಡಿಯೊದಲ್ಲಿ ರೈತರ ಮೇಲೆ ದಬ್ಬಾಳಿಕೆ ನಡೆಸದಂತೆ ಅಂದಿನ ಇಂದಿರಾಗಾಂಧಿ ಸರ್ಕಾರಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಎಚ್ಚರಿಕೆ ನೀಡಿರುವುದು ಮತ್ತು ರೈತರಿಗೆ ತಮ್ಮ ಬೆಂಬಲವನ್ನು ನೀಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶ: ಗೊಬ್ಬರ ಕೇಳಿದ ರೈತರ ಮೇಲೆ ಲಾಠಿ ಬೀಸಿದ ಪೊಲೀಸರು – ತೀವ್ರ ಖಂಡನೆ
Wise words from a big-hearted leader… pic.twitter.com/xlRtznjFAx
— Varun Gandhi (@varungandhi80) October 14, 2021
ದೇಶದ ರೈತರು ಮೋದಿ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಮೂರು ಕೃಷಿ ಕಾನೂನುಗಳ ವಿರುದ್ಧ ಕಳೆದ 10 ತಿಂಗಳಿನಿಂದ ಆಂದೋಲನ ನಡೆಸುತ್ತಿದ್ದಾರೆ. ವರುಣ್ ಗಾಂಧಿ ಈಗ ವಾಜಪೇಯಿ ಅವರ ಭಾಷಣದ ವಿಡಿಯೋ ಹಂಚಿಕೊಳ್ಳುವ ಮೂಲಕ ಕೇಂದ್ರ ಸರ್ಕಾರಕ್ಕೆ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.
ಉತ್ತರ ಪ್ರದೇಶದ ಲಖಿಂಪುರ್ ಖೇರಿ ಹತ್ಯಾಕಾಂಡ ಘಟನೆಗಳನ್ನು ಖಂಡಿಸಿ ಬಿಜೆಪಿ ಸಂಸದ ಪದೇ ಪದೇ ಟ್ವೀಟ್ ಮಾಡುತ್ತಿದ್ದರು. ಈ ಕಾರಣದಿಂದ ಅವರನ್ನು 80 ಸದಸ್ಯರೊಂದಿಗೆ ಹೊಸ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ಕೈಬಿಡಲಾಗಿದೆ ಎನ್ನುವ ವದಂತಿಗಳು ಹರಡಿದ್ದು, ಬಿಜೆಪಿಯು ಆರೋಪವನ್ನು ತಳ್ಳಿ ಹಾಕಿದೆ.
The video is crystal clear. Protestors cannot be silenced through murder. There has to be accountability for the innocent blood of farmers that has been spilled and justice must be delivered before a message of arrogance and cruelty enters the minds of every farmer. ???? pic.twitter.com/Z6NLCfuujK
— Varun Gandhi (@varungandhi80) October 7, 2021
ಈ ಹಿಂದೆ ಘಟನೆಯ ಸ್ಪಷ್ಟ ಮತ್ತು ದೀರ್ಘ ವಿಡಿಯೊವನ್ನು ಟ್ವೀಟ್ ಮಾಡಿದ್ದ ವರುಣ್ ಗಾಂಧಿ, “ವೀಡಿಯೊ ಅತ್ಯಂತ ಸ್ಪಷ್ಟವಾಗಿದೆ. ಪ್ರತಿಭಟನಾಕಾರರನ್ನು ಕೊಲೆ ಮಾಡುವ ಮೂಲಕ ಮೌನಗೊಳಿಸಲು ಸಾಧ್ಯವಿಲ್ಲ. ಅಂದು ಚೆಲ್ಲಿದ ರೈತರ ಮುಗ್ಧ ರಕ್ತಕ್ಕೆ ಹೊಣೆಗಾರಿಕೆ ವಹಿಸಬೇಕು. ಪ್ರತಿಯೊಬ್ಬ ರೈತನ ಮನಸ್ಸಿನಲ್ಲಿ ಹಠ ಮತ್ತು ಕ್ರೌರ್ಯದ ಸಂದೇಶ ಪ್ರವೇಶಿಸುವ ಮೊದಲು ನ್ಯಾಯ ಒದಗಿಸಬೇಕು” ಎಂದು ಹೇಳಿದ್ದರು.
ಇದನ್ನೂ ಓದಿ: ರೈತರ ಹತ್ಯಾಕಾಂಡ: ಅಮಿತ್ ಶಾ ಮನೆ ಮುಂದೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ


