ಭಾರತೀಯ ನೌಕಾಪಡೆ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿಯ ನೌಕಾ ಆವೃತ್ತಿಯನ್ನು ಭಾನುವಾರ ಅರಬ್ಬೀ ಸಮುದ್ರದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
“ಕ್ಷಿಪಣಿಯು ಉನ್ನತ ಮಟ್ಟದ ಮತ್ತು ಅತ್ಯಂತ ಸಂಕೀರ್ಣವಾದ ಕುಶಲ ತಂತ್ರಜ್ಞಾನ ಹೊಂದಿದೆ. ಬ್ರಹ್ಮೋಸ್ ನಿಖರವಾಗಿ ತಲುಪಲಿದೆ. ಭಾರತೀಯ ನೌಕಾಪಡೆಯಲ್ಲಿ ವಿಧ್ವಂಸಕ ಕೃತ್ಯವನ್ನು ತಡೆಯುವ ಮತ್ತೊಂದು ಅಸ್ತ್ರವಾಗಲಿದೆ” ಎಂದು ಸಚಿವಾಲಯ ಹೇಳಿದೆ.
ಅಂತ್ಯಂತ ಸಂಕೀರ್ಣವಾದ ಕುಶಲ ತಂತ್ರಜ್ಞಾನ ಹೊಂದಿರುವ, ಪಿನ್ – ಪಾಯಿಂಟ್‌ನಷ್ಟು ನಿಖರತೆಯೊಂದಿಗೆ ಗುರಿ ಸಾಧಿಸುವಂತಹ ಈ ಕ್ಷಿಪಣಿಯನ್ನು ಐಎನ್‌ಎಸ್ ಚೆನ್ನೈನಿಂದ ಪರೀಕ್ಷಾರ್ಥವಾಗಿ ಹಾರಿಸಲಾಯಿತು.
BRAHMOS, the supersonic cruise missile was successfully test fired today on 18th October 2020 from Indian Navy’s indigenously-built stealth destroyer
INS Chennai, hitting a target in the Arabian Sea. The missile hit the target successfully with pin-point accuracy.— DRDO (@DRDO_India) October 18, 2020
290 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಇದಾಗಿದೆ. ಬ್ರಹ್ಮೋಸ್ ಕ್ಷಿಪಣಿಯನ್ನ ಭಾರತ ಹಾಗೂ ರಷ್ಯಾ ಜಂಟಿಯಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ. ಇದು ಭೂ, ವಾಯು ಮತ್ತು ನೌಕಾ ರೂಪಾಂತರಗಳನ್ನು ಹೊಂದಿದೆ. ಕ್ಷಿಪಣಿಯು ಮ್ಯಾಕ್ 2.8 ನ ವೇಗವನ್ನು ಹೊಂದಿದ್ದು, ಇದು ಶಬ್ದದ ವೇಗಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.
ಬ್ರಹ್ಮೋಸ್ ನೌಕಾ ಆವೃತ್ತಿ ಕ್ಷಿಪಣಿಯ ಪರೀಕ್ಷೆ ಯಶಸ್ವಿಗೊಳಿಸಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಬ್ರಹ್ಮೋಸ್ ಏರೋಸ್ಪೇಸ್ ಮತ್ತು ಭಾರತೀಯ ನೌಕಪಡೆಯ ಸಿಬ್ಬಂದಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದರು.
ಸೆಪ್ಟೆಂಬರ್ 30 ರಂದು ಒಡಿಶಾದ ಬಾಲಸೋರ್‌ನಲ್ಲಿ 400 ಕಿ.ಮೀ ದೂರದಲ್ಲಿರುವ ಗುರಿಗಳನ್ನು ತಲುಪಬಲ್ಲ ವಿಸ್ತೃತ ಶ್ರೇಣಿಯ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಭಾರತ ಪರೀಕ್ಷಿಸಿದ ಕೆಲವೇ ದಿನಗಳ ನಂತರ ಇಂದು ಮತ್ತೊಂದು ಪರೀಕ್ಷೆ ನಡೆಸಲಾಗಿದೆ.
ಸದ್ಯ ಲಡಾಖ್‌ನ ಭಾರತ-ಚೀನಾ ಗಡಿಯಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಸಂಘರ್ಷದ ಮಧ್ಯೆ ಭಾರತ ಕಳೆದ ಎರಡು ತಿಂಗಳುಗಳಲ್ಲಿ ಶಸ್ತ್ರಾಸ್ತ್ರಗಳ ಸರಣಿ ಪರೀಕ್ಷೆ ನಡೆಸಿದೆ.


