Homeನ್ಯಾಯ ಪಥನನ್ನ ಹೋರಾಟಗಳಿಗೆ ಪ್ರೇರಣೆಯಾಗಿದ್ದ ಹಿರಿಯ ಸಂಗಾತಿ ದೊರೆಸ್ವಾಮಿ: ಎಸ್ ಆರ್ ಹಿರೇಮಠ್

ನನ್ನ ಹೋರಾಟಗಳಿಗೆ ಪ್ರೇರಣೆಯಾಗಿದ್ದ ಹಿರಿಯ ಸಂಗಾತಿ ದೊರೆಸ್ವಾಮಿ: ಎಸ್ ಆರ್ ಹಿರೇಮಠ್

- Advertisement -
- Advertisement -

ನಾನು ದೊರೆಸ್ವಾಮಿಯವರನ್ನು ಮೊದಲನೆ ಬಾರಿ ಭೇಟಿಯಾಗಿದ್ದು 1981ರಲ್ಲಿ, ಬೆಂಗಳೂರಿನ ಗಾಂಧಿಭವನದಲ್ಲಿ. ಆಗ ನಾನು ಬೆಂಗಳೂರಿನಲ್ಲಿ ಸಿಟಿಜನ್ಸ್ ಫಾರ್ ಡೆಮಾಕ್ರಸಿಯ (ಜನತಂತ್ರ ಸಮಾಜ) ರಾಷ್ಟ್ರೀಯ ಮಟ್ಟದ 2 ದಿನಗಳ ಸಭೆಯನ್ನು ಏರ್ಪಡಿಸಿದ್ದೆ. ಆಗ ಅವರು ನನ್ನನ್ನು ಆತ್ಮೀಯತೆಯಿಂದ ಮಾತನಾಡಿಸಿ ನನ್ನ ಹಿನ್ನೆಲೆಯನ್ನು ಕೇಳಿದರು. 11 ವರ್ಷ ಅಮೆರಿಕದಲ್ಲಿದ್ದು 1979ರ ಜೂನ್ ತಿಂಗಳಲ್ಲಿ ವಾಪಸ್ ಬಂದುದರ ಬಗ್ಗೆ ನಾನು ಅವರಿಗೆ ಹೇಳಿದೆ. ’ಎಲ್ಲರೂ ಅಮೆರಿಕಕ್ಕೆ ಹೋಗುವ ಕನಸು ಕಾಣುತ್ತಿದ್ದರೆ, ನೀವು ಅಮೆರಿಕಾ ಬಿಟ್ಟು ಇಲ್ಲಿಗೆ ಬಂದಿದ್ದೀರಿ ಯಾಕೆ, ಏನು’ ಎಂದು ಪ್ರಶ್ನಿಸಿದರು. ನಾನು ನನ್ನ ತಾಯಿಯವರಿಗೆ ಮಾತು ಕೊಟ್ಟಂತೆ ಭಾರತಕ್ಕೆ ಬಂದು ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಬಡವರ ಅಭಿವೃದ್ಧಿಯ ಬಗ್ಗೆ ಕೆಲಸ ಮಾಡುತ್ತಿರುವುದಾಗಿ ಹೇಳಿದೆ.

ಅಮೆರಿಕದಿಂದ ಬಂದು 2 ವರ್ಷವಾಗಿದ್ದು, ಆಗಿನ ಧಾರವಾಡ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಮೆಡ್ಲೇರಿ ಎನ್ನುವ ಹಳ್ಳಿಯಲ್ಲಿ ವಾಸವಾಗಿ, ಸಮಗ್ರ ಗ್ರಾಮೀಣ ಅಭಿವೃದ್ದಿ ಕೆಲಸದಲ್ಲಿ ತೊಡಗಿ, ಇಂಡಿಯಾ ಡೆವಲಪ್‌ಮೆಂಟ್ ಸರ್ವಿಸ್ ಎಂಬ ಸಂಸ್ಥೆಯ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸುತ್ತಿದ್ದುದನ್ನು ಅವರಿಗೆ ತಿಳಿಸಿದೆ.

