Homeದಿಟನಾಗರಸಾವರ್ಕರ್ ಕ್ಷಮಾದಾನ ಅರ್ಜಿ- ಗಾಂಧಿ ಸಲಹೆ ನೀಡಿದ್ದರೇ ?

ಸಾವರ್ಕರ್ ಕ್ಷಮಾದಾನ ಅರ್ಜಿ- ಗಾಂಧಿ ಸಲಹೆ ನೀಡಿದ್ದರೇ ?

- Advertisement -
- Advertisement -

ಮೂಲ: ಪೂಜಾ ಚೌಧರಿ – ಆಲ್ಟ್ ನ್ಯೂಸ್
ಅನುವಾದ: ನಾ ದಿವಾಕರ

ಹಿಂದೂ ಮಹಾಸಭಾ ನಾಯಕ ವಿನಾಯಕ್ ದಾಮೋದರ್ ಸಾವರ್ಕರ್ ಬ್ರಿಟೀಷ್ ಸರ್ಕಾರಕ್ಕೆ ಕ್ಷಮಾದಾನ ಅರ್ಜಿ ಸಲ್ಲಿಸುವಂತೆ ಮಹಾತ್ಮ ಗಾಂಧಿ ಸಲಹೆ ನೀಡಿದ್ದರು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಉದಯ್ ಮಹುರ್‌ರ್ಕರ್ ಮತ್ತು ಚಿರಾಯು ಪಂಡಿತ್ ಅವರ ವೀರ್ ಸಾವರ್ಕರ್ ಕುರಿತ ಕೃತಿಯೊಂದನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಕೇಂದ್ರ ಸಚಿವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಸಾರ್ವರ್ಕರ್ ಕುರಿತು ಸಾಕಷ್ಟು ಸುಳ್ಳು ಮಾಹಿತಿಗಳನ್ನು ಹರಡಲಾಗಿದೆ. ಬ್ರಿಟೀಷ್ ಸರ್ಕಾರಕ್ಕೆ ಅವರು ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು ಎಂದು ಪದೇ ಪದೇ ಹೇಳಲಾಗುತ್ತಿದೆ. ಸತ್ಯಾಂಶ ಎಂದರೆ ಸೆರೆಮನೆಯಿಂದ ತಮ್ಮನ್ನು ಬಿಡುಗಡೆ ಮಾಡಲು ಅವರು ಕ್ಷಮಾದಾನ ಅರ್ಜಿ ಸಲ್ಲಿಸಲಿಲ್ಲ. ಒಬ್ಬ ಕೈದಿಗೆ ಕ್ಷಮಾದಾನ ಅರ್ಜಿ ಸಲ್ಲಿಸುವ ಹಕ್ಕು ಇರುತ್ತದೆ. ಮಹಾತ್ಮ ಗಾಂಧಿ ಸಾವರ್ಕರ್ ಅವರಿಗೆ ಈ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದ್ದರು. ಗಾಂಧಿಯ ಸಲಹೆಯ ಮೇರೆಗೆ ಸಾವರ್ಕರ್ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು. ಸಾವರ್ಕರ್ ಅವರನ್ನು ಬಿಡುಗಡೆ ಮಾಡುವಂತೆ ಗಾಂಧಿ ಮನವಿ ಮಾಡಿದ್ದರು. ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ನಾವು ಶಾಂತಿಯುತವಾದ ಹೋರಾಟ ನಡೆಸುತ್ತಿದ್ದೇವೆ, ಸಾವರ್ಕರ್ ಅವರೂ ಈ ಪ್ರತಿರೋಧವನ್ನು ಮುಂದುವರೆಸುತ್ತಾರೆ ಎಂದು ಗಾಂಧಿ ಹೇಳಿದ್ದರು” ಎಂದು ಹೇಳಿರುವ ರಕ್ಷಣಾ ಸಚಿವರು, ಸಾವರ್ಕರ್ ಕ್ಷಮಾದಾನ ಅರ್ಜಿ ಸಲ್ಲಿಸಿ ಕ್ಷಮೆ ಕೋರಿದ್ದರು ಎನ್ನುವುದು ಸುಳ್ಳು ಮತ್ತು ಆಧಾರರಹಿತ ಆರೋಪ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿಯು ಸಾವರ್ಕರ್‌ರನ್ನು ಶೀಘ್ರದಲ್ಲೇ ರಾಷ್ಟ್ರಪಿತ ಎಂದು ಘೋಷಿಸಲಿದೆ: ಅಸಾದುದ್ದೀನ್ ಓವೈಸಿ ಆಕ್ರೋಶ

