ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಮೃತಪಟ್ಟ ಎಲ್ಲರಿಗೂ 4 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗದು ಎಂದು ಒಕ್ಕೂಟ ಸರ್ಕಾರ ಸುಪ್ರೀಂ ಕೋರ್ಟ್ಗೆ ಭಾನುವಾರ ಅಫಿಡವಿಟ್ ಸಲ್ಲಿಸಿದೆ. ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ತೆರಿಗೆ ಆದಾಯ ಕಡಿಮೆಯಾಗಿದೆ. ಜೊತೆಗೆ ಆರೋಗ್ಯ ವೆಚ್ಚಗಳ ಹೆಚ್ಚಳದಿಂದಾಗಿ ರಾಜ್ಯಗಳು ಮತ್ತು ಕೇಂದ್ರದ ಹಣಕಾಸು ಪರಿಸ್ಥಿತಿ ತೀವ್ರ ಒತ್ತಡದಲ್ಲಿದೆ ಎಂದು ಮಾಹಿತಿ ನೀಡಿದೆ.
“ಎಲ್ಲರಿಗೂ ಪರಿಹಾರ ನೀಡಿದರೆ, ವಿಪತ್ತು ಪರಿಹಾರ ನಿಧಿಗಳನ್ನು ಖಾಲಿ ಮಾಡಿದಂತಾಗುತ್ತದೆ ಮತ್ತು ಕೊರೊನಾ ಭವಿಷ್ಯದ ಅಲೆಗಳನ್ನು ಎದುರಿಸಲು ಕೇಂದ್ರ ಮತ್ತು ರಾಜ್ಯಗಳ ಸಿದ್ಧತೆಯ ಮೇಲೆ ಪರಿಣಾಮ ಬೀರುತ್ತದೆ” ಎಂದು ಒಕ್ಕೂಟ ಸರ್ಕಾರ ಸುಪ್ರೀಂ ಕೋರ್ಟ್ಗೆ ಭಾನುವಾರ ಅಫಿಡವಿಟ್ ಸಲ್ಲಿಸಿದೆ.
ವಕೀಲರಾದ ಗೌರವ್ ಕುಮಾರ್ ಬನ್ಸಾಲ್ ಮತ್ತು ರೀಪಕ್ ಕನ್ಸಾಲ್, “ವಿಪತ್ತು ನಿರ್ವಹಣಾ ಕಾಯ್ದೆ 2005 ರ ಸೆಕ್ಷನ್ 12 ಅನ್ನು ಉಲ್ಲೇಖಿಸಿ ಇದರ ಅಡಿಯಲ್ಲಿ ವಿಪತ್ತು ಪೀಡಿತ ವ್ಯಕ್ತಿಗಳಿಗೆ ಕನಿಷ್ಟ ಪರಿಹಾರ ನೀಡಬೇಕು” ಎಂದು ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಉತ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಸೂಚನೆ ನೀಡಿತ್ತು. ಅದರಂತೆ ಒಕ್ಕೂಟ ಸರ್ಕಾರ ಹರಿಹಾರ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಇದನ್ನೂ ಓದಿ: ಪ್ರತಿದಿನ ಭಯದಲ್ಲೇ ಮನೆಗೆ ಹೋಗುವ ನಮಗೆ, ನಮ್ಮ ಹಳ್ಳಿಗಳಲ್ಲೇ ಗೌರವವಿಲ್ಲ: ಆಶಾ ಕಾರ್ಯಕರ್ತರ ಅಳಲು
“ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ರಾಜ್ಯ ಹಾಗೂ ಕೇಂದ್ರದ ತೆರಿಗೆ ಆದಾಯ ಕಡಿಮೆಯಾಗಿದೆ. ಇದೇ ಸಂದರ್ಭದಲ್ಲಿ ಆರೋಗ್ಯ ವೆಚ್ಚಗಳು ಅಧಿಕವಾಗಿದೆ. ಹೀಗಾಗಿ ರಾಜ್ಯಗಳು ಮತ್ತು ಕೇಂದ್ರದ ಹಣಕಾಸು ಪರಿಸ್ಥಿತಿ ತೀವ್ರ ಒತ್ತಡದಲ್ಲಿದೆ. ಈಗಾಗಲೇ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅಡಿಯಲ್ಲಿ 12 ಅಧಿಸೂಚನೆಗಳಿಗೆ ಮಾಜಿ ಗ್ರೇಟಿಯಾ ಪರಿಹಾರವನ್ನು ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (ಎಸ್‌ಡಿಆರ್‌ಎಫ್) ಮೂಲಕ ರಾಜ್ಯ ಸರ್ಕಾರಗಳಿಗೆ ಒದಗಿಸಲಾಗಿದೆ. 2021-22ರ ವಾರ್ಷಿಕ ಹಂಚಿಕೆ ಎಸ್‌ಡಿಆರ್‌ಎಫ್, ಎಲ್ಲಾ ರಾಜ್ಯಗಳಿಗೆ ಸೇರಿ 22,184 ಕೋಟಿ ರೂ ನೀಡಲಾಗಿದೆ” ಎಂದಿದೆ.
