ಜಾತಿ ಆಧಾರಿತ ಜನಗಣತಿಯು ಸಮಾಜದ ವಿವಿಧ ವರ್ಗಗಳ ಜನರಿಗೆ ಕಲ್ಯಾಣ ಯೋಜನೆಗಳನ್ನು ತಯಾರಿಸಲು ಸಹಾಯ ಮಾಡುತ್ತದೆ ಎಂದು ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಸೋಮವಾರ ಹೇಳಿದ್ದಾರೆ.
“ರಾಜ್ಯದಲ್ಲಿ ಜಾತಿ ಆಧಾರಿತ ಜನಗಣತಿ ನಡೆಸಲು ಬಿಹಾರ ವಿಧಾನಸಭೆಯಲ್ಲಿ ಎರಡು ಬಾರಿ ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಇಂತಹ ಜನಗಣತಿಯಿಂದ ನಾವು ಸಮಾಜದ ವಿವಿಧ ವರ್ಗಗಳ ಜನರಿಗೆ ಉಪಯೋಗವಾಗುವಂತಹ ಯೋಜನೆಗಳನ್ನು ಜಾರಿ ಮಾಡಲು ಸಹಾಯ ಮಾಡುವ ಡೇಟಾವನ್ನು ಪಡೆಯಬಹುದು” ಎಂದು ತೇಜಸ್ವಿ ಯಾದವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಜಾತಿ ಆಧಾರಿತ ಜನಗಣತಿಯ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ 10 ಪಕ್ಷಗಳ ನಿಯೋಗದ ನಡುವೆ ದೆಹಲಿಯಲ್ಲಿ ಸಭೆ ನಡೆದಿದೆ.
“ಪ್ರಧಾನಿ ನರೇಂದ್ರ ಮೋದಿ ಜಾತಿಯಾಧಾರಿತ ಜನಗಣತಿಯನ್ನು ನಿರಾಕರಿಸಿಲ್ಲ. ನಿಯೋಗದ ಸದಸ್ಯರ ಮಾತನ್ನು ಆಲಿಸಿದ್ದಾರೆ’ ಎಂದು ನಿತೀಶ್ ಕುಮಾರ್ ಸಭೆ ಬಳಿಕ ತಿಳಿಸಿದ್ದಾರೆ.
ಇದನ್ನೂ ಓದಿ: ಜಾತಿ ಆಧಾರಿತ ಜನಗಣತಿ ಒಮ್ಮೆಯಾದರೂ ನಡೆಯಲೇ ಬೇಕು- ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ನಿಯೋಗದಲ್ಲಿ ಆರ್‌ಜೆಡಿಯ ತೇಜಸ್ವಿ ಪ್ರಸಾದ್ ಯಾದವ್, ಜೆಡಿಯು ನಾಯಕ ವಿಜಯ್ ಕುಮಾರ್ ಚೌಧರಿ, ಮಾಜಿ ಮುಖ್ಯಮಂತ್ರಿ ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್‌ಎಎಂ) ಅಧ್ಯಕ್ಷ ಜಿತನ್ ರಾಮ್ ಮಾಂಝಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಅಜೀತ್ ಶರ್ಮಾ ಮತ್ತು ಬಿಜೆಪಿ ನಾಯಕ ಮತ್ತು ಬಿಹಾರ ಸಚಿವ ಜನಕ್ ರಾಮ್, ಸಿಪಿಐ-ಎಂಎಲ್ ಶಾಸಕಾಂಗ ಪಕ್ಷದ ನಾಯಕ ಮಹಬೂಬ್ ಆಲಂ, ಎಐಎಂಐಎಂನ ಅಖ್ತರುಲ್ ಇಮಾಮ್, ವಿಐಪಿಯ ಮುಖೇಶ್ ಸಾಹ್ನಿ, ಸಿಪಿಐನ ಸೂರ್ಯಕಾಂತ್ ಪಾಸ್ವಾನ್ ಮತ್ತು ಸಿಪಿಐ (ಎಂ) ನ ಅಜಯ್ ಕುಮಾರ್ ಇದ್ದಾರೆ.
ಈ ಹಿಂದೆ, ತೇಜಸ್ವಿ ಯಾದವ್ ಕೂಡ ಜಾತಿಯಾಧಾರಿತ ಜನಗಣತಿ ನಡೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.
ಜುಲೈ 20 ರಂದು, ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ್ದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, “ಭಾರತ ಸರ್ಕಾರವು ಎಸ್‌ಸಿ ಮತ್ತು ಎಸ್‌ಟಿಗಳನ್ನು ಹೊರತುಪಡಿಸಿ ಇತರ ಜಾತಿವಾರು ಜನಸಂಖ್ಯೆ ಜನಗಣತಿಯನ್ನು ನಡೆಸದಿರಲು ನಿರ್ಧರಿಸಿದೆ” ಎಂದಿದ್ದರು.
ಇದನ್ನೂ ಓದಿ: ಕೆಲವು ಕ್ರೀಡೆಗಳು ಸೃಷ್ಟಿಸುವ ಹೈಪರ್ ನ್ಯಾಷನಲಿಸಂ ಮತ್ತು ಕ್ರೀಡಾಪಟುಗಳ ಜಾತಿನಿಂದನೆ – ಇವುಗಳ ನಡುವೆ ಸಂಭ್ರಮಿಸುವುದಾದರೂ ಹೇಗೆ?


