ತಮ್ಮ ಪಕ್ಷದೊಳಗಿನ ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿರುವಾಗ ಬಿಜೆಪಿಯು ಮೌನವಹಿಸಿದೆ. ಬಿಜೆಪಿಯ ಮೌನದಿಂದ ನನಗೆ ನೋವಾಗುತ್ತಿದೆ ಎಂದು ಲೋಕ ಜನಶಕ್ತಿ ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಬಿಜೆಪಿಯೊಂದಿಗಿನ ಸಂಬಂಧವು ಏಕಪಕ್ಷೀಯವಾಗಿರಲು ಸಾಧ್ಯವಿಲ್ಲ. ಹೀಗೆ ನನ್ನನ್ನು ಮೂಲೆಗೆ ತಳ್ಳುವ ಪ್ರಯತ್ನ ನಡೆದರೆ, ಮುಂದಿನ ರಾಜಕೀಯ ಹೆಜ್ಜೆಗಳ ಬಗ್ಗೆ ಎಲ್ಲಾ ಸಾಧ್ಯತೆಗಳನ್ನು ಪರಿಗಣಿಸುತ್ತೇನೆ ಎಂದು ಮಂಗಳವಾರ ಹೇಳಿದ್ದಾರೆ.
ಚಿರಾಗ್ ಪಾಸ್ವಾನ್ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ, ’ನನ್ನ ತಂದೆ ರಾಮ್ ವಿಲಾಸ್ ಪಾಸ್ವಾನ್ ಮತ್ತು ನಾನು ಯಾವಾಗಲೂ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಬಂಡೆಯಂತೆ ನಿಂತು ಬೆಂಬಲ ನೀಡಿದ್ದೇವೆ. ಆದರೆ, ಈ ಕಷ್ಟದ ಸಮಯದಲ್ಲಿ ಬಿಜೆಪಿಯ ಹಸ್ತಕ್ಷೇಪವನ್ನು ಬಯಸಿದಾಗ ಅದು ಸಿಗಲಿಲ್ಲ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಇಲ್ಲಿರುವ ಜಾತಿ ಸಮಸ್ಯೆಯನ್ನು ಮುಚ್ಚಿಡಬೇಕೆ? ಜಾತಿ ಬಗ್ಗೆ ಮಾತನಾಡಬಾರದೇ?: ಸತೀಶ್ ನಿನಾಸಂ
ಪ್ರಧಾನಿ ಮೋದಿ ಅವರ ಮೇಲಿ ನಂಬಿಕೆ ಇದೆ ಎಂದಿರುವ ಪಾಸ್ವಾನ್, “ಆದರೆ ನೀವು ಮೂಲೆ ಗುಂಪು ಮಾಡಿದರೇ, ಒತ್ತಡಕ್ಕೆ ತಳ್ಳಿ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದರೆ, ಎಲ್‌ಜೆಪಿ ತನ್ನ ಜೊತೆಗೆ ಯಾರು ನಿಂತರು, ಯಾರು ನಿಲ್ಲಲಿಲ್ಲ ಎಂಬ ಆಧಾರದಲ್ಲಿ ಅದರ ಭವಿಷ್ಯದ ಬಗ್ಗೆ ಯೋಚಿಸುತ್ತದೆ” ಎಂದು ಹೇಳಿದ್ದಾರೆ.
“ಬಿಜೆಪಿ ಮಧ್ಯಸ್ಥಿಕೆ ವಹಿಸಿ ಪಕ್ಷದ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಾರೆ ಎಂದು ನಾನು ನಿರೀಕ್ಷಿಸಿದ್ದೆ. ಆದರೆ, ಅವರ ಮೌನದಿಂದ ಖಂಡಿತವಾಗಿಯೂ ನೋವುಂಟಾಗಿದೆ” ಎಂದು ಹೇಳಿದ್ದಾರೆ. ಲೋಕ ಜನಶಕ್ತಿ ಪಕ್ಷದ ಬಿಕ್ಕಟ್ಟು ಪ್ರಾದೇಶಿಕ ಪಕ್ಷದ ಆಂತರಿಕ ವಿಷಯವಾಗಿದೆ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಕ್ಷವು ತಮ್ಮ ಪಕ್ಷವನ್ನು ವಿಭಜಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಇಂತಹ ಕೆಲಸ ಮಾಡಿರುವ ಇತಿಹಾಸವನ್ನು ಅವರ ಪಕ್ಷ ಹೊಂದಿದೆ ಎಂದು ಚಿರಾಗ್ ಪಾಸ್ವಾನ್ ಆರೋಪಿಸಿದ್ದಾರೆ.
ಲೋಕ ಜನಶಕ್ತಿ ಪಕ್ಷದ ನಿಯಂತ್ರಣಕ್ಕಾಗಿ ನಡೆಯುತ್ತಿರುವ ಜಗಳದ ಮಧ್ಯೆ, ಮುಂದಿನ ತಿಂಗಳು ತನ್ನ ತಂದೆಯ ಜನ್ಮ ದಿನವಾದ ಜುಲೈ 5 ರಂದು ಹಾಜಿಪುರದಿಂದ ‘ಆಶೀರ್ವಾದ್ ಯಾತ್ರೆ’ ಆರಂಭಿಸಲು ನಿರ್ಧರಿಸಲಾಗಿದೆ. “ಆಶೀರ್ವಾದ ಯಾತ್ರೆ ಬಿಹಾರದ ಎಲ್ಲಾ ಜಿಲ್ಲೆಗಳ ಮೂಲಕ ಹಾದುಹೋಗಲಿದೆ.ನನ್ನ ತಂದೆ ಮತ್ತು ಚಿಕ್ಕಪ್ಪ ಇನ್ನು ನನ್ನೊಂದಿಗೆ ಇಲ್ಲ. ನಮಗೆ ಜನರಿಂದ ಹೆಚ್ಚಿನ ಪ್ರೀತಿ ಮತ್ತು ಆಶೀರ್ವಾದ ಬೇಕಾಗುತ್ತದೆ” ಎಂದು ಚಿರಾಗ್ ಪಾಸ್ವಾನ್ ಹೇಳಿದ್ದರು.
ಇದನ್ನೂ ಓದಿ: ಮೋದಿ ಮೆಚ್ಚಿಸಿ, ಕುರ್ಚಿ ಉಳಿಸಿಕೊಳ್ಳಲು ಹಿಂದಿ ಜಾಹೀರಾತಿಗೆ ಕೋಟ್ಯಾಂತರ ರೂ. ಸುರಿಯುತ್ತಿರುವ ಯಡಿಯೂರಪ್ಪ: ಆರೋಪ