“ಇಂತಹ ಸಂದರ್ಭದಲ್ಲಿ ಕೊರೊನಾ ಮುಂದಿನ ಅಲೆಗಳು ಉಂಟು ಮಾಡಬಹುದಾದ ಅನಾಹುತಗಳನ್ನು ಎದುರಿಸುವುದು ಕಷ್ಟವಾಗಲಿದೆ. ಸರ್ಕಾರಗಳ ಖಜಾನೆ ಖಾಲಿಯಾದರೆ ಆರ್ಥಿಕತೆಯೂ ಮತ್ತಷ್ಟು ಕುಸಿಯಲಿದೆ. ಸರ್ಕಾರಗಳ ಸಂಪನ್ಮೂಲಗಳಿಗೆ ಮಿತಿಗಳಿವೆ ಮತ್ತು ಎಕ್ಸ್-ಗ್ರೇಟಿಯಾ ಮೂಲಕ ಯಾವುದೇ ಹೆಚ್ಚುವರಿ ಹೊರೆ ಇತರ ಆರೋಗ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಲಭ್ಯವಿರುವ ಹಣವನ್ನು ಕಡಿಮೆ ಮಾಡುತ್ತದೆ” ಎಂದು ಅಫಿಡವಿಟ್ನಲ್ಲಿ ತಿಳಿಸಿದೆ.
ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಪ್ರವಾಹ, ಭೂಕಂಪ, ಚಂಡಮಾರುತ ಇತ್ಯಾದಿಗಳಿಗಿಂತ ಭಿನ್ನವಾಗಿ, ತಡೆಗಟ್ಟುವಿಕೆ, ಪರೀಕ್ಷೆ, ಚಿಕಿತ್ಸೆ, ಸಂಪರ್ಕತಡೆ, ಆಸ್ಪತ್ರೆಗೆ ಸೇರಿಸುವುದು, ಔಷಧಿಗಳು ಮತ್ತು ವ್ಯಾಕ್ಸಿನೇಷನ್ ಇತ್ಯಾದಿಗಳಿಗಾಗಿ ಕೇಂದ್ರ ಮತ್ತು ರಾಜ್ಯಗಳು ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿವೆ. ಅದು ಇನ್ನೂ ಮುಂದುವರೆದಿದೆ. ಅಲ್ಲದೆ ಇನ್ನೂ ಎಷ್ಟು ಹಣ ಬೇಕು ಎಂದು ತಿಳಿದಿಲ್ಲ. ಹೀಗಾಗಿ, ಕೊರೊನಾ ಭವಿಷ್ಯದ ಅಲೆಗಳನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ” ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಲಾಗಿದೆ.
ಇದನ್ನೂ ಓದಿ: ಕೊರೊನಾ ನಿಯಮಗಳ ಉಲ್ಲಂಘನೆ, 3ನೇ ಅಲೆಗೆ ಕಾರಣವಾಗಬಹುದು: ದೆಹಲಿ ಹೈಕೋರ್ಟ್