ಬಿಜೆಪಿಯ ಜಾಲತಾಣದಲ್ಲಿ ಒಂದು ಲೇಖನದಲ್ಲಿ ರಾಜನಾಥ್ ಸಿಂಗ್ ಅವರ ಪ್ರತಿಪಾದನೆ ಸತ್ಯ ಎಂದು ಹೇಳಿರುವುದೇ ಅಲ್ಲದೆ, “ಕಾಂಗ್ರೆಸ್ ನಾಯಕರು ಮತ್ತು ಎಡಪಂಥೀಯ ಕಾರ್ಯಕರ್ತರು, ಮಾರ್ಕ್ಷ್‌ವಾದಿ ಇತಿಹಾಸಕಾರರನ್ನೂ ಸೇರಿದಂತೆ, ಹಲವು ದಶಕಗಳಿಂದ ಸಾರ್ವರ್ಕರ್ ಅವರ ಪರಂಪರೆಯನ್ನು ಕ್ಷಮಾದಾನ ಅರ್ಜಿಯ ಸುತ್ತಲೂ ಹೆಣೆಯಲು ಯತ್ನಿಸುತ್ತಿದ್ದಾರೆ, ಅವರಿಗೆ ನಿಜವಾಗಿ ದಕ್ಕಬೇಕಾದ ಸ್ವಾತಂತ್ರ್ಯ ಸಂಗ್ರಾಮಿ ಪಟ್ಟ ನೀಡಲು ನಿರಾಕರಿಸುತ್ತಿದ್ದಾರೆ, ಈ ನಿಟ್ಟಿನಲ್ಲಿ ರಕ್ಷಣಾ ಸಚಿವರ ಅಭಿಪ್ರಾಯವನ್ನು ಅಲ್ಲಗಳೆಯುತ್ತಿದ್ದಾರೆ” ಎಂದು ಆರೋಪಿಸಲಾಗಿದೆ.

ತನ್ನ ಪ್ರತಿಪಾದನೆಯನ್ನು ಸಮರ್ಥಿಸಲು ಸ್ವರಾಜ್ಯ ಪತ್ರಿಕೆಯು ವಿಕ್ರಂ ಸಂಪತ್ ಅವರ ಸಾವರ್ಕರ್ ಕುರಿತ ಪುಸ್ತಕವನ್ನು ಉಲ್ಲೇಖಿಸಿದೆ. “…1920ರಲ್ಲಿ ಗಾಂಧೀಜಿ ಸಾವರ್ಕರ್ ಸೋದರರಿಗೆ ಕ್ಷಮಾದಾನ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದ್ದು, ಯಂಗ್ ಇಂಡಿಯಾ ಪತ್ರಿಕೆಯ 1920 ಮೇ 26ರ ಲೇಖನದಲ್ಲಿ ಅವರ ಬಿಡುಗಡೆಗೂ ಆಗ್ರಹಿಸಿದ್ದರು”, ಎಂದು ವೀರ ಸಾವರ್ಕರ್ ಅವರ ಜೀವನ ಚರಿತ್ರೆಯನ್ನು ಬರೆದಿರುವ ಸಂಪತ್ ಟ್ವೀಟ್ ಮಾಡಿದ್ದಾರೆ.

ಸಾವರ್ಕರ್ ಗಾಂಧಿ ಸಲಹೆಯ ಮೇರೆಗೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದರೇ ?

1910ರ ಮಾರ್ಚ್ 13 ರಂದು ಬ್ರಿಟೀಷ್ ಸರ್ಕಾರ ಸಾವರ್ಕರ್ ಅವರನ್ನು ಬಂಧಿಸಿದ ನಂತರ ಅವರನ್ನು ಅಂಡಮಾನ್‌ನಲ್ಲಿರುವ ಸೆಲ್ಯುಲಾರ್ ಜೈಲಿಗೆ (ಕಾಲಾಪಾನಿ) 1911ರ ಜುಲೈ 4 ರಂದು ಕಳುಹಿಸಲಾಯಿತು. ನಾಸಿಕ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಎ.ಎಂ.ಟಿ. ಜಾಕ್ಸನ್ ಅವರ ಹತ್ಯೆಯ ಆರೋಪದ ಮೇಲೆ ಸಾವರ್ಕರ್ ಅವರನ್ನು ಬಂಧಿಸಲಾಗಿತ್ತು. ಈ ಹತ್ಯೆ ಸಂಭವಿಸಿದಾಗ ಸಾವರ್ಕರ್ ಲಂಡನ್ನಿನಲ್ಲಿದ್ದರು. ಜಾಕ್ಸನ್ ಅವರನ್ನು ಹತ್ಯೆ ಮಾಡಲು ಬಳಸಿದ ಪಿಸ್ತೂಲನ್ನು ಸಾವರ್ಕರ್ ಒದಗಿಸಿದ್ದರು ಎಂಬ ಆರೋಪವನ್ನು ಹೊರಿಸಲಾಗಿತ್ತು. ಅವರೊಡನೆ ಹಿರಿಯ ಸೋದರ ಗಣೇಶ್ ದಾಮೋದರ್ ಸಾವರ್ಕರ್ ನಾಸಿಕ್‌ನಲ್ಲಿ ಹುಟ್ಟುಹಾಕಿದ್ದ ಮಿತ್ರ ಮೇಳ (ಈಗ ಅಭಿನವ ಭಾರತ) ಎಂಬ ರಹಸ್ಯ ಕ್ರಾಂತಿಕಾರಿ ಸಂಘಟನೆಯನ್ನು ಈ ಹತ್ಯೆಗೆ ತಳುಕು ಹಾಕಲಾಗಿತ್ತು. ಇದಕ್ಕೂ ಒಂದು ವರ್ಷದ ಮುನ್ನವೇ ಗಣೇಶ್ ಸಾವರ್ಕರ್ ಅವರನ್ನು ಬ್ರಿಟೀಷ್ ಅಧಿಕಾರಿಯ ಹತ್ಯೆಗೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.

ಸಾವರ್ಕರ್ ೧೯೧೧ರಲ್ಲಿ ತಮ್ಮ ಪ್ರಥಮ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದರು.

