ಉತ್ತರ ಪ್ರದೇಶ ಹಾಗೂ ಇತರ ರಾಜ್ಯಗಳಲ್ಲಿ ಬಿಜೆಪಿಯ ಗೆಲುವಿನ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಅನುಮಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಈ ಗೆಲುವು ಜನಾದೇಶವಲ್ಲ ಎಂದು ಅವರು ಹೇಳಿದ್ದು, “ಚುನಾವಣಾ ಯಂತ್ರಗಳು, ಕೇಂದ್ರ ಪಡೆಗಳು ಮತ್ತು ಏಜೆನ್ಸಿಗಳ ಸಹಾಯದಿಂದ ಪಡೆದ ಗೆಲುವಾಗಿದೆ” ಎಂದು ತಿಳಿಸಿದ್ದಾರೆ.
2024 ರಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಅನ್ನು ಗಣನೆಗೆ ತೆಗೆದುಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ಹೇಳಿರುವ ಅವರು, ವಿರೋಧ ಪಕ್ಷಗಳ ಒಗ್ಗಟ್ಟಿನ ಬಗ್ಗೆಗಿನ ಚರ್ಚೆಯನ್ನು ಮುನ್ನಲೆಗೆ ತಂದಿದ್ದಾರೆ.
“ಚುನಾವಣಾ ಯಂತ್ರಗಳು, ಕೇಂದ್ರೀಯ ಪಡೆಗಳು ಮತ್ತು ಏಜೆನ್ಸಿಗಳ ಸಹಾಯದಿಂದ ಬಿಜೆಪಿ ಗೆದ್ದಿದ್ದಾರೆ. ಅವರು ನಗಾರಿಯನ್ನು ಬಾರಿಸುತ್ತಿದ್ದಾರೆ, ಆದರೆ ಅದರಿಂದ ಸಂಗೀತ ಹೊಮ್ಮಿಸಲು ಸಾಧ್ಯವಿಲ್ಲ. ಸಂಗೀತಕ್ಕಾಗಿ ಹಾರ್ಮೋನಿಯಂ ಬೇಕಾಗುತ್ತದೆ” ಎಂದು ಅವರು ಕೋಲ್ಕತ್ತಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದ್ದಾರೆ.
ಇದನ್ನೂ ಓದಿ: ಯುಪಿ ಫಲಿತಾಂಶ 2024ರ ಚುನಾವಣೆಗೆ ದಿಕ್ಸೂಚಿ ಎಂದ ಮೋದಿ: ಇದು ಸುಳ್ಳು ನಿರೂಪಣೆ ಎಂದ ಪ್ರಶಾಂತ್ ಕಿಶೋರ್
“ಇವಿಎಂ ಅನ್ನು ತೆಗೆದಿದ್ದಕ್ಕಾಗಿ ವಾರಣಾಸಿಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮಾನತುಗೊಂಡರೆ ಅದುವೆ ದೊಡ್ಡ ವಿಷಯ. ಅಖಿಲೇಶ್ ಅವರನ್ನು ಸೋಲುವಂತೆ ಮಾಡಲಾಗಿದೆ ಎಂದು ನಾನು ಭಾವಿಸುತ್ತೇನೆ. ಅಲ್ಲಿ ಲೂಟಿ ನಡೆದಿದೆ. ಅಖಿಲೇಶ್ ಬೇಸರಕ್ಕೆ ಒಳಗಾಗಬಾರದು, ಅಸಮಾಧಾನಗೊಳ್ಳಬಾರದು. ಇದನ್ನು ಎದುರಿಸಿ ಅವರು ಜನರ ಬಳಿಗೆ ಹೋಗಬೇಕು” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
“ಜನರು ಮತ ಚಲಾಯಿಸಲು ಬಳಸಿದ ಮತ್ತು ನಂತರ ಎಣಿಕೆಗೆ ತಂದ ಯಂತ್ರಗಳೇ ಎಂಬುದನ್ನು ನೋಡಲು ಎಲ್ಲಾ ಇವಿಎಂಗಳು ಫೋರೆನ್ಸಿಕ್ ಪರೀಕ್ಷೆಗೆ ಒಳಗಾಗಿಸಬೇಕು. ಒಂದು ವೇಳೆ ಬಿಜೆಪಿ ಗೆದ್ದಿದ್ದರೆ ಅದು ಜನಮತದಿಂದ ಅಲ್ಲ. ಇದು ಜನಾದೇಶವಲ್ಲ, ಯಂತ್ರೋಪಕರಣಗಳ ಆದೇಶ” ಎಂದು ಅವರು ಹೇಳಿದ್ದಾರೆ.
2024ರ ಚುನಾವಣೆಯ ಕುರಿತು ಮಾತನಾಡಿದ ಅವರು, “ಬಿಜೆಪಿ ವಿರುದ್ಧ ಹೋರಾಡಲು ಬಯಸುವ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ನಾನು ಹೇಳುತ್ತೇನೆ. ಕಾಂಗ್ರೆಸ್ ಅನ್ನು ಅವಲಂಬಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಕಾಂಗ್ರೆಸ್ ಮೊದಲು ತಮ್ಮ ಸಂಘಟನೆಯ ಮೂಲಕ ಇಡೀ ದೇಶವನ್ನು ವಶಪಡಿಸಿಕೊಳ್ಳುತ್ತಿತ್ತು. ಆದರೆ ಈಗ ಆ ರೀತಿ ಇಲ್ಲ, ಅವರು ಜನರ ಆಸಕ್ತಿ ಮತ್ತು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಹಲವಾರು ಪ್ರಾದೇಶಿಕ ರಾಜಕೀಯ ಪಕ್ಷಗಳಿವೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಮತ್ತು ಈ ಬಗ್ಗೆ ನಿರ್ಧಾರವನ್ನು ಖಂಡಿತವಾಗಿಯೂ ತೆಗೆದುಕೊಳ್ಳಬಹುದು” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇದನ್ನೂ ಓದಿ: ಯುಪಿ-ವಾರಣಾಸಿ ಮತ ಎಣಿಕೆ ಕೇಂದ್ರಗಳಿಂದ ಇವಿಎಂ ಕಳ್ಳತನ: ಸಮಾಜವಾದಿ ಪಕ್ಷ ಆರೋಪ