ದೊರೆಸ್ವಾಮಿ ಅವರು ಅಮೆರಿಕದಲ್ಲಿ ಏನು ಮಾಡುತ್ತಿದ್ದಿರಿ ಎಂದು ನನ್ನನ್ನು ಪ್ರಶ್ನಿಸಿದರು. ನಾನು ಅಲ್ಲಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೋಗಿ ತದನಂತರ ಹತ್ತು ವರ್ಷ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಹಾಗೂ ಅಮೆರಿಕೆಯ ಫೆಡರಲ್ ಬ್ಯಾಂಕ್‌ಗಳಲ್ಲಿ ಕೆಲಸ ಮಾಡಿರುವುದರ ಬಗ್ಗೆ ಹೇಳಿದೆ. ಅದಲ್ಲದೆ ಅಮೆರಿಕದಲ್ಲಿದ್ದಾಗ ತುರ್ತು ಪರಿಸ್ಥಿತಿ ವಿರೋಧಿಸಿ, ಇಂಡಿಯನ್ಸ್ ಫಾರ್ ಡೆಮಾಕ್ರಸಿ ಎಂಬ ಸಂಘಟನೆಯನ್ನು ಕಟ್ಟಿದ್ದು ಮತ್ತು ಭಾರತ ಸರ್ಕಾರವು ನನ್ನ ಪಾಸ್ಪೋರ್ಟ್‌ಅನ್ನು ರದ್ದು(ಇಂಪೌಂಡ್) ಮಾಡಿದ್ದರ ಬಗ್ಗೆ ತಿಳಿಸಿದೆ. ಅವರು ತುಂಬಾ ಸಂತೋಷಪಟ್ಟು ತಾವು ಕೂಡಾ ತುರ್ತು ಪರಿಸ್ಥಿತಿಯ ಸಮಯದಲ್ಲಿ ಇಂದಿರಾ ಗಾಂಧಿಯವರ ಸರ್ವಾಧಿಕಾರವನ್ನು ವಿರೋಧಿಸಿ ಜೈಲಿಗೆ ಹೋಗಿದ್ದನ್ನು ಹಂಚಿಕೊಂಡರು.

ನಂತರ ದೊರೆಸ್ವಾಮಿ ಅವರು ಈಗ ಬೆಂಗಳೂರಿಗೆ ಯಾಕೆ ಬಂದಿರಿ ಎಂದು ಪ್ರಶ್ನಿಸಿದರು. ನಾನು ಸಿಟಿಜನ್ಸ್ ಫಾರ್ ಡೆಮಾಕ್ರಸಿಯ ರಾಷ್ಟ್ರೀಯ ಮಟ್ಟದ ಸಭೆಯ ಬಗ್ಗೆ ತಿಳಿಸಿದೆ. ಅವರು ಸಿಟಿಜನ್ಸ್ ಫಾರ್ ಡೆಮಾಕ್ರಸಿ ಯಾವ ಸಂಸ್ಥೆ ಎಂದು ಪ್ರಶ್ನಿಸಿದರು. ಆಗ ನಾನು 1974ರ ಏಪ್ರಿಲ್ ತಿಂಗಳಲ್ಲಿ ಜಯಪ್ರಕಾಶ ನಾರಾಯಣ ಅವರು ದೆಹಲಿಯಲ್ಲಿ ಸ್ಥಾಪಿಸಿದ ಸಂಘಟನೆ ಎಂದು ಅವರಿಗೆ ತಿಳಿಸಿದೆ. ಈ ಸಂಸ್ಥೆಯನ್ನು ಪ್ರಜಾಪ್ರಭುತ್ವದ ಸಂರಕ್ಷಣೆಗಾಗಿ ಜಯಪ್ರಕಾಶ್ ನಾರಾಯಣ ಅವರು ಸ್ಥಾಪಿಸಿದ್ದರು. ಅದರಲ್ಲಿ ಹಲವು ನ್ಯಾಯಾಧೀಶರು, ವಕೀಲರು, ಪ್ರಸಿದ್ಧ ಗಾಂಧಿವಾದಿಗಳು ಕೆಲಸ ಮಾಡುತ್ತಿದ್ದರು. ಬಾಂಬೆ ಹೈಕೋರ್ಟ್‌ನ ಜಸ್ಟಿಸ್ ವಿ.ಎಂ. ತಾರ್‍ಕುಂಡೆ ಈ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದರು.