“ಸರ್ಕಾರದ ಅಧಿಕೃತ ನಿಯಮಗಳ ಪ್ರಕಾರವೇ ಎಲ್ಲ ರಾಜಕೀಯ ಕೈದಿಗಳೂ ತಮ್ಮನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸುವುದು ದೆಹಲಿ ದರ್ಬಾರ್ ಸನ್ನಡತೆಯ ಒಂದು ಭಾಗವಾಗಿ ವಾಡಿಕೆಯಾಗಿತ್ತು. ಹಾಗಾಗಿ, ವಿನಾಯಕ್ ಅವರನ್ನೂ ಸೇರಿದಂತೆ ಎಲ್ಲರೂ ಜೈಲು ಅಧಿಕಾರಿಗಳಿಗೆ ತಮ್ಮ ಅರ್ಜಿಯನ್ನು ಸಲ್ಲಿಸಿದ್ದರು. ವಿನಾಯಕ್ ಅವರ ಅರ್ಜಿಯನ್ನು 1911 ರ ಆಗಸ್ಟ್ 30 ರಂದು ಸ್ವೀಕರಿಸಲಾಗಿತ್ತು. ಈ ಅರ್ಜಿಯ ಪ್ರತಿ ಲಭ್ಯವಿಲ್ಲದಿದ್ದರೂ, ಅವರ ಜೈಲ್ ಇತಿಹಾಸದ ಟಿಪ್ಪಣಿಗಳಲ್ಲಿ ಇದರ ಉಲ್ಲೇಖವಿದೆ…” ಇದು ವಿಕ್ರಂ ಸಂಪತ್ ಅವರ “Echoes from a Forgotten Past, 1883–1924” ಪುಸ್ತಕದಲ್ಲಿ ಉಲ್ಲೇಖವಾಗಿರುವ ಸಾಲುಗಳು.

ಇದನ್ನೂ ಓದಿ: ಬ್ರಿಟಿಷರಿಗೆ ಸಾವರ್ಕರ್‌ ಕ್ಷಮಾಪಣೆ ಪತ್ರ ಬರೆಯಲು ಗಾಂಧೀಜಿಯೇ ಸೂಚಿಸಿದ್ದರು: ರಾಜನಾಥ್‌ ಸಿಂಗ್‌‌

ಈ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ ಸಮಯದಲ್ಲಿ ಮಹಾತ್ಮ ಗಾಂಧಿ ದಕ್ಷಿಣ ಆಫ್ರಿಕಾದಲ್ಲಿದ್ದರು. ಮೂರು ವರ್ಷಗಳ ನಂತರವಷ್ಟೇ ಭಾರತಕ್ಕೆ ಹಿಂದಿರುಗಿದರು. ಸಾವರ್ಕರ್ ತಮ್ಮ ಎರಡನೆ ಕ್ಷಮಾದಾನ ಅರ್ಜಿಯನ್ನು 1913 ರ ನವಂಬರ್ 14 ರಂದು ಸಲ್ಲಿಸಿದ್ದರು. ಇದೂ ಸಹ, ಗಾಂಧಿ 1914 ರಲ್ಲಿ ಭಾರತಕ್ಕೆ ಹಿಂದಿರುಗುವ ಮುನ್ನವೇ ಸಲ್ಲಿಸಲಾಗಿತ್ತು.

1920 ರಲ್ಲಿ ಗಾಂಧಿ ಸಾವರ್ಕರ್ ಅವರ ಕಿರಿಯ ಸೋದರ ನಾರಾಯಣ್ ದಾಮೋದರ್ ಸಾವರ್ಕರ್ ಬಳಿ ಮಾತನಾಡಿ, ವಿನಾಯಕ್ ಸಾವರ್ಕರ್ ಅವರ ಅಪರಾಧ ರಾಜಕೀಯ ಸ್ವರೂಪದ್ದಾಗಿರುವುದರಿಂದ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದ್ದರು. ನಾರಾಯಣ್ ಸಾವರ್ಕರ್ ಗಾಂಧೀಜಿಯ ಸಹಾಯ ಕೋರಿ ಪತ್ರ ಬರೆದ ನಂತರ ಗಾಂಧೀಜಿಯ ಪ್ರತಿಕ್ರಿಯೆ ಇದಾಗಿತ್ತು.

