ಜಾತಿ ನಿಂದನೆ ಆರೋಪ ಎದುರಿಸುತ್ತಿರುವ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ಹರಿಯಾಣ ಪೊಲೀಸರು ತಿಳಿಸಿದ್ದಾರೆ. ಕ್ರಿಕೆಟಿಗ ಯಜುವೇಂದ್ರ ಚಾಹಲ್ ವಿರುದ್ಧ ಇನ್‌ಸ್ಟಾಗ್ರಾಮ್ ಲೈವ್ ವಿಡಿಯೋದಲ್ಲಿ ಅವರು ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪವಿದೆ.
ಕಳೆದ ವರ್ಷ ಜೂನ್‌ನಲ್ಲಿ ಯುವರಾಜ್ ಸಿಂಗ್ ತಮ್ಮ ಸಹ ಆಟಗಾರ ರೋಹಿತ್ ಶರ್ಮಾ ಅವರ ಇನ್‌ಸ್ಟಾಗ್ರಾಮ್ ಲೈವ್ ವೀಡಿಯೊದಲ್ಲಿ ಈ ಹಿಂದೆ ತಮ್ಮೊಂದಿಗೆ ಆಡಿದ ಯಜುವೇಂದ್ರ ಚಾಹಲ್ ಎಂಬ ದಲಿತ ಕ್ರಿಕೆಟಿಗನನ್ನು ’ಭಂಗಿ’ (ಮಾನವ ಮಲ ಬಾಚಿ ಹೊತ್ತು ಸಾಗಿಸುವ ಕೆಲಸ ಮಾಡುವ ದಲಿತ ಜಾತಿ) ಎಂದು ಕರೆಯುತ್ತಾರೆ. ಟೀಕೆ ಎದುರಾದಾಗ ಈ ಜಾತಿಸೂಚಕದ ಸಾಧಕ ಬಾಧಕಗಳು ತನಗೆ ತಿಳಿದೇ ಇರಲಿಲ್ಲ ಎಂದು ವಾದಿಸುತ್ತಾರೆ.
ಟೀಕೆಗಳ ಬಳಿಕ “ಉದ್ದೇಶಪೂರ್ವಕವಲ್ಲದ ಪದ ಬಳಕೆಗೆ” ಈ ಮೊದಲು ಕ್ಷಮೆ ಕೇಳಿದ್ದರು. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದಿದ್ದರು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕಾವದ ಆಕ್ರೋಶ ಹೊರಹೊಮ್ಮಿತ್ತು.
ಇದನ್ನೂ ಓದಿ: ವಂದನಾ ಜಾತಿ ನಿಂದನೆ ಪ್ರಕರಣ; ಘಟನೆ ನಾಚಿಕೆಗೇಡು ಎಂದ ಹಾಕಿ ತಂಡದ ನಾಯಕಿ
“ನ್ಯಾಯಾಲಯದ ಆದೇಶದಂತೆ, ಯುವರಾಜ್ ಸಿಂಗ್ ಅವರನ್ನು ಶನಿವಾರ ಬಂಧಿಸಲಾಯಿತು.ನಂತರ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು” ಎಂದು ಹರಿಯಾಣದ ಹನ್ಸಿಯ ಹಿರಿಯ ಪೊಲೀಸ್ ಅಧಿಕಾರಿ ನಿತಿಕಾ ಗಹ್ಲೌತ್ ಹೇಳಿಕೆಯನ್ನು ಎನ್‌ಡಿಟಿವಿ ಉಲ್ಲೇಖಿಸಿದೆ.
ಫೆಬ್ರವರಿಯಲ್ಲಿ ಹರಿಯಾಣದ ದಲಿತ ಹೋರಾಟಗಾರ ರಜತ್ ಕಲ್ಸನ್ ನೀಡಿದ ದೂರಿನ ಮೇರೆಗೆ ಮಾಜಿ ಕ್ರಿಕೆಟಿಗನ ವಿರುದ್ಧ ದೂರು ದಾಖಲಾಗಿತ್ತು. ತಾರತಮ್ಯವನ್ನು ನಿಷೇಧಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಅವರನನ್ನು ಬಂಧಿಸಿ ಮತ್ತು ದೂರು ದಾಖಲಿಸಿಕೊಳ್ಳಲು ಒತ್ತಾಯಿಸಲಾಗಿತ್ತು. ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ದಲಿತ ಹೋರಾಟಗಾರ ರಜತ್ ಕಲ್ಸನ್, “ಅಕ್ಟೋಬರ್ 6 ರಂದು, ಯುವರಾಜ್ ಸಿಂಗ್ ಅವರನ್ನು ತನಿಖೆಗೆ ಒಳಪಡಿಸಲು ಪೊಲೀಸರಿಗೆ ಹೇಳಲಾಗಿತ್ತು. ನಿನ್ನೆ, ಯುವರಾಜ್ ಸಿಂಗ್ ಹಿಸಾರ್‌ನಲ್ಲಿ ಪೊಲೀಸರ ಮುಂದೆ ಶರಣಾದರು ಎಂದು ನಮಗೆ ತಿಳಿದು ಬಂದಿದೆ. ಅವರನ್ನು ಎರಡು ಮೂರು ಗಂಟೆಗಳ ಕಾಲ ವಿಚಾರನೆ ನಡೆಸಿ ಬಂಧಿಸಲಾಗಿತ್ತು, ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು” ಎಂದಿದ್ದಾರೆ.
“ಅಲ್ಲದೆ, ಎಸ್‌ಸಿ/ಎಸ್‌ಟಿ ಕಾಯ್ದೆ ಅಡಿಯಲ್ಲಿ ಬಂಧಿಸಿ ಅವರಿಗೆ ಜಾಮೀನು ನೀಡಿದ್ದರಿಂದ, ನಾವು ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಹುಜನ ಭಾರತ; ಈ ಜಾತಿ ದಾಂಧಲೆ ತೆಂಡೂಲ್ಕರ್ ಮನೆ ಮುಂದೆ ನಡೆದಿದ್ದರೆ!