1979ರಲ್ಲಿ ಬಾಂಬೆಯಿಂದ ಕರ್ನಾಟಕದ ಧಾರವಾಡಕ್ಕೆ ಬರುವ ವೇಳೆಯಲ್ಲಿ ಜಯಪ್ರಕಾಶ್ ನಾರಾಯಣ ಅವರನ್ನು ಭೇಟಿಯಾಗಿದ್ದೆ. ಏಕೆಂದರೆ 1977 ಮೇ ತಿಂಗಳಲ್ಲಿ ಜಯಪ್ರಕಾಶ್ ನಾರಾಯಣ ಅವರು ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಮೆರಿಕೆಯ ಸಿಯಟಲ್ ನಗರಕ್ಕೆ ಬಂದಿದ್ದರು. ನಾವು ಇಂಡಿಯನ್ಸ್ ಫಾರ್ ಡೆಮಾಕ್ರಸಿಯ ನಾಲ್ಕು ಜನ ಸದಸ್ಯರು, ಅಲ್ಲಿಗೆ ಹೋಗಿ ಅವರನ್ನು ಭೇಟಿಯಾಗಿ ಅವರು ಭಾರತದ ಪ್ರಜಾಪ್ರಭುತ್ವದ ಸಂರಕ್ಷಣೆಗೆ ನೀಡಿದ ಅಪಾರ ಕೊಡುಗೆಗೆ ಒಂದು ಫ್ಲಾಗ್ ಕೊಟ್ಟು ಗೌರವಿಸಿದ್ದೆವು. ಆಗ ಅವರು ನಮ್ಮ ಬಗ್ಗೆ ನೀವು ಏನು ಮಾಡುತ್ತಿದ್ದೀರಿ, ಮುಂದಕ್ಕೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರು. ಆಗ ನಾನು ಭಾರಕ್ಕೆ ಮರಳಿ ಬಂದು ಗ್ರಾಮೀಣ ಪ್ರದೇಶದಲ್ಲಿ ಬಡವರ ಸಶಕ್ತೀಕರಣಕ್ಕೆ ಕೆಲಸ ಮಾಡಬೇಕು ಎಂದು ಉತ್ತರಿಸಿದೆ. ಅವರು ತುಂಬಾ ಸಂತೋಷಪಟ್ಟು, “ಇದು ನಮ್ಮ ದೇಶಕ್ಕೆ ಬಹಳವಾಗಿ ಬೇಕಾದಂತಹ ಕೆಲಸ, ನೀವು ಈ ಬಗ್ಗೆ ನಿರ್ಣಯ ಮಾಡಿರುವುದು ನನಗೆ ಬಹಳ ಸಂತೋಷ ಉಂಟುಮಾಡಿದೆ. ನೀವು ಭಾರತಕ್ಕೆ ಮರಳಿ ಬಂದಾಗ ನನ್ನನ್ನು ತಪ್ಪದೆ ಭೇಟಿಯಾಗಬೇಕು” ಎಂದು ಹೇಳಿದ್ದರು. ಅದರಂತೆ ಭಾರತಕ್ಕೆ ಬಂದ ಕೂಡಲೆ ನಾನು ಅವರನ್ನು ಭೇಟಿಯಾಗಿದ್ದೆ. ನಾನು ಭಾರತದಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಕೆಲಸ ಮಾಡುವ ಸಂಸ್ಥೆಯೊಂದಿಗೆ ಸೇರಲು ಆಸಕ್ತಿ ಇರುವುದಾಗಿ ಜಯಪ್ರಕಾಶ್ ನಾರಾಯಣ ಅವರಿಗೆ ತಿಳಿಸಿದೆ. ಅವರದಕ್ಕೆ ಉತ್ತರಿಸಿ, “ನೀವು ಅಮೆರಿಕದಲ್ಲಿ ಇಂಡಿಯನ್ಸ್ ಫಾರ್ ಡೆಮಾಕ್ರಸಿ ಎಂಬ ಸಂಘಟನೆ ಕಟ್ಟಿದ್ದೀರೋ, ಹಾಗೆ ನಾನು 1974ರಲ್ಲಿ ‘ಸಿಟಿಜನ್ ಫಾರ್ ಡೆಮಾಕ್ರಸಿ’ ಎಂಬ ಸಂಘಟನೆ ಕಟ್ಟಿದ್ದೇನೆ, ಅದರಲ್ಲಿ ಸೇರಿ” ಎಂದರು.

