ರಾಜ್ಯಗಳ ಅನುಮತಿಯಿಲ್ಲದೆ ಕೇಂದ್ರ ಸರ್ಕಾರವು ತಾನಾಗಿಯೇ ಕೇಂದ್ರೀಯ ತನಿಖಾ ದಳದ ವ್ಯಾಪ್ತಿಯನ್ನು ವಿಸ್ತರಿಸಲು ಸಾಧ್ಯವಿಲ್ಲ ಮತ್ತು ಕೇಂದ್ರ ಮತ್ತು ರಾಜ್ಯದ ಒಪ್ಪಿಗೆಯಿಲ್ಲದೆ ಸಿಬಿಐ ತನಿಖೆ ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜಸ್ಥಾನ, ಬಂಗಾಳ, ಜಾರ್ಖಂಡ್, ಕೇರಳ, ಮಹಾರಾಷ್ಟ್ರ, ಛತ್ತೀಸ್‌ಗಢ, ಪಂಜಾಬ್ ಮತ್ತು ಮಿಜೋರಾಂ ಎಂಟು ರಾಜ್ಯಗಳು ತಮ್ಮ ರಾಜ್ಯಗಳಲ್ಲಿನ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ನೀಡಿರುವ ’ಸಾಮಾನ್ಯ ಒಪ್ಪಿಗೆ’ಯನ್ನು ರದ್ದುಪಡಿಸಿವೆ.
ವಿರೋಧ ಪಕ್ಷದ ನಾಯಕರು ಮತ್ತು ಸರ್ಕಾರದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿರುವವರ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆಯನ್ನು ಕೇಂದ್ರ ಸರ್ಕಾರ ದಾಳವಾಗಿ ಬಳಸುತ್ತಿದೆ ಎಂದು ಆರೋಪಿಸಿ ಈ ಎಂಟು ರಾಜ್ಯಗಳು ಈ ಕ್ರಮ ಕೈಗೊಂಡಿವೆ.
“ಕಾನೂನಿನ ಪ್ರಕಾರ, ರಾಜ್ಯದ ಒಪ್ಪಿಗೆ ಅತ್ಯಗತ್ಯ ಮತ್ತು ರಾಜ್ಯದ ಒಪ್ಪಿಗೆಯಿಲ್ಲದೆ ಕೇಂದ್ರವು ಸಿಬಿಐ ವ್ಯಾಪ್ತಿಯನ್ನು ವಿಸ್ತರಿಸಲು ಸಾಧ್ಯವಿಲ್ಲ”ಎಂದು ಎ.ಎಂ. ಖಾನ್ವಿಲ್ಕರ್ ಮತ್ತು ಬಿ.ಆರ್. ಗವಾಯಿ ನ್ಯಾಯಮೂರ್ತಿಗಳ ನ್ಯಾಯಪೀಠ ಹೇಳಿದೆ.
ಇದನ್ನೂ ಓದಿ: CBI ಗೆ ನೀಡಿದ್ದ ತನಿಖಾ ’ಒಪ್ಪಿಗೆ’ ಹಿಂಪಡೆದ ಕೇರಳ ಸಚಿವ ಸಂಪುಟ
ಉತ್ತರಪ್ರದೇಶದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತ ಅಧಿಕಾರಿಗಳು ಸಲ್ಲಿಸಿದ ಅರ್ಜಿ ಪ್ರಕರಣದಲ್ಲಿ ನ್ಯಾಯಾಲಯದಿಂದ ಈ ತೀರ್ಪು ಬಂದಿದೆ. ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ಮೊದಲು ರಾಜ್ಯ ಸರ್ಕಾರದ ಅನುಮೋದನೆ ಪಡೆಯಲಾಗಿಲ್ಲ ಎಂದು ಆರೋಪಿಗಳು ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆದರೆ ಸುಪ್ರೀಂ ಕೋರ್ಟ್ ಆರೋಪಿಗಳ ಮನವಿ ತಿರಸ್ಕರಿಸಿದೆ ಜೊತೆಗೆ ಉತ್ತರ ಪ್ರದೇಶವು ರಾಜ್ಯದಲ್ಲಿನ ಪ್ರಕರಣಗಳ ತನಿಖೆಗಾಗಿ ಸಿಬಿಐಗೆ ಸಾಮಾನ್ಯ ಒಪ್ಪಿಗೆ ನೀಡಿದೆ ಎಂದು ತಿಳಿಸಿದೆ.
