Homeಮುಖಪುಟಶರಣರಿಗೆ "ಮರಣವೆ ಮಹಾನವಮಿ": ಬಾಲಾಜಿ ಕುಂಬಾರ

ಶರಣರಿಗೆ “ಮರಣವೆ ಮಹಾನವಮಿ”: ಬಾಲಾಜಿ ಕುಂಬಾರ

- Advertisement -
- Advertisement -

ಬಸವಣ್ಣ ಹಾಗೂ ಸಮಕಾಲೀನ ಶರಣರು ಕಟ್ಟಲು ಬಯಸಿದ ಸಮಾಜವನ್ನು ‘ಸಮಾನತೆ ಸಮಾಜ’ ಎಂದು ಕರೆಯುತ್ತೇವೆ. ಅದು ವರ್ಗರಹಿತ, ವರ್ಣರಹಿತ, ಲಿಂಗರಹಿತ ಹಾಗೂ ಜಾತಿರಹಿತವಾದ ಜಾತ್ಯತೀತ ಸಮಾಜ ನಿರ್ಮಿಸುವುದು ವಚನಕಾರರ ಘನವಾದ ಉದ್ದೇಶವೂ ಕೂಡ ಹೌದು. ಹಾಗಾಗಿ ಅದಕ್ಕಾಗಿಯೇ ಬಹುತೇಕ ಶರಣರು ಪ್ರಾಣತ್ಯಾಗ ಮಾಡಿದ್ದು ಇತಿಹಾಸವೇ ಸಾಕ್ಷಿ.

ಹನ್ನೆರಡನೇ ಶತಮಾನದ ಅಂದಿನ ರಾಜ್ಯಶಾಹಿ ಆಡಳಿತ ವ್ಯವಸ್ಥೆಯು ಸ್ಥಳೀಯ ರೈತಾಪಿ ವರ್ಗ, ಕೂಲಿಕಾರ್ಮಿಕರ ಮೇಲೆ ರಾಜ್ಯಭಾರ ನಡೆಸುತ್ತಾ ತೀವ್ರವಾಗಿ ಶೋಷಣೆಗೆ ಒಳಪಡಿಸಿತ್ತು. ಅದನ್ನು ಶರಣರು ವ್ಯಾಪಕವಾಗಿ ವಿರೋಧಿಸಿದರು, ಶೋಷಕ ವರ್ಗದ ದಬ್ಬಾಳಿಕೆಯಿಂದ ಶೋಷಿತ ವರ್ಗಗಳಿಗೆ ಮುಕ್ತಿ ದೊರಕಿಸುವ ದೃಷ್ಟಿಕೋನದಿಂದ ಕಾಯಕ ಸಿದ್ಧಾಂತ ಪರಿಕಲ್ಪನೆ ಜಾರಿಗೊಳಿಸಿದರು. ಕಾಯಕ ಸಿದ್ಧಾಂತವು ಶೋಷಣೆ ವ್ಯವಸ್ಥೆ ಪ್ರತಿಪಾದಿಸುವ ಕರ್ಮ ಸಿದ್ಧಾಂತಕ್ಕೆ ಪರ್ಯಾಯವಾಗಿ ಅನುಷ್ಠಾನಗೊಳಿಸಿದ ಶರಣರ ವಿಶಿಷ್ಟ ಚಿಂತನೆಯಾಗಿದೆ. ಶ್ರಮಿಕ ಸಮುದಾಯದ ಎಲ್ಲಾ ಶರಣರನ್ನು ಕಾಯಕ ಸಿದ್ಧಾಂತಕ್ಕೆ ಒಳಪಡಿಸಿ ‘ಜಾತಿವಿನಾಶ’ ಸಮಾಜ ಸ್ಥಾಪಿಸುವುದೇ ಬಸವಣ್ಣನವರ ಬಹುದೊಡ್ಡ ಪರಿಕಲ್ಪನೆಯಾಗಿತ್ತು.

