ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ದೆಹಲಿಗೆ ಭೇಟಿ ನೀಡಲಿದ್ದು, ಜಾತಿ ಆಧಾರಿತ ಜನಗಣತಿ ನಡೆಸಲು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಲಿದ್ದಾರೆ.
“ಈಗಾಗಲೇ ಕೆಲವರು ದೆಹಲಿಯನ್ನು ತಲುಪಿದ್ದಾರೆ ಮತ್ತೆ ಕೆಲವರು ನನ್ನೊಂದಿಗೆ ಬರುತ್ತಾರೆ. ನಾಳೆ ನಾವು 11 ಗಂಟೆಗೆ ಪ್ರಧಾನಿಯವರನ್ನು ಭೇಟಿಯಾಗುತ್ತೇವೆ” ಎಂದು ಹೇಳಿದ್ದಾರೆ. ಈ ಕುರಿತು 10 ಸದಸ್ಯರ ನಿಯೋಗವನ್ನು ನಿತೀಶ್ ಕುಮಾರ್ ಮುನ್ನಡೆಸಲಿದ್ದಾರೆ.
“ಜಾತಿ ಆಧಾರಿತ ಜನಗಣತಿ ಒಂದು ನಿರ್ಣಾಯಕ ವಿಷಯವಾಗಿದೆ. ಇದು ಕಾರ್ಯರೂಪಕ್ಕೆ ಬಂದರೆ, ಅದಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲ. ಮೇಲಾಗಿ, ಇದು ಬಿಹಾರಕ್ಕೆ ಮಾತ್ರವಲ್ಲ, ಇಡೀ ದೇಶದ ಜನರು ಇದರಿಂದ ಪ್ರಯೋಜನ ಪಡೆಯುತ್ತಾರೆ. ಹೀಗಾಗಿ ಒಮ್ಮೆಯಾದರೂ ಜಾತಿ ಆಧಾರಿತ ಜನಗಣತಿ ನಡೆಸಬೇಕು. ಈ ದೃಷ್ಟಿಕೋನದಿಂದ ನಾವು ನಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜನಗಣತಿ, ಎನ್‌ಪಿಆರ್ ಫೀಲ್ಡ್ ಟ್ರಯಲ್ಸ್‌ಗೆ ಸಿದ್ಧತೆ: ಹಾಗೇ ಉಳಿದಿರುವ ಸಂದೇಹ, ಆಕ್ಷೇಪಗಳು
ಜಾತಿ ಗಣತಿಯು ಪ್ರತಿಯೊಬ್ಬರ ಹಿತಾಸಕ್ತಿಗೆ ಅನುಗುಣವಾಗಿದೆ. ಒಂದು ಜಾತಿಯ ಜನರ ಗುಂಪನ್ನು ಅಸಮಾಧಾನಗೊಳಿಸುತ್ತದೆ ಎಂಬ ಕಳವಳವು ಆಧಾರರಹಿತವಾಗಿದೆ ಎಂದು ಬಿಹಾರ ಮುಖ್ಯಮಂತ್ರಿ ಈ ಹಿಂದೆ ಪದೇ ಪದೇ ಹೇಳಿದ್ದಾರೆ.
“ಜಾತಿ ಗಣತಿ ಮಾಡುವುದು ಕೇಂದ್ರಕ್ಕೆ ಬಿಟ್ಟದ್ದು. ನಮ್ಮ ಕೆಲಸ ನಮ್ಮ ಅಭಿಪ್ರಾಯಗಳನ್ನು ತಿಳಿಸುವುದು ಅಷ್ಟೇ. ಈ ಜನಗಣಿಯನ್ನು ಒಂದು ಜಾತಿಯವರು ಇಷ್ಟಪಡುತ್ತಾರೆ. ಇನ್ನೊಂದು ಜಾತಿಯವರು ಇಷ್ಟಪಡುವುದಿಲ್ಲ ಎಂದು ಭಾವಿಸಬೇಡಿ. ಇದು ಎಲ್ಲರ ಹಿತಾಸಕ್ತಿಗಾಗಿ” ಎಂದು ಸುದ್ದಿಗಾರರಿಗೆ ಹೇಳಿದ್ದಾರೆ.
ನಿತೀಶ್ ಕುಮಾರ್ ಮಾತ್ರವಲ್ಲ, ಬಿಹಾರದ ಹಲವಾರು ನಾಯಕರು, ಪಕ್ಷದ ವ್ಯಾಪ್ತಿಯನ್ನು ಮೀರಿ, ಜಾತಿ ಆಧಾರಿತ ಜನಗಣತಿಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯರ ದಿಟ್ಟ ಹೋರಾಟಕ್ಕೆ ಜಯ: ಮದ್ಯದಂಗಡಿ ಸ್ಥಳಾಂತರಕ್ಕೆ ಆದೇಶ