ರಾಜನಾಥ್ ಸಿಂಗ್ ಅವರ ಪ್ರತಿಪಾದನೆ ಸತ್ಯ ಎಂದು ನಿರೂಪಿಸಲು ಸ್ವರಾಜ್ಯ ಪತ್ರಿಕೆಯು ಉಲ್ಲೇಖಿಸಿರುವ ವಿಕ್ರಂ ಸಂಪತ್ ಹೀಗೆ ಬರೆಯುತ್ತಾರೆ: “ಬಾಂಬೆಯ ಗಿರ್ಗಾಂವ್‌ನಲ್ಲಿದ್ದ ತಮ್ಮ ಕ್ಲಿನಿಕ್‌ನಿಂದ ನಾರಾಯಣ ರಾವ್ ಯೋಚನೆಗೂ ನಿಲುಕದ ಕೆಲಸಕ್ಕೆ ಕೈ ಹಾಕುತ್ತಾರೆ. ತಮ್ಮ ಲೇಖನಿಯನ್ನು ಹಿಡಿದು, ತಮ್ಮ ಸೋದರನನ್ನು ಸೈದ್ಧಾಂತಿಕವಾಗಿ ವಿರೋಧಿಸುತ್ತಿದ್ದ, ಆದರೂ ದೇಶದಲ್ಲಿ ಒಂದು ಪ್ರಬಲ ರಾಜಕೀಯ ಧ್ವನಿಯಾಗಿ ಹೊರಹೊಮ್ಮುತ್ತಿದ್ದ, ಮೋಹನ್ ದಾಸ್ ಕರಂಚಂದ್ ಗಾಂಧಿಗೆ ಪತ್ರ ಬರೆಯಲು ಯೋಚಿಸುತ್ತಾರೆ. ತಮ್ಮ ಆರು ಪತ್ರಗಳ ಪೈಕಿ ಮೊದಲನೆ ಪತ್ರದಲ್ಲಿ (18-01-1920) ನಾರಾಯಣ್ ಗಾಂಧೀಜಿಯ ಸಹಾಯವನ್ನು ಕೋರುವುದೇ ಅಲ್ಲದೆ, ಪ್ರಭುತ್ವದ ಆಜ್ಞೆಯ ಮೇರೆಗೆ ಬಂಧಿಸಲಾಗಿರುವ ತಮ್ಮ ಹಿರಿಯ ಸೋದರರನ್ನು ಬಿಡುಗಡೆ ಮಾಡಲು ಸಹಾಯ ಮಾಡುವಂತೆ ಕೋರುತ್ತಾರೆ”.

ಇದನ್ನೂ ಓದಿ: ಯಲಹಂಕ ಮೇಲ್ಸೇತುವೆಗೆ ಸಾವರ್ಕರ್‌ ಹೆಸರು: ಕನ್ನಡಿಗರನ್ನು ಬಂಧಿಸಿ ನಾಮಕರಣಕ್ಕೆ ಮುಂದಾದ ಸರ್ಕಾರ

ಗಾಂಧೀಜಿಗೆ ನಾರಾಯಣ್ ಸಾವರ್ಕರ್ ಬರೆದ ಪತ್ರದಲ್ಲಿ, “ನಿನ್ನೆ, ಅಂದರೆ ಜನವರಿ 17ರಂದು ಭಾರತ ಸರ್ಕಾರ ನನಗೆ ತಿಳಿಸಿದ ಮಾಹಿತಿಯ ಅನುಸಾರ, ಬಿಡುಗಡೆಯಾಗುವವರ ಪಟ್ಟಿಯಲ್ಲಿ ಸಾವರ್ಕರ್ ಸೋದರರ ಹೆಸರು ಇರುವುದಿಲ್ಲ….ಭಾರತ ಸರ್ಕಾರ ಇಬ್ಬರನ್ನೂ ಬಿಡುಗಡೆ ಮಾಡದಿರಲು ನಿರ್ಧರಿಸಿದಂತಿದೆ. ಈ ಪರಿಸ್ಥಿತಿಯಲ್ಲಿ ಹೇಗೆ ಮುಂದುವರೆಯಬೇಕು ಎಂದು ನಿಮ್ಮಿಂದ ಸೂಕ್ತ ಸಲಹೆಯನ್ನು ಅಪೇಕ್ಷಿಸುತ್ತೇನೆ…” ಎಂದು ಕೋರುತ್ತಾರೆ. ಈ ಪತ್ರದ ಒಕ್ಕಣೆಯನ್ನು ಮಹಾತ್ಮ ಗಾಂಧಿಯ ಬರಹಗಳ ಸಂಗ್ರಹ ಸಂಪುಟ 19ರ ಪುಟ 348 ರಲ್ಲಿ ಕಾಣಬಹುದು.

ಈ ಪತ್ರಕ್ಕೆ ಉತ್ತರಿಸುತ್ತಾ ಗಾಂಧಿ, 1920 ರ ಜನವರಿ 25 ರಂದು ನಾರಾಯಣ್ ಸಾವರ್ಕರ್ ಅವರಿಗೆ “ಪ್ರಕರಣದ ವಿವರಗಳನ್ನು ಉಲ್ಲೇಖಿಸಿ, ನಿಮ್ಮ ಸೋದರ ಎಸಗಿರುವ ಅಪರಾಧವು ಸಂಪೂರ್ಣವಾಗಿ ರಾಜಕೀಯ ಸ್ವರೂಪದ್ದಾಗಿದೆ” ಎಂದು ಹೇಳುವಂತೆ ಸಲಹೆ ನೀಡುತ್ತಾರೆ. ಹಾಗೆಯೇ ಗಾಂಧೀಜಿ ಅವರು “ಈ ವಿಚಾರದಲ್ಲಿ ತಮ್ಮದೇ ಆದ ಮಾರ್ಗದಲ್ಲಿ ಹೋಗುತ್ತಿದ್ದಾರೆ” ಎಂದೂ ಹೇಳುತ್ತಾರೆ. ಈ ಪತ್ರದ ಒಕ್ಕಣೆಯನ್ನು ಮಹಾತ್ಮ ಗಾಂಧಿಯ ಬರಹಗಳ ಸಂಗ್ರಹ ಸಂಪುಟ 19 ರಲ್ಲಿ ಕಾಣಬಹುದು.