ನಾನು ಧಾರವಾಡ ತಲುಪಿದ ಕೂಡಲೆ ಜಸ್ಟಿಸ್ ತಾರ್‍ಕುಂಡೆ ಅವರಿಗೆ, ಸಿಟಿಜನ್ ಫಾರ್ ಡೆಮಾಕ್ರಸಿ ಸಂಘಟನೆಯಲ್ಲಿ ಸೇರಬೇಕೆಂಬ ಇಚ್ಛೆಯನ್ನು, ಜಯಪ್ರಕಾಶ್ ನಾರಾಯಣ ಅವರು ಹೇಳಿದ್ದನ್ನು ಉಲ್ಲೇಖಿಸಿ ಪತ್ರ ಬರೆದೆ. ನಂತರ ಅದರಲ್ಲಿ ಸಕ್ರಿಯವಾಗಿ ಕೆಲಸ ಪ್ರಾರಂಭಿಸಿದೆ. ಈ ಎಲ್ಲವನ್ನು ನಾನು ದೊರೆಸ್ವಾಮಿ ಅವರಿಗೆ ಹೇಳಿದೆ. ಅವತ್ತಿನ ಪರಿಚಯವೆ ನಮ್ಮ ಸುದೀರ್ಘ ಮತ್ತು ನಿಕಟ ಸ್ನೇಹದ ಪ್ರಾರಂಭ.

1983-84ರಲ್ಲಿ ಬಿರ್ಲಾ ಒಡೆತನದ ಹರಿಹರ ಫಾಲಿಫೈಬರ್ ಕಾರ್ಖಾನೆಗಳಿಂದಾದ ತುಂಗಾಭದ್ರ ನದಿ ಮಾಲಿನ್ಯವನ್ನು ವಿರೋಧಿಸಿ ನಾವು ಹೋರಾಟವನ್ನು ಪ್ರಾರಂಭಿಸಿದೆವು. ಆಗ ದೊರೆಸ್ವಾಮಿಯವರನ್ನು ಬೆಂಗಳೂರಲ್ಲಿ ಭೇಟಿಯಾಗಿದ್ದೆ. ಅವರು “ಇದು ತುಂಬಾ ಒಳ್ಳೆಯ ಕೆಲಸ. ಈ ಜನಪರ ಹೋರಾಟವನ್ನು ಕೈಬಿಡಬೇಡಿ” ಎಂದು ನಮ್ಮನ್ನು ಹುರಿದುಂಬಿಸಿ ನಮಗೆ ಸ್ಫೂರ್ತಿಯನ್ನು ಕೊಟ್ಟರು. ಆ ಹೊತ್ತಿನಲ್ಲಿ ಹೋರಾಟದ ಸಲುವಾಗಿಯೇ ನಾವು ‘ಸಮಾಜ ಪರಿವರ್ತನ ಸಮುದಾಯ’ ಎಂಬ ಸಂಘಟನೆ ಕಟ್ಟಿಕೊಂಡಿದ್ದೆವು. ಅದರ ನಂತರ ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ 75 ಸಾವಿರ ಎಕರೆ ಸಾರ್ವಜನಿಕ ಭೂಮಿಯನ್ನು ಅದೇ ಹರಿಹರ ಫಾಲಿಫೈಬರ್ ಕಂಪೆನಿಗೆ ಕೊಟ್ಟು ನೀಲಗಿರಿಯನ್ನು ಬೆಳೆಸಿ ಕಂಪೆನಿಯ ಕಾರ್ಖಾನೆಗೆ ಕಚ್ಛಾ ಸರಕು ಸಿಗುವಂತೆ ಮಾಡಲು ಹೊರಟಿದ್ದರು. ಆಗ ಅದನ್ನು ವಿರೋಧಿಸಿ ನಾವು ಹೋರಾಟ ಪ್ರಾರಂಭಿಸಿದೆವು. ಆ ಸಮಯದಲ್ಲಿ ಸಾಹಿತಿ ಶಿವರಾಮ ಕಾರಂತರು ಸಕ್ರಿಯವಾಗಿ ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದರು. ನಮ್ಮ ಹೋರಾಟ ಒಂದು ಕಡೆಯಿಂದ ಅಹಿಂಸಾತ್ಮಕ ಗಾಂಧಿ ಮಾರ್ಗವಾಗಿದ್ದರೆ, ಇನ್ನೊಂದು ಕಡೆ ಕಾನೂನಾತ್ಮಕವಾದದ್ದು. ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹಾಕಿದ್ದೆವು. ಅದರ ಬಗ್ಗೆ ಕೂಡಾ ನಾನು ದೊರೆಸ್ವಾಮಿ ಅವರ ಜೊತೆ ಮಾತನಾಡಿದ್ದೆ. ಎಂದಿನಂತೆ ನಮ್ಮ ಹೋರಾಟವನ್ನು ಸಮಗ್ರವಾಗಿ ಬೆಂಬಲಿಸಿದ್ದರು.