ಜೀವಪರ ನಿಲುವು ಪ್ರತಿಪಾದಿಸಿದ ಶರಣರು ಜನವಿರೋಧಿ ನೀತಿಯ ವಿರುದ್ಧ ಬಂಡೆದ್ದು ಶೋಷಣೆ ಸಮಾಜದ ವ್ಯವಸ್ಥೆಯನ್ನು ತೀವ್ರವಾಗಿ ಖಂಡಿಸಿದರು. ಅದರ ಫಲವಾಗಿ ಮುಂದೆ ಅಸಮಾನತೆ, ಅಸ್ಪ್ರಶ್ಯತೆ, ಜಾತಿಯತೆ ಎಂಬ ಅನಿಷ್ಟ ಪದ್ಧತಿಯ ಪರ್ಯಾಯವಾಗಿ ‘ಲಿಂಗಾಯತ’ ಧರ್ಮ ಹುಟ್ಟು ಪಡೆಯಲು ಕಾರಣವಾಯಿತು. ಶರಣರ ಸ್ಥಾಪಿತ ಧರ್ಮದಲ್ಲಿ ಜಾತ್ಯತೀತ, ಮಾನವೀಯ ಮೌಲ್ಯ, ವೈಜ್ಞಾನಿಕ ಮತ್ತು ವೈಚಾರಿಕ ನಿಲುವು ಪುರಸ್ಕರಿಸುವ ಜಾತ್ಯತೀತ ಧರ್ಮವಾಗಿದೆ.

ಇದನ್ನೂ ಓದಿ: ವಚನಗಳ ಸಾಹಿತ್ಯ ಮೌಲ್ಯ: ಬಸವಣ್ಣನವರ ಉಪಮಾಲೋಕ ಒಂದು ಅದ್ಭುತ ಚಿತ್ರಸೃಷ್ಟಿ

ಇಲ್ಲಿ ಒಂದು ಹೊಸ ವಿಚಾರವನ್ನು ತಿಳಿಯಬಹುದು. ವಚನಕಾರರು ಧರ್ಮ ಸ್ಥಾಪನೆಗಾಗಿ ಹೆಚ್ಚು ಒತ್ತು ನೀಡಿದರು ಎಂದು ಹೇಳಿದರೂ ತಪ್ಪಾಗಬಹುದು. ಅದಕ್ಕಾಗಿಯೇ ಚಳವಳಿಯೂ ಕಟ್ಟಲಿಲ್ಲ. ಸಮಾಜದಲ್ಲಿ ಚಾಲ್ತಿಯಲ್ಲಿರುವ ವರ್ಣವ್ಯವಸ್ಥೆಯ ಶೋಷಣೆಯಿಂದ ತಳವರ್ಗ ಸಮುದಾಯಗಳ ಬದುಕು ಬರ್ಬರವಾಗಿತ್ತು. ಅಂಥ ವಿಷಮ ಪರಿಸ್ಥಿತಿಯಲ್ಲಿ ಎಲ್ಲಾ ವರ್ಗದ ಕಾಯಕ ಜೀವಿಗಳು ಒಗ್ಗೂಡಿಸುವುದು ಅವಶ್ಯವಾಗಿತ್ತು. ತಮ್ಮ ಬದುಕಿನ ಹಕ್ಕುಗಳಿಗಾಗಿ, ಶೋಷಣೆ ಮುಕ್ತ ಸಮಾಜ ರೂಪಿಸಲು ಶರಣರು ವೈದಿಕ ವ್ಯವಸ್ಥೆಯ ವಿರುದ್ಧ ದೊಡ್ಡ ಮಟ್ಟದ ಕಾರ್ಯಪಡೆ ಕಟ್ಟುವ ನಿಟ್ಟಿನಲ್ಲಿ ಶರಣರು ಧರ್ಮ ಕಟ್ಟಬೇಕಾಯ್ತು. ವಚನಕಾರರು ಸಂಪ್ರದಾಯವಾದಿ ವ್ಯವಸ್ಥೆಯ ಕಟ್ಟಳೆಗಳನ್ನು ದಿಕ್ಕರಿಸಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಕೊಟ್ಟು ‘ಸರ್ವರಿಗೂ ಸಮಪಾಲು ಸಮಬಾಳು’ ತತ್ವವನ್ನು ಪೂರ್ಣವಾಗಿ ಜಾರಿಗೊಳಿಸಿದರು. ಆದರೆ ಪಟ್ಟಭದ್ರ ಹಿತಾಸಕ್ತಿಗಳ ಪಾಲಿಗೆ ಇದು ನುಂಗಲಾಗದ ತುಪ್ಪವಾಗಿ ಪರಿಣಮಿಸಿ ಇಡೀ ಸಮಾಜವನ್ನು ತಲ್ಲಣಗೊಳಿಸಿತ್ತು.