197 ಎನ್‌ ಡಿ ಸಾವರ್ಕರ್ ಅವರಿಗೆ ಬರೆದ ಪತ್ರ
ಲಾಹೋರ್
25 ಜನವರಿ 1920
ಮಾನ್ಯ ಡಾ ಸಾವರ್ಕರ್ ಅವರಿಗೆ,
ನಿಮ್ಮ ಪತ್ರ ತಲುಪಿದೆ, ನಿಮಗೆ ಸಲಹೆ ನೀಡುವುದು ಕಷ್ಟಕರವಾಗಲಿದೆ. ಆದಾಗ್ಯೂ ಈ ಪ್ರಕರಣದ ವಿವರಗಳನ್ನು ಸಂಕ್ಷಿಪ್ತವಾಗಿ ವಿವರಿಸಿ ಒಂದು ಅರ್ಜಿಯನ್ನು ಸಿದ್ಧಪಡಿಸಿ, ನಿಮ್ಮ ಸೋದರರು ಎಸಗಿರುವ ಅಪರಾಧ ರಾಜಕೀಯ ಸ್ವರೂಪದ್ದಾಗಿದೆ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿ. ಈ ಪ್ರಕರಣದ ಬಗ್ಗೆ ಸಾರ್ವಜನಿಕರ ಗಮನ ಸೆಳೆಯುವ ಉದ್ದೇಶದಿಂದ ನಾನು ಈ ಸಲಹೆ ನೀಡುತ್ತಿದ್ದೇನೆ. ಏತನ್ಮಧ್ಯೆ, ನನ್ನ ಈ ಹಿಂದಿನ ಪತ್ರದಲ್ಲಿ ಹೇಳಿರುವಂತೆ, ನಾನು ನನ್ನದೇ ಆದ ಮಾರ್ಗದಲ್ಲಿ ಮುಂದುವರೆಯುತ್ತಿದ್ದೇನೆ…
ನಿಮ್ಮ ವಿಶ್ವಾಸಿ…
ಹಸ್ತಪ್ರತಿಯ ನಕಲು ಎಸ್ ಎನ್ 2043

ಎರಡು ತಿಂಗಳ ನಂತರ ಸಾವರ್ಕರ್ ಪ್ರಭುತ್ವದ ದಯೆ ಕೋರಿ ಹೊಸ ಅರ್ಜಿಯನ್ನು ಸಲ್ಲಿಸುತ್ತಾರೆ. ನೂರಾರು ಕೈದಿಗಳನ್ನು ಬಿಡುಗಡೆ ಮಾಡಿರುವುದಕ್ಕಾಗಿ ಬ್ರಿಟೀಷ್ ಸರ್ಕಾರವನ್ನು ಅಭಿನಂದಿಸುವ ಸಾವರ್ಕರ್, ಉಳಿದ ಕೈದಿಗಳಿಗೂ, ತಮ್ಮನ್ನು ಮತ್ತು ತಮ್ಮ ಸೋದರನನ್ನು ಸೇರಿದಂತೆ, ಈ ಕ್ಷಮಾದಾನವನ್ನು ವಿಸ್ತರಿಸುವಂತೆ ಕೋರುತ್ತಾರೆ, ಈ ಅರ್ಜಿಯ ದಿನಾಂಕ 1920 ರ ಮಾರ್ಚ್ 30.

ಇದನ್ನೂ ಓದಿ: ಸಾವರ್ಕರ್‌ & ದಲಿತರು ಕುರಿತಂತೆ ಪೋಸ್ಟ್‌ ಕಾರ್ಡ್ ಹರಡಿದ ಮೂರು ಸುಳ್ಳುಗಳು & ವಾಸ್ತವಗಳು

1920 ರ ಮೇ 26 ರಂದು ಗಾಂಧಿ ತಮ್ಮ ಯಂಗ್ ಇಂಡಿಯಾ ವಾರಪತ್ರಿಕೆಯಲ್ಲಿ ಹೀಗೆ ಬರೆಯುತ್ತಾರೆ: “…ನಾನು ನನ್ನ ಹೆಸರಿನಲ್ಲಿ ನನ್ನ ವೈಸ್ ರಾಯ್ ಅವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ, ನನ್ನ ಪರವಾಗಿ ದೊರೆಯ ಕ್ಷಮಾದಾನದ ಕ್ರಮವು ಎಲ್ಲ ರಾಜಕೀಯ ಅಪರಾಧಿಗಳಿಗೂ ಪೂರ್ಣ ಪ್ರಮಾಣದಲ್ಲಿ ಅನ್ವಯಿಸಲಿ. ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಇದು ಸೂಕ್ತವಾದದ್ದಾಗಿದೆ. ಪ್ರಭುತ್ವದ ವಿರುದ್ಧ ಎಸಗಿದ ಅಪರಾಧಗಳಿಗೆ, ಯಾವುದೇ ತುರ್ತು ಅಥವಾ ವಿಶೇಷ ಶಾಸನಗಳ ಉಲ್ಲಂಘನೆಗಾಗಿ, ಅವರ ಸ್ವಾತಂತ್ರ್ಯವನ್ನು ನಿರ್ಬಂಧಗೊಳಿಸುವ ಸೆರೆವಾಸದ ಶಿಕ್ಷೆಯನ್ನು ಅನುಭವಿಸುತ್ತಿರುವವರಿಗೆ, ಈ ನಿರ್ಧಾರವನ್ನು ವಿಸ್ತರಿಸಲು ನಾನು ಅಪೇಕ್ಷಿಸುತ್ತೇನೆ.”