ಈ ಹೋರಾಟಕ್ಕೆ ದೊರೆಸ್ವಾಮಿಯವರ ಜೊತೆಗೆ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಬಿಎಂ ಚಂದ್ರಶೇಖರ್ ಅವರು, ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಹಾಗೂ ಅದರ ಮುಖ್ಯಸ್ಥರಾಗಿದ್ದ ನಂಜುಂಡಸ್ವಾಮಿಯವರು ಕೂಡ ಬೆಂಬಲ ನೀಡಿದರು. ಇದಲ್ಲದೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಮಣ್ಣು ಸಂರಕ್ಷಣಾ ಕೂಟ ಕೂಡಿಕೊಂಡು ಜಂಟಿಯಾಗಿ ‘ನೆಡದಿರಿ ನೀಲಗಿರಿ’ ಎಂಬ ಪುಸ್ತಕ ಹೊರತಂದಿದ್ದೆವು.
ಆಮೇಲೆ ದೊರೆಸ್ವಾಮಿಯವರು ಹಾಗೂ ನಾನು ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಹೋರಾಟಗಳಲ್ಲಿ ಜೊತೆಯಾಗಿ ಭಾಗವಹಿಸಿದ್ದೇವೆ. ಮೊದಲನೆಯದಾಗಿ ಕೈಗಾ ಅಣುಸ್ಥಾವರ ವಿರೋಧಿಸಿ ನಡೆಸಿದ ಹೋರಾಟ. ಎರಡನೆಯದ್ದು ಶರಾವತಿ ಟೇಲ್ ರೇಸ್ ಎಂಬ ಯೋಜನೆಯನ್ನು ವಿರೋಧಿಸಿ ನಡೆಸಿದ ಹೋರಾಟ. ಈ ಹೋರಾಟಗಳನ್ನು ಡಾ. ಕುಸುಮ ಸೊರಬ, ಖ್ಯಾತ ಪತ್ರಕರ್ತ ನಾಗೇಶ್ ಹೆಗಡೆ ಮತ್ತು ಇತರರು ಮುನ್ನಡೆಸುತ್ತಿದ್ದರು. ನಾನು ಮತ್ತು ದೊರೆಸ್ವಾಮಿ ಅವರು ಅಲ್ಲಿಗೆ ಹಲವಾರು ಸಲ ತೆರಳಿ ಅವರಿಗೆ ಬೆಂಬಲ ನೀಡಿ ಅಲ್ಲಿನ ಹೋರಾಟಗಳಲ್ಲಿ ಭಾಗವಹಿಸಿದೆವು.

ಹೀಗೆ ಹೋರಾಟದಲ್ಲಿ ಭಾಗವಹಿಸುತ್ತಾ ಇದ್ದ ಹಾಗೆ ನಮ್ಮ ಗೆಳೆತನ ಗಟ್ಟಿಯಾಗುತ್ತಾ ಹೋಯಿತು. ಇತ್ತೀಚೆಗೆ ಕರ್ನಾಟಕದ ಬಳ್ಳಾರಿ ಹಾಗೂ ನೆರೆಯ ಜಿಲ್ಲೆಯಲ್ಲಿ ಮತ್ತು ಆಂಧ್ರಪ್ರದೇಶದ ಅನಂತಪುರ್ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ವಿರೋಧಿಸಿ ಹೋರಾಟ ಮಾಡಿದ್ದೆವು. ಮೊದಲಿನಂತೆಯೇ ನಾವು ಒಂದು ಕಡೆ ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಂಗ ಹೋರಾಟ ಮಾಡುತ್ತಾ, ಮತ್ತೊಂದು ಕಡೆ ಜನ ಸಂಗ್ರಾಮ ಪರಿಷತ್ತಿನಿಂದ (JDK) ವ್ಯವಸ್ಥಿತ ಜನಾಂದೋಲನ ಮಾಡಿದೆವು. ಈ ಹೋರಾಟದಿಂದ, ಮೈನಿಂಗ್ ಮಾಫಿಯಾದಲ್ಲಿ ಮುಖ್ಯವಾಗಿದ್ದ ಗಾಲಿ ಜನಾರ್ದನ ರೆಡ್ಡಿ, ಆನಂದ್ ಸಿಂಗ್ ಸೇರಿದಂತೆ