ವಚನಕಾರರು ‘ಇವನಾರವ ಎನ್ನದೆ ಇವನಮ್ಮವ’ ತತ್ವದ ಅಡಿಯಲ್ಲಿ ಎಲ್ಲಾ ವರ್ಗದವರಿಗೂ ಅಪ್ಪಿಕೊಂಡಿದರು. ವಿಭಿನ್ನ ಜಾತಿಯವರು ಕೂಡಿ ಊಟ ಮಾಡಿದ ಮಾತ್ರಕ್ಕೆ ಅದು ಸಾಮಾಜಿಕ ಸಮಾನತೆ ಅಲ್ಲ, ವಿಭಿನ್ನ ಜಾತಿಯವರು ಕೂಡಿ ನೆಂಟಸ್ತಿಕೆ ಬೆಳೆಸಿದರೆ ಮಾತ್ರ ಅಂತರ್ಜಾತಿ ಪರಿಕಲ್ಪನೆ ಹೋಗಲಾಡಿಸಲು ಸಾಧ್ಯ. ಅದಕ್ಕೆ ಒಪ್ಪಿಗೆ ನೀಡುವುದು ಶರಣರ ಮೂಲ ಉದ್ದೇಶವಾಗಿತ್ತು. ಊಟದ ಜೊತೆಗೆ ರಕ್ತಸಂಬಂಧವನ್ನೂ ಬೆಳೆಸಬೇಕೆಂಬ ಉದ್ದೇಶದಿಂದ ಶರಣರು ಇನ್ನೊಂದು ಹೆಜ್ಜೆ ಮುಂದಿಟ್ಟು ಎಲ್ಲಾ ಸಮುದಾಯದವರನ್ನು ‘ಒಳಗೊಳ್ಳುವಿಕೆ’ ಸಿದ್ಧಾಂತ ಮೈಗೂಡಿಸಿಕೊಳ್ಳಲು ಸೂಚಿಸಿದರು.

“ಉಂಬುದು ಊಡುವುದು ಶಿವಾಚಾರ,
ಕೊಂಬುದು ಕೊಡುವುದು ಕುಲಾಚಾರ,
ಅನಾಚಾರಿಯ ಮಾತ ಕೇಳಲಾಗದು.”

ಎನ್ನುವ ಚೆನ್ನಬಸವಣ್ಣನವರ ವಚನವು ಜಾತಿ,ಕುಲ,ಮಾತು ಭೇದ ಮರೆತು ಸಾಮಾಜಿಕ ಐಕ್ಯತೆ, ಸಮಗ್ರತೆ ಹಾಗೂ ಒಳಗೊಳ್ಳುವಿಕೆಯ ಕುರಿತು ತಿಳಿಸುತ್ತದೆ.

ಸಾಮಾಜಿಕ ಸಮಾನತೆಗಾಗಿ ಶರಣರು ಕೈಗೊಂಡಿರುವ ಕಠಿಣ ನಿಲುವು ಮುಂದೆ ಸಾಮಾಜಿಕ ಕ್ರಾಂತಿ ಉದ್ಭವಕ್ಕೆ ಕಾರಣವಾಗಿತ್ತು. ಇದೊಂದು ಧರ್ಮಬಾಹಿರ ನಡೆ, ಇದನ್ನು ಮುಂದುವರಿಸಲು ಬಿಟ್ಟರೆ ಸಂಪ್ರದಾಯವಾದಿಗಳಿಗೆ ಉಳಿಗಾಲವಿಲ್ಲ ಎಂದು ಅರಿತ ಬಿಜ್ಜಳನು ವಚನಕಾರರ ವಿರುದ್ಧ ಷಡ್ಯಂತ್ರ ರೂಪಿಸಲು ಸಂಚು ಹೂಡಿದ್ದ. ಆದರೆ ರಾಜ್ಯಶಕ್ತಿಗಳ ಅಟ್ಟಹಾಸಕ್ಕೆ ಮಣಿಯದ ಶರಣರು ಜೀವದ ಹಂಗು ತೊರೆದು ತಮ್ಮ ಖಚಿತ ನಿಲುವು ವ್ಯಕ್ತಪಡಿಸಲು ಮುಂದಾಗುತ್ತಾರೆ.

