ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾದ ಯುವತಿಯು, ಪ್ರಕರಣದ ಕುರಿತು ಹೇಳಿಕೆ ನೀಡಲು ಸೋಮವಾರ (ಮಾರ್ಚ್ 29) ನ್ಯಾಯಾಲಯದ ಮುಂದೆ ಹಾಜರಾಗುವ ಸಾಧ್ಯತೆ ಇದೆ ಎಂದು ಸಂತ್ರಸ್ತ ಯುವತಿ ಪರ ವಕೀಲರಾದ ಕೆ.ಎನ್. ಜಗದೀಶ್ ತಿಳಿಸಿದ್ದಾರೆ.
ಭಾನುವಾರ ಮಂಜುನಾಥ್ ಅವರೊಂದಿಗೆ ಪ್ರಕರಣದ ಕುರಿತ ಸಂವಾದದಲ್ಲಿ ಮಾತನಾಡುತ್ತಿದ್ದ ವಕೀಲರಾದ ಕೆ.ಎನ್. ಜಗದೀಶ್, ಫೇಸ್‌ಬುಕ್ ಲೈವ್‌ನಲ್ಲಿ ಈ ಮಾಹಿತಿ ಹೊರಹಾಕಿದ್ದಾರೆ.
ಸ್ಟೇಟ್‌ಮೆಂಟ್ 164 ದಾಖಲಿಸಲು ಆಕೆ ನ್ಯಾಯಾಲಯಕ್ಕೆ ಬರುತ್ತಾರೆ. ಇದು ಇಡೀ ಪ್ರಕರಣದ ಬೆನ್ನೆಲುಬು. ಹಾಗಾಗಿ ಇದನ್ನು ಆಕೆ ದಾಖಲಿಸಬೇಕು. ಪ್ರಕರಣದ ಬಗ್ಗೆ ಎಲ್ಲಾ ವಿವರಗಳನ್ನು ಸಂತ್ರಸ್ತೆ ನ್ಯಾಯಾಧೀಶರ ಮುಂದೆ ಸೋಮವಾರ ಪ್ರಸ್ತುತಪಡಿಸುತ್ತಾರೆ ಎಂದು ಲೈವ್‌ನಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಸಿ.ಡಿ. ಹಗರಣ: ಐದನೆ ವಿಡಿಯೋ ರಿಲೀಸ್ ಮಾಡಿ ಸಂತ್ರಸ್ತ ಯುವತಿ; ಹೇಳಿದ್ದೇನು?
ಈ ಒಂದು ಪ್ರಕರಣದ ತಾರ್ತಿಕ ಅಂತ್ಯ ಕಾಣಬೇಕು ಎಂದರೇ ಸಂತ್ರಸ್ತ ಯುವತಿ ನ್ಯಾಯಾಧೀಶರ ಮುಂದೆ ಹಾಜರಾಗಿ ಸ್ಟೇಟ್‌ಮೆಂಟ್ 164 ದಾಖಲಿಸಬೇಕು. ನ್ಯಾಯಾಲಯದ ಅನುಮತಿ ತೆಗೆದುಕೊಂಡು ಈ ಪ್ರಕ್ರಿಯೆ ನಡೆಸಲು ನಮ್ಮ ತಂಡ ಪ್ರಯತ್ನಿಸುತ್ತಿದೆ ಎಂದು ವಕೀಲ ಕೆ.ಎನ್.ಜಗದೀಶ್ ತಿಳಿಸಿದ್ದಾರೆ.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರ ಪ್ರಕರಣ ಮತ್ತು ಸುಲಿಗೆ ಪ್ರಕರಣ ಎರಡು ದಾಖಲಾಗಿದೆ. ಆದರೆ, ಎರಡೂ ಪ್ರಕರಣಗಳನ್ನು ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿರುವುದರಿಂದ ನ್ಯಾಯಯುತವಾದ ತನಿಖೆ ನಡೆಸುವುದು ಅನುಮಾನ ಎಂದು ತನಿಖಾ ತಂಡದ ಮೇಲೆ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಯುವತಿ ಕೈಬರಹದಲ್ಲಿ ನೀಡಿದ್ದ ದೂರಿನ ಪ್ರತಿಯನ್ನು ವಕೀಲ ಜಗದೀಶ್ ಅವರು ಶುಕ್ರವಾರ ಪ್ರಕರಣದ ಎಸ್‌ಐಟಿ ಮುಖ್ಯಸ್ಥರಾದ ನಗರ ಪೊಲೀಸ್ ಕಮಿಷನರ್‌ಗೆ ತಲುಪಿಸಿದ್ದರು. ನಂತರ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಜೀವ ಬೆದರಿಕೆ (ಐಪಿಸಿ 506), ಅವಾಚ್ಯ ಶಬ್ದಗಳಿಂದ ನಿಂದನೆ (ಐಪಿಸಿ 504), ಅಧಿಕಾರದಲ್ಲಿ ದುರುಪಯೋಗಪಡಿಸಿಕೊಂಡು ಅತ್ಯಾಚಾರ (376–ಸಿ), ಕೆಲಸ ಕೊಡಿಸುವುದಾಗಿ ವಂಚನೆ (ಐಪಿಸಿ 417), ಉದ್ದೇಶಪೂರ್ವಕ ಲೈಂಗಿಕ ದೌರ್ಜನ್ಯ (ಐಪಿಸಿ 354 ಎ), ಆರೋಪ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 67ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ‘ಆಕೆ’ ವಿಜಯ್ ಮಲ್ಯನೋ ಇಲ್ಲ ನೀರವ್ ಮೋದಿಯೋ? – ಸಿಡಿ ಪ್ರಕರಣದ ಕುರಿತು ಸಿದ್ದರಾಮಯ್ಯ