ಇತ್ಯಾದಿ ರಾಜಕಾರಣಿಗಳು, ಹಲವು ಹಿರಿಯ ಐಎಎಸ್, ಐಎಎಫ್ ಅಧಿಕಾರಿಗಳು ಜೈಲಿಗೆ ಹೋಗುವಂತಾಯಿತು. ಸುಪ್ರೀಂಕೋರ್ಟ್ ನಮ್ಮ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ವಿಚಾರಣೆ ನಡೆಸಿ, ಈ ಹಗರಣದಲ್ಲಿ ಹಾಳಾದ ಪರಿಸರದ ಪುನಃಶ್ಚೇತನಕ್ಕೆ ಹಾಗೂ ಗಣಿಬಾಧಿತ ಜನರ ಮಾನವೀಯ ಅಭಿವೃದ್ಧಿಗಾಗಿ ೧೫ ಸಾವಿರ ಕೋಟಿ ರೂಗಳನ್ನು ನೀಡಲು ತೀರ್ಪಿಟ್ಟಿತು. ಈ ಹಣವನ್ನು ಆರೋಪಿಗಳಿಂದ ಈಗಾಗಲೆ ಪಡೆಯಲಾಗಿದೆ. ಇದು ನಮ್ಮ ಜೀವನದ ಅತಿ ಗಂಭೀರ ಹೋರಾಟಗಳಲ್ಲಿ ಒಂದಾಗಿದ್ದು, ಇದರಲ್ಲಿ ದೊರೆಸ್ವಾಮಿ ಅವರು ನಮ್ಮ ಜೊತೆಯಲ್ಲಿ ಭಾಗಿಯಾಗಿದ್ದರು. ಲೋಕಾಯುಕ್ತರಾದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಕೊಟ್ಟ ವರದಿ ನಮ್ಮ ಹೋರಾಟಕ್ಕೆ ಸಹಾಯ ಮಾಡಿತು.

2011 ಆಗಸ್ಟ್‌ನಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ದೊರೆಸ್ವಾಮಿ ಹಾಗೂ ನಾನು “ಲೋಕಾಯುಕ್ತ ಬಲಪಡಿಸಿ” ಎಂಬ ಮಹತ್ವದ ಹೋರಾಟವನ್ನು ಮಾಡಿದೆವು. ಈ ಹೋರಾಟದಲ್ಲಿ ರವಿಕೃಷ್ಣ ರೆಡ್ಡಿ ಹಾಗೂ ಅವರ ಯುವ ಸಂಗಡಿಗರೊಂದಿಗೆ ಕೂಡಿ ವ್ಯವಸ್ಥಿತವಾಗಿ ಹೋರಾಟ ಮಾಡಿ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ನೇಮಕ ಮಾಡಿದ, ಭ್ರಷ್ಟ ಲೋಕಾಯುಕ್ತರಾದ ಡಾ. ಭಾಸ್ಕರ್ ರಾವ್ ಅವರು ರಾಜೀನಾಮೆ ಕೊಡುವಂತೆ ಮಾಡಿದೆವು. ಅಲ್ಲದೆ ಲೋಕಾಯುಕ್ತ ಭಾಸ್ಕರ್ ರಾವ್ ವಿರುದ್ದ ಚಾರ್ಜ್‌ಶೀಟ್ ಆಗುವಂತೆ ಮಾಡಿ ವಿಚಾರಣೆಗೆ ಒಳಪಡಿಸಿದ್ದು ಭ್ರಷ್ಟಾಚಾರ ವಿರುದ್ದದ ಹೋರಾಟದಲ್ಲಿ ಒಂದು ಮಹತ್ವದ ದಾಖಲೆ ಆಯಿತು. ಆದರೆ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ನಂತರ ಅವರು ಆಂಟಿ-ಕರಪ್ಷನ್ ಬ್ಯೂರೋ (ACB) ರಚಿಸಿ ಲೋಕಾಯುಕ್ತ ಸಂಸ್ಥೆಯನ್ನೆ ನಿಶ್ಯಕ್ತಿಗೊಳಿಸಿದರು.

ಅಕ್ರಮವಾಗಿ ಒತ್ತುವರಿ ಮಾಡಿ ಭೂಕಬಳಿಕೆ ಮಾಡಲಾಗಿದ್ದ 11 ಲಕ್ಷ ಎಕರೆ ಕಂದಾಯ ಮತ್ತು ಎರಡು ಲಕ್ಷ ಅರಣ್ಯ ಭೂಮಿಯನ್ನು ಉಳಿಸಲು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದೆವು. ಈ ಭೂಮಿ ಸರ್ಕಾರಕ್ಕೆ ವಾಪಸ್ಸು ಬರಬೇಕೆಂದು, ಎ.ಟಿ. ರಾಮಿಸ್ವಾಮಿಯವರು, ದೊರೆಸ್ವಾಮಿಯವರು ಹಾಗೂ ನಾವೆಲ್ಲರೂ ಕೂಡಿ ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಒಂದು ತಿಂಗಳಿಗೂ ಹೆಚ್ಚುಕಾಲ ಸತ್ಯಾಗ್ರಹ ಮಾಡಿದೆವು.