ಇದನ್ನೂ ಓದಿ: ‘ತೋಂಟದ ಶ್ರೀ ಪ್ರಶಸ್ತಿಯ 5 ಲಕ್ಷ ರೂ.ಗಳನ್ನೂ ಸಂವಿಧಾನ ಓದು ಅಭಿಯಾನಕ್ಕೆ ಬಳಸುವೆ’

ಬಸವಣ್ಣನವರು ಒಂದು ವಚನದಲ್ಲಿ :

“ಆನೆ ಅಂಕುಶಕ್ಕೆ ಅಂಜುವುದೆ ಅಯ್ಯಾ ಮಾಣದೆ ಸಿಂಹದ ನಖವೆಂದು ಅಂಜುವುದಲ್ಲದೆ. ಆನೀ ಬಿಜ್ಜಳಂಗಜುವೆನೆ ಅಯ್ಯಾ ಕೂಡಲಸಂಗಮದೇವಾ” ಎಂದು ಸವಾಲು ಹಾಕಿದರು.
‘ನಾಳೆ ಬಪ್ಪುದು ನಮಗಿಂದೆ ಬರಲಿ, ಇಂದು ಬಪ್ಪುದು ನಮಗೀಗಲೆ ಬರಲಿ, ಇದಕಾರಂಜುವರು, ಇದಕಾರಳುಕುವವರು’

ಎಂದು ಬಸವಣ್ಣನವರು ತಮ್ಮ ಖಚಿತ ನಿಲುವು ಅಭಿವ್ಯಕ್ತಿಗೊಳಿಸುತ್ತಾರೆ. ಶರಣರು ಜಾತಿ ಪರಿಕಲ್ಪನೆ ಸಮಾಜವನ್ನು ದಿಕ್ಕರಿಸಿ ಜಾತಿನಿರಸನ ಸಿದ್ಧಾಂತವನ್ನು ಅನುಷ್ಠಾನಗೊಳಿಸಿ ಅದನ್ನೇ ಎತ್ತಿ ತೋರಿದರು. ಅಸಮಾನತೆ ಸಮಾಜ ತಿರಸ್ಕರಿಸಿ ಸತ್ಯ ನಿಷ್ಠೆ ಹಾಗೂ ಕಾಯಕದ ಸಮನ್ವಯ ಸಮಾಜ ಸ್ಥಾಪನೆಗಾಗಿಯೇ ಹೆಚ್ಚು ಶ್ರಮಿಸಿದ್ದಾರೆ. ಕಾಯಕ ಚಳವಳಿಯ ಮಹತ್ವದ ಗುರಿಯೂ ಅದೇ ಆಗಿತ್ತು.

“ಆವ ಕುಲವಾದಡೇನು ಶಿವಲಿಂಗವಿದ್ದವನೆ ಕುಲಜನು, ಕುಲವನರಸುವರೆ ಶರಣರಲ್ಲಿ,
ಜಾತಿಸಂಕರನಾದ ಬಳಿಕ ಕೊಂಬೆನವರಲ್ಲಿ,
ಕೂಸ ಕೊಡುವೆ. ಕೂಡಲಸಂಗಮದೇವಾ,
ನಂಬುವೆ ನಿಮ್ಮ ಶರಣನು”

ಎನ್ನುವ ಬಸವಣ್ಣನವರು ಜಾತ್ಯಾತೀತ ನಿಲುವಿನ ಸಮಾಜ ನಿರ್ಮಾಣಕ್ಕಾಗಿಯೇ ಪಣತೊಟ್ಟು ಬದುಕಿದರು. ಕುಲದ ನೆಲೆಯನ್ನು ಕಳಚಲು ಹರಸಾಹಸ ಪಟ್ಟಿದ್ದರು ಎಂಬುದು ಅರ್ಥವಾಗುತ್ತದೆ.
ಆದರೆ, ಕಲ್ಯಾಣ ಕ್ರಾಂತಿಗೆ ಮೂಲ ಕಾರಣವಾಗಿದ್ದು ಶರಣ ಹರಳಯ್ಯ ಮತ್ತು ಮಧುವರಸರ ಮಕ್ಕಳ ಮದುವೆಯ ಬೀಗತನದ ವಿಷಯ.
ಇಲ್ಲಿ ಇನ್ನೊಂದು ವಿಷಯ ಚರ್ಚೆಗೆ ಬರುವುದು ಶರಣರು ‘ಅಂತರ್ಜಾತಿ ಕಲ್ಯಾಣೋತ್ಸವ’ ಕುರಿತು, ಬಸವಾದಿ ಶರಣರು ಕೈಗೊಂಡಿದ್ದು ಅಂತರ್ಜಾತಿ ಮದುವೆ ಅಲ್ಲ ಎಂಬುದು ಸ್ಪಷ್ಟವಾಗಿ ಹೇಳಬಹುದು. ಶರಣರು ಜಾತಿಯೆಂಬ ಪರಿಕಲ್ಪನೆಯನ್ನೇ ನಿರಾಕರಿಸಿ ಲಿಂಗವಂತರಾಗಿದ್ದವರು, ಶರಣರಿಗೆ ಯಾವುದೇ ಜಾತಿ, ಮತ, ಪಂಥಗಳು ಇರಲಿಲ್ಲ. ಅಂದರೆ ಶರಣರು ಜಾತ್ಯತೀತರು,ಆ ಸಿದ್ಧಾಂತದ ಪ್ರತಿಪಾದಕರಾಗಿದ್ದರು. ಹೀಗಾಗಿ ಅದು ‘ಲಿಂಗವಂತರ ವಿವಾಹ’ವೇ ನಡೆದಿತ್ತು. ಆದರೆ ಸಂಪ್ರದಾಯವಾದಿಗಳ ಕಣ್ಣಿಗೆ ಅದು ದೊಡ್ಡ ಪ್ರಮಾದವಾಗಿಯೇ ಕಂಡಿತು.

ಶರಣರಿಗೆ ಯಾವುದೇ ಜಾತಿಬೇಧದ ತಾರತಮ್ಯ ಇರಲಿಲ್ಲ. ಈ ಬಗ್ಗೆ ಮಾಚಿದೇವರ ಒಂದು ವಚನ ಹೀಗಿದೆ;
“ಆ ಜಾತಿ ಈ ಜಾತಿಯವರೆನಬೇಡ. ಹದಿನೆಂಟುಜಾತಿಯೊಳಗಾವ ಜಾತಿಯಾದಡೂ ಆಗಲಿ, ಗುರು ಕಾರುಣ್ಯವ ಪಡೆದು, ಅಂಗದ ಮೇಲೆ ಲಿಂಗವ ಧರಿಸಿ, ಪುನರ್ಜಾತರಾದ ಬಳಿಕ” ಎಂದು ಎಲ್ಲರೂ ಒಂದೇ ಎನ್ನುವ ಭಾವ ಶರಣರು ವ್ಯಕ್ತಪಡಿಸುತ್ತಾರೆ.

ಹರಳಯ್ಯ ಮತ್ತು ಮಧುವರಸರ ಮಕ್ಕಳ ಕಲ್ಯಾಣೋತ್ಸವದಿಂದ ಕಲ್ಯಾಣ ನೆಲದಲ್ಲಿ ಕುಲಗೆಟ್ಟಿತ್ತು, ಜಾತಿಸಂಕರವಾಯಿತು ಎನ್ನುತ್ತಾ ವೈದಿಕ ಸಂಪ್ರದಾಯವಾದಿಗಳು ತೀವ್ರವಾಗಿ ವಿರೋಧಿಸಿದರು. ಶರಣರ ಕಲ್ಯಾಣ ಮಹೋತ್ಸವ ಸಹಿಸದ ಸಮಾಜದಲ್ಲಿ ಶರಣರ ವಿವಾಹವೇ ದೊಡ್ಡ ಪ್ರಮಾದಕ್ಕೆ ಗುರಿಯಾಗಿತ್ತು. ಮುಂದೆ ಅದು ‘ಕಲ್ಯಾಣ ಕ್ರಾಂತಿ’ಯಾಗಿ ರೂಪಾಂತರ ಪಡೆಯಿತು.

“ಊರ ಮುಂದೆ ಹಾಲ ಹಳ್ಳ ಹರಿವುತ್ತಿರಲು, ಒರೆಯಾವಿನ ಬೆನ್ನ ಹರಿಯಲದೇಕಯ್ಯಾ ಲಜ್ಜೆಗೆಡಲೇಕೆ ನಾಣುಗೆಡಲೇಕೆ ಕೂಡಲಸಂಗಮದೇವನುಳ್ಳನ್ನಕ್ಕ ಬಿಜ್ಜಳನ ಭಂಡಾರವೆನಗೇಕಯ್ಯಾ”

ಎನ್ನುವ ಬಸವಣ್ಣನವರು ವೈದಿಕ ವ್ಯವಸ್ಥೆ ವಿರುದ್ಧ ದೊಡ್ಡ ಮಟ್ಟದ ಹೋರಾಟವನ್ನು ಕೈಗೆತ್ತಿಕೊಂಡು ಬಿಜ್ಜಳ ಹಾಗೂ ಆತನ ಬೆಂಬಲಿಗರ ವಿರುದ್ಧ ಏರು ದನಿಯಲ್ಲಿ ಮಾತನಾಡಿರುವುದು ಸೂಚಿಸುತ್ತದೆ.