ಮುಂದುವರೆಯುತ್ತಾ ಗಾಂಧೀಜಿ, “…ಭಾರತ ಸರ್ಕಾರದ ಮತ್ತು ಪ್ರಾಂತೀಯ ಸರ್ಕಾರಗಳ ಕ್ರಮದ ಪರಿಣಾಮ ಈ ಸಂದರ್ಭದಲ್ಲಿ ಸೆರೆವಾಸದ ಶಿಕ್ಷೆ ಅನುಭವಿಸುತ್ತಿರುವ ಅನೇಕರು ಪ್ರಭುತ್ವದ ಕ್ಷಮಾದಾನಕ್ಕೆ ಅರ್ಹರಾಗಿರುವುದು ಸಂತೋಷದ ವಿಚಾರ. ಆದರೆ ಕೆಲವು ಮುಖ್ಯವಾದ ರಾಜಕೀಯ ಅಪರಾಧಿಗಳಿದ್ದಾರೆ, ಅವರನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಇವರ ಪೈಕಿ ನಾನು ಸಾವರ್ಕರ್ ಸೋದರರನ್ನು ಗುರುತಿಸುತ್ತೇನೆ…ಇಬ್ಬರೂ ಸೋದರರು ತಮ್ಮ ರಾಜಕೀಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಮತ್ತು ಯಾವುದೇ ಕ್ರಾಂತಿಕಾರಿ ಆಲೋಚನೆಗಳನ್ನು ಹೊಂದಿಲ್ಲ ಎಂದು ಇಬ್ಬರೂ ಹೇಳಿಕೆ ನೀಡಿದ್ದಾರೆ. ಇಬ್ಬರನ್ನೂ ಬಿಡುಗಡೆ ಮಾಡಿದರೆ ಸುಧಾರಣಾ ಕಾಯ್ದೆ 4ರ ಅನ್ವಯ ಚಟುವಟಿಕೆಗಳನ್ನು ನಡೆಸುವುದಾಗಿ ಒಪ್ಪಿಕೊಂಡಿದ್ದಾರೆ. ಏಕೆಂದರೆ ಭಾರತಕ್ಕಾಗಿ ರಾಜಕೀಯ ಹೊಣೆಗಾರಿಕೆಯಿಂದ ಕೆಲಸ ಮಾಡಲು ಸುಧಾರಣೆಗಳು ನೆರವಾಗುತ್ತವೆ ಎನ್ನುವುದನ್ನು ಇಬ್ಬರೂ ಅರಿತಿದ್ದಾರೆ. ಇಬ್ಬರೂ ಸಹ, ಬ್ರಿಟೀಷರಿಂದ ವಿಮೋಚನೆಯನ್ನು ಅಪೇಕ್ಷಿಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಬ್ರಿಟೀಷರೊಡನೆ ಸಹಕಾರ ಹೊಂದಿರುವುದರ ಮೂಲಕವೇ ಭಾರತದ ಭವಿಷ್ಯವನ್ನು ಉತ್ತಮಗೊಳಿಸಲು ಸಾಧ್ಯ ಎಂದು ಇಬ್ಬರೂ ಭಾವಿಸುತ್ತಾರೆ…ಹಾಗಾಗಿ ಈಗಾಗಲೇ ದೀರ್ಘ ಕಾಲದ ಸೆರೆವಾಸದ ಶಿಕ್ಷೆ ಅನುಭವಿಸಿರುವ ಇಬ್ಬರು ಸೋದರರು ಈಗಾಗಲೇ ಅನಾರೋಗ್ಯಕ್ಕೆ ತುತ್ತಾಗಿದ್ದು, ಅವರ ದೇಹದ ತೂಕವೂ ಕಡಿಮೆಯಾಗಿದೆ ಮತ್ತು ಇಬ್ಬರೂ ತಮ್ಮ ರಾಜಕೀಯ ಅಭಿಪ್ರಾಯಗಳನ್ನೂ ವ್ಯಕ್ತಪಡಿಸಿರುವುದರಿಂದ, ಇವರಿಬ್ಬರಿಂದ ಪ್ರಭುತ್ವಕ್ಕೆ ಅಪಾಯವಿದೆ ಎಂಬ ಖಚಿತ ಸಾಕ್ಷ್ಯಾಧಾರಗಳು ಇಲ್ಲದಿದ್ದ ಪಕ್ಷದಲ್ಲಿ, ವೈಸರಾಯ್ ಅವರಿಬ್ಬರಿಗೂ ಸ್ವಾತಂತ್ರ್ಯ ನೀಡಲೇಬೇಕಾಗುತ್ತದೆ”. ( ಮಹಾತ್ಮ ಗಾಂಧಿಯ ಬರಹಗಳ ಸಂಗ್ರಹ ಸಂಪುಟ 20 ರ ಪುಟ 368)