ಆರಂಭದಲ್ಲಿ, ಅಂದಿನ ಉತ್ತರ ಪ್ರದೇಶ ಸರ್ಕಾರವು ಸಿಬಿಐನ ವ್ಯಾಪ್ತಿಯನ್ನು ರಾಜ್ಯದೊಳಗೆ ಅನುಮತಿಸುವ ಸಾಮಾನ್ಯ ಒಪ್ಪಿಗೆಯನ್ನು ನೀಡಿದ ನಂತರ ತನಿಖೆ ಪ್ರಾರಂಭವಾಯಿತು.
ಈ ಪ್ರಕರಣದಲ್ಲಿ ಇಬ್ಬರು ರಾಜ್ಯ ಅಧಿಕಾರಿಗಳು ಮತ್ತು ಹಲವಾರು ಖಾಸಗಿ ವ್ಯಕ್ತಿಗಳ ಹೆಸರನ್ನು ಇಡಲಾಗಿದೆ. ಸರ್ಕಾರಿ ನೌಕರರು ತಮ್ಮ ವಿರುದ್ಧದ ಪ್ರಕರಣಕ್ಕೆ ಸಾಮಾನ್ಯ ಒಪ್ಪಿಗೆ ಸಾಕಾಗುವುದಿಲ್ಲ ಮತ್ತು ವಿಶೇಷ ಅನುಮತಿ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಹೇಳಿದ್ದರು. ಆದರೂ ಸುಪ್ರೀಂ ಕೋರ್ಟ್ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ.
“ಈ ಪ್ರಕರಣದಲ್ಲಿ, ರಾಜ್ಯ ಸರ್ಕಾರದ ಪೂರ್ವಾನುಮತಿ ಪಡೆಯದಿರುವ ಬಗ್ಗೆ ಹೈಕೋರ್ಟ್‌ನಲ್ಲಿ ಯಾವುದೇ ಹಸ್ತಕ್ಷೇಪ ಮಾಡಲು ನಮಗೆ ಯಾವುದೇ ಕಾರಣವಿಲ್ಲ” ಎಂದು ನ್ಯಾಯಪೀಠ ಹೇಳಿದೆ.
ಇನ್ನು, ನ್ಯಾಯಮೂರ್ತಿಗಳು ದೆಹಲಿ ವಿಶೇಷ ಪೊಲೀಸ್ ಸ್ಥಾಪನೆಗೂ ಉಲ್ಲೇಖಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. “ಡಿಎಸ್‌ಪಿಇ ಕಾಯ್ದೆಯ ಸೆಕ್ಷನ್ 5ರ ಪ್ರಕಾರ ಕೇಂದ್ರ ಸರ್ಕಾರ, ಕೇಂದ್ರಾಡಳಿತ ಪ್ರದೇಶಗಳನ್ನು ಮೀರಿ ಡಿಎಸ್‌ಪಿಇ (ಸಿಬಿಐ) ಸದಸ್ಯರ ಅಧಿಕಾರ ಮತ್ತು ಅಧಿಕಾರ ವ್ಯಾಪ್ತಿಯನ್ನು ಒಂದು ರಾಜ್ಯಕ್ಕೆ ವಿಸ್ತರಿಸಲು ಅನುವು ಮಾಡಿಕೊಡಬಹುದು. ಆದರೆ, ಡಿಎಸ್‌ಪಿಇ ಕಾಯ್ದೆಯ ಸೆಕ್ಷನ್ 6 ರ ಅಡಿಯಲ್ಲಿ ಆ ರಾಜ್ಯವು ಅಂತಹ ವಿಸ್ತರಣೆಗೆ ತನ್ನ ಒಪ್ಪಿಗೆಯನ್ನು ನೀಡದ ಹೊರತು ಅದನ್ನು ಅನುಮತಿಸಲಾಗುವುದಿಲ್ಲ. ಇದು ಸಂವಿಧಾನದ ಮೂಲ ರಚನೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.