ಬಸವಾದಿ ಶರಣರ ಸರ್ವಸಮಾನತೆ ಸಿದ್ಧಾಂತವನ್ನು ಸಹಿಸದ ಕರ್ಮಠರ ದ್ವೇಷ ಮುಂದೆ ಹಿಂಸಾತ್ಮಕ ರೂಪ ಪಡೆದು ಶರಣರಿಗೆ ಆನೆಗಳ ಕಾಲಿಗೆ ಕಬ್ಬಿಣದ ಸರಪಳಿಗಳಿಂದ ಕಟ್ಟಿ ‘ಎಳೆಹೂಟೆ’ ಶಿಕ್ಷೆಗೆ ಗುರಿ ಮಾಡಿದರು. ವಚನಕಾರರ ಬಹುತೇಕ ವಚನ ರಾಶಿಯನ್ನು ಪ್ರಭುತ್ವ ವಿರೋಧಿ ಸಾಹಿತ್ಯ ಎಂದು ಬೆಂಕಿಗೆಸದು ಸುಟ್ಟು ಭಸ್ಮಗೊಳಿಸಿದರು. ಕಂಡ ಕಂಡಲ್ಲಿ ಶರಣರ ಹತ್ಯೆ ನಡೆದಿತ್ತು.
ಜ್ಞಾನದ ಜ್ಯೋತಿ ಪ್ರಕಾಶಿಸಿದ ನೆಲದ ಮೇಲೆ ರಕ್ತ ಕಾಲುವೆ ಹರಿಯಿತು. ಬಸವಣ್ಣನವರಿಗೆ ಗಡಿಪಾರು ಶಿಕ್ಷೆ ವಿಧಿಸಿದರು. ಅದು ‘ಕಲ್ಯಾಣದ ಕ್ರಾಂತ್ರಿ’ಗೆ ಸಾಕ್ಷಿಯಾಗಿ ಚಾರಿತ್ರಿಕ ಕಪ್ಪು ಚುಕ್ಕೆಯಾಗಿ ಐತಿಹಾಸಿಕ ದಾಖಲಾಗಿದೆ. ಉಳಿದು ಶರಣರು ದಿಕ್ಕು ಪಾಲಾಗಿ ಓಡಿ ಹೋಗಬೇಕಾದ ಅನಿವಾರ್ಯತೆ ಎದುರಾಗಿತ್ತು. ಇದನ್ನು ಅಲ್ಲಮಪ್ರಭುಗಳು ತಮ್ಮ ಒಂದು ವಚನದಲ್ಲಿ ಸಂಕಟದಿಂದ ಬರೆದಿದ್ದಾರೆ:

“ಕಾಮನ ಕೈ ಮುರಿದಡೆ ಮೋಹ ಮುಂದುಗೆಟ್ಟಿತ್ತು.
ಆಮಿಷ ತಾಮಸಧಾರಿಗಳೆಲ್ಲ ಎಳತಟವಾದರು.
ಅಕ್ಕಟಾ, ಅಯ್ಯಲಾ, ನಿಮ್ಮ ಕಂಡವರಾರೊ ?
ಆಳವಿಲ್ಲದ ಸ್ನೇಹಕ್ಕೆ ಮರಣವೆ ಮಹಾನವಮಿ.
ಗುಹೇಶ್ವರನನರಿಯದೆ ರಣಭೂಮಿಗಳುಲಿದವು.”