Vinayak Damodar Savarkar's Last Interview - Rediff.com India News

ಸಾವರ್ಕರ್ ಅವರನ್ನು ಅಂಡಮಾನಿನ ಸೆಲ್ಯುಲರ್ ಜೈಲಿನಿಂದ ಬಿಡುಗಡೆ ಮಾಡಿ1921 ರ ಮೇ ತಿಂಗಳಲ್ಲಿ ರತ್ನಗಿರಿಯ ಜಿಲ್ಲಾ ಸೆರೆಮನೆಗೆ ರವಾನಿಸಲಾಗುತ್ತದೆ. ಅವರ ಬಂಧನದ ಸಮಯದಲ್ಲಿ ಗಾಂಧೀಜಿ ಸಾರ್ವರ್ಕರ್ ಸೋದರರ ಬಗ್ಗೆ ಉದಾತ್ತ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದ ಗಾಂಧೀಜಿ ತಮ್ಮ ಬರಹಗಳಲ್ಲಿ ಸಾವರ್ಕರ್ ಸೋದರರ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಸಾರ್ವಜನಿಕ ಒಳಿತಿಗಾಗಿ ಬಳಸಿಕೊಳ್ಳಬೇಕು. ಈಗಿರುವಂತೆ, ಭಾರತ, ಸಕಾಲದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ, ತನ್ನ ಇಬ್ಬರು ನಿಷ್ಠಾವಂತ ಮಕ್ಕಳನ್ನು ಕಳೆದುಕೊಳ್ಳುವ ಸನ್ನಿವೇಶ ಎದುಸುತ್ತಿದೆ. ಇವರಲ್ಲಿ ಒಬ್ಬ ಸೋದರನನ್ನು ನಾನು ಬಲ್ಲೆ. ಲಂಡನ್ನಿನಲ್ಲಿ ಅವರನ್ನು ಭೇಟಿಯಾಗಿದ್ದೇನೆ. ಅವರು ಧೈರ್ಯವಂತರು. ಬುದ್ಧಿವಂತರು. ದೇಶಭಕ್ತರು. ನಿಷ್ಠುರ ಕ್ರಾಂತಿಕಾರಿಯೂ ಹೌದು. ಪ್ರಸ್ತುತ ಸರ್ಕಾರದ ದುಷ್ಟ ಕೂಟವನ್ನು ಅವರು ನನಗಿಂತಲೂ ಮುಂಚೆಯೇ ಗ್ರಹಿಸಿದ್ದಾರೆ. ಅವರು ಭಾರತವನ್ನು ಅತಿಯಾಗಿ ಪ್ರೀತಿಸಿದ್ದರ ಫಲವಾಗಿ ಈಗ ಅಂಡಮಾನ್‌ನಲ್ಲಿದ್ದಾರೆ” ಎಂದು ಹೇಳುತ್ತಾರೆ. (ಯಂಗ್ ಇಂಡಿಯಾ ಮೇ 18 1921 ಆವೃತ್ತಿ).

ಇದನ್ನೂ ಓದಿ: ಮೇಲ್ಸೇತುವೆಗೆ ಸಾವರ್ಕರ್‌ ಹೆಸರು : ಈ ಮಣ್ಣಿನ ಸ್ವಾತಂತ್ರ್ಯ ಹೋರಾಟಗಾರರಿಗೆ‌ ಮಾಡುವ ಅವಮಾನ. – ಸಿದ್ದು

ಗಾಂಧೀಜಿ ಅವರ ಹಿಂಸಾತ್ಮಕ ವಿಧಾನಗಳನ್ನು ಒಪ್ಪಿಕೊಳ್ಳಲಿಲ್ಲ. ಸಾವರ್ಕರ್ ಹಿಂದುತ್ವ ಸಿದ್ಧಾಂತದ ಪ್ರತಿಪಾದಕರಾಗಿ ಜನಪ್ರಿಯರಾದ ಸಂದರ್ಭದಲ್ಲಿ ಗಾಂಧಿ ತಮ್ಮ ಟೀಕೆಯಲ್ಲಿ ಸ್ಪಷ್ಟವಾಗಿ ಹೀಗೆ ಹೇಳುತ್ತಾರೆ. “ಒಂದು ಜೀವಂತ ಅಂಗದ ವಿಭಜನೆಗಾಗಿ ಆಗ್ರಹಿಸುವುದೆಂದರೆ ಅದು ಪ್ರಾಣವನ್ನೇ ಕೇಳಿದಂತೆ. ಇದು ಯುದ್ಧಕ್ಕೆ ಕರೆ ನೀಡಿದಂತಾಗುತ್ತದೆ. ಕಾಂಗ್ರೆಸ್ ಅಂತಹ ಭ್ರಾತೃಘಾತುಕ ಯುದ್ಧಕ್ಕೆ ಸಿದ್ಧವಾಗಿಲ್ಲ. ಡಾ ಮೂಂಜೆ ಮತ್ತು ಸಾವರ್ಕರ್ ಅವರಂತಹ ಹಿಂದೂಗಳು ಖಡ್ಗದ ಸಿದ್ಧಾಂತಕ್ಕೆ ಬದ್ಧರಾಗಿ, ಮುಸಲ್ಮಾನರು ಹಿಂದೂಗಳ ಪ್ರಾಬಲ್ಯದಲ್ಲಿ ಇರಬೇಕೆಂದು ಬಯಸುತ್ತಾರೆ. ಈ ವರ್ಗವನ್ನು ನಾನು ಪ್ರತಿನಿಧಿಸುವುದಿಲ್ಲ. ನಾನು ಕಾಂಗ್ರೆಸ್ ಪ್ರತಿನಿಧಿಸುತ್ತೇನೆ” – ಎಐಸಿಸಿ ಅಧಿವೇಶನ ಬಾಂಬೆ 1942.