2016ರ ಬೆಳಗಾವಿ ಅಧಿವೇಶನದ ಸಮಯದಲ್ಲಿ ಜನಾಂದೋಲನಗಳ ಮಹಾಮೈತ್ರಿ ಕಟ್ಟಲಾಯಿತು. ದೇವನೂರ ಮಹಾದೇವ, ಕೆ.ಎಸ್.ಪುಟ್ಟಣ್ಣಯ್ಯ, ರಾಘವೇಂದ್ರ ಕುಷ್ಠಗಿ ಹಾಗೂ ನಾನು ಸೇರಿದಂತೆ ಸುಮಾರು ೨೦ಕ್ಕಿಂತ ಹೆಚ್ಚು ಸಂಘಟನೆಗಳು ಈ ಮಹಾಮೈತ್ರಿಯಲ್ಲಿ ಕೂಡಿಕೊಂಡು ಭೂಮಿ ಮತ್ತು ವಸತಿ ಹಕ್ಕು ವಂಚಿತ ಜನರ ಹೋರಾಟಕ್ಕಾಗಿ ಸತ್ಯಾಗ್ರಹ ಮಾಡುತ್ತಿರುವ ದೊರೆಸ್ವಾಮಿಯವರಿಗೆ ಬೆಂಬಲ ನೀಡಿದ್ದೆವು.

2017ರಲ್ಲಿ ನಾವು ‘ಜೆಸಿಬಿ ಅಳಿಸಿ ಪರ್ಯಾಯ ಬೆಳೆಸಿ’ ಎಂಬ ಆಂದೋಲನ ಮಾಡಿದ್ದೆವು. ಈ ಆಂದೋಲನವು ಜೆಡಿಎಸ್, ಕಾಂಗ್ರೆಸ್, ಬಿಜೆಪಿ (JCB) ಅಳಿಸಿ, ಪರ್ಯಾಯ ರಾಜಕೀಯವನ್ನು ಬೆಳೆಸಿ ಎಂಬುದಾಗಿತ್ತು. ಈ ಆಂದೋಲನದ ಭಾಗವಾಗಿ ಮಂಡ್ಯದಿಂದ ರಾಯಚೂರುವರೆಗೂ ಜಾಥಾವನ್ನು ನಡೆಸಿದೆವು. ಇದರಲ್ಲೂ ದೊರೆಸ್ವಾಮಿಯವರು ಸಕ್ರಿಯವಾಗಿ ಭಾಗವಹಿಸಿ, ಬೆಂಬಲಿಸಿದ್ದರು.

ಸಿಎಎ ವಿರುದ್ದದ ಹೋರಾಟದಲ್ಲೂ ಅವರು ಸಕ್ರಿಯವಾಗಿದ್ದರು. ಇತ್ತೀಚೆಗೆ 2020ರಿಂದ ಪ್ರಾರಂಭವಾದ ರೈತ ಹೋರಾಟದಲ್ಲೂ ದೊರೆಸ್ವಾಮಿ ಅವರು ಸಕ್ರಿಯವಾಗಿ ಭಾಗವಹಿಸಿದ್ದರು. ಈ ಹೋರಾಟಕ್ಕೆ ಬಂದ ಅವರು ನಮಗೆಲ್ಲಾ ಪ್ರೇರಣೆ, ಉತ್ಸಾಹ ನೀಡಿ ನಮ್ಮನ್ನು ಪ್ರೋತ್ಸಾಹಿಸಿದ್ದರು.

ದೊರೆಸ್ವಾಮಿ, doreswamy

ನಮ್ಮೆಲ್ಲಾ ಹೋರಾಟಗಳನ್ನೂ ಅವರು ಬೆಂಬಲಿಸುತ್ತಿದ್ದರು. ಎಷ್ಟೊ ಸಲ ಅವರ ಆರೋಗ್ಯ ಸರಿಯಿಲ್ಲದಿದ್ದರೂ ಅದನ್ನು ಸಂಭಾಳಿಸಿಕೊಂಡು ಹೋರಾಟಕ್ಕೆ ಜತೆಗೂಡುತ್ತಿದ್ದರು. ಹಿರಿಯರಾಗಿದ್ದರೂ ನಮ್ಮೊಂದಿಗೆ ಗೆಳೆಯರಂತೆ ಇವಕ್ಕೆಲ್ಲಾ ಹುರಿದುಂಬಿಸುತ್ತಿದ್ದರು.