ಸಮಾಜೋಧಾರ್ಮಿಕ ಚಳುವಳಿ ರೂಪಿಸಿದ ಶರಣರು ಕೊನೆಗೆ ಎಳೆಹೂಟೆ ಶಿಕ್ಷೆಗೆ ಗುರಿಯಾಗಬೇಕಾಯ್ತು. ಶರಣರ ವಿರುದ್ಧ ರೂಪಿಸಿದ ರಾಜ್ಯಶಾಹಿಗಳ ತಂತ್ರ ‘ಅಂತರ್ಜಾತಿ ವಿವಾಹ’ ನೆಪಮಾತ್ರವೇ ಆಗಿತ್ತು. ಆದರೆ ಶರಣರ ಇಡೀ ಸಿದ್ಧಾಂತವನ್ನು ಒಪ್ಪದೇ ಅದನ್ನು ಬೇರುಸಹಿತ ಕಿತ್ತೊಗೆಯಲು ಸಂಪ್ರದಾಯವಾದಿ ವ್ಯವಸ್ಥೆ ಮೊದಲಿನಿಂದಲೂ ಕತ್ತಿ ಮಸಿಯುತ್ತಲೇ ಇತ್ತು. ಆದರೆ ಜೊತೆಗಿದ್ದ ಬಿಜ್ಜಳ ಬಸವಣ್ಣನವರ ಸ್ನೇಹ ಮರೆತು ಶರಣರ ವಿಷಯದಲ್ಲಿ ಕ್ರೂರಿಯಂತೆ ವರ್ತಿಸಿ ಕೊನೆಗೆ ಕಠಿಣ ಶಿಕ್ಷೆಗೆ ಒಳಪಡಿಸಿಲು ಸಹಕರಿಸಿದನು. ಸತ್ಯ ನ್ಯಾಯ ನಿಷ್ಠೆ ಅರಿಯದ ಕಾರಣ ಕಲ್ಯಾಣ ನೆಲ ರಣರಂಗವಾಯಿತು, ಬಿಜ್ಜಳನ ಸ್ನೇಹದಲ್ಲಿ ಆಳವಿರಲಿಲ್ಲ, ಅದಕ್ಕೆ ಶರಣರಿಗೆ ‘ಮರಣವೇ ಮಹಾನವಮಿ ‘ ಎನ್ನುವ ನೋವಿನ ಮಾತುಗಳು ಅಲ್ಲಮರು ಹೇಳುತ್ತಾರೆ.

“ಜೋಳವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯಾ. ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ.
ಕೇಳು, ಕೂಡಲಸಂಗಮದೇವಾ, ಮರಣವೇ ಮಹಾನವಮಿ”
ಎನ್ನುವ ಬಸವಣ್ಣನವರು ಬಿಜ್ಜಳನ ವಿರುದ್ಧ ಬಂಡಾಯ ರೂಪತಾಳಿ ಪ್ರತಿರೋಧ ವ್ಯಕ್ತಪಡಿಸುತ್ತಾರೆ.

“ಎಮ್ಮವರಿಗೆ ಸಾವಿಲ್ಲ, ಎಮ್ಮವರು ಸಾವನರಿಯರು, ಸಾವೆಂಬುದು ಸಯವಲ್ಲ” ಎಂಬಂಥ ಬಸವಣ್ಣನವರ ಮಾತುಗಳು ಸಾವಿನ ಬಗ್ಗೆ ಸೂಚಿಸುತ್ತವೆ. ಶರಣರಿಗೆ ಸಾವಿಲ್ಲ, ಸಾವಿಗೆ ಹೆದರದವರು, ಎಂದೆಂದಿಗೂ ಶರಣರು ಅಮರರು ಹೀಗಾಗಿ ಶರಣರು ‘ಮರಣವೇ ಮಾಹಾನವಮಿ’ ಎಂದಿದ್ದಾರೆ.

ಶರಣ ಜೀವಿಗಳು ಸಮ ಸಮಾಜ ಕನಸು ಹೊತ್ತು ಕಾಯಕ ಸಿದ್ಧಾಂತ ಪರಿಕಲ್ಪನೆ ಜಾರಿಗೊಳಿಸಿದರು. ಲಿಂಗಾಯತ ಎನ್ನುವ ಅವೈದಿಕ ಧರ್ಮ ಸ್ಥಾಪಿಸಿ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾದರು. ಶರಣರು ಅಂತಿಮವಾಗಿ ಸಂಪ್ರದಾಯವಾದಿ ಕೌರ್ಯದಲ್ಲಿ ಹತ್ಯೆಯಾದರು. ಉಳಿದ ಶರಣರು ಕಲ್ಯಾಣ ತೊರೆದು ದಿಕ್ಕುಪಾಲಾದರು. ಅಂದಿಗೆ ಕಲ್ಯಾಣ ಪ್ರಣತೆ ಆರಿಹೋಗಿತ್ತು. ಆದರೆ ಶರಣ ಚಿಂತನೆಯ ಪ್ರಣತೆ ಇಂದಿಗೂ ಜಗವ ಬೆಳಗುತ್ತಿರುವುದು ಅಲ್ಲಗಳೆಯುವಂತಿಲ್ಲ.