ಅವರ ಸಿದ್ಧಾಂತಗಳೊಡನೆ ಭಿನ್ನಾಭಿಪ್ರಾಅಯ ಹೊಂದಿದ್ದರೂ ಗಾಂಧಿ ಅವರನ್ನು ಸೆರೆವಾಸದಿಂದ ಬಿಡುಗಡೆ ಮಾಡುವಂತೆ ಆಗ್ರಹಿಸುತ್ತಾರೆ. 1925 ರಲ್ಲಿ ಸಾವರ್ಕರ್ ಅವರನ್ನು ಸೆರೆಮನೆಯನ್ನು ಬಿಡುಗಡೆ ಮಾಡುವ ಪತ್ರಕ್ಕೆ ಗಾಂಧಿ ಸಹಿ ಮಾಡಲು ಒಪ್ಪಿರಲಿಲ್ಲ ಎಂಬ ತಾತ್ಯಾಸಾಹೆಬ್ ಕೇಲ್ಕರ್ ಅವರ ಆರೋಪದ ಬಗ್ಗೆ 1937 ರಲ್ಲಿ ಶಂಕರ್ ರಾವ್ ದೇವ್ ಪ್ರಸ್ತಾಪಿಸಿದಾಗ ಗಾಂಧೀಜಿ ಅದು ಅನವಶ್ಯಕವಾಗಿತ್ತು. ಏಕೆಂದರೆ ಹೊಸ ಶಾಸನ ಜಾರಿಯಾದ ನಂತರ, ಸಚಿವರು ಯಾರೇ ಇದ್ದರೂ ಸಾವರ್ಕರ್ ಅವರನ್ನು ಬಿಡುಗಡೆ ಮಾಡುವುದು ನಿಶ್ಚಿತವಾಗಿತ್ತು. ಸಾವರ್ಕರ್ ಸೋದರರು, ಕೆಲವು ಮೂಲಭೂತ ಅಂಶಗಳ ಬಗ್ಗೆ ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಲ್ಲವರೇ ಆಗಿದ್ದಾರೆ, ಅವರ ಜೈಲುವಾಸವನ್ನು ಸಮಭಾವದೊಂದಿಗೆ ಸ್ವೀಕರಿಸಲು ನನಗೆ ಸಾಧ್ಯವಾಗುವುದಿಲ್ಲ” ಎಂದು ಹೇಳುತ್ತಾರೆ.Mahatma Gandhi asked Savarkar to file mercy petitions: Rajnath Singh - India News

ಸಾವರ್ಕರ್ ಅವರನ್ನು ರತ್ನಗಿರಿ ಸೆರೆಮನೆಯಿಂದ 1924 ರಲ್ಲಿ ಈ ಷರತ್ತುಗಳ ಅನ್ವಯ ಬಿಡುಗಡೆ ಮಾಡಲಾಗುತ್ತದೆ. “ಅವರು ರತ್ನಗಿರಿಯಲ್ಲೇ ವಾಸಿಸಬೇಕು; ಜಿಲ್ಲೆಯ ಗಡಿಯನ್ನು ಮೀರಿ ಸರ್ಕಾರದ ಅನುಮತಿ ಇಲ್ಲದೆ ಹೋಗುವಂತಿಲ್ಲ; ಸಾರ್ವಜನಿಕವಾಗಿಯಾಗಲಿ, ಖಾಸಗಿಯಾಗಿ ಆಗಲಿ ಅವರು ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ; ಈ ಷರತ್ತುಗಳು ಐದು ವರ್ಷಗಳ ಕಾಲ ಜಾರಿಯಲ್ಲಿರುತ್ತವೆ, ಈ ಅವಧಿಯ ನಂತರ ನವೀಕರಿಸಬಹುದಾಗಿರುತ್ತದೆ”.

ವಿನಾಯಕ್ ದಾಮೋದರ್ ಸಾವರ್ಕರ್ ಗಾಂಧೀಜಿಯ ಒತ್ತಡ ಅಥವಾ ಸಲಹೆಯ ಮೇರೆಗೇ ಬ್ರಿಟೀಷ್ ಸರ್ಕಾರಕ್ಕೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದರು ಎಂದು ನಿರೂಪಿಸಲು ಯಾವುದೇ ಸಾರ್ವಜನಿಕ ದಾಖಲೆಗಳು ಲಭ್ಯವಿಲ್ಲ. ಮೊದಲ ಎರಡು ಅರ್ಜಿಗಳನ್ನು ಸಲ್ಲಿಸಿದ ಸಮಯದಲ್ಲಿ ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿದ್ದರು. ನಂತರ ಸಾವರ್ಕರ್ ಸೋದರ, ಗಾಂಧೀಜಿಯ ನೆರವು ಕೋರಿದಾಗ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದ್ದರು. ಹಾಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಪ್ರತಿಪಾದನೆ ಶುದ್ಧ ಸುಳ್ಳು.

ಇದನ್ನೂ ಓದಿ: ಸಾವರ್ಕರ್‌ರನ್ನು ’ಮಾಜಿ ವೀರ ಸಾವರ್ಕರ್’ ಎಂದು ಕರೆಯಬಹುದು ಅಷ್ಟೇ: ದೊರೆಸ್ವಾಮಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...