ಪ್ರಜಾಪ್ರಭುತ್ವ ಬಲಪಡಿಸುವ ಸಲುವಾಗಿ ಇಂತಹ ಜನಪರ ಹೋರಾಟಗಳಿಗೆ ತಮ್ಮ ಜೀವನವನ್ನೆ ಮುಡುಪಾಗಿಟ್ಟ ದೊರೆಸ್ವಾಮಿಯವರಿಗೆ ನಾವು ನೀಡುವ ಅರ್ಥಪೂರ್ಣ ಶ್ರದ್ಧಾಂಜಲಿಯೆಂದರೆ ನಮ್ಮ ಜೀವನವನ್ನು ಇಂತಹ ಜನಪರ ಹೋರಾಟ ಹಾಗೂ ಪ್ರಜಾಪ್ರಭುತ್ವದ ಸಶಕ್ತೀಕರಣಕ್ಕೆ ಮುಡುಪಾಗಿಡುವುದೆ ಎಂಬುದು ನನ್ನ ದೃಢ ನಂಬಿಕೆ.

ಎಸ್.ಆರ್. ಹಿರೇಮಠ್

ಎಸ್.ಆರ್. ಹಿರೇಮಠ್
ಸಮಾಜ ಪರಿವರ್ತನಾ ಸಮುದಾಯದ ಸಂಚಾಲಕರಾದ ಎಸ್ ಆರ್ ಹೀರೆಮಠ್ರವರು ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಅಗ್ರಗಣ್ಯರು. ಅಕ್ರಮ ಗಣಿಗಾರಿಕೆ, ಭೂಕಬಳಿಕೆ ವಿರುದ್ಧ ದಶಕಗಳಿಂದ ಹೋರಾಟನಿರತರಾಗಿರುವ ಪರಿಸರವಾದಿಗಳು


ಇದನ್ನೂ ಓದಿ: ಎಚ್ ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ; ಎತ್ತರ ಮರ, ಬಾಗಿದ ಕೊಂಬೆ: ಪ್ರೊ. ರಹಮತ್ ತರೀಕೆರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಹೌದು

    ದೇಶದಲ್ಲೇ ಅತ್ಯಂತ ಬಲಿಷ್ಠವಾಗಿದ್ದ ನಮ್ಮ ಕರ್ನಾಟಕದ ಲೋಕಾಯುಕ್ತ ವ್ಯವಸ್ಥೆಯನ್ನು ನಿಶಕ್ರಿಯ ಗೊಳಿಸಿದ ಕೀರ್ತಿ ವೈಯುಕ್ತಿಕವಾಗಿ ಭ್ರಷ್ಟರಲ್ಲದ ಸಿದ್ದರಾಮಯ್ಯ ನವರಿಗೇ ಸಲ್ಲಬೇಕು ಮತ್ತು ಬಲಿಷ್ಠವಾದ ಆಯೋಗವನ್ನು ರೂಪಿಸಿದ್ದು ವಿವಾದಗ್ರಸ್ತ ವ್ಯಕ್ತಿತ್ವವುಳ್ಳ ಯೆಡ್ಯೂರಪ್ಪನವರೇ ಆಗಿರುತ್ತಾರೆ.
    ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ನವರ ಅಭಿಪ್ರಾಯವನ್ನು ನಾವು ನಿರೀಕ್ಷೆಸಬಹುದೇ…. ?

  2. ಸುಮಾರು 8ರಿಂದ 10 ವರ್ಷಗಳ ಮುನ್ನ P. ಚಿಂದಂಬರಂ ಹಾಗು ಈಚೆಗೆ, ಪ್ರಧಾನಿ ಗಳಾದ ಮೋದಿಯವರು ಆಶೀಸಿದಂತೆ ONE NATION ONE ELECTION ವ್ಯವಸ್ಥೆಯೇ ಅಂಕೆ ತಪ್ಪಿರುವ ಇಂದಿನ ಭ್ರಷ್ಟಾಚಾರ ವ್ಯವಸ್ಥೆಗೆ ರಾಮ ಬಾಣವಾಗಿದೆ.

    ನಾಡಿನ ಬುದ್ದಿ ಜೀವಿಗಳು ಈ ನಿಟ್ಟಿನಲ್ಲಿ ಯೋಚಿಸಬೇಕು ?

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...