“ಅರಸು ವಿಚಾರ, ಸಿರಿಯು, ಶೃಂಗಾರ, ಸ್ಥಿರವಲ್ಲ ಮಾನವಾ. ಕೆಟ್ಟಿತ್ತು ಕಲ್ಯಾಣ, ಹಾಳಾಯಿತ್ತು ನೋಡಾ”..‌.ಎನ್ನುವ ಬಸವಣ್ಣನವರ ಮನದಾಳದ ಮಾತುಗಳು, “ಕೆಟ್ಟಿತ್ತು ನೋಡಾ ಲೋಕ, ಕೆಟ್ಟಿತ್ತು ನೋಡಾ ಜಗವು ಕೆಟ್ಟಿತ್ತು ನೋಡಾ ಈರೇಳು ಭುವನವೆಲ್ಲವು ಇತ್ತ ವಿಸ್ತಾರವಾಯಿತ್ತು” ಎನ್ನುವಂಥ ಅಲ್ಲಮಪ್ರಭುಗಳ ಮಾತುಗಳು ಕಲ್ಯಾಣ ನಾಡಿನ ಅಂತಿಮ ಕ್ಷಣಗಳನ್ನು ನೆನಪಿಸುತ್ತವೆ.

ಶರಣರು ಕರ್ಮ ಸಿದ್ಧಾಂತ ನಿರಾಕರಿಸಿ ಕಾಯಕ ಸಿದ್ಧಾಂತ ಪ್ರೋತ್ಸಾಹಿಸಿದರು. ಸಮಾಜದ ಎಲ್ಲಾ ವರ್ಗದ ಕಾಯಕ ಜೀವಿಗಳನ್ನು ಒಗ್ಗೂಡಿ ಶರಣ ಚಳವಳಿ ಭಾಗವಾಗಿ ವೈಚಾರಿಕ, ವೈಜ್ಞಾನಿಕ ನೆಲೆಗಟ್ಟಿನ ಧರ್ಮ ಸ್ಥಾಪಿಸಿದರು. ಬಸವಣ್ಣ ಹಾಗೂ ಸಮಕಾಲೀನ ಶರಣರ ಈ ಕ್ರಾಂತಿ ಯಾವುದೇ ಹೊನ್ನು ಮಣ್ಣು ಹೆಣ್ಣಿಗಾಗಿ ನಡೆದ ಯುದ್ಧವಲ್ಲ, ದುಡಿಯುವ ವರ್ಗದ ಜನರ ಜೀವನದ ಹಕ್ಕುಗಳಿಗಾಗಿ ಸಮಾನತೆ ಸಮಾಜ ಸ್ಥಾಪನೆಗಾಗಿ ನಡೆದಿರುವ ಸಾಮಾಜಿಕ ಕ್ರಾಂತಿಯಾಗಿತ್ತು.

ಬಸವಾದಿ ಶರಣರ ಸಾಮಾಜಿಕ ಪ್ರಜ್ಞೆ ಪ್ರಸ್ತುತ ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ, ಅದನ್ನು ಮತ್ತೆ ಮುನ್ನೆಲೆಗೆ ತಂದು ಅನುಷ್ಠಾನಗೊಳಿಸಿದರೆ ಸಮಾಜ ‘ಮತ್ತೆ ಕಲ್ಯಾಣ’ವಾಗಲು ಸಾಧ್ಯ
ಶರಣರ ವಿಜಯೋತ್ಸವ….
ಮರಣವೇ ಮಹಾನವಮಿ….‌..
ಕಲ್ಯಾಣ ವಿಜಯೋತ್ಸವ….!!

ಬಾಲಾಜಿ ಕುಂಬಾರ, ಚಟ್ನಾಳ


ಇದನ್ನೂ ಓದಿ: ’ಅವ ನಮ್ಮವ, ಅವ ನಮ್ಮವ’ ಎಂದ ಕ್ರಾಂತಿಕಾರಿ ಬಸವಣ್ಣನ ಚಿಂತನೆಗಳು ಇಂದಿನ ವಿಷಮತೆಗೆ ಲಸಿಕೆ..: ಜಿ.ಬಿ ಪಾಟೀಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...