ಒಂದು ಕಡೆ ಬಿಜೆಪಿಯು ದೇಶದ ಎಲ್ಲಾ ಅವ್ಯವಸ್ಥೆಗೆ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಕಾರಣ ಎಂದು ಅಪಪ್ರಚಾರ ಮಾಡುತ್ತಿದೆ. ಈ ಮಧ್ಯೆ ರಾಜ್ಯದ ಹೊಸ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಹಾಡಿ ಹೊಗಳಿದ್ದು, ‘ನೆಹರೂ ಭಾರತ ನಿರ್ಮಾಣದ ಕಲ್ಪನೆಯನ್ನು ಸಕಾರಗೊಳಿಸಿದವರು’ ಎಂದು ಹೇಳಿದ್ದಾರೆ.
ಭಾನುವಾರ ವಿಧಾನಸೌಧದ ಮುಂಭಾಗದಲ್ಲಿ ಮರುಸ್ಥಾಪನೆಗೊಂಡ ಜವಾಹರಲಾಲ್ ನೆಹರೂ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ, ಪುಷ್ಪನಮನ ಸಲ್ಲಿಸಿದ ನಂತರ ಮಾಧ್ಯಮದವರಿಗೆ ಅವರು ಪ್ರತಿಕ್ರಿಯೆ ನೀಡಿ ಮಾತನಾಡುತ್ತಿದ್ದರು.
“ಸ್ವತಂತ್ರ ಭಾರತ ದೇಶದ ಮೊದಲ ಪ್ರಧಾನಮಂತ್ರಿಯಾಗಿ ಜವಾಹರಲಾಲ್ ನೆಹರೂ ಅವರು ಭಾರತ ನಿರ್ಮಾಣದ ಕಲ್ಪನೆಯನ್ನು ಸಕಾರಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ” ಎಂದು ಮುಖ್ಯಮಂತ್ರಿ ತಿಳಿಸಿದರು.
ಇದನ್ನೂ ಓದು: ಈ ಅಸಹಾಯಕತೆ ಸಿಎಂ ಬೊಮ್ಮಾಯಿಯವರದ್ದಾ? ಕರ್ನಾಟಕದ ಜನರದ್ದಾ?
“ರಾಷ್ಟ್ರದ ಆಡಳಿತದ ಚುಕ್ಕಾಣಿಯನ್ನು ಬ್ರಿಟಿಷರಿಂದ ಭಾರತಕ್ಕೆ ತೆಗೆದುಕೊಂಡು ಮುಂದಿನ ಆಡಳಿತವನ್ನು ನಡೆಸುವಲ್ಲಿ ನೆಹರೂ ಮಹತ್ವದ ಪಾತ್ರ ವಹಿಸಿದ್ದಾರೆ. ಅವರು ಕೈಗಾರಿಕೆ ಸೇರಿದಂತೆ ಹಲವಾರು ಕ್ಷೇತ್ರಗಳನ್ನು ಅಭಿವೃದ್ಧಿಗೊಳಿಸಿ ನವ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದರು” ಎಂದು ತಿಳಿಸಿದರು.
“ಮಹಾತ್ಮಾ ಗಾಂಧೀಜಿಯವರೊಂದಿಗೆ ನಿಕಟ ಸಂಪರ್ಕ ಹೊಂದಿ ಕಾರ್ಯನಿರ್ವಹಿಸಿದವರು. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜೈಲು ವಾಸ ಅನುಭವಿಸಿದ ನೆಹರೂರವರ ಆದರ್ಶಗಳ ಪಾಲನೆ ನಮ್ಮೆಲ್ಲರ ಕರ್ತವ್ಯ” ಎಂದು ಮುಖ್ಯಮಂತ್ರಿ ತಿಳಿಸಿದರು.
ಮೆಟ್ರೋ ಕಾಮಗಾರಿಯಿಂದಾಗಿ ಸ್ಥಳಾಂತರಗೊಂಡಿದ್ದ ಮಾಜಿ ಪ್ರಧಾನಿ ಜವಾಹರ್ ಲಾಲ್ ಅವರ ಪ್ರತಿಮೆಯನ್ನು ವಿಧಾನಸೌಧದ ಮುಂಭಾಗದಲ್ಲಿ ಮರುಸ್ಥಾಪಿಸುವ ಮೂಲಕ ವಿಧಾನಸೌಧದ ಮೆರಗು ಹೆಚ್ಚಿಸಿದಂತಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದು: ಬಿಎಸ್‌ವೈ ಸಂಪುಟದಲ್ಲಿದ್ದ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ತಪ್ಪಿದ್ದವರು ಯಾರು ಯಾರು ಗೊತ್ತೆ?